For Quick Alerts
ALLOW NOTIFICATIONS  
For Daily Alerts

ಸೊಪ್ಪನ್ನು ಮಸೆದು ಮಾಡುವ ಮಸ್ಸೊಪ್ಪು ಸಾರು

By Prasad
|
Massoppu sambar (pic : indiankannadarecipes)
ಹೆಸರುಕಾಳಿನ ಚಪಾತಿ ರೆಸಿಪಿ ಯಲ್ಲಿ ಮಸ್ಸೊಪ್ಪಿನ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಮಸ್ಸೊಪ್ಪೆಂದರೆ ಏನು ಹೇಗೆ ತಯಾರಿಸಬೇಕು ಎಂದು ಓದುಗರೊಬ್ಬರು ಕೇಳಿದ್ದರು. ಸೊಪ್ಪನ್ನು ಮಸೆದು ತಯಾರಿಸುವ ಸಾರಿಗೆ ಮಸ್ಸೊಪ್ಪು/ಮಸ್ಸೊಪ್ಪು ಸಾರು ಎಂದು ಕರೆಯುವರು. ರಾಗಿ ಮುದ್ದೆ, ಚಪಾತಿ, ರೊಟ್ಟಿಗೊಪ್ಪುವ ಮಸ್ಸೊಪ್ಪನ್ನು ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

* ಕುಮುದಾ ಶಂಕರ್, ಸೌದಿ ಅರೇಬಿಯಾ

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ - ಒಂದು ಕಪ್
ಪಾಲಕ್ ಸೊಪ್ಪು/ಮೆಂತ್ಯದ ಸೊಪ್ಪು
ಸಾರಿನಪುಡಿ /ಸಾಂಬಾರ್ ಪುಡಿ
ಈರುಳ್ಳಿ 1
ಬೆಳ್ಳುಳ್ಳಿ ನಾಲ್ಕು ಎಸಳು
ಟೊಮೆಟೊ 2
ಕಾಯಿತುರಿ ಅರ್ಧ ಕಪ್
ಹುಣಸೇರಸ
ಎಣ್ಣೆ, ಸಾಸಿವೆ, ಅರಿಷಿಣ, ಇಂಗು
ಕರಿಬೇವು
ಉಪ್ಪು

ತಯಾರಿಸುವ ರೀತಿ:

ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಂಡು ಅದಕ್ಕೆ ತೊಳೆದು ಕತ್ತರಿಸಿದ ಸೊಪ್ಪನ್ನು ಹಾಕಿ. ಅದಕ್ಕೆ ಒಂದೆರಡು ಅಳಕು ಬೆಳ್ಳುಳ್ಳಿ ಮತ್ತು ಟೊಮೆಟೊ ಕೂಡ ಹಾಕಿ ಸೊಪ್ಪು ಬೇಯುವವರೆಗೆ ಬೇಯಿಸಿ. ಬೆಂದ ನಂತರ ಸ್ವಲ್ಪ ಬೇಳೆಸೊಪ್ಪಿನ ಮಿಶ್ರಣವನ್ನು ಮಸೆದುಕೊಳ್ಳಿ.

ಮತ್ತೊಂದು ಕಡೆ ಕಾಯಿತುರಿ, ಸ್ವಲ್ಪ ಈರುಳ್ಳಿ, ಸಾರಿನಪುಡಿ, ಒಂದು ಅಳಕು ಬೆಳ್ಳುಳ್ಳಿಯನ್ನು ಸೇರಿಸಿ ಒಟ್ಟಿಗೆ ರುಬ್ಬಿಕೊಳ್ಳಿ. ನಂತರ ಪಾತ್ರೆಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ ಸಾಸಿವೆ, ಕರಿಬೇವು, ಇಂಗು ಜಜ್ಜಿದ ಬೆಳ್ಳುಳ್ಳಿ ಮತ್ತು ರುಬ್ಬಿದ ಮಿಶ್ರಣ ಹಾಕಿ, ಕುದಿಸಿ. ಉಪ್ಪು ಸೇರಿಸಿ. ಮಸೆದಿರುವ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಹಾಕಿ, ಹುಣಸೇಹುಳಿ ಸೇರಿಸಿ ಒಂದು ಬಾರಿ ಕುದಿಸಿ, ಕೆಳಗಿಳಿಸಿ.

ಈ ಸಾರನ್ನು ಮುದ್ದೆ ಮತ್ತು ಅನ್ನದೊಂದಿಗೆ ನೀಡಬೇಕು. ಇದು ಚಪಾತಿ ಮತ್ತು ರೊಟ್ಟಿಗೂ ಚೆನ್ನಾಗಿರುತ್ತದೆ. ಆದರೆ ಗಟ್ಟಿಯಾಗಿ ತಯಾರಿಸಬೇಕು.

* ಮಸಾಲೆ ರುಬ್ಬದೆ, ಬರೀ ಸಾರಿನಪುಡಿ ಮಾತ್ರ ಹಾಕಿ ಸಹ ತಯಾರಿಸಬಹುದು. ಆಗ ತೆಂಗಿನತುರಿ ಬಿಡಬೇಕು.
* ಒಗ್ಗರಣೆ ಹಾಕಿದ ಮೇಲೆ ಅದಕ್ಕೆ ಬೇಯಿಸಿದ-ಮಸೆದ ಮಿಶ್ರಣವನ್ನು ಹಾಕಿ. ಸಾರಿನಪುಡಿ, ಉಪ್ಪು ಮತ್ತು ಹುಳಿಯನ್ನು ರುಚಿಗೆ ತಕ್ಕಷ್ಟು ಸೇರಿಸಿಕೊಂಡು ಕುದಿಸಿ ಇಳಿಸಿ. (ಕೃಪೆ : ಅಡುಗೆ ಸವಿರುಚಿ)

English summary

Massoppu saaru | Rasam | Sambar | South indian cuisine | Kumuda Shankar | ಮಸ್ಸೊಪ್ಪು ಸಾರು | ಕರ್ನಾಟಕ ಅಡುಗೆಮನೆ

Massoppu saaru or sambar recipe by kumuda shankar, saudi arabia. ಸೊಪ್ಪನ್ನು ಮಸೆದು ಮಾಡುವ ಮಸ್ಸೊಪ್ಪು ಸಾರು.
X
Desktop Bottom Promotion