For Quick Alerts
ALLOW NOTIFICATIONS  
For Daily Alerts

ಗೋಕಾಕದ ಕರದಂಟು ಅಥವಾ ಅಂಟಿನುಂಡೆ

By * ಕುಮುದಾ ಶಂಕರ್, ಸೌದಿ ಅರೇಬಿಯಾ
|
Antina Unde sweet recipe
ಕರದಂಟು ಅಥವಾ ಅಂಟಿನ ಉಂಡೆ ಇದು ನಮ್ಮ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ತುಂಬಾ ಪ್ರಸಿದ್ಧಿಯಾದ ಸಿಹಿ ತಿನಿಸು. ಬೆಳಗಾವಿ ಎಂದರೆ ಮೊದಲು ನೆನಪಿಗೆ ಬರುವುದು ಕುಂದಾ, ನಂತರ ಗೋಕಾಕದ ಕರದಂಟು. ಕರದಂಟನ್ನು ನಾವು ಇಲ್ಲೇ ತಯಾರಿಸಿದರೂ ಅಲ್ಲಿಯ ರುಚಿಗೆ ಸಾಟಿಯಾಗುವುದೆ? ಅದಕ್ಕಾಗಿಯೇ ಅಲ್ಲವೆ ಬೆಳಗಾವಿಗೂ ಕರದಂಟಿಗೂ ಬಿಡದ ನೆಂಟು. ಇದೇ ಸಿಹಿಯನ್ನು ಅಂಟುಂಡೆ ಎಂದು ಕೆಲವರು ಕರೆಯುತ್ತಾರೆ.

ಅಂಟು ಹಾಕಿ ತಯಾರಿಸುವ ಈ ಉಂಡೆಯನ್ನು ಕರದಲ್ಲಿ ಉಂಡೆ ಕಟ್ಟುವುದರಿಂದ ಕರದಂಟು ಎಂತಲೂ ಅಥವಾ ಅಂಟನ್ನು ಕರಿದು ಅರ್ಥಾತ್ ಹುರಿದು ತಯಾರಿಸುವುದರಿಂದಲೂ ಈ ಹೆಸರು ಬಂದಿರಬಹುದೇನೋ ಎಂದು ನನ್ನ ಅನಿಸಿಕೆ. ಯಾವುದರಿಂದಲಾದರೂ ಹೆಸರು ಬರಲಿ ಈ ಉತ್ತಮವಾದ ಉಂಡೆಯಂತೂ ತಿನ್ನಲು ಬಲು ರುಚಿ ಮತ್ತು ನಮ್ಮ ಆರೋಗ್ಯಕ್ಕೂ ಸಹ ಅಷ್ಟೇ ಉತ್ತಮ. ಇದನ್ನು ಋತುಮತಿಯಾದವರಿಗೆ ಮತ್ತು ಬಾಣಂತಿಯರಿಗೆ ತಿನ್ನಲು ನೀಡಿದರೆ ತುಂಬಾ ಒಳ್ಳೆಯದು. ಈ ಕರದಂಟು ಉಂಡೆಯನ್ನು ಅವರು ತಿನ್ನುವುದರಿಂದ ಅವರಿಗೆ ಆ ಸಮಯದಲ್ಲಿ ಅವರಿಗೆ ಬೇಕಾದ ಶಕ್ತಿ ಮತ್ತು ಎಲ್ಲಾ ಪೌಷ್ಟಿಕಾಂಶಗಳು ದೊರೆಯುತ್ತವೆ. ಎಲ್ಲಾ ಡ್ರೈ ಫ್ರೂಟ್ಸ್ ಹಾಕಿರುವುದರಿಂದ ಇದು ಒಂದು ರೀತಿ ಆರೋಗ್ಯಕರವಾದ ಉಂಡೆ.

ಬೇಕಾಗುವ ಸಾಮಗ್ರಿಗಳು

ಖರ್ಜೂರ - ಒಂದು ಬಟ್ಟಲು
ಬಾದಾಮಿ - ಒಂದು ಬಟ್ಟಲು
ಗೋಡಂಬಿ- ಒಂದು ಬಟ್ಟಲು
ದ್ರಾಕ್ಷಿ - ಒಂದು ಬಟ್ಟಲು
ಒಣ ಕೊಬ್ಬರಿ ತುರಿ - ಒಂದು ಬಟ್ಟಲು
ಗಸಗಸೆ - ಎರಡು ದೊಡ್ಡ ಚಮಚ
ಅಂಟು - ಕಾಲು ಬಟ್ಟಲು / ಸ್ವಲ್ಪ
ಬೆಲ್ಲ - ರುಚಿಗೆ ತಕ್ಕಂತೆ
ತುಪ್ಪ - ಸ್ವಲ್ಪ

ತಯಾರಿಸುವ ವಿಧಾನ

ಖರ್ಜೂರ, ಬಾದಾಮಿ ಮತ್ತು ಗೋಡಂಬಿಯನ್ನು ಚೂರು ಮಾಡಿಟ್ಟುಕೊಳ್ಳಿ. ಅಂಟನ್ನು ಸಹ ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ, ಬೆಲ್ಲವನ್ನು ಪುಡಿ ಮಾಡಿ, ಮೊದಲು ಇಷ್ಟನ್ನು ತಯಾರಿಸಿಟ್ಟು ಕೊಂಡರೆ ಉಂಡೆ ತಯಾರಿಸುವಾಗ ಸುಲಭವಾಗುತ್ತದೆ.

ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ ಹುರಿದು, ಆಮೇಲೆ ದ್ರಾಕ್ಷಿ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆಯಿರಿ. ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿದು ತೆಗೆದಿಡಿ. ಒಣಕೊಬ್ಬರಿ ತುರಿ ಮತ್ತು ಅಂಟು ಸಹ ಹುರಿದು ಬಾದಾಮಿ, ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲಾ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಗಸಗಸೆಯನ್ನು ಹುರಿದು ಸೇರಿಸಿ. ಎಲ್ಲ ಸಾಮಗ್ರಿಗಳನ್ನು ಹದವಾಗಿ, ಬಣ್ಣ ನೋಡಿಕೊಂಡು ಹುರಿಯಿರಿ, ತುಂಬಾ ಹುರಿಯದಿರಿ ಮತ್ತು ಸೀದು ಹೋಗುವಂತೆ ಮಾಡಬೇಡಿ. ಎಲ್ಲವನ್ನು ಕೈ ಬಿಡದೇ ತಿರುಗಿಸುತ್ತಾ ಬೇರೆಬೇರೆಯಾಗಿ ಹುರಿದುಕೊಂಡ ನಂತರ ಬೆಲ್ಲದ ಪಾಕವನ್ನು ತಯಾರಿಸಬೇಕು.

ಬೆಲ್ಲದ ಪಾಕ ಮತ್ತು ಉಂಡೆಯನ್ನು ತಯಾರಿಸುವ ವಿಧಾನ

ಪುಡಿ ಮಾಡಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಕರಗಿ ಒಂದೆಳೆ ಪಾಕದ ಹದಕ್ಕೆ ಬಂದಾಗ, ತಕ್ಷಣವೇ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ. ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ. ತುಂಬಾ ಹೊತ್ತು ಸಹ ತಣ್ಣಗಾಗಲು ಬಿಡದಿರಿ. ಉಂಡೆ ತಯಾರಿಸಿದ ನಂತರ ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಮೂವತ್ತು- ನಲವತ್ತು ದಿನಗಳವರೆಗೆ ಕೆಡದಂತೆ ಇಟ್ಟು ತಿನ್ನಬಹುದು. ತಂಗಳ ಪೆಟ್ಟಿಗೆಯಲ್ಲಿ ಇನ್ನು ಸುಮಾರು ದಿನವಿಡಬಹುದು.

ನಿಮ್ಮ ಗಮನದಲ್ಲಿರಲಿ

* ಹುರಿಯುವಾಗ ತಾಳ್ಮೆಯಿಂದ ಹುರಿಯಬೇಕು, ಬೇಗ ಆಗಲಿ ಎಂದು ತುಂಬಾ ಉರಿ ಹಾಕಿ ಹುರಿಯುವುದರಿಂದ ಸಾಮಗ್ರಿಗಳು ಸೀದು ಹೋಗುತ್ತವೆ ಮತ್ತು ರುಚಿಯೂ ಹಾಳಾಗುತ್ತದೆ.
* ಪ್ರತಿಯೊಂದನ್ನು ಬೇರೆ-ಬೇರೆಯಾಗಿ ಹದವಾಗಿ ಹುರಿಯಿರಿ.
* ಅಂಟನ್ನು ಹುರಿದುಕೊಳ್ಳಿ. ಚಿಕ್ಕ ಚಿಕ್ಕ ಚೂರು ಮಾಡಿಕೊಂಡು ಹುರಿದರೆ ಚೆನ್ನಾಗಿರುತ್ತದೆ, ಇಲ್ಲವೆಂದರೆ ತಿನ್ನುವಾಗ ಒಂದೇ ಕಡೆ ಸಿಗುತ್ತದೆ.
* ಖರ್ಜೂರವನ್ನು ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ.
* ಬೆಲ್ಲದ ಪಾಕ ತೆಗೆಯುವಾಗ ತುಂಬಾ ಎಚ್ಚರಿಕೆಯಿಂದ ತೆಗೆಯಬೇಕು. ಒಂದೆಳೆ ಪಾಕವನ್ನು ಗಮನಿಸಿ ತೆಗೆಯಬೇಕು. ಪಾಕ ಗಟ್ಟಿಯಾದರೆ ಉಂಡೆ ತಯಾರಿಸಿದ ಮೇಲೆ ಉಂಡೆಗಳು ತುಂಬಾ ಗಟ್ಟಿಯಾಗುತ್ತವೆ. ಪಾಕ ತೆಗೆಯುವಾಗ ಒಂದು ತಟ್ಟೆಗೆ ಸ್ವಲ್ಪ ನೀರು ಹಾಕಿ, ಅದಕ್ಕೆ ಒಂದೆರಡು ಹನಿ ಪಾಕವನ್ನು ಹಾಕಿದಾಗ ಅದು ತೇಲಿ ಬರುತ್ತದೆ. ಆಗ ಪಾಕ ತಯಾರಾಗಿದೆ ಎಂದು ಗೊತ್ತಾಗುತ್ತದೆ. ಪಾಕ ನೀರಿನಲ್ಲಿ ತಕ್ಷಣವೇ ಕರಗಿದರೆ, ಇನ್ನು ಸ್ವಲ್ಪ ಹೊತ್ತು ಬಿಡಿ. ಪಾಕ ಮಾತ್ರ ಹದವಾಗಿ ತೆಗೆಯಿರಿ.
* ಕೊಬ್ಬರಿ ತುರಿ ಅಂಗಡಿಯಲ್ಲಿ ಸಿಗುವ ಡೆಸಿಕೆಟೆಡ್ ಕೊಕೋನಟ್ ಪೌಡರ್/ ರೆಡಿಮೇಡ್ ಕೊಬ್ರಿ ತುರಿ ಹಾಕಿದರೆ ಚೆನ್ನಾಗಿರುವುದಿಲ್ಲ. ಕೊಬ್ಬರಿ ಗಿಟುಕಿನಿಂದ ನೀವೇ ತಕ್ಷಣವೇ ತುರಿದ ಕೊಬ್ಬರಿ ತುರಿ ಉಪಯೋಗಿಸಬೇಕು. ಆಗ ರುಚಿ ಚೆನ್ನಾಗಿರುತ್ತದೆ. [ಕೃಪೆ : ಅಡುಗೆ ಸವಿರುಚಿ]

English summary

Gokak special Karadantu | Karadantu sweet recipe | Antina unde recipe | ಗೋಕಾಕ ಸ್ಪೆಷಲ್ ಕರದಂಟು | ಅಂಟಿನ ಉಂಡೆ ಸಿಹಿತಿನಿಸು

How to make Belgaum district Gokak special sweet recipe Karadantu? It is also called as Antina Unde in many parts of Karnataka. Kumuda Shankar from Saudi Arabia tells us how to prepare the Karadantu or antinunde.
X
Desktop Bottom Promotion