For Quick Alerts
ALLOW NOTIFICATIONS  
For Daily Alerts

ಗೋವಿನಜೋಳ ಮತ್ತು ತರಕಾರಿ ರಾಯತ

By * ಸುಶೀಲಾ ಗೋಪಾಲ್‌
|
Corn
ಕಡಿಮೆ ಕ್ಯಾಲೋರಿ ಇರುವ ಈ ರೆಸಿಪಿ ದಪ್ಪಗಾಗಬಾರದೆಂದು ನಿರ್ಧಾರಕ್ಕೆ ಬಂದವರಿಗೆ ಹೇಳಿ ಮಾಡಿಸಿದ್ದು. ಈ ರುಚಿಕಟ್ಟಾದ ರಾಯತವನ್ನು ಬಿಸಿಬಿಸಿ ಅನ್ನ ಅಥವಾ ಚಪಾತಿಯೊಡನೆ ಸೇರಿಸಿ ತಿನ್ನಬಹುದು.

ಬೆಂದ ಗೋವಿನಜೋಳವನ್ನು ತಿನ್ನಲು ಇಷ್ಟಪಡುವ ಮಕ್ಕಳಿಗಂತೂ ಈ ರಾಯತ ಇಷ್ಟವಾಗದಿರಲು ಸಾಧ್ಯವೇ ಇಲ್ಲ. ವಿಭಿನ್ನ ಬಗೆಯ ಅಡುಗೆಗಳನ್ನು ತಿನ್ನಲು ಆಸೆಪಡುವವರು ಇದನ್ನು ಆಗಾಗ ಮಾಡಿ ತಿನ್ನಲು ಅಡ್ಡಿಯಿಲ್ಲ. ಅಡುಗೆಯಲ್ಲಿ ವೆರೈಟಿ ಇದ್ದಹಾಗೂ ಆಯಿತು, ಆರೋಗ್ಯಕ್ಕೂ ಹಿತಕರ.

ಬೇಕಾಗುವ ಪದಾರ್ಥಗಳು

ಹೂಕೋಸು ಸಣ್ಣ ಗಾತ್ರದ್ದು
ಹಸಿ ಬಟಾಣಿ ಅರ್ಧ ಬಟ್ಟಲು
ಆಲೂಗಡ್ಡೆ ಎರಡು
ಈರುಳ್ಳಿ ಎರಡು (ಬೇಕಿದ್ದರೆ)
ಗೋವಿನಜೋಳ ಮೂರು
ಕ್ಯಾರಟ್ (ಗಜ್ಜರಿ) ಎರಡು
ಫ್ರೆಂಚ್ ಬೀನ್ಸ್ ಅರ್ದ ಬಟ್ಟಲು
ಮೊಸರು ಎರಡು ಬಟ್ಟಲು
ಸಕ್ಕರೆ ಮತ್ತು ಉಪ್ಪು ರುಚಿಗೆ ತಕ್ಕಷ್ಟು
ಹಸಿ ಮೆಣಸಿನಕಾಯಿ ನಾಲ್ಕು
ಸಾಸಿವೆ, ಕರಿಬೇವು, ಕೊತ್ತಂಬರಿ ಸೊಪ್ಪು
ಅಡುಗೆ ಎಣ್ಣೆ

ತಯಾರಿಸುವ ವಿಧಾನ

1) ಮೊದಲಿಗೆ ಎಲ್ಲಾ ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಂಡು, ಬಟಾಣಿ, ಬಿಡಿಸಿದ ಗೋವಿನಜೋಳದ ಕಾಳುಗಳ ಸಮೇತ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಕುಕ್ಕರು ನಾಲ್ಕು ವಿಷಲ್ ಹಾಕಿದರೂ ಸಾಕು. ನಂತರ ನೀರನ್ನು ಬಸಿದು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ.

2) ಒಂದು ಅಗಲ ತಳದ ಪಾತ್ರೆಯಲ್ಲಿ ನಾಲ್ಕಾರು ಚಮಚದಷ್ಟು ಎಣ್ಣೆ ಹಾಕಿ, ಸ್ಟೌ ಉರಿಯನ್ನು ಸಿಮ್ ನಲ್ಲಿಡಿ. ಬಿಸಿಯಾದ ನಂತರ ಸಾಸಿವೆ, ಕರಿಬೇವು, ಹಸಿ ಮೆಣಸಿನಕಾಯಿ ಹಾಕಿ ತಾಳಿಸಿ.

3) ಒಗ್ಗರಣೆ ಪಾತ್ರೆಗೆ ಮೊಸರನ್ನು ಕಡಗೋಲಿನಿಂದ ಕಡಿದು ಹಾಕಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪೇ ಸ್ವಲ್ಪ ಸಕ್ಕರೆ ಹಾಕಿರಿ ಕೈಯಾಡಿಸಿ.

4) ಇಷ್ಟಾದ ಮೇಲೆ ಬೇಯಿಸಿಟ್ಟುಕೊಂಡ ತರಕಾರಿಗಳನ್ನು ಪಾತ್ರೆಗೆ ಸುರಿದು ಐದರಿಂದ ಆರು ನಿಮಿಷ ಬೇಯಲು ಬಿಡಿ. ಅದಕ್ಕೆ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ತೊಳೆದು ಸಣ್ಣಗೆ ಕತ್ತರಿಸಿ ಹಾಕಿ ಕೈಯಾಡಿಸಿ.

ಈ ಗೋವಿನಜೋಳ ಮತ್ತು ತರಕಾರಿ ಮಿಶ್ರಣದ ರಾಯತವನ್ನು ಬಿಸಿಯಾದ ಅನ್ನ ಅಥವಾ ಚಪಾತಿ ಅಥವಾ ರೊಟ್ಟಿಯೊಡನೆ ತಿನ್ನಬಹುದು. ಕಡಿಮೆ ಕ್ಯಾಲೋರಿ ಇರುವ ಈ ರೆಸಿಪಿ ದಪ್ಪಗಾಗಬಾರದೆಂದು ನಿರ್ಧಾರಕ್ಕೆ ಬಂದವರಿಗೆ ಹೇಳಿ ಮಾಡಿಸಿದ್ದು.

Story first published: Tuesday, September 21, 2010, 14:35 [IST]
X
Desktop Bottom Promotion