For Quick Alerts
ALLOW NOTIFICATIONS  
For Daily Alerts

ಕುಂದಾ ಹೇಗೆ ತಯಾರಾಗುತ್ತದೆ ಗೊತ್ತಾ?

By * ಪ್ರಸಾದ ನಾಯಿಕ
|
Kunda sweet recipe
(2011ರ ಮಾರ್ಚ್ ತಿಂಗಳಲ್ಲಿ ಕುಂದಾ ನಗರಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದ ಸಂದರ್ಭದಲ್ಲಿ ಪ್ರಕಟವಾದ ಲೇಖನ.)

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿ ಕನ್ನಡಿಗರ ಕಂದದ ಉತ್ಸಾಹಕ್ಕೆ ಸಾಕ್ಷಿಯಾದರೆ, ಬೆಳಗಾವಿಯ ಸ್ಪೆಷಲ್ ಸಿಹಿ ತಿನಿಸು ಕುಂದಾ ವಿಶ್ವ ಕನ್ನಡಿಗರ ಮನಗೆದ್ದಿದೆ. ಸಮ್ಮೇಳನಕ್ಕೆ ಬಂದವರೆಲ್ಲ ಗೋಕಾಕ್ ಕರದಂಟಿನ ಜೊತೆಗೆ ಬೆಳಗಾವಿ ಕುಂದಾ ಕೈಯಲ್ಲಿ ಹಿಡಿದು ಮರಳುವವರೆ. ಈ ಕನ್ನಡ ಹಬ್ಬವನ್ನು ಕಣ್ಣಾರೆ ಕಂಡಿರದ ಬಂಧುಬಾಂಧವರಿಗೆ ಕನ್ನಡ ಜಾತ್ರೆಯ ಬಗ್ಗೆ ವಿವರಿಸುತ್ತ ಕುಂದಾ ಮೆಲ್ಲುವುದು ಎಂತಹ ಸಂತಸದ ವಿಷಯ ಅಲ್ಲವೆ?

ಸಮ್ಮೇಳನದ ಮೊದಲೆರಡು ದಿನ ಅಂತಹ ಭಾರೀ ಇರದಿದ್ದ ಕುಂದಾ ವ್ಯಾಪಾರ ಕೊನೆಯ ದಿನ ಭರ್ಜರಿಯಾಗಿ ಕುದುರಿತ್ತು. ಬೆಳಗಾವಿಯ ನಂಬರ್ 1 ಕುಂದಾ ಮಾರಾಟಗಾರ ಅತುಲ್ ಪುರೋಹಿತ್ ತಮ್ಮ ಜೇಬನ್ನು ಸಖತ್ತಾಗಿಯೇ ತುಂಬಿಕೊಂಡಿದ್ದಾರೆ. ಆದರೆ, ಕುಂದಾ ಅವರೇ ತಯಾರಿಸುತ್ತಾರಾ? ಖಂಡಿತ ಇಲ್ಲ. ಕುಂದಾ ಸಿಹಿಗೆ ಅಂಗಡಿಯವರು ಅಂತಿಮ ಟಚ್ ನೀಡುತ್ತಾರೆಯೇ ವಿನಃ ಕುಂದಾವನ್ನು ಪೂರ್ತಿಯಾಗಿ ತಯಾರಿಸುವುದಿಲ್ಲ.

ನಿಮಗೆ ಆಶ್ಚರ್ಯವೆನಿಸಬಹುದು. ಕುಂದಾ ತಯಾರಿಸಲು ಬೇಕಾಗಿರುವುದು ಹಾಲು ಮತ್ತು ಸಕ್ಕರೆ ಎರಡೇ. ಆದರೆ, ಅದನ್ನು ತಯಾರಿಸುವ ವಿಧಾನ ಮಾತ್ರ ಅಷ್ಟು ಸರಳವಾಗಿಲ್ಲ. ಅದಕ್ಕೆ ನುರಿತ ಕೈಯೇ ಇರಬೇಕು. ಆ ನುರಿತ ಕೈಗಳು ಇರುವುದು ಬೆಳಗಾವಿ ಬಳಿಯ ಕೆಕೆ ಕೊಪ್ಪ ಎಂಬ ಹಳ್ಳಿಗಳಲ್ಲಿ. ಕೆಕೆ ಕೊಪ್ಪ ಅಂದರೆ, ಕಣವಿ ಕರುವಿನ ಕೊಪ್ಪ. ಈ ಹೆಸರು ಹೇಗೆ ಬಂತು, ಯಾಕೆ ಬಂತು ಎಂಬ ಮಾತುಗಳು ಒತ್ತಟ್ಟಿಗಿರಲಿ. ಅಪ್ಪಟ ಕನ್ನಡ ಮಣ್ಣಿನ ಕೆಕೆ ಕೊಪ್ಪದಲ್ಲಿ ಕುಂದಾಗೆ ಬೇಕಾದ ಖೋವಾ ತಯಾರಾಗಿ ಅಂಗಡಿಗಳಿಗೆ ರವಾನೆಯಾಗುತ್ತವೆ.

ಕುಸ್ತಿ ಪಟುಗಳಿಗೆ ಹೆಸರಾಗಿರುವ ಕೆಕೆ ಕೊಪ್ಪದಲ್ಲಿ ಸುಮಾರು 40ರಿಂದ 50 ಕುಟುಂಬಗಳು ಹಾಲಿನಿಂದ ಖೋವಾ ತಯಾರಿಸುವ ಕಾಯಕದಲ್ಲಿ ತೊಡಗಿವೆ. ಅವರ ಜೇಬುಗಳು ಕೂಡ ಈ ವ್ಯಾಪಾರದಿಂದ ಭರ್ತಿಯಾಗುತ್ತಿವೆ. ಮಾರುಕಟ್ಟೆಯ ನೈಪುಣ್ಯತೆಯ ಕೊರತೆಯಿಂದಾಗಿ ಖೋವಾವನ್ನು ಸ್ವೀಟ್ ಮಾರ್ಟ್ ಗಳಿಗೆ ಮಾರಾಟ ಮಾಡುತ್ತಾರೆ. ಕುಂದಾ ಸಿಹಿ ತಿನಿಸು ತಯಾರಿಸುವ ವಿಧಾನ ಹೀಗಿದೆ.

ತಯಾರಿಸುವ ವಿಧಾನ : ಮೊದಲೇ ಹೇಳಿದಂತೆ ಕುಂದಾಗೆ ಬೇಕಾಗಿರುವುದು ಹಾಲು ಮತ್ತು ಸಕ್ಕರೆ ಮಾತ್ರ. ಗಟ್ಟಿ ಹಾಲನ್ನು ದೊಡ್ಡ ಕಡಾಯಿಯಲ್ಲಿ ಹಾಕಿ ಅಧಿಕ ಉಷ್ಣದಲ್ಲಿ ಕುದಿಸುತ್ತಾರೆ. ಕುದ್ದು ಕುದ್ದು ಗಟ್ಟಿಯಾಗಿ ಹಾಲು ಖೋವಾ ಆಗಿ ಮಾರ್ಪಾಟಾಗುತ್ತದೆ. ಖೋವಾ ಆರಿದ ನಂತರ. ಇದಕ್ಕೆ ಸಕ್ಕರೆಯನ್ನು ಹಾಕಿ ಮತ್ತೆ ಕುದಿಸಲಾಗುತ್ತದೆ. ಇದು ತಳ ಹಿಡಿಯುವ ಸಂಭವನೀಯತೆ ಹೆಚ್ಚು ಇರುವುದರಿಂದ ದೊಡ್ಡ ಮಚ್ಚುಗದಲ್ಲಿ ಕೈಯಾಡಿಸುತ್ತಲೇ ಇರಬೇಕು. ಈ ಮಿಶ್ರಣ ಕಂದು ಬಣ್ಣಕ್ಕೆ, ಅಂದರೆ ಕುಂದಾ ಬಣ್ಣಕ್ಕೆ ಬರುತ್ತಿದ್ದಂತೆ ಇಳಿಸಿ ಆರಿಸಿ ತಿನ್ನಬಹುದು.

English summary

Kunda sweet recipe | Belgaum Kunda recipe | Belgaum special Kunda | ಕುಂದಾ ಸಿಹಿ ತಿನಿಸು | ಕುಂದಾ ಸ್ವೀಟ್ ರೆಸಿಪಿ

Belgaum special Kunda sweet recipe : Kunda is a final product made of khova made of milk. Khova is prepared in a village called KK Koppa near Belgaum and sent to sweet marts for preparing Kunda.
X
Desktop Bottom Promotion