For Quick Alerts
ALLOW NOTIFICATIONS  
For Daily Alerts

ಗೋಡಂಬಿ ಅಣಬೆ ಪಲ್ಯ ಮತ್ತು ಬಿಸಿಬಿಸಿ ಆಮ್ಲೆಟ್‌!

By Staff
|
ಮಷ್ರೂಮ್ ಅಥವಾ ಅಣಬೆ ಅಂದ್ರೆ ಮುಖ ಕಿವುಚುವವರೇ ಹೆಚ್ಚು. ಇನ್ನು ಅದರಿಂದ ತಯಾರಿಸುವ ಖಾದ್ಯಗಳ ರುಚಿ ನೋಡುವುದು ದೂರವೇ ಉಳಿಯಿತು. ಆದರೆ ನಿಮಗೆ ಗೊತ್ತಿರಲಿ, ಅತ್ಯಧಿಕ ವಿಟಾಮಿನ್ ನಿಂದ ಕೂಡಿರುವ ಅಣಬೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಅಣಬೆಯಿಂದ ಅನೇಕ ತಿನಿಸುಗಳನ್ನು ತಯಾರಿಸಬಹುದು. ಅವುಗಳಲ್ಲಿ ರುಚಿಕರವಾದ ಗೋಡಂಬಿ ಅಣಬೆ ಪಲ್ಯ ಮನೆಯಲ್ಲಿಯೇ ತಯಾರಿಸಬಹುದು.

ಗೋಡಂಬಿ - ಅಣಬೆ ಪಲ್ಯ

ಬೇಕಾಗುವ ಸಾಮಗ್ರಿ:

100 ಗ್ರಾಂ ಅಣಬೆ, ಗೋಡಂಬಿ 75 ಗ್ರಾಂ, 2 ಈರುಳ್ಳಿ, 3 ಒಣಮೆಣಸಿನ ಕಾಯಿ, 2 ಹಸಿ ಮೆಣಸಿನ ಕಾಯಿ, ಒಂದು ಚಿಟಿಕೆ ಅರಿಸಿನ, 1 ಟೀ ಚಮಚ ಕೊತ್ತಂಬರಿ ಬೀಜ, ಅರ್ಧ ಟೀ ಚಮಚ ಜೀರಿಗೆ, 4 ಎಸಳು ಬೆಳ್ಳುಳ್ಳಿ, 1 ಇಂಚು ಹಸಿ ಶುಂಠಿ, ಅರ್ಧ ಬಟ್ಟಲು ಹಸಿ ತೆಂಗಿನಕಾಯಿ ತುರಿ, 3 ಎಸಳು ಕರಿಬೇವಿನ ಎಲೆ, ಎಣ್ಣೆ, ರುಚಿಗೆ ಬೇಕಾಗುವಷ್ಟು ಉಪ್ಪು.

ವಿಧಾನ :

ತೆಂಗಿನ ತುರಿಯಿಂದ ಹಾಲನ್ನು ಬೇರ್ಪಡಿಸಬೇಕು. ಸ್ವಲ್ಪ ತೆಂಗಿನ ಹಾಲನ್ನು ತೆಗೆದುಕೊಂಡು ಅದಕ್ಕೆ ಸ್ವಚ್ಛ ಮಾಡಿ ಹೆಚ್ಚಿದ ಅಣಬೆ ಮತ್ತು ಬಿಸಿ ನೀರಿನಲ್ಲಿ ನೆನೆಸಿದ ಗೋಡಂಬಿಯನ್ನು ಹಾಕಿ ಬೇಯಿಸಬೇಕು.

ನಂತರ ಒಣ ಮೆಣಸಿನ ಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಅರಿಶಿನ, ಸ್ವಲ್ಪ ತೆಂಗಿನ ತುರಿ ಇವೆಲ್ಲವುಗಳನ್ನು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಎಣ್ಣೆ ಕಾಯಿಸಿ, ಅದರಲ್ಲಿ ಹೆಚ್ಚಿದ ಹಸಿ ಮೆಣಸಿನ ಕಾಯಿ, ಈರುಳ್ಳಿ, ಕರಿಬೇವು, ಅರೆದಿಟ್ಟ ಮಸಾಲೆ ಸೇರಿಸಿ. ಈರುಳ್ಳಿ ಮೃದುವಾಗುವ ತನಕ ಬೇಯಬೇಕು. ಈಗ ಅದರಲ್ಲಿ ಬೇಯಿಸಿಟ್ಟ ಗೋಡಂಬಿ, ಅಣಬೆ, ನಿಂಬೆ ರಸ ಮತ್ತು ಉಪ್ಪನ್ನು ಸೇರಿಸಿ.

ಇದನ್ನು ಕುದಿ ಬರುವ ತನಕ ಕುದಿಸಿ ಉಳಿದ ತೆಂಗಿನ ಕಾಯಿ ಹಾಲನ್ನು ಸೇರಿಸಿ ಮತ್ತೆ 5 ನಿಮಿಷಗಳ ಕಾಲ ಬೇಯಿಸಿ ಕೆಳಗಿಳಿಸಿ. ಗೋಡಂಬಿ-ಅಣಬೆ ಪಲ್ಯ ರೆಡಿ.

***
ಅಣಬೆ ಆಮ್ಲೆಟ್‌

ಬೇಕಾಗುವ ಸಾಮಗ್ರಿ:

3-4 ಅಣಬೆ (ಸಣ್ಣಗೆ ಹೆಚ್ಚಿದ್ದು), 1 ಮೊಟ್ಟೆ, 1 ಟೀ ಸ್ಪೂನ್‌ ಹಾಲು, 1 ಸಣ್ಣ ಈರುಳ್ಳಿ ಸಣ್ಣಗೆ ಹೆಚ್ಚಿದ್ದು. ಸಣ್ಣಗೆ ಹೆಚ್ಚಿದ 2 ಹಸಿ ಮೆಣಸಿನ ಕಾಯಿ, 1 ಚಿಟಿಕೆ ಕರಿಮೆಣಸಿನ ಪುಡಿ, 1 ಟಿ ಚಮಚ ನಿಂಬೆ ರಸ. ಸ್ವಲ್ಪ ಎಣ್ಣೆ, ರುಚಿಗೆ ಬೇಕಾಗುವಷ್ಟು ಉಪ್ಪು.

ವಿಧಾನ :

ಮೊಟ್ಟೆಯನ್ನು ಹಾಲಿನೊಂದಿಗೆ ಒಡೆದು ಮಿಶ್ರ ಮಾಡಿಟ್ಟುಕೊಳ್ಳಬೇಕು. ಅಣಬೆಯನ್ನು ಈರುಳ್ಳಿ ಹಾಗೂ ಹಸಿ ಮೆಣಸಿನ ಕಾಯಿಯೊಂದಿಗೆ ಹುರಿಯಬೇಕು. ಅದಕ್ಕೆ ಮೊಟ್ಟೆಯ ಮಿಶ್ರಣ, ಮೆಣಸಿನ ಪುಡಿ, ನಿಂಬೆ ರಸ, ಉಪ್ಪು ಸೇರಿಸಿ. ನಂತರ ತವೆಯಲ್ಲಿ ಎಣ್ಣೆ ಹಚ್ಚಿ ಮಿಶ್ರಣ ಹಾಕಿ ಆಮ್ಲೆಟ್‌ ತಯಾರಿಸಿ.

Story first published: Thursday, September 10, 2009, 17:26 [IST]
X
Desktop Bottom Promotion