For Quick Alerts
ALLOW NOTIFICATIONS  
For Daily Alerts

ಸಾಟಿಯಿಲ್ಲದ ನಾಟಿಬದನೆ ಗೊಜ್ಜು

|
Local Brinjal or Gulla Badane
ಬೇಕಾಗುವ ಪದಾರ್ಥಗಳು :

ಗುಳ್ಳ ಬದನೆಕಾಯಿ 10
ಅರ್ಧ ಚಮಚ ಕೊತ್ತಂಬರಿ ಪುಡಿ
ಅರ್ಧ ಚಮಚ ಖಾರದ ಪುಡಿ
ಒಂದು ಚಮಚ ಉದ್ದು, ಕಡಲೆಬೇಳೆ
ಚಿಟಿಕೆ ಹುಣಿಸೆಹಣ್ಣಿನ ಪೇಸ್ಟ್
ಚಿಟಿಕೆ ಇಂಗು
ಉಪ್ಪು ಮತ್ತು ಒಗ್ಗರಣೆಗೆ ಸಾಸಿವೆ, ಕರಿಬೇವು

ಮಾಡುವ ರೀತಿ :

ಬದನೆಕಾಯಿಯ ಕೊಂಬು ಅಥವಾ ತೊಟ್ಟು ಮತ್ತು ಕೊಂಬಿನ ಜತೆಗಿರುವ ಶಂಖಪುಷ್ಪಾಕಾರದ ದಪ್ಪಸಿಪ್ಪೆಯನ್ನು ಚಾಕುವಿನಿಂದ ಕತ್ತರಿಸಿ ಕ.ಬು.ಗೆ ಹಾಕಬೇಕು. ಗುಳ್ಳ ಬದನೆ ಆಕೃತಿಯಲ್ಲಿ ಗಿಡ್ಡಗೆ, ದುಂಡಗೆ, ನೈಸಾಗಿರುತ್ತದೆ. ಕೆಳಗೆ ಬಿದ್ದರೆ ಉರುಳಿಕೊಂಡು ಹೋಗುವ ಗುಣ. ಗುಳ್ಳನ ಹೊರಮೈಯಲ್ಲಿ ತಿಳಿ ಹಸುರು, ನಡುವೆ ಹಾಲು ಚೆಲ್ಲಿದಂತೆ ಅಲ್ಲಲ್ಲಿ ಬಿಳಿಬಿಳಿ ಗೆರೆಗಳು ಕಾಣಸಿಗುತ್ತವೆ. ಇಂಥ ಬದನೆಯನ್ನು ಎರಡೇ ಹೋಳಾಗುವಂತೆ ಕತ್ತರಿಸಿ ನೀರಿನ ಪಾತ್ರೆಯಲ್ಲಿ ಹಾಕಬೇಕು. ಹೆಚ್ಚಿದ ಬದನೆಯನ್ನು ನೀರಿಗೆ ಹಾಕದಿದ್ದರೆ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುವ ಬದನೆ ಬಲುಬೇಗ ಕಪ್ಪಾಗಿಬಿಡುತ್ತದೆ.

ಪಾತ್ರೆಯಲ್ಲಿ ಹೊಸ ನೀರು ಹಾಕಿ ಸ್ಟೌವ್ ಮೇಲೆ ಇಡತಕ್ಕದ್ದು. ಬದನೆಕಾಯಿಯ ಒಳಮೈ ಮೃದುವಾಗಿರುವುದರಿಂದ ಯಾವತ್ತೂ, ಆದಷ್ಟೂ, ಕುಕ್ಕರ್ ಹೊಟ್ಟೆಗೆ ಹಾಕಬಾರದು. ಸ್ಟೌವ್ ಉರಿಯಲ್ಲಿ ಅರ್ಧ, ಮುಕ್ಕಾಲು ಪಾಲು ಬೆಂದ ಬದನೆಯನ್ನು ಸೋಸಿ ನೀರು ಬಗ್ಗಿಸಿ ಒಂದು ಕಡೆ ಇಟ್ಟುಕೊಳ್ಳಿ. ಈ ಕಡೆ, ಬಾಣಲೆಗೆ ನಾಲಕ್ಕು ಚಮಚ ಸನ್ ಫ್ಲವರ್ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಬೇಳೆಗಳನ್ನು ಹಾಕಿ ಲೋ ಫ್ಲೇಮಿನಲ್ಲಿ ಒಗ್ಗರಿಸಿಕೊಳ್ಳಿರಿ.

ಈ ಹಂತದಲ್ಲಿ ಹುಣಿಸೆ ಪೇಸ್ಟ್, ಇಂಗು, ದನಿಯ ಪುಡಿ ಮತ್ತು ಖಾರದ ಪುಡಿಯನ್ನು ಒಂದೊಂದಾಗಿ ಬೆರೆಸಿ ಮರದ ಸೌಟಿನಿಂದ ಕಲಸಿರಿ. ಅರ್ಧ ಸ್ಪೂನ್ ಸಕ್ಕರೆ ಹಾಕಿದರೂ ಹಾಕಬಹುದು, ನಿಮ್ಮಿಷ್ಟ. ಒಗ್ಗರಣೆಗೆ ಬೆಂದ ಬದನೆ ಹೋಳುಗಳನ್ನು ಸುರಿಯಿರಿ. ಪಲ್ಯದ ಲುಕ್ ಅಂಡ್ ಫೀಲ್ ಬರುತ್ತಿದ್ದಂತೆಯೇ ಒಂದು ಲೋಟ ಬಿಸಿನೀರು ಬೆರೆಸಿರಿ. ಉಪ್ಪು ಹಾಕಿ. ನಿಧಾನವಾಗಿ ಕುದಿಯಲಿ. ಹೆಚ್ಚು ಬೆಂದರೆ ಬದನೆ ಕರಗಿ ನೀರಾಗುತ್ತದೆ. ತಿನ್ನುವಾಗ ಬಾಯಿಗೆ ಹೋಳು ಸಿಗುವಂತೆ ಬದನೆ ಗೊಜ್ಜು ಮಾಡುವುದು ಒಂದು ಕಲೆ. ನಮ್ಮ ಲೆಕ್ಕದಲ್ಲಿ ಈ ಪ್ರಮಾಣದ ಗೊಜ್ಜು ಇಬ್ಬರಿಗೆ ಸಾಕಾಗುತ್ತದೆ. ಎಣ್ಣೆ ಹಾಕಿ ಲೇಯರ್ ಮೇಲೆ ಲೇಯರ್ ಲಟ್ಟಿಸಿಕೊಂಡ ಚಪಾತಿಯನ್ನೂ ಮಾಡಿದರೆ ಗೊಜ್ಜು ಮಾಡಿದ್ದಕ್ಕೂ ಸಾರ್ಥಕ.

ಸೂಚನೆ : ಖಾರದ ಪುಡಿ ಎಂದರೆ ಕೇವಲ ಒಣಮೆಣಸಿನ ಕಾಯಿಯನ್ನು ಕುಟ್ಟಿ ಮಾಡಿಕೊಂಡ ಪುಡಿ.

(ದಟ್ಸ್ ಕನ್ನಡ ಅಡುಗೆಶಾಲೆ)

Story first published: Thursday, October 22, 2009, 15:44 [IST]
X
Desktop Bottom Promotion