For Quick Alerts
ALLOW NOTIFICATIONS  
For Daily Alerts

ತರಕಾರಿ ಬಳಸುವ ತರಹೇವಾರಿ ಉಪಾಯಗಳು

By * ಸುಶೀಲಾ ಗೋಪಾಲ್‌
|
Kitchen tips, happy cooking
ತರಕಾರಿ ಹಾಗೂ ಆಹಾರ ಸಾಮಗ್ರಿಗಳನ್ನು ಬಳಸುವ ಸುಲಭ ವಿಧಾನಗಳನ್ನು ಮಹಿಳೆಯರು ತಿಳಿದುಕೊಂಡರೆ ಸಮಯವನ್ನು ಉಳಿಸಿಕೊಂಡು ಇನ್ನಿತರೇ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಅಂಥ ಕೆಲವು ಸುಲಭ ಉಪಾಯಗಳು ನಿಮಗೆ ಗೊತ್ತಾ?

* ಸೀಮೆ ಬದನೆಕಾಯಿಯನ್ನು ಎರಡು ಭಾಗವಾಗಿ ಹೆಚ್ಚಿ, ಒಂದಕ್ಕೊಂದು ಉಜ್ಜಿ, ನೀರಿಗೆ ಹಾಕಿ ತೆಗೆದು ಉಪಯೋಗಿಸಿ. ಇದರಿಂದ ನಿಮ್ಮ ಕೈ ಅಂಟಾಗುವುದನ್ನು ತಡೆಯಬಹುದು.

* ಬೆಣ್ಣೆ ಕಾಯಿಸಿ ಇಳಿಸುವ ಮುನ್ನ ತೊಟ್ಟು ತೆಗೆದ ಒಂದೆರಡು ವೀಳ್ಯದೆಲೆಯನ್ನು ಅದರಲ್ಲಿ ಹಾಕಿ ತೆಗೆದರೆ ತುಪ್ಪ ಸುವಾಸನೆಯುಕ್ತವಾಗುವುದು.

* ದೊಣ್ಣೆ ಮೆಣಸಿನಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿ, ಒಳಭಾಗವನ್ನು ಚಾಕುವಿನಿಂದ ಹೆರೆದು ಕೊಡವಿದರೆ ಬೀಜಗಳೆಲ್ಲ ಉದುರುತ್ತವೆ. ತಿನ್ನುವಾಗ ಹಲ್ಲಿನ ಮಧ್ಯೆ ಬೀಜ ಸಿಕ್ಕಿಕೊಂಡು ತೊಂದರೆಯಾಗದು.

* ಬದನೆಕಾಯಿ ಹೆಚ್ಚಿ ಕೂಡಲೇ ಉಪ್ಪು ನೀರಿಗೆ ಹಾಕಿದರೆ ಹೋಳುಗಳು ಕಪ್ಪಾಗುವುದಿಲ್ಲ.

* ಈರುಳ್ಳಿ ತುದಿಗಳನ್ನು ಕತ್ತರಿಸಿ, ಎರಡು ಭಾಗ ಮಾಡಿ ಒಂದು ಗಂಟೆ ನೀರಿನಲ್ಲಿ ಹಾಕಿಟ್ಟರೆ ಸಿಪ್ಪೆ ಸುಲಿಯುವುದು ಸುಲಭ. ಕಣ್ಣೂ ಉರಿಯುವುದಿಲ್ಲ.

* ಅನ್ನ ಮಾಡುವಾಗ ಅದಕ್ಕೆ ಒಂದು ಚಮಚ ಎಣ್ಣೆ ಅಥವಾ ಸ್ವಲ್ಪ ನಿಂಬೆರಸ ಹಾಕಿದರೆ, ಅನ್ನ ಉದುರುದುರಾಗುತ್ತದೆ.

* ಒಗ್ಗರಣೆ ಹಾಕುವ ಮೊದಲು ಕಡಲೆಕಾಯಿ ಬೀಜವನ್ನು ಮೊದಲು ಹುರಿದು ತೆಗೆದಿಡಿ. ನಂತರ ಸಾಸಿವೆ, ಕರಿಬೇವು ಇತ್ಯಾದಿಗಳನ್ನು ಹುರಿದು ಕಡಲೆಕಾಯಿ ಬೀಜ ಸೇರಿಸಿದರೆ ಹಸಿ ವಾಸನೆ ಇಲ್ಲದೆ ರುಚಿಯಾಗಿರುವುದು.

* ಹಾಗಲಕಾಯಿಯನ್ನು ಚಿಕ್ಕದಾಗಿ ಹೆಚ್ಚಿ ಅರಿಷಿಣ, ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿ. ಸ್ವಲ್ಪ ಹೊತ್ತಿನ ನಂತರ ನೀರನ್ನು ಹಿಂಡಿ ತೆಗೆದರೆ ಕಹಿ ಅಂಶ ಇರುವುದಿಲ್ಲ.

* ಚಟ್ನಿ, ಗೊಜ್ಜಿಗೆ ಬಳಸುವ ಹುಣಸೆ ಹಣ್ಣನ್ನು ಮೊದಲು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ರುಬ್ಬಲು ಸುಲಭವಾಗುವುದು.

* ಕರಿಬೇವನ್ನು ಬೇಳೆಯ ಜತೆಯಲ್ಲೇ ಬೇಯಲು ಇಟ್ಟರೆ ಅದರ ಸಾರವೆಲ್ಲ ಸಾರಿಗೆ ಸೇರಿಕೊಳ್ಳುವುದಲ್ಲದೆ ಸುವಾಸನೆಯೂ ಹೆಚ್ಚುವುದು.

Story first published: Friday, June 25, 2010, 15:49 [IST]
X
Desktop Bottom Promotion