ಇದೇ ಕಾರಣಕ್ಕೆ ಗೂರುಬ್ಬಸ ಕಾಣಿಸಿಕೊಳ್ಳುವುದು! ಸ್ವಲ್ಪ ಜಾಗ್ರತೆ ವಹಿಸಿ

Posted By: Arshad
Subscribe to Boldsky

ಒಂದು ವೇಳೆ ಉಸಿರಾಡುವಾಗ ಕೊಂಚ ಹೆಚ್ಚೇ ಕಷ್ಟಪಡುತ್ತಿದ್ದಂತೆ ಅನ್ನಿಸುತ್ತಿದ್ದು ಪ್ರತಿ ಉಸಿರೂ ಚಿಕ್ಕ ದನಿಯ ಸೀಟಿ ಹೊಡೆದಂತೆ ಕೇಳುತ್ತಿದ್ದರೆ ಇದು ಗೂರುಬ್ಬಸ, ಉಬ್ಬಸ ಅಥವಾ Wheezing ಎಂಬ ತೊಂದರೆಯ ಪರಿಣಾಮ ಎಂದು ತಿಳಿದುಕೊಳ್ಳಬಹುದು. ಸೀಟಿ ಬರಲಿಕ್ಕೆ ಪ್ರಮುಖ ಕಾರಣ ಉಸಿರು ಒಳಹೋಗಿ ಹೊರಬರುವ ನಾಳಗಳು ಸಂಕುಚಿತಗೊಂಡಿದ್ದು ನಡುವಲ್ಲೆಲ್ಲೋ ಅತಿ ಚಿಕ್ಕದಾಗಿದ್ದು ಈ ಭಾಗ ಉಸಿರಿನ ಒತ್ತಡಕ್ಕೆ ಕಂಪಿಸುವುದು. 

ಉಸಿರಾಟ ತೊಂದರೆ: ಇದು ಅಸ್ತಮಾವೇ ಅಥವಾ ಬೇರೆ ಏನಾದರೂ ಕಾಯಿಲೆಯೇ?

ವಿಶೇಷವಾಗಿ ನಿಃಶ್ವಾಸದ ವೇಳೆ ಈ ಸೀಟಿ ಸ್ಪಷ್ಟವಾಗಿ ಕೇಳಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಉಶ್ವಾಸ ಹಾಗೂ ನಿಃಶ್ವಾಸ ಎರಡರಲ್ಲೂ ಒಂದೇ ರೀತಿಯ ಅಥವಾ ಕೊಂಚ ಭಿನ್ನವಾದ ಸೀಟಿಗಳು ಕೇಳುತ್ತವೆ. ಗೂರುಬ್ಬಸ ಉಸಿರಾಟದ ತೊಂದರೆಯ ಸ್ಪಷ್ಟ ಸೂಚನೆಯಾಗಿದೆ. ಶ್ವಾಸವ್ಯವಸ್ಥೆಯ ಯಾವುದೇ ನಾಳದ ಒಳಭಾಗದಲ್ಲಿ ಆವರಿಸಿರುವ ಉರಿಯೂತ ಇದಕ್ಕೆ ಪ್ರಮುಖ ಕಾರಣವಾಗಿದೆ. ಶ್ವಾಸವ್ಯವಸ್ಥೆಯ ಯಾವ ಭಾಗದಲ್ಲಿ ಈ ಉರಿಯೂತ ಉಂಟಾಗಿದೆ ಹಾಗೂ ಎಲ್ಲಿ ಅತಿ ಹೆಚ್ಚು ಕಿರಿದಾಗಿದೆ ಎಂಬ ಅಂಶಗಳನ್ನು ಆಧರಿಸಿ ಈ ಸೀಟಿಯ ಲಯಬದ್ಧತೆಯೂ ತೀವ್ರ ಅಥವಾ ಮಂದ್ರವಾಗಿರುತ್ತದೆ. ಸಾಮಾನ್ಯವಾಗಿ ಅಸ್ತಮಾ ರೋಗ ಬಾಧಿತ ಮಕ್ಕಳಿಗೆ ಈ ತೊಂದರೆ ಅತಿ ಹೆಚ್ಚಾಗಿ ಕಾಡುತ್ತದೆ.

ಒಂದು ಸಂಶೋಧನೆಯ ಪ್ರಕಾರ ಮೊದಲ ವರ್ಷ ಕಳೆಯುವ ಮುನ್ನವೇ ಸುಮಾರು ಇಪ್ಪತ್ತೈದರಿಂದ ಮೂವತ್ತು ಶೇಖಡಾ ಮಕ್ಕಳು ಗೂರುಬ್ಬಸದಿಂದ ಬಳಲುತ್ತಾರೆ. ಇದರ ಲಕ್ಷಣಗಳೆಂದರೆ ಕೆಮ್ಮು, ಉಸಿರಾಡಲು ಕಷ್ಟಪಡುವುದು, ಕಟ್ಟಿಕೊಂಡ ಮೂಗು, ಧ್ವನಿ ಉಡುಗಿರುವುದು, ತುಟಿ ಮತ್ತು ನಾಲಿಗೆಗಳು ಊದಿಕೊಂಡಿರುವುದು ಇತ್ಯಾದಿಗಳಾಗಿವೆ. ಇದರೊಂದಿಗೆ ಗೂರುಬ್ಬಸವೂ ಚಿಕ್ಕದಾಗಿ ಕೇಳುತ್ತದೆ. ಪ್ರಾಥಮಿಕ ಪರೀಕ್ಷೆ ಹಾಗೂ ಎದೆಗೂಡಿನ ಎಕ್ಸ್-ರೇ ಪರೀಕ್ಷೆ ಹಾಗೂ ಕೆಲವು ಅಗತ್ಯ ರಕ್ತಪರೀಕ್ಷೆಗಳ ಮೂಲಕ ವೈದ್ಯರು ಈ ಉಬ್ಬಸಕ್ಕೆ ಏನು ಕಾರಣ ಎಂಬುದನ್ನು ಕಂಡುಕೊಳ್ಳುತ್ತಾರೆ. ಗೂರುಬ್ಬಸಕ್ಕೆ ಕೆಲವಾರು ಕಾರಣಗಳಿವೆ. ಬನ್ನಿ, ಇವುಗಳಲ್ಲಿ ಪ್ರಮುಖವಾದವು ಯಾವುವು ಎಂಬುದನ್ನು ನೋಡೋಣ....

ಅಸ್ತಮಾ

ಅಸ್ತಮಾ

ಒಮ್ಮೆ ಆವರಿಸಿದರೆ ಬಹುಕಾಲ ಕಾಡುವ ಈ ಕಾಯಿಲೆಗೆ ಶ್ವಾಸನಾಳದೊಳಗೆ ಉಂಟಾಗುವ ಉರಿಯೂತವೇ ಕಾರಣ. ಆಗಾಗ ಮರುಕಳಿಸುವ ಗೂರುಬ್ಬಸ, ಎದೆಭಾಗದಲ್ಲಿ ಬಿಗಿಯಾಗುವುದು, ಉಸಿರು ಪಡೆದುಕೊಳ್ಳಲು ಕಷ್ಟಪಡಬೇಕಾಗಿ ಬರುವುದು, ಕೆಮ್ಮು ಮೊದಲಾದವು ಈ ಕಾಯಿಲೆಯ ಲಕ್ಷಣಗಳಾಗಿವೆ. ಶ್ವಾಸಕೋಶದ ಮುಖ್ಯ ಭಾಗವಾದ ಬ್ರಾಂಖಿಯೋಲ್ಸ್ ಎಂಬ ಸೂಕ್ಷ್ಮಭಾಗಗಳಲ್ಲಿ ಉರಿಯೂತವುಂಟಾದರೆ ಇದರಿಂದ ಶ್ವಾಸನಾಳಗಳು ಕಿರಿದಾಗಿ ಈ ನಾಳಗಳ ಮೂಲಕ ಶ್ವಾಸ ಹಾದುಹೋಗಲು ಹೆಚ್ಚು ಶ್ರಮಪಡಬೇಕಾಗುತ್ತದೆ ಹಾಗೂ ಇದು ಸೀಟಿ ಹೊಡೆಯುವ ಗೂರುಬ್ಬಸಕ್ಕೆ ಕಾರಣವಾಗುತ್ತದೆ. ಅಸ್ತಮಾ ರೋಗಕ್ಕೆ ಶಾಶ್ವತವಾದ ಚಿಕಿತ್ಸೆ ಲಭ್ಯವಿಲ್ಲ. ಆದರೆ ಸೂಕ್ತ ಮುನ್ನೆಚ್ಚರಿಕೆ ಹಾಗೂ ಕಾಲಕಾಲಕ್ಕೆ ಸರಿಯಾದ ಔಷಧಿಗಳನ್ನು ಸೇವಿಸುತ್ತಾ ಬರುವ ಮೂಲಕ ಈ ರೋಗವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು.

ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ

ಬ್ರಾಂಕೈಟಿಸ್

ಬ್ರಾಂಕೈಟಿಸ್

ಶ್ವಾಸಕೋಶದಲ್ಲಿ ಶ್ವಾಸನಾಳಗಳೆಲ್ಲಾ ಕವಲೊಡೆದು ಸೂಕ್ಷ್ಮಭಾಗಗಳಾದ ಭ್ರಾಂಖಿಯೋಲ್ಸ್ ಎಂಬ ಅತಿ ಸೂಕ್ಷ್ಮನಾಳಗಳಿಗೆ ತಲುಪುತ್ತದೆ. ಈ ಭಾಗದಲ್ಲಿ ಒಂದು ವೇಳೆ ಸೋಂಕು ಉಂಟಾದರೆ ಈ ಸೋಂಕು ನಿಃಶ್ವಾಸದ ಮೂಲಕ ಮುಂದಿನ ಕವಲುಗಳ ಮೂಲಕ ದಾಟುತ್ತಾ ಬಾಯಿ, ಮೂಗು ಹಾಗೂ ಶ್ವಾಸನಾಳವನ್ನೂ ತಲುಪುತ್ತದೆ. ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ವಾಯುಪ್ರದೂಷಣೆ, ಧೂಳು, ಹೊಗೆ, ಸೂಕ್ಷ್ಮಕಣಗಳು ಮೊದಲಾದವು ಈ ಸೋಂಕಿಗೆ ಪ್ರಮುಖ ಕಾರಣವಾಗಿವೆ. ಆದರೆ ಈ ತೊಂದರೆ ಈ ಎಲ್ಲಾ ಕಾರಣಗಳಿಗಿಂತ ಹೆಚ್ಚಾಗಿ respiratory syncytial virus (RSV) ಎಂಬ ಬ್ಯಾಕ್ಟೀರಿಯಾ ಮೂಲಕ ಆವರಿಸುತ್ತದೆ.

ಯಮಯಾತನೆ ನೀಡುವ ಶ್ವಾಸನಾಳದ ರೋಗಕ್ಕೆ ಪರಿಹಾರವೇನು?

ಧೂಮಪಾನ

ಧೂಮಪಾನ

ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಕರೆತಂದಂತೆ ಅಂದರೆ ಇದೇ. ಧೂಮಪಾನ ಕೆಟ್ಟದ್ದು ಎಂದು ಗೊತ್ತಿದ್ದೂ ಬಲವಂತವಾಗಿ ಈ ವಿಷಾನಿಲಗಳನ್ನು ಶ್ವಾಸಕೋಶಕ್ಕೆ ಬಲವಂತವಾಗಿ ದಬ್ಬಿದ ಪರಿಣಾಮವಾಗಿ ಗೂರುಬ್ಬರಕ್ಕೆ ಕಾರಣವಾಗಬಹುದು. ವಿಶೇಷವಾಗಿ ಈ ಹೊಗೆಯಲ್ಲಿರುವ ಟಾರು, ಕಾರ್ಬನ್ ಮಾನಾಕ್ಸೈಡ್, ನೈಟ್ರೋಸಮೈನ್ ಹಾಗೂ ಇತರ ವಿಷಾನಿಲಗಳು ಶ್ವಾಸನಾಳಗಳನ್ನು ಕಿರಿದಾಗಿಸುತ್ತವೆ. ಅದರಲ್ಲೂ ಧೂಮಪಾನ ಸತತವಾಗಿದ್ದರೆ ಇದು chronic obstructive pulmonary disease (COPD) ಎಂಬ ಭಯಾನಕ ಸ್ಥಿತಿಗೆ ತಲುಪಲೂ ಕಾರಣವಾಗಬಹುದು. ಇದರ ಲಕ್ಷಣಗಳೆಂದರೆ ಗಾಳಿಯಿಂದ ಆಮ್ಲಜನಕ ಹೀರಿಕೊಳ್ಳುವ ಆಲ್ವೆಯೋಲಿ ಎಂಬ ಅಂಗಾಶ ಘಾಸಿಗೊಳ್ಳುವುದು, ಗಾಳಿ ಒಳಬರುವ ನಾಳಗಳು ಕಿರಿದಾಗುವುದು, ಗಟ್ಟಿಯಾದ ಕಫ ಹಾಗೂ ಪೂರ್ಣವಾಗಿ ಉಸಿರೆಳೆದುಕೊಳ್ಳಲು ಸಾಧ್ಯವಾಗದೇ ಇರುವುದು ಮೊದಲಾದವು ಆಗಿವೆ. ಪರಿಣಾಮವಾಗಿ ಗೂರುಬ್ಬಸ ಅನಿವಾರ್ಯವಾಗುತ್ತದೆ.

ಹೃದಯದ ತೊಂದರೆ

ಹೃದಯದ ತೊಂದರೆ

ಗೂರುಬ್ಬಸಕ್ಕೆ ಶ್ವಾಸಕೋಶ ಹಾಗೂ ಇದಕ್ಕೆ ಸಂಬಂಧಿಸಿದ ಅಂಗಗಳೇ ಪ್ರಮುಖ ಕಾರಣವಾಗಿದ್ದರೂ ಕೆಲವೊಮ್ಮೆ ಇದು ಹೃದಯದ ತೊಂದರೆಯ ಮೂಲಕವೂ ಆವರಿಸಿರಬಹುದು. cardiac asthma ಎಂದು ಕರೆಯಲ್ಪಡುವ ಈ ಸ್ಥಿತಿ ಉಲ್ಬಣಗೊಂಡರೆ ತುರ್ತು ಪರಿಸ್ಥಿತಿಯ ಅಪಾಯಕ್ಕೂ ಕಾರಣವಾಗಬಹುದು. ಒಂದು ವೇಳೆ ಹೃದಯದ ಎಡಭಾಗ ವಿಫಲಗೊಂಡರೆ ಇದು ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳಲು ಹಾಗೂ ವಾಯುಮಾರ್ಗ ಮುಚ್ಚಿಕೊಳ್ಳಲು ಕಾರಣವಾಗುತ್ತದೆ. ಇದು ಹೆಚ್ಚೂಕಡಿಮೆ ಅಸ್ತಮಾ ಆಘಾತದಂತೆಯೇ ತೋರುತ್ತದೆ.

ನ್ಯುಮೋನಿಯಾ

ನ್ಯುಮೋನಿಯಾ

ಒಂದು ವೇಳೆ ಗೂರುಬ್ಬಸದೊಂದಿಗೆ ಹೆಚ್ಚಿನ ಜ್ವರವೂ ಕಾಡಿದರೆ, ಚಳಿಜ್ವರ, ಉಸಿರು ಎಳೆದುಕೊಳ್ಳುವುದು ಕಷ್ಟವಾಗುವುದು, ಕೆಮ್ಮು ಮೊದಲಾದವೂ ಇದ್ದರೆ ಇದು ನ್ಯುಮೋನಿಯಾ ಎಂದು ತಿಳಿದುಕೊಳ್ಳಬೇಕು. ಇದು ಬ್ಯಾಕ್ಟೀರಿಯಾ ಹಾಗೂ ವೈರಸ್ಸುಗಳ ಜಂಟಿ ಧಾಳಿಯ ಪರಿಣಾಮವಾಗಿದ್ದು ವಿಶೇಷವಾಗಿ ಶ್ವಾಸಕೋಶದ ಆಲ್ವೆಯೋಲಿಗಳ ಮೇಲೆ ಧಾಳಿ ಎಸಗುತ್ತವೆ. ಪರಿಣಾಮವಾಗಿ ಶ್ವಾಸಕೋಶದಲ್ಲಿ ಕಫ ಹಾಗೂ ನೀರು ತುಂಬಿಕೊಳ್ಳಲು ತೊಡಗುತ್ತದೆ. ಒಂದು ವೇಳೆ ತಕ್ಷಣವೇ ಸೂಕ್ತ ಚಿಕಿತ್ಸೆ ಹಾಗೂ ಲಸಿಕೆಯನ್ನು ಪಡೆದರೆ ಈ ಜ್ವರವನ್ನು ಹತೋಟಿಗೆ ತಂದು ಶೀಘ್ರ ಗುಣಮುಖರಾಗಬಹುದು.

ಶ್ವಾಸಕೋಶದ ಕಾಯಿಲೆ

ಶ್ವಾಸಕೋಶದ ಕಾಯಿಲೆ

ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ತರಹದ ಕಾಯಿಲೆಗಳು, ಇದು ಸಾಮಾನ್ಯ ಶೀತವೇ ಇರಲಿ ಅಥವಾ ಮಾರಕ COPD ಇರಲಿ, ಇದರ ಪರಿಣಾಮವಾಗಿ ಕಫ ಉತ್ಪತ್ತಿಯಾಗುವುದು, ಶ್ವಾಸ ಪಡೆದುಕೊಳ್ಳುವುದು ಕಷ್ಟಕರವಾಗುವುದು, ಶ್ವಾಸನಾಳಗಳ ಉರಿಯೂತ ಹಾಗೂ

ಶ್ವಾಸಕೋಶಗಳನ್ನು ಪಾರ್ಶ್ವ ಅಥವಾ ಪೂರ್ಣವಾಗಿ ಘಾಸಿಗೊಳಿಸುವುದು ಮೊದಲಾದವು ಕಂಡುಬರುತ್ತದೆ. ಈ ಸೂಚನೆಗಳು ನೇರವಾಗಿ ಅಥವಾ ಪರೋಕ್ಷವಾಗಿ ವಾಯುಮಾರ್ಗವನ್ನು ಸಂಕುಚಿತಗೊಳಿಸಿ ಸೀಟಿಹೊಡೆಯುವ ಗೂರುಬ್ಬಸಕ್ಕೆ ಕಾರಣವಾಗುತ್ತದೆ.

ಗರ್ಭಾವಸ್ಥೆ

ಗರ್ಭಾವಸ್ಥೆ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹ ಹೆಚ್ಚಿನ ಆಮ್ಲಜನಕವನ್ನು ಬೇಡುತ್ತದೆ. ಹಾಗೂ ತಾಯಿ ಮತ್ತು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಅಗತ್ಯತೆಯ ಬೇಡಿಕೆಗೆ ಅನುಗುಣವಾಗಿ ರಕ್ತಪರಿಚಲನೆಯೂ ಹೆಚ್ಚಬೇಕಾಗುತ್ತದೆ. ಈ ಅವಧಿಯಲ್ಲಿ ತಾಯಿಯಾಗುವವಳ ದೇಹ ಹಲವಾರು ಹಾರ್ಮೋನುಗಳ ಪ್ರಭಾವದಿಂದ ಕೆಲವಾರು ಬದಲಾವಣೆಗೆ ಒಳಗಾಗುತ್ತಾ ಕೆಲವಾರು ಅಂಗಗಳು ಇತರ ಸಮಯದಲ್ಲಿರುವುದಕ್ಕಿಂತಲೂ ಹೆಚ್ಚು ಶಿಥಿಲವಾಗುತ್ತವೆ. ಪರಿಣಾಮವಾಗಿ ಶೀತ, ಕೆಮ್ಮು ಸೋಂಕುಗಳು ಆವರಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಈ ಸೋಂಕುಗಳು ಗೂರುಬ್ಬಸಕ್ಕೂ ಕಾರಣವಾಗಬಹುದು. ಈ ತೊಂದರೆಯನ್ನು ಸಾಮಾನ್ಯವಾಗಿ ಪ್ರತಿ ಗರ್ಭಿಣಿಯೂ ಅನುಭವಿಸುತ್ತಾಳೆ. ಆದರೆ ಇದು ಸಾಮಾನ್ಯ ಎಂದು ಇದರ ಬಗ್ಗೆ ಅಲಕ್ಷ್ಯ ಸಲ್ಲದು. ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಈ ಸ್ಥಿತಿಯನ್ನೂ ಪರಿಗಣಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಕಾರಣ ಯಾವುದೇ ಇರಲಿ, ಯಾವಾಗ ಉಸಿರಿನಲ್ಲಿ ಸೀಟಿ ಪ್ರಾರಂಭವಾಯಿತೋ, ತಕ್ಷಣವೇ ವೈದ್ಯರನ್ನು ಕಂಡು ಈ ತೊಂದರೆಗೆ ನಿಜವಾದ ಕಾರಣವನ್ನು ಕಂಡುಕೊಂಡು ಸೂಕ್ತ ಔಷಧಿಗಳನ್ನು ಪಡೆದುಕೊಳ್ಳಬೇಕು.

For Quick Alerts
ALLOW NOTIFICATIONS
For Daily Alerts

    English summary

    common-causes-of-wheezing

    Wheezing is a continuous, coarse and high-pitched whistling sound produced in the respiratory airways during breathing. It's heard most clearly during exhalation, but in some cases, it can be heard during inhalation too.Wheezing is a clear indication of respiratory problems. It mostly occursbecause of narrowed or obstructed airways or inflammation in the respiratory tree.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more