For Quick Alerts
ALLOW NOTIFICATIONS  
For Daily Alerts

ಈ ಕುಂಬಳದ ಬೀಜಗಳು ನೋಡಲು ಚಿಕ್ಕದಾದರೂ, ಕಾರುಬಾರು ಮಾತ್ರ ದೊಡ್ಡದು!!

By Arshad
|

ಸಿಹಿಗುಂಬಳ ಕಾಯಿ ಒಂದು ತರಕಾರಿಯಾಗಿಯೂ ಸಿಹಿಯನ್ನು ಮಾಡುವ ಸಾಮಾಗ್ರಿಯಾಗಿಯೂ ನಮಗೆ ಪರಿಚಿತವಾಗಿದೆ. ಆದರೆ ಸಾಮಾನ್ಯವಾಗಿ ನಾವು ಇದರ ಬೀಜಗಳನ್ನು ಎಸೆದು ಬಿಡುತ್ತೇವೆ. ಆದರೆ ಈ ಬೀಜಗಳನ್ನು ಒಣಗಿಸಿ ಇದರ ತಿರುಳನ್ನು ಸೇವಿಸಿದರೆ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ. ಈ ಬೀಜಗಳಲ್ಲಿ ಹಲವಾರು ಪ್ರೋಟೀನ್, ಆರೋಗ್ಯಕರ ಕೊಬ್ಬು, ಇತರ ಪೋಷಕಾಂಶಗಳು ಹಾಗೂ ಖನಿಜಗಳಾದ ಸತು, ಮೆಗ್ನೀಶಿಯಂ, ತಾಮ್ರಗಳೂ ಸಮೃದ್ಧ ಪ್ರಮಾಣದಲ್ಲಿವೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿ ಕಬ್ಬಿಣ, ವಿಟಮಿನ್ ಬಿ ಸಹಾ ಇದೆ.

ಇದರಲ್ಲಿರುವ ಆರೋಗ್ಯಕರ ಕೊಬ್ಬು ರಕ್ತನಾಳಗಳನ್ನು ಆರೋಗ್ಯಕರವಾಗಿರಿಸಲು ಅಗತ್ಯವಾಗಿರುವ ಅವಶ್ಯಕ ಕೊಬ್ಬು ಆಗಿದ್ದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಲೂ ನೆರವಾಗುತ್ತದೆ,. ಈ ಅದ್ಭುತ ಸಿಹಿಗುಂಬಳದ ಬೀಜದಲ್ಲಿ ಕರಗುವ ನಾರು ಸಹಾ ಇದ್ದು ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ರಕ್ಷಿಸುತ್ತದೆ. ಈ ಆರೋಗ್ಯಕರ ಬೀಜಗಳನ್ನು ಪುರುಷರು, ಮಹಿಳೆಯರೆಂಬ ಬೇಧವಿಲ್ಲದೇ ಎಲ್ಲರೂ ಸುರಕ್ಷಿತವಾಗಿ ಸೇವಿಸಬಹುದು. ಬನ್ನಿ, ಇದರ ಕೆಲವು ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿಯೋಣ....

ಹೃದಯದ ಮಿತ್ರನಾಗಿದೆ

ಹೃದಯದ ಮಿತ್ರನಾಗಿದೆ

ಈ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು ಸಮೃದ್ಧವಾಗಿದ್ದು ಜೊತೆಗೆ ಕರಗದ ನಾರು ಹಾಗೂ ಇತರ ಆಂಟಿ ಆಕ್ಸಿಡೆಂಟುಗಳಿವೆ. ಇವೆಲ್ಲವೂ ಹೃದಯಕ್ಕೆ ಉತ್ತಮವಾಗಿದೆ. ಅಲ್ಲದೇ ಇದರಲ್ಲಿರುವ ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ನೆರವಾಗುತ್ತದೆ.

ಸುಖನಿದ್ದೆಗೆ ನೆರವಾಗುತ್ತದೆ

ಸುಖನಿದ್ದೆಗೆ ನೆರವಾಗುತ್ತದೆ

ಕುಂಬಳದ ಬೀಜಗಳಲ್ಲಿ ಟ್ರಿಪ್ಟೋಫ್ಯಾನ್ ಎಂಬ ಪೋಷಕಾಂಶವೂ ಇದೆ. ಇದು ರಕ್ತದಲ್ಲಿ ಸೇರಿದ ಬಳಿಕ ಸೆರೋಟೋನಿನ್ ಎಂಬ ರಸದೂತವಾಗಿ ಪರಿವರ್ತನೆಗೊಳ್ಳುತ್ತದೆ ಹಾಗೂ ಇದು ಸುಖನಿದ್ದೆಗೆ ನೆರವಾಗುತ್ತದೆ. ಒಂದು ವೇಳೆ ನಿಮಗೆ ಬೇಗನೇ ನಿದ್ದೆ ಆವರಿಸದೇ ಇದ್ದರೆ ಮಲಗುವ ಮುನ್ನ ಕೊಂಚ ಪ್ರಮಾಣದಲ್ಲಿ ಕುಂಬಳದ ಒಣಬೀಜಗಳನ್ನು ಸೇವಿಸಿ ಮಲಗಿದರೆ ಗಾಢ ನಿದ್ದೆ ಆವರಿಸುತ್ತದೆ.

ಉರಿಯೂತ ನಿವಾರಕ ಗುಣ

ಉರಿಯೂತ ನಿವಾರಕ ಗುಣ

ಇದರಲ್ಲಿರುವ ಉರಿಯೂತ ನಿವಾರಕ ಗುಣ ಸಂಧಿವಾತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಒಂದು ವೇಳೆ ನಿಮ್ಮ ಮೂಳೆಗಳ ಗಂಟುಗಳಲ್ಲಿ ನೋವಿದ್ದರೆ ನಿತ್ಯವೂ ಕೊಂಚ ಕುಂಬಳದ ಬೀಜಗಳನ್ನು ಸೇವಿಸುವ ಮೂಲಕ ಅಥವಾ ಈ ಬೀಜಗಳಿಂದ ಹಿಂಡಿ ತೆಗೆದ ಎಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕ ನೋವನ್ನು ಕಡಿಮೆ ಮಾಡಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಈ ಬೀಜಗಳಲ್ಲಿ ಅಧಿಕ ಪ್ರಮಾಣದ ಫೈಟೋಕೆಮಿಕಲ್ಸ್ ಎಂಬ ಪೋಷಕಾಂಶಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ ಹಾಗೂ ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತವೆ. ಅಲ್ಲದೇ ವಿಶೇಷವಾಗಿ ವೈರಸ್ ಮೂಲಕ ಎದುರಾಗುವ ಫ್ಲೂ, ಶೀತ ಮತ್ತು ಇತರ ರೋಗಗಳಿಂದ ರಕ್ಷಿಸುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಕುಂಬಳದ ಬೀಜಗಳು ತೂಕ ಇಳಿಸುವವರಿಗೆ ಸೂಕ್ತವಾದ ಆಹಾರವಾಗಿದೆ. ಇವು ಹೆಚ್ಚಿನ ಸಾಂದ್ರತೆಯಿಂದ ಕೂಡಿರುವ ಆಹಾರವಾಗಿರುವ ಕಾರಣ ಕೊಂಚ ಪ್ರಮಾಣದಲ್ಲಿ ಸೇವಿಸಿದರೂ ಹೊಟ್ಟೆ ತುಂಬಿದಂತಾಗಿ ಹೆಚ್ಚು ಹೊತ್ತು ಹಸಿವಾಗದಂತೆ ತಡೆಯುತ್ತದೆ. ಈ ಮೂಲಕ ಅನಗತ್ಯ ಆಹಾರ ಸೇವಿಸುವುದರಿಂದ ರಕ್ಷಿಸಿ ತೂಕದ ಹೆಚ್ಚಳವನ್ನು ತಡೆಯುತ್ತದೆ. ಅಲ್ಲದೇ ಇವುಗಳಲ್ಲಿ ಕರಗದ ನಾರು ಸಾಹಾ ಹೆಚ್ಚಿನ ಪ್ರಮಾಣದಲ್ಲಿದ್ದು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ಆಹಾರ ಸೇವನೆಯ ಬಯಕೆಗಳನ್ನು ಹತ್ತಿಕ್ಕುತ್ತದೆ.

ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ

ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ

ನಿಯಮಿತವಾಗಿ ಕುಂಬಳದ ಬೀಜಗಳನ್ನು ಸೇವಿಸುತ್ತಾ ಬರುವ ಮೂಲಕ ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಜಠರ, ಪ್ರಾಸ್ಟೇಟ್ ಹಾಗೂ ಕರುಳುಗಳ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ವಿಶೇಷವಾಗಿ ರಜೋನಿವೃತ್ತಿಯ ವಯಸ್ಸನ್ನು ದಾಟಿದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚಾಗಿದ್ದು ಈ ಬೀಜಗಳನ್ನು ನಿತ್ಯವೂ ಸೇವಿಸುವ ಮೂಲಕ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು.

 ಮೂತ್ರಕೋಶದ ಆರೋಗ್ಯ ಉತ್ತಮಗೊಳಿಸುತ್ತದೆ

ಮೂತ್ರಕೋಶದ ಆರೋಗ್ಯ ಉತ್ತಮಗೊಳಿಸುತ್ತದೆ

ಕುಂಬಳದ ಬೀಜಗಳ ಸೇವನೆಯಿಂದ ಪ್ರಾಸ್ಟೇಟ್ ಗ್ರಂಥಿಯ ತೊಂದರೆಗಳಿಂದ ಎದುರಾಗುವ ಬಿಪಿಎಚ್ (Benign Prostatic Hyperplasia (BPH) ಅಥವಾ ಕ್ಯಾನ್ಸರ್ ಅಲ್ಲದ ಪ್ರಾಸ್ಟೇಟ್ ಗ್ರಂಥಿಯ ಬೆಳವಣಿಗೆ ಎಂಬ ವ್ಯಾಧಿಯಿಂದ ರಕ್ಷಣೆ ದೊರಕುತ್ತದೆ. ಈ ತೊಂದರೆ ಎದುರಾದರೆ ಮೂತ್ರಕೋಶದಿಂದ ಮೂತ್ರ ಹೊರಹೋಗುವ ಪ್ರಮಾಣ ಅತಿಯಾಗಿ ನಿಧಾನವಾಗುತ್ತದೆ. ಪರಿಣಾಮವಾಗಿ ಸತತ ಮೂತ್ರಕ್ಕೆ ಅವಸರವಾಗುವುದು ಹಾಗೂ ಅತಿಯೇ ಎನ್ನುವಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಹಾಗೂ ಕೊಂಚ ಉರಿ ಎನಿಸುವುದು ಇದರ ಲಕ್ಷಣವಾಗಿವೆ. ಕುಂಬಳ ಬೀಜಗಳ ಪೋಷಕಾಂಶಗಳು ಈ ತೊಂದರೆಯಿಂದ ರಕ್ಷಿಸುತ್ತವೆ ಹಾಗೂ ಒಂದು ವೇಳೆ ಮೂತ್ರಕೋಶ ಅತಿಯಾಗಿ ಕ್ರಿಯಾಶೀಲವಾಗಿದ್ದರೂ ಇದನ್ನು ಸರಿಪಡಿಸಲು ನೆರವಾಗುತ್ತವೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಕುಂಬಳದ ಬೀಜಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುವ ಗುಣ ಹೊಂದಿವೆ. ಈ ಗುಣದಿಂದಾಗಿ ಮಧುಮೇಹಿಗಳೂ ಈ ಬೀಜಗಳನ್ನು ಸುರಕ್ಷಿತವಾಗಿ ಸೇವಿಸಬಹುದು. ವಿಶೇಷವಾಗಿ ಟೈಪ್-೨ ಮಧುಮೇಹ ಇರುವ ರೋಗಿಗಳ ದೇಹದಲ್ಲಿ ಇದು ಧನಾತ್ಮಕ ಪರಿಣಾಮವನ್ನುಂಟುಮಾಡುತ್ತದೆ. ನಿಯಮಿತ ಸೇವನೆಯಿಂದ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ ಹಾಗೂ ಇವರಿಗೆ ಎದುರಾಗುವ ಉತ್ಕರ್ಷಣಶೀಲ ಒತ್ತಡ (oxidative stress) ದಿಂದಲೂ ಶಮನ ದೊರಕುತ್ತದೆ.

ಅಧಿಕ ಮೆಗ್ನೇಶಿಯಂ

ಅಧಿಕ ಮೆಗ್ನೇಶಿಯಂ

ಕುಂಬಳದ ಬೀಜಗಳಲ್ಲಿ ಉತ್ತಮ ಪ್ರಮಾಣದ ಮೆಗ್ನೀಶಿಯಂ ಇದೆ. ಇದು ಅತಿ ಅಗತ್ಯವಾದ ಖನಿಜವಾಗಿದ್ದು ದೇಹದ ಹಲವಾರು ರಾಸಾಯನಿಕ ಕಾರ್ಯಗಳಿಗೆ ನೆರವಾಗುತ್ತದೆ. ಮೆಗ್ನೇಶಿಯಂ ಕೊರತೆಯಿಂದ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆಗಳು, ಮೂಳೆಗಳ ದೃಢತೆ ಕಡಿಮೆಯಾಗುವುದು ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣ ಕಳೆದುಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

English summary

health benefits of pumpkin seeds you didnt know

Pumpkin seeds have healthy fats which are essential fatty acids that help in maintaining healthy blood vessels and lower unhealthy cholesterol in the blood. The wonderful pumpkin seeds contain fibre that will fill your stomach for a longer period of time. Both men and women can enjoy pumpkin seeds as a nutritional snack. Let's have a look at some of the health benefits of pumpkin seeds below.
X
Desktop Bottom Promotion