For Quick Alerts
ALLOW NOTIFICATIONS  
For Daily Alerts

ಸುಟ್ಟ ಬದನೆಕಾಯಿಯ ಪಚಡಿ

By Prasad
|
Brinjal
ಸುಟ್ಟ ಬದನೆಕಾಯಿಯಿಂದ ಮಾಡುವ ಪಚಡಿ ಬಲು ರುಚಿಕರವಾಗಿರುತ್ತದೆ. ಕಡಿಮೆ ಎಣ್ಣೆ ಮತ್ತು ಸುಟ್ಟು ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಚಪಾತಿ, ರೊಟ್ಟಿ ಅಥವಾ ಅನ್ನದೊಡನೆಯೂ ಈ ಕಪ್ಪು ಅಥವಾ ನೇರಳೆ ಬಣ್ಣದ ಬದನೆಕಾಯಿ ಪಚಡಿ ಅಥವಾ ಗೊಜ್ಜನ್ನು ಮಾಡಿ ತಿನ್ನಬಹುದು.

ಬೇಕಾಗುವ ಪದಾರ್ಥಗಳು

ಕಪ್ಪು ಅಥವಾ ನೇರಳೆ ಬಣ್ಣದ ಬದನೆಕಾಯಿ 3
ಈರುಳ್ಳಿ 1
ಒಗ್ಗರಣೆಗೆ ಎಣ್ಣೆ, ಸಾಸಿವೆ, ಅರಿಷಿಣ, ಕರಿಮೆಣಸು, ಜೀರಿಗೆ
ಉಪ್ಪು
ನಿಂಬೆಹಣ್ಣು
ಹಸಿ ಕೊಬ್ಬರಿ (ಬೇಕಿದ್ದರೆ)

ಮಾಡುವ ವಿಧಾನ

ದಶಕಗಳ ಹಿಂದೆ ಅನುಕೂಲತೆ ಇದ್ದದ್ದರಿಂದ ಈ ಕಪ್ಪು ಅಥವಾ ನೇರಳೆ ಬಣ್ಣದ ಬದನೆಕಾಯಿಯನ್ನು ಉರುವಲು ಒಲೆಯಲ್ಲಿ ಕೆಂಡದ ಮೇಲಿಟ್ಟು ಸುಡುತ್ತಿದ್ದರು. ಈಗ ನಗರಗಳಲ್ಲಿ ಆ ಸೌಲಭ್ಯವಿಲ್ಲದಿರುವುದರಿಂದ ಗ್ಯಾಸ್ ಸ್ಟೌ ಮೇಲೆಯೇ ಸಣ್ಣ ಉರಿಯಲ್ಲಿ ಬದನೆಕಾಯಿಯನ್ನು ಸುಡಬಹುದು. ಸುಡುವಾಗ ಎಲ್ಲ ಭಾಗಗಳು ಸಮನಾಗಿ ಸುಡುವಂತೆ ನೋಡಿಕೊಳ್ಳಬೇಕು. ನಗರಗಳಲ್ಲಿಯೂ ಅನುಕೂಲತೆಯಿದ್ದರೆ ಕಟ್ಟಿಗೆ ಒಲೆಯ ಮೇಲೆಯೇ ಬದನೆಕಾಯಿಯನ್ನು ಸುಡಬಹುದು.

ಸುಟ್ಟ ಬದನೆಕಾಯಿ ಒಳಗೆಲ್ಲ ಬೆಂದಿರುತ್ತದೆ ಮತ್ತು ಮೇಲಿನ ಸಿಪ್ಪೆ ಸುಟ್ಟಂತಾಗಿರುತ್ತದೆ. ಆ ಸುಟ್ಟ ಸಿಪ್ಪೆಯನ್ನು ತೆಗೆದುಹಾಕಬೇಕು. ನಂತರ ಬದನೆಕಾಯಿಯನ್ನು ಕೈಯಿಂದ ಕಿವುಚಿಟ್ಟುಕೊಳ್ಳಬೇಕು.

ಒಂದು ಬಾಣಲೆಯಲ್ಲಿ ಸ್ವಲ್ಪವೇ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಅರಿಷಿಣ, ಕರಿಮೆಣಸು, ಜೀರಿಗೆ, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಎಲ್ಲ ಸೇರಿಸಿ ತಾಳಿಸಬೇಕು. ಈರುಳ್ಳಿ ಕೆಂಪಗಾದ ಮೇಲೆ ಕಿವುಚಿಟ್ಟುಕೊಂಡ ಬದನೆಕಾಯಿಯನ್ನು ಅದಕ್ಕೆ ಸೇರಿಸಬೇಕು. ಮತ್ತೆ ತಾಳಿಸುವ ಅಗತ್ಯವಿಲ್ಲ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆರಸ ಹಿಂಡಿದರೆ ರುಚಿಕರವಾದ ಬದನೆಕಾಯಿ ಪಚಡಿ ತಯಾರಾಗಿರುತ್ತದೆ. ಇದಕ್ಕೆ ಬೇಕಿದ್ದರೆ ತುರಿದುಕೊಂಡ ಹಸಿ ಕೊಬ್ಬರಿಯನ್ನು ಒಗ್ಗರಣೆ ತಾಳಿಸುವಾಗ ಹಾಕಿಕೊಳ್ಳಬಹುದು. ಕೊಬ್ಬರಿಯಿಂದ ರುಚಿಯೂ ಜಾಸ್ತಿಯಾಗುತ್ತದೆ.

Story first published: Wednesday, May 19, 2010, 14:50 [IST]
X
Desktop Bottom Promotion