For Quick Alerts
ALLOW NOTIFICATIONS  
For Daily Alerts

ಮಾವಿನ ಕಾಯಿ ಚಟ್ನಿ : ಓದಿ ಕಲಿ, ಮಾಡಿ ತಿಳಿ, ತಿಂದು ಲೊಟ್ಟೆ ಹೊಡಿ

By Staff
|

ಮಾವಿನ ಕಾಯಿ ! ನೆನಪಿಸಿಕೊಂಡರೆ ನಾಲಿಗೆ ತುದಿಯಲ್ಲಿ ನೀರು. ಜೊತೆಗೇ ನೆನಪಾಗುತ್ತದೆ ಚಿಕ್ಕಂದಿನಲ್ಲಿ ಮಾವಿನ ಕಾಯಿ ಜೊತೆ ಉಪ್ಪು, ಮೆಣಸಿನ ಪುಡಿ ಕದ್ದು ತಿಂದ ರಸ ಘಳಿಗೆಗಳು...!! ಮಾವಿನ ಮಿಡಿಯ ರುಚಿಯನ್ನಂತೂ ಹೇಗೆ ಬಣ್ಣಿಸುವುದು...? ತೊಟ್ಟು ಕಿತ್ತ ಮಾವಿನ ಮಿಡಿಗೆ ಉಪ್ಪು ತುಂಬಿಸಿ... ವಾಹ್‌ ಆ ರುಚಿಗೆ ಸಾಟಿಯಿಲ್ಲ ಬಿಡಿ. ಹೊಟ್ಟೆ ನೋವು ಬರುತ್ತೆ ಎಂದು ದೊಡ್ಡವರು ಹೆದರಿಸಿದರೂ... ರುಚಿಯ ಮುಂದೆ ಬೈಗುಳಗಳೂ ಸಹ್ಯವೇ. ವಸಂತದೊಂದಿಗೇ ಬರುವ ಮಾವಿನ ಆಕರ್ಷಣೆಯೇ ಅಂತಹುದು.

ಫೆಬ್ರವರಿ ಬರುತ್ತಲೇ ಉಪ್ಪಿನಕಾಯಿಗಾದರೂ ಪ್ರತಿ ಮನೆಗೆ ಮಾವಿನಕಾಯಿ ಬಂದೇ ಬರುತ್ತದೆ. ಮಾವಿನ ಕಾಯಿ ಚಿತ್ರಾನ್ನ,ಉಪ್ಪು ಒತ್ತಿ ಇಟ್ಟ ಮಾವಿನ ಮಿಡಿಗಳು, ಮಾವಿನ ಕಾಯಿ ಗೊಜ್ಜು... ಮತ್ತೆ ಮಾವಿನ ಹಣ್ಣುಗಳು.. ಹೀಗೆ ಮನೆಯ ತುಂಬ ಮಾವಿನದ್ದೇ ಕಾರುಬಾರು. ಆದರೆ ನಮ್ಮ ಹೆಣ್ಣು ಮಕ್ಕಳದು, ವಿಶೇಷವಾಗಿ ಬಸುರಿ ಹೆಂಗಸರದು ಒಂದೇ ತಕರಾರು. ಬೆಲೆ ಜಾಸ್ತಿ. ಫಲ ಕಡಿಮೆಯಿರುವುದರಿಂದ ಮಾರುಕಟ್ಟೆಯಲ್ಲಿ ಹಣ್ಣು ಇಳಿಸುವ ಭರಾಟೆಯೂ ಕುಗ್ಗಿದೆ.

ಎಳೆಯ ಮಾವಿನ ಕಾಯಿಗಳ ಸ್ಪೆಷಲ್‌ ಚಟ್ನಿ ಮಾಡಿದರೆ ಹೇಗಿರುತ್ತೆ ? ಅತ್ತ ದೋಸೆಯಾಂದಿಗೂ, ಬೆರೆಯುವ ಊಟಕ್ಕೂ ಒಗ್ಗುವ ಮಾವಿನ ಕಾಯಿ ಚಟ್ನಿ. ಮಾವಿನ ಕಾಯಿ ಸ್ಪೆಷಲ್‌ ಚಟ್ನಿಗೆ ಬೇಕಾಗುವ ಪದಾರ್ಥಗಳ ಪಟ್ಟಿ ಇಲ್ಲಿದೆ. ಮೊದಲು ರೆಡಿಮಾಡಿಟ್ಟುಕೊಂಡರೆ, ತಡಕಾಡುವ ತಾಪತ್ರಯವಿಲ್ಲ .

ಚಟ್ನಿಗೆ ಬೇಕಾದ ವಸ್ತುಗಳು :

1 ಕೆಜಿ ತುರಿದ ಮಾವಿನ ತಿರುಳು
ಅರ್ಧ ಲೋಟ ಸಕ್ಕರೆ
2 ಕೊಂಬು ಒಣ ಶುಂಠಿ
50 ಗ್ರಾಮ್‌ ಉಪ್ಪು
ಎರಡು ಸ್ಪೂನ್‌ ಏಲಕ್ಕಿ
ನಾಲ್ಕು ದಾಲ್ಚಿನ್ನಿ ಕಡ್ಡಿಗಳು

ನಾಲ್ಕೆಸಳು ಕರಿ ಬೇವಿನ ಸೊಪ್ಪು
ಎರಡು ಟೀ ಸ್ಪೂನ್‌ ಚಚ್ಚಿದ ಕಾಳು ಮೆಣಸು
3 ಅಥವಾ 4 ಸ್ಪೂನ್‌ ಕೆಂಪು ಮೆಣಸಿನ ಪುಡಿ
ಕಾಲು ಕಪ್‌ ಸಣ್ಣಗೆ ತುರಿದ ಕೊಬ್ಬರಿ ತುರಿ
ಕಾಲು ಕಪ್‌ ಒಣ ದ್ರಾಕ್ಷಿ
ಕಾಲು ಕಪ್‌ ಗೋಡಂಬಿ ಬೀಜ
ಕಾಲು ಕಪ್‌ ಬಾದಾಮಿ

150 ಗ್ರಾಂ ವಿನೆಗರ್‌

ಎರಡು ಸ್ಪೂನ್‌ ಜೀರಿಗೆ
ಕಲ್ಲಂಗಡಿ ಹಣ್ಣಿನ ಬೀಜಗಳು
ಬಾಣಲಿಯಲ್ಲಿ ಕಲ್ಲಂಗಡಿ ಬೀಜಗಳ ಹುರಿದು ಪಕ್ಕಕ್ಕಿಟ್ಟುಕೊಳ್ಳಿ. ಬಾದಾಮಿ ಮತ್ತು ಗೋಡಂಬಿಯನ್ನೂ ತುಸು ಬಣ್ಣ ಮಾಗುವಂತೆ ಹುರಿಯಿರಿ. ಇನ್ನೂ ಗೊರಟು ಸರಿಯಾಗಿ ಮೂಡದ ಮಾವಿನ ಹಣ್ಣುಗಳ ಸಿಪ್ಪೆ ತೆಗೆದು ಸಣ್ಣಗೆ ತುರಿಯಿರಿ. ಸ್ವಲ್ಪ ದಪ್ಪ ತಳವಿರುವ ಬಾಣಲೆಯಲ್ಲಿ ತುರಿದ ಮಾವಿನ ಕಾಯಿ, ಸಕ್ಕರೆ ಹಾಕಿ ಐದು ನಿಮಿಷ ಬೇಯಿಸಿ. ಶುಂಠಿ, ಏಲಕ್ಕಿ, ದಾಲ್ಚಿನ್ನಿ , ಕಾಳುಮೆಣಸು, ಕರಿ ಬೇವಿನ ಸೊಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಬೇಯಿಸಿ ನಂತರ ಉಪ್ಪು ಸೇರಿಸಿ.

ಈ ಮಿಶ್ರಣ 20 ನಿಮಿಷಕ್ಕೆಲ್ಲಾ ಸ್ವಲ್ಪ ದಪ್ಪಗಾಗುತ್ತದೆ. ನಂತರ ವಿನೆಗರ್‌ ಬೆರೆಸಿ ಇನ್ನೈದು ನಿಮಿಷ ಬೇಯಿಸಿ. ಆಮೇಲೆ ಒಣ ದ್ರಾಕ್ಷಿ , ಗೋಡಂಬಿ ಮತ್ತು ತೆಂಗಿನ ತುರಿಯನ್ನು ಈ ಮಿಶ್ರಣಕ್ಕೆ ಬೆರೆಸಿ. ಮತ್ತೆೈದು ನಿಮಿಷ ಬೇಯಿಸಿ ಉಪ್ಪು ಹುಳಿ ರುಚಿಯಾಗಿದೆಯಾ ಅಂತ ಪರೀಕ್ಷಿಸಿ.

Story first published: Monday, December 15, 2008, 17:15 [IST]
X
Desktop Bottom Promotion