For Quick Alerts
ALLOW NOTIFICATIONS  
For Daily Alerts

ಸಬ್ಬಸಿಗೆ ಸೊಪ್ಪಿನ ಗರಮಾಗರಂ ಪಕೋಡ

By * ಭಾರತಿ ಎಚ್ಎಸ್, ಬೆಂಗಳೂರು
|
Sabbasige pakoda
ಕಬ್ಬಿಣದಂಶ ಹೆಚ್ಚಿನ ಪ್ರಮಾಣದಲ್ಲಿರುವ ಹಚ್ಚಹಸಿರು ಸಬ್ಬಸಿಗೆ ಸೊಪ್ಪಿನಿಂದ ಪಲ್ಯ ಮಾತ್ರವಲ್ಲ ಗರಮಾಗರಂ ಪಕೋಡ ಕೂಡ ತಯಾರಿಸಬಹುದು. ಕಾದ ಎಣ್ಣೆಯಲ್ಲಿ ಚುಯ್ ಅಂತ ಪಕೋಡಗಳನ್ನು ಕರಿಯುತ್ತಿದ್ದರೆ ಸುತ್ತಮುತ್ತಲಿನ ಮನೆಯವರಿಗೆಲ್ಲ ಘಮ್ಮನೆ ಪಕೋಡ ಪರಿಮಳ ರಾಚಿ ತಾವೂ ನಾಲ್ಕಾರು ಈಗಲೇ ಕರಿಯಬೇಕೆನಿಸಬೇಕು, ಹಾಗಿರುತ್ತದೆ.

ತೀರಾ ಅಡುಗೆಮನೆಗೇ ಬಂದು ಮಾತಾಡಿಸಿಕೊಂಡು ಹೋಗುವವರು, ಏನೋ ಬೇಕಾಗಿತ್ತು ಅಂತ ನೆಪ ಮಾಡಿಕೊಂಡು ಬಂದು ನಾಕಾರು ಪಕೋಡ ಬಾಯಿಗಿಳಿಸಿಯೇ ಹೋಗುತ್ತಾರೆ. ತಮ್ಮ ಮನೆಯವರಿಗೂ ಮಾಡಿ ತಿನಿಸಬೇಕು ಅಂತ ಅಂದುಕೊಂಡೋರು ಹೇಗೆ ಮಾಡೋದೆಂದು ತಿಳಿದು ತಾವೂ ಮಾಡುತ್ತಾರೆ. ಇಲ್ಲದಿದ್ದರೆ, ತಿಂದು ತೇಗಿ ತಮ್ಮ ಸೀರೆಯ ಚುಂಗಿಗೆ ಕೈಯೊರೆಸಿ ಏನೂ ಗೊತ್ತಿಲ್ಲದವರಂತೆ ಮನೆ ಸೇರುತ್ತಾರೆ. ದಯವಿಟ್ಟು ಎರಡನೆಯವರಂತಾಗಬೇಡಿ.

ಬೇಕಾಗುವ ಸಾಮಾನುಗಳು

ಸಬ್ಬಸಿಗೆ ಸೊಪ್ಪು ಒಂದು ಬಟ್ಟಲು
ಉದ್ದಕ್ಕೆ ಹೆಚ್ಚಿದ ಈರುಳ್ಳಿ ಅರ್ಧ ಬಟ್ಟಲು
ಹಸಿಮೆಣಸಿನಕಾಯಿ ನಾಲ್ಕು
ಕೊತ್ತಂಬರಿ, ಕರಿಬೇವು ಸೊಪ್ಪು
ಅಕ್ಕಿ ಇಟ್ಟು ಎರಡು ಚಮಚ
ಕಡಲೆ ಹಿಟ್ಟು ಒಂದು ಬಟ್ಟಲು
ಅಚ್ಚ ಖಾರದಪುಡಿ ಅರ್ಧ ಚಮಚ
ಸೋಡಾ ಚಿಟಿಕೆಯಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು ಬೇಕಾದಷ್ಟು

ಮಾಡುವ ವಿಧಾನ

ಮೊತ್ತಮೊದಲನೆಯದಾಗಿ, ಸಬ್ಬಸಿಗೆ ಸೊಪ್ಪಿನ ಪಕೋಡ ತಯಾರಿಸುವ ಮುನ್ನ, ಗರಿಗರಿ ಪಕೋಡಗಳು ತಯಾರಾಗಿ ತಟ್ಟೆ ಸೇರುವ ಮೊದಲು ಯಾರೂ ಅಡುಗೆಮನೆ ಹತ್ತಿರ ಸುಳಿಯಬಾರದೆಂದು ಕಟ್ಟಪ್ಪಣೆ ಮಾಡಿಬಿಡಿ. ಯಾಕೆ ಅಂತ ಪ್ರಶ್ನೆ ಮಾತ್ರ ಕೇಳಬೇಡಿ!

ಈಗ, ಹಿಟ್ಟು, ನೀರಲ್ಲಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಂಡ ಸಬ್ಬಸಿಗೆ ಸೊಪ್ಪು, ಈರುಳ್ಳಿ, ಹೆಚ್ಚಿಕೊಂಡ ಮೆಣಸಿನಕಾಯಿ, ಖಾರದಪುಡಿ, ಸೋಡಾ, ಉಪ್ಪು ಮುಂತಾದವನ್ನೆಲ್ಲ ಸ್ವಲ್ಪೇ ಸ್ವಲ್ಪ ನೀರಲ್ಲಿ ಕಲಿಸಿಟ್ಟುಕೊಳ್ಳಿ. ಜಾಸ್ತಿ ತೆಳುವಾಗಲೂಬಾರದು ಜಾಸ್ತಿ ಗಟ್ಟಿಯಾಗಲೂಬಾರದು.

ಒಂದು ಬೋಗುಣಿಯಲ್ಲಿ ಎಣ್ಣೆ ಸುರುವಿ ಕಾದ ನಂತರ ನಾಲ್ಕಾರಂತೆ ಪಕೋಡಗಳನ್ನು ತೇಲಿಬಿಟ್ಟು ಕಂದುಬಣ್ಣಬರುವವರೆಗೆ ಕರಿಯಿರಿ. ಕರಿದಾದ ಮೇಲೆ ಒಂದು ಪೇಪರಿನ ಮೇಲೆ ಎಣ್ಣೆ ಹೀರಿಕೊಳ್ಳಲು ಬಿಡಿ ನಂತರವೇ ಮನೆಮಂದಿಯನ್ನೆಲ್ಲ ಪಕೋಡ ತಿನ್ನಲು ಅಡುಗೆಮನೆಗೆ ಕರೆಯಿರಿ. ಚುಮುಚುಮು ಚಳಿಗೆ ಬಿಸಿಬಿಸಿ ಸಬ್ಬಸಿಗೆ ಪಕೋಡ ತಿನ್ನಲು ಕೊಡಿ.

Story first published: Tuesday, February 2, 2010, 16:47 [IST]
X
Desktop Bottom Promotion