For Quick Alerts
ALLOW NOTIFICATIONS  
For Daily Alerts

ಆಹಾರ ಸಂರಕ್ಷಣೆ: ಹಿಂದಿನ ಕಾಲದಿಂದ ಇಂದಿನವರೆಗು ಅನುಸರಿಸಿಕೊಂಡು ಬರುತ್ತಿರುವ ಹತ್ತು ವಿಧಾನಗಳ ಪಕ್ಷಿನೋಟ

|

ಹೆಚ್ಚು ಕಾಲ ಆಹಾರ ಕೆಡದೇ ಉಳಿಯುವಂತಾಗಿಸಲು ಬಹಳ ಹಿಂದಿನ ಕಾಲದಿಂದಲೂ ಪ್ರಯತ್ನಗಳು ನಡೆಯುತ್ತಲೇ ಇವೆ ಹಾಗೂ ಹಲವಾರು ವಿಧಾನಗಳು ಯಶಸ್ವಿಯಾಗಿದ್ದು ಇಂದಿಗೂ ಬಳಸಲ್ಪಡಲಾಗುತ್ತಿದೆ. ಈ ವಿಷಯವನ್ನು ಆಧರಿಸಿ The Home Preserving Bible ಎಂಬ ಗ್ರಂಥವನ್ನು ರಚಿಸಲಾಗಿದ್ದು ಪ್ರತಿ ವಿಧಾನದ ಬಗ್ಗೆ ವಿಸ್ತೃತ ಮತ್ತು ಕುತೂಹಲಕರವಾದ ಮಾಹಿತಿಗಳನ್ನು ಒದಗಿಸಲಾಗಿದೆ. ಈ ಗ್ರಂಥದಲ್ಲಿ ಉಲ್ಲೇಖಿಸಲಾಗಿರುವ ಪ್ರಮುಖ ವಿಧಾನಗಳನ್ನು ಇಂದಿನ ಲೇಖನದಲ್ಲಿ ಕ್ಷಿಪ್ರವಾಗಿ ವಿವರಿಸಲಾಗಿದ್ದು ಪ್ರಮುಖ ಹತ್ತು ವಿಧಾನಗಳ ಪಕ್ಷಿನೋಟವನ್ನು ನೀಡಲಾಗಿದೆ. ಕ್ಯಾನುಗಳಲ್ಲಿ ಸಂಗ್ರಹಿಸುವುದು, ಶೀತಲೀಕರಿಸುವುದು, ಒಣಗಿಸುವುದು ಮೊದಲಾದ ವಿಧಾನಗಳು ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿವೆ. ಕೆಲವು ವಿಧಾನಗಳು ಹೀಗೂ ಆಗಬಹುದೇ ಎಂದು ಅಚ್ಚರಿ ಮೂಡಿಸಿದರೆ ಕೆಲವು ದುಬಾರಿಯೆಂದೂ ಅನ್ನಿಸಬಹುದು.

1. ಕ್ಯಾನಿಂಗ್ ಅಥವಾ ಲೋಹದ ಡಬ್ಬಿಯಲ್ಲಿ ಗಾಳಿಯಾಡದಂತೆ ಶೇಖರಿಸುವುದು

1. ಕ್ಯಾನಿಂಗ್ ಅಥವಾ ಲೋಹದ ಡಬ್ಬಿಯಲ್ಲಿ ಗಾಳಿಯಾಡದಂತೆ ಶೇಖರಿಸುವುದು

ಆಹಾರವನ್ನು ನಿರ್ಧರಿತ ತಾಪಮಾನಕ್ಕೆ ಬಿಸಿಮಾಡಿ ನಿರ್ಧಿಷ್ಟ ಹೊತ್ತು ಇದೇ ತಾಪಮಾನದಲ್ಲಿರಿಸಲಾಗುತ್ತದೆ (ಪ್ಯಾಶ್ಚರೀಕರಣ). ಬಳಿಕ ಇವನ್ನು ಲೋಹದ ತಗಡಿನ ಚಿಕ್ಕ ಡಬ್ಬಿಯಲ್ಲಿ ಒಂದಿನಿತೂ ಗಾಳಿಯ ಅಂಶವೇ ಇಲ್ಲದಂತೆ ಭರ್ತಿಮಾಡಿ ಮುಚ್ಚಳವನ್ನು ಬೆಸುಗೆ ಹಾಕಿ ಮುಚ್ಚಲಾಗುತ್ತದೆ. ಲೋಹದ ಬದಲಿಗೆ ಗಾಜಿನ ಬಾಟಲಿಗಳನ್ನೂ ಬಳಸಬಹುದು. ಇವನ್ನು ಬಳಸುವ ಸಮಯದಲ್ಲಿ ಮಾತ್ರವೇ ಮುಚ್ಚಳವನ್ನು ಒಡೆದೇ ತೆಗೆಯಬೇಕಾಗುತ್ತದೆ ಹಾಗೂ ತೆರೆದ ಬಳಿಕ ಪೂರ್ಣಪ್ರಮಾಣವನ್ನು ಬಳಸಬೇಕಾಗುತ್ತದೆ. ಹೆಚ್ಚಿನ ಬಗೆಯ ಆಹಾರಗಳನ್ನು ಈ ವಿಧಾನದಲ್ಲಿ ಸಂರಕ್ಷಿಸಲಾಗುತ್ತದೆ. ಹಣ್ಣು-ಹಂಪಲು, ತರಕಾರಿ, ಮಾಂಸ, ಸಾಗರ ಉತ್ಪನ್ನಗಳು ಹಾಗೂ ಕೆಲವು ಸಿದ್ಧರೂಪದ ಆಹಾರಗಳನ್ನು ಈ ಬಗೆಯಲ್ಲಿ ಸಂಗ್ರಹಿಸಲಾಗುತ್ತದೆ. ಈ ವಿಧಾನದಿಂದ ಆಹಾರವನ್ನು ಹೆಚ್ಚು ಕಾಲ ಹಾಗೂ ತಾಪಮಾನದ ಏರಿಳಿತದ ಸಂದರ್ಭದಲ್ಲಿಯೂ ಸುರಕ್ಷಿತವಾಗಿರಿಸಿಕೊಳ್ಳಬಹುದು. ಆದರೆ ಈ ವಿಧಾನ ಭಾರೀ ಪ್ರಮಾಣದಲ್ಲಿ ತಯಾರಿಸಲಾದ ಆಹಾರವನ್ನು ಸಂಗ್ರಹಿಸಬೇಕಾದಾಗಲೇ ಬಳಸಲು ಸೂಕ್ತ. ಏಕೆಂದರೆ ಈ ವಿಧಾನದಲ್ಲಿ ಬಳಸಲಾಗುವ ಯಂತ್ರಗಳು ದುಬಾರಿ ಹಾಗೂ ಪ್ರತಿ ಪೊಟ್ಟಣಕ್ಕೆ ಬೆಸುಗೆ ಹಾಕಲು ವೆಚ್ಚ ತಗಲುವುದರಿಂದ ಕಡಿಮೆ ಪ್ರಮಾಣದಲ್ಲಿ ಸಂಗ್ರಹಿಸಿದಾಗ ಪ್ರತಿ ಪೊಟ್ಟಣದ ಬೆಲೆ ಆಹಾರದ ಬೆಲೆಗೂ ನಾಲ್ಕಾರು ಪಟ್ಟು ಹೆಚ್ಚಬಹುದು.

2. ಶೀತಲೀಕರಣ

2. ಶೀತಲೀಕರಣ

ಈ ವಿಧಾನದಲ್ಲಿ ಆಹಾರವನ್ನು 0°F (ಅಥವಾ -17.77778 °C) ಯಷ್ಟು ತಾಪಮಾನಕ್ಕೆ ಇಳಿಸಿ ಮರಗಟ್ಟಿಸಲಾಗುತ್ತದೆ. ಅಗತ್ಯಬಿದ್ದಾಗ ಇದನ್ನು ಹೊರತೆಗೆದು ಇರಿಸಿದರೆ ಕೊಂಚ ಸಮಯದಲ್ಲಿ ಇದು ಸಾಮಾನ್ಯ ತಾಪಮಾನಕ್ಕೆ ಬರುತ್ತದೆ (thawing). ಹಣ್ಣುಗಳು, ತರಕಾರಿಗಳು, ಮಾಂಸ, ಸಾಗರ ಉತ್ಪನ್ನ, ಧಾನ್ಯ, ಕಾಳುಗಳು, ಡೈರಿ ಉತ್ಪನ್ನಗಳು, ಮೊಟ್ಟೆಗಳು, ಸಿದ್ಧ ಆಹಾರಗಳು ಮೊದಲಾದವುಗಳನ್ನು ಈ ವಿಧಾನದಲ್ಲಿ ಸಂಗ್ರಹಿಸಬಹುದು. ಒಮ್ಮೆ ಈ ಆಹಾರ ಸಾಮಾನ್ಯ ತಾಪಮಾನ ಪಡೆದ ಬಳಿಕ ಇದನ್ನು ಮತ್ತೊಮ್ಮೆ ಶೀತಲೀಕರಿಸಬಾರದು, ಇದು ಆಹಾರವನ್ನು ವಿಷಕಾರಿಯಾಗಿಸಬಹುದು. ಅಲ್ಲದೇ ನಮ್ಮ ಮನೆಯಲ್ಲಿರುವ ಫ್ರಿಜ್ಜಿನ ಫ್ರೀಜರ್ ನಲ್ಲಿ ಈ ಮಾದರಿಯಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿನ ತಾಪಮಾನ ಸುಮಾರು 10°F ರಿಂದ 32°F (-12.22ºC ರಿಂದ 0ºC) ವರೆಗೆ ಮಾತ್ರವೇ ಇರುತ್ತದೆ. ಹಾಗಾಗಿ ಶೀತಲೀಕರಣ ಘಟಕದಲ್ಲಿ ಸಾಧಿಸುವಷ್ಟು ತಂಪನ್ನು ಫ್ರೀಜರಿನಲ್ಲಿ ಸಾಧಿಸಲು ಸಾಧ್ಯವಿಲ್ಲ. ಇದನ್ನು ಪಡೆಯಲು ವಿಶೇಷ ಫ್ರೀಜರುಗಳನ್ನೇ ಖರೀದಿಸಬೇಕಾಗುತ್ತದೆ. ಇವು ಸಾಮಾನ್ಯ ಫ್ರಿಜ್ಜುಗಳಿಗಿಂತ ಕೊಂಚ ದುಬಾರಿಯಾಗಿರುತ್ತವೆ.

3. ಒಣಗಿಸುವುದು

3. ಒಣಗಿಸುವುದು

ಆಹಾರದಲ್ಲಿರುವ ನೀರಿನ ಅಂಶವೇ ಇದು ಕೊಳೆಯಲು ಪ್ರಮುಖ ಕಾರಣ. ಹಾಗಾಗಿ ಈ ನೀರನ್ನು ನಿವಾರಿಸಿದರೆ ಕೊಳೆಯುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಏಕೆಂದರೆ ಅತಿಸೂಕ್ಷ್ಮ ಜೀವಿಗಳಿಗೆ ನೀರಿನ ಪಸೆ ಇಲ್ಲದೇ ಆಹಾರವನ್ನು ಕೊಳೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನೀರಿನಂಶವನ್ನು ತೆಗೆಯಬಹುದಾದ ಯಾವುದೇ ಆಹಾರವನ್ನು ಒಣಗಿಸಿ ಹೆಚ್ಚು ಕಾಲ ಸಂಗ್ರಹಿಸಿಡಬಹುದು. ಹಣ್ಣುಗಳು, ತರಕಾರಿಗಳು, ಸಾಗರ ಉತ್ಪನ್ನಗಳು, ಧಾನ್ಯಗಳು, ಕಾಳುಗಳು ಹಾಗೂ ಫಲಗಳು ಈ ಕ್ರಮಕ್ಕೆ ಸೂಕ್ತವಾಗಿವೆ. ಅಹಾರವನ್ನು ಒಣಗಿಸುವುದರಲ್ಲಿಯೂ ಕೆಲವಾರು ವಿಧಾನಗಳಿವೆ, ಬಿಸಿಲಿನಲ್ಲಿ ಒಣಗಿಸುವುದು, ನೆರಳಿನಲ್ಲಿ ಒಣಗಿಸುವುದು, ಹೊಗೆ ಹಾಕಿ ಒಣಗಿಸುವುದು, ಉಪ್ಪು ಸವರಿ ಒಣಗಿಸುವುದು ಇತ್ಯಾದಿ. ಇದು ಅತಿ ಸುಲಭ, ಅತ್ಯಂತ ಅಗ್ಗ ಹಾಗೂ ಹೆಚ್ಚಿನ ವಿಶೇಷ ಸಲಕರಣೆಯ ಅಗತ್ಯವಿಲ್ಲದೇ ಅನುಸರಿಸುವ ವಿಧಾನವಾಗಿದ್ದು ಬಹಳ ಹಿಂದಿನ ಕಾಲದಿಂದಲೂ ಆಚರಣೆಯಲ್ಲಿದೆ.

4. ಹುಳಿ ಬರಿಸಿ ಇರಿಸುವುದು

4. ಹುಳಿ ಬರಿಸಿ ಇರಿಸುವುದು

ಆಹಾರವನ್ನು ಕೊಳೆಸುವ 'ಕೆಟ್ಟ ಕ್ರಿಮಿಗಳ' ಬದಲಿಗೆ ಆಹಾರವನ್ನು ಸಂರಕ್ಷಿಸುವ 'ಒಳ್ಳೆಯ ಕ್ರಿಮಿಗಳನ್ನು' ಆಹಾರದಲ್ಲಿ ಇರಿಸುವುದು ಈ ವಿಧಾನದಲ್ಲಿ ಬಳಕೆಯಾಗುವ ತಂತ್ರವಾಗಿದೆ. ಹಣ್ಣು, ತರಕಾರಿ, ಮಾಂಸ, ಸಾಗರ ಉತ್ಪನ್ನ, ಧಾನ್ಯಗಳು, ಕಾಳುಗಳು, ಡೈರಿ ಉತ್ಪನ್ನಗಳು ಮತ್ತು ಮೊಟ್ಟೆಗಳನ್ನು ಈ ವಿಧಾನದಲ್ಲಿ ಸಂಗ್ರಹಿಸಬಹುದು. ಇದಕ್ಕಾಗಿ ಹುಳಿ ಇರುವ ದ್ರವದಲ್ಲಿ ಈ ಆಹಾರಗಳನ್ನು ಮುಳುಗಿಸಿ ಇಡಬೇಕಾಗುತ್ತದೆ. ಉದಾಹರಣೆಗೆ ದ್ರಾಕ್ಷಾರಸದಿಂದ ತಯಾರಿಸಲಾದ ವೈನ್, ಕೋಸಿನಿಂದ ತಯಾರಿಸಲಾದ ಸಾವರ್ ಕ್ರಾಟ್ (sauerkraut), ಮಾಂಸದ ಹುಳಿನೀರು (cured sausage), ಮೊಸರು ಇತ್ಯಾದಿ. ಈ ವಿಧಾನದಲ್ಲಿ ಸಂಗ್ರಹಿಸಿಟ್ಟ ಆಹಾರಗಳನ್ನು ಅಗತ್ಯವಿರುವಾಗ ಹೊರತೆಗೆದು ನೇರವಾಗಿ ಬಳಸಬಹುದು ಹಾಗೂ ಇದಕ್ಕಾಗಿ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಆದರೆ ಪ್ರತಿ ಆಹಾರಕ್ಕನುಗುಣವಾಗಿ ಕೊಂಚ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

5. ಉಪ್ಪಿನಕಾಯಿ ಹಾಕಿಡುವುದು

5. ಉಪ್ಪಿನಕಾಯಿ ಹಾಕಿಡುವುದು

ಉಪ್ಪು, ಆಮ್ಲ ಅಥವಾ ಮದ್ಯದ ದ್ರವದಲ್ಲಿ ಮುಳುಗಿಸಿಟ್ಟ ಆಹಾರ ತನ್ನ ಮೂಲಗುಣಗಳನ್ನು ಕಳೆದುಕೊಂಡು ಬೇರೆಯೇ ರುಚಿ ಪಡೆದರೂ ಹೆಚ್ಚು ಕಾಲ ಹಾಳಾಗದೇ ಉಳಿಯುತ್ತದೆ. ಹಣ್ಣುಗಳು, ಲಿಂಬೆ, ತರಕಾರಿಗಳು, ಮಾಂಸ, ಸಾಗರ ಉತ್ಪನ್ನ, ಧಾನ್ಯ ಮತ್ತು ಮೊಟ್ಟೆಗಳನ್ನು ಈ ವಿಧಾನದಲ್ಲಿ ಸಂಗ್ರಹಿಸಿಡಬಹುದು. ಈ ವಿಧಾನಕ್ಕೂ ವಿಶೇಷವೆನಿಸುವ ಉಪಕರಣಗಳ ಅಗತ್ಯವಿಲ್ಲ. ಆದರೆ ಈ ಆಹಾರವನ್ನು ಸಂಗ್ರಹಿಸುವಾಗ ಮುನ್ನೆಚ್ಚರಿಕೆ ವಹಿಸದಿದ್ದರೆ ಅಥವಾ ಸಾಮಾನ್ಯ ತಾಪಮಾನದಲ್ಲಿ ಸಂಗ್ರಹಿಸಿಟ್ಟಿದ್ದರೆ ಈ ಆಹಾರವೂ ಹಾಳಾಗಬಹುದು. ಇದೇ ಕಾರಣಕ್ಕೆ ಈ ವಿಧಾನವನ್ನು ಇತರ ವಿಧಾನಗಳ ಸಹಿತ ಸಂಗ್ರಹಿಸಿಡಲಾಗುತ್ತದೆ. ಉದಾಹರಣೆಗೆ ಶೀತಲೀಕರಣ, ಹುಳಿ ಬರಿಸುವುದು ಅಥವಾ ಕ್ಯಾನ್ ಮಾಡಿ ಇಡುವುದು ಅಥವಾ ಸುಲಭ ರೀತಿಯಲ್ಲಿ ಫ್ರಿಜ್ಜಿನಲ್ಲಿರಿಸುವುದು.

6. ಉಪ್ಪು ಸವರಿ ಒಣಗಿಸುವುದು

6. ಉಪ್ಪು ಸವರಿ ಒಣಗಿಸುವುದು

ಈ ವಿಧಾನದಲ್ಲಿ ಹುಳಿಬರಿಸಿದ ಅಥವಾ ಉಪ್ಪಿನಕಾಯಿ ಹಾಕಿದ ತರಕಾರಿ, ಮಾಂಸ ಮೀನು ಮೊದಲಾದವುಗಳಿಗೆ ಕೊಂಚ ಉಪ್ಪನ್ನು ಸಿಂಪಡಿಸಿ (ಉಪ್ಪಿನ ಸಾಂದ್ರತೆ ಆಹಾರದ ಭಾರದ 2½% ರಿಂದ 5% ಭಾರದಷ್ಟು ) ಉಪ್ಪನ್ನು ಸವರಿ ಹುಳಿಬಂದಿದ್ದ ಅಹಾರವನ್ನು ಇನ್ನಷ್ಟು ಹುಳಿಯಾಗಿಸಲಾಗುತ್ತದೆ. ತಾಜಾ ಆಹಾರವನ್ನು ಈ ವಿಧಾನದಲ್ಲಿ ಸಂಗ್ರಹಿಸಬೇಕಾದರೆ ಹೆಚ್ಚಿನ ಸಾಂದ್ರತೆಯ (20% ರಿಂದ 25% ರಷ್ಟು ಭಾರದ) ಉಪ್ಪನ್ನು ಸವರಿ ಒಣಗಿಸಬೇಕಾಗುತ್ತದೆ. ಈ ಸಾಂದ್ರತೆಯಲ್ಲಿ ಸೂಕ್ಷ್ಮ ಜೀವಿಗಳು ಬದುಕಲಾರವು. ಕರಾವಳಿಯ ಜನತೆಗೆ ಈ ವಿಧಾನದಲ್ಲಿ ಸಂಗ್ರಹಿಸಲಾದ ಒಣಮೀನು ಇಲ್ಲದೇ ಊಟವೇ ರುಚಿಸದು. ಈ ವಿಧಾನದಲ್ಲಿ ಆಹಾರ ಉಪ್ಪಿನಂಶವನ್ನು ಹೀರಿಕೊಳ್ಳುವ ಕಾರಣ ತನ್ನ ಮೂಲ ರುಚಿಯನ್ನು ಬದಲಿಸಿಕೊಂಡು ಇನ್ನಷ್ಟು ರುಚಿಕರವಾಗುತ್ತದೆ. ಬೀನ್ಸ್, ತರಕಾರಿ, ಬಟಾಣಿ, ಮೊದಲಾದವುಗಳನ್ನೂ ಈ ವಿಧಾನದಲ್ಲಿ ಸಂಗ್ರಹಿಸಲಾಗುತ್ತದೆ. ಸುಮಾರು ಇಪ್ಪತ್ತನೇ ಶತಮಾನದ ಆದಿಯಲ್ಲಿ ಈ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಕ್ಯಾನ್ ಮಾಡಲು ಸಾಧ್ಯವಾಗದ ಅಥವಾ ಶೀತಲೀಕರಣ ಸೌಲಭ್ಯವಿಲ್ಲದ ಆಹಾರಗಳಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

7. ಕ್ಯೂರಿಂಗ್

7. ಕ್ಯೂರಿಂಗ್

ಇದು ಸಹಾ ಉಪ್ಪಿನಕಾಯಿಯ ವಿಧಾನದಂತೆಯೇ ಇದ್ದರೂ ಇದರಲ್ಲಿ ಉಪ್ಪಿನ ಜೊತೆಗೆ ಆಮ್ಲವನ್ನು ಮತ್ತು ಕೆಲವೊಮ್ಮೆ ನೈಟ್ರೈಟುಗಳನ್ನು ಹಾಕಿ ಹುಳಿಬರಿಸಲಾಗುತ್ತದೆ. ಮಾಂಸ ಮತ್ತು ಮೀನನ್ನು ಈ ವಿಧಾನದಿಂದ ಸಂಗ್ರಹಿಸಲಾಗುತ್ತದೆ. ಕಾಫಿ ಬೀಜಗಳನ್ನು ಸಂಗ್ರಹಿಸಲು ಈ ವಿಧಾನವನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಮಲೆನಾಡಿನಲ್ಲಿ ಕಾಫಿ ಕ್ಯೂರಿಂಗ್ ವರ್ಕ್ಸ ಎಂಬ ಹೆಸರಿನ ಉದ್ಯಮಗಳೂ ಇವೆ. ಆಧುನಿಕ ವಿಧಾನದಲ್ಲಿ ಉಪ್ಪು ಮತ್ತು ನೈಟ್ರೈಟುಗಳ ಪ್ರಮಾಣವನ್ನು ತಗ್ಗಿಸಿ ಶೀತಲೀಕರಿಸುವ ಮೂಲಕ ಆಹಾರದ ಗುಣಮಟ್ಟ ಇನ್ನಷ್ಟು ಉತ್ತಮವಾಗುವಂತೆ ನೋಡಿಕೊಳ್ಳಲಾಗುತ್ತದೆ. ಹೆಚ್ಚು ಕಾಲ ಶೇಖರಿಸಬೇಕಾದ ಉತ್ಪನ್ನಗಳಿಗೆ ವಿಶೇಷ ಪ್ರಮಾಣದ ಉಪಕರಣಗಳು ಮತ್ತು ನಿಖರವಾದ ತಂತ್ರವನ್ನು ಬಳಸಿಕೊಂಡು ಸಾಕಷ್ಟು ಪ್ರಮಾಣದ ನೈಟ್ರೈಟ್ ಗಳ ಬಳಕೆ ಮತ್ತು ಸಂಕೀರ್ಣ ಒಣಗಿಸುವ ಪ್ರಕ್ರಿಯೆಯ ಅಗತ್ಯವಿರುತ್ತದೆ. ಕೆಲವು ಕ್ಯೂರಿಂಗ್ ವಿಧಾನಗಳು ಹೊಗೆಯಲ್ಲಿ ಒಣಗಿಸುವುದು, ಹುಳಿ ಬರಿಸುವುದು ಅಥವಾ ಗಾಳಿಯಾಡದಂತೆ ಶೇಖರಿಸಿಡುವುದು ಮೊದಲಾದ ಹೆಚ್ಚುವರಿ ಪ್ರಕ್ರಿಯೆಯನ್ನು ಸಹ ಬಳಸಿಕೊಳ್ಳುತ್ತವೆ.

8. ಹೊಗೆಯಲ್ಲಿ ಒಣಗಿಸುವುದು

8. ಹೊಗೆಯಲ್ಲಿ ಒಣಗಿಸುವುದು

ಈ ವಿಧಾನ ಕ್ಯೂರಿಂಗ್ ವಿಧಾನದ ಮುಂದುವರೆದ ಭಾಗವಾಗಿದ್ದು ಇದರಿಂದ ಆಹಾರದ ರುಚಿ ಮತ್ತು ನೋಟ ಉತ್ತಮಗೊಳ್ಳುತ್ತವೆ. ಅಲ್ಲದೇ ಮಳೆಗಾಲದಲ್ಲಿ ಆಹಾರವನ್ನು ಒಣಗಿಸಲೂ ಸಾಧ್ಯವಾಗುತ್ತದೆ. ಮನೆಯಲ್ಲಿ ಹೊಗೆಹಾಕಿ ಒಣಗಿಸುವ ಆಹಾರದಿಂದ ಅಹಾರ ಸಂರಕ್ಷಣೆಯ ಜೊತೆಗೇ ಇತರ ಪ್ರಯೋಜನಗಳನ್ನೂ ಒದಗಿಸುತ್ತದೆ. ಆದರೆ ಈ ವಿಧಾನದಲ್ಲಿ ಒಣಗಿಸಿದ ಮಾಂಸದ ಆಹಾರಗಳು ಸುಲಭವಾಗಿ ಕಮಟು ವಾಸನೆ ಪಡೆಯುತ್ತವೆ ಅಥವಾ ಶೀಘ್ರದಲ್ಲಿಯೇ ಇದರ ಮೇಲೆ ಶಿಲೀಂಧ್ರಗಳು ಬೆಳೆಯುತ್ತವೆ.

9. ಗಾಳಿಯಿಲ್ಲದ ಜಾಡಿಯಲ್ಲಿ ಶೇಖರಿಸಿಡುವುದು

9. ಗಾಳಿಯಿಲ್ಲದ ಜಾಡಿಯಲ್ಲಿ ಶೇಖರಿಸಿಡುವುದು

ಆಹಾರ ಹಾಳಾಗಲು ಗಾಳಿಯಲ್ಲಿರುವ ಸೂಕ್ಷ್ಮ ಜೀವಿಗಳು ಪ್ರಮುಖ ಕಾರಣವಾಗಿವೆ. ಹಾಗಾಗಿ ಈ ಗಾಳಿಯನ್ನೇ ಇಲ್ಲವಾಗಿಸಿಬಿಟ್ಟರೆ? ಈ ತರ್ಕವನ್ನೇ ಈ ವಿಧಾನದಲ್ಲಿ ಬಳಸಲಾಗುತ್ತದೆ. ಆದರೂ, ಇದು ಪರಿಪೂರ್ಣವಾಗಿ ಸುರಕ್ಷಿತ ವಿಧಾನವಲ್ಲ, ಏಕೆಂದರೆ ಈಗಾಗಲೇ ಆಹಾರದಲ್ಲಿರುವ ಅಲ್ಪ ಪ್ರಮಾಣದ್ದೇ ಆದರೂ ಸರಿ, ಇರುವ ಗಾಳಿ ಮತ್ತು ಸೂಕ್ಷ್ಮಜೀವಿಗಳು ಆಹಾರವನ್ನು ನಿಧಾನವಾಗಿ ಕೊಳೆಸಲು ಪ್ರಾರಂಭಿಸುತ್ತವೆ. ಹಾಗಾಗಿ ಇದರಿಂದ ಕೊಳೆಯಲು ಪ್ರಾರಂಭವಾಗುವ ಅವಧಿಯನ್ನು ಕೊಂಚ ತಡವಾಗಿಸಬಹುದಷ್ಟೇ! ಇದೇ ಕಾರಣಕ್ಕೆ ಈ ವಿಧಾನವನ್ನು ಇತರ ವಿಧಾನಗಳಾದ ಶೀತಲೀಕರಣ ಮತ್ತು ಒಣಗಿಸುವಿಕೆಗೆ ಪೂರಕವಾಗಿ ಬಳಸಲಾಗುತ್ತದೆ. ಇದರಲ್ಲಿ ಎರಡು ವಿಧಾನಗಳಿವೆ ಗಾಳಿಯೇ ಇಲ್ಲದ ವ್ಯಾಕ್ಯೂಂ ಸೀಲಿಂಗ್ ಮತ್ತು ಗಾಳಿಯ ಬದಲು ಬೇರೆ ಅಂಶವನ್ನು ಇರಿಸಿ ಸೀಲ್ ಮಾಡುವ ಫ್ಯಾಟ್ ಸೀಲಿಂಗ್. ಇವೆರಡೂ ಸುಲಭ ಹಾಗೂ ಕಡಿಮೆ ವೆಚ್ಚದಲ್ಲಿ ನಿರ್ವಹಿಸಬಹುದಾಗಿವೆ.

10. ಸೆಲ್ಲಾರಿಂಗ್

10. ಸೆಲ್ಲಾರಿಂಗ್

ತಾಪಮಾನ, ಆರ್ದತೆ ಮತ್ತು ಬೆಳಕು, ಇವೆಲ್ಲವನ್ನೂ ನಿಯಂತ್ರಿಸಿ ಆಹಾರವನ್ನು ಕೊಳೆಯದಂತೆ ಹೆಚ್ಚು ಕಾಲ ಕಾಪಾಡುವ ವಿಧಾನವೇ ಸೆಲ್ಲಾರಿಂಗ್. ಈ ವಿಧಾನದಲ್ಲಿ ಭಾರೀ ಪ್ರಮಾಣದ ಆಹಾರವನ್ನು ಹೆಚ್ಚು ಕಾಲ ಉಳಿಸಲಾಗುತ್ತದೆ. ವಿಶೇಷವಾಗಿ ತರಕಾರಿ, ಧಾನ್ಯ, ಫಲಗಳು, ಹುಳಿಬರಿಸಿದ ಆಹಾರಗಳು, ಒಣಗಿಸಿ ಸಂಗ್ರಹಿಸಲಾದ ಮಾಂಸ, ಇತ್ಯಾದಿಗಳಿಗೆ ಈ ವಿಧಾನ ಸೂಕ್ತವಾಗಿದೆ. ಆಹಾರವನ್ನು ಅನುಸರಿಸಿ ಈ ವಿಧಾನದಲ್ಲಿಯೂ ಹಲವಾರು ವಿಧಗಳಿವೆ. ಕೆಲವು ಸುಲಭ, ಅಲ್ಪವೆಚ್ಚದ್ದಾಗಿದ್ದರೆ ಕೆಲವು ದುಬಾರಿಯಾಗಿವೆ. ಮನೆಯ ಒಂದು ಭಾಗವನ್ನು ಪುಟ್ಟ ಸೆಲ್ಲಾರ್ ಆಗಿ ಬದಲಿಸಿಕೊಳ್ಳಬಹುದು. ದೊಡ್ಡ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಭಾರೀ ಗಾತ್ರದ ಸೆಲ್ಲಾರುಗಳನ್ನು ಹೊಂದಿರುತ್ತವೆ.

English summary

Food Preservation Methods from Ancient to Modern

Here is a brief description of the food preservation methods detailed in the book The Home Preserving Bible. Canning, freezing, and drying food are the most common methods for preserving foods at home today. However, there are many other methods, and some are easier and less expensive. Listed below is an overview of 10 methods for preserving foods, including today’s popular methods, as well as other old-fashioned and ancient techniques that are worth re-visiting.
X
Desktop Bottom Promotion