For Quick Alerts
ALLOW NOTIFICATIONS  
For Daily Alerts

ಕರಾವಳಿಯ ಪತ್ರೊಡೆ ಮನೇಲಿ ಮಾಡಿ

By Prasad
|
Colocasia leaves for Patrode
ಕರಾವಳಿಯಿಂದ ತೇಲಿ ಬಂದ ಈ ಪತ್ರೊಡೆ ನೆನಪಾಗುವುದು ಮಳೆಗಾಲದಲ್ಲಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪತ್ರೊಡೆ ಇಲ್ಲದಿದ್ದರೆ ಮಳೆಗಾಲದ ಗಮ್ಮತ್ತೇ ಮಾಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರಿಗನೇಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವುದರಿಂದ ಉದ್ಯಾನ ನಗರಿಯಲ್ಲಿಯೂ ಪತ್ರೊಡೆ ಫೇಮಸ್ಸಾಗುತ್ತಿದೆ. ಅನೇಕ ಹೊಟೇಲುಗಳಲ್ಲಿ ಪತ್ರೊಡೆ ಆರ್ಡರ್ ಮಾಡಿ ತಿನ್ನಬಹುದು. ಹೊಟೇಲ್ಯಾಕೆ ಮನೇಲೇ ಮಾಡಬಹುದು ಎಂದು ಮನಸ್ಸು ಮಾಡಿದರೆ ಅದಕ್ಕಿಂತ ಉತ್ತಮ ಐಡಿಯಾ ಮತ್ತೊಂದಿರಲಿಕ್ಕಿಲ್ಲ. ಪುರುಸೊತ್ತು ಮಾಡಿಕೊಂಡು ಪತ್ರೊಡೆ ಮಾಡಲು ಶುರು ಹಚ್ಚಿಕೊಳ್ಳಿ.

* ಸುಮಿತ್ರಾ ಭಟ್

ಪತ್ರೊಡೆಗೆ ಬೇಕಾದ ಸಾಮಾನು

ಕೆಸುವಿನ ಎಲೆಗಳು(Colocasia leaves)20ರಿಂದ 25.
ಅರ್ಧ ಕೆಜಿ ಬೆಳ್ತಿಗೆ ಅಕ್ಕಿ
ಒಂದು ಕಡಿ ತುರಿದ ತೆಂಗಿನ ಕಾಯಿ
ಕೊತ್ತಂಬರಿ ಬೀಜ - ಐದಾರು ಚಮಚೆ
10ರಿಂದ 12 ಕಾಳು ಕೆಂಪು ಮೆಣಸು
ಕಾಲು ಕಪ್ಪಿನಷ್ಟು ತುರಿದ ಅಥವಾ ಪುಡಿ ಮಾಡಿದ ಬೆಲ್ಲ
ದೊಡ್ಡ ನಿಂಬೆ ಗಾತ್ರದ ಉಂಡೆಯ ಹುಣಸೇ ಹಣ್ಣು ಹಾಗೂ ಉಪ್ಪು

ಮಾಡುವ ವಿಧಾನ

ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೆನೆ ಹಾಕಿ. ಅಕ್ಕಿ, ಉಪ್ಪು ಮತ್ತು ಕೆಸುವಿನೆಲೆಯನ್ನು ಪಕ್ಕಕ್ಕಿಟ್ಟು ಉಳಿದ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿ. ನಂತರ ನೆನೆದ ಅಕ್ಕಿ ಮತ್ತು ಉಪ್ಪು ಸೇರಿಸಿಕೊಂಡು ಸಣ್ಣಗೆ ರುಬ್ಬಿ. ಹೆಚ್ಚು ನೀರು ಸೇರಿಸಿಕೊಳ್ಳಬಾರದು. ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪ ಹಿಟ್ಟಾಗುವಂತೆ ನೋಡಿಕೊಳ್ಳಿ.

ಕೆಸುವಿನೆಲೆಗಳನ್ನು ನೀಟಾಗಿ ಒದ್ದೆ ಬಟ್ಟೆಯೊಂದರಲ್ಲಿ ಒರಸಿ. ಎಲೆಯ ಹಿಂಭಾಗದಲ್ಲಿರುವ ದಪ್ಪನೆಯ ನಾರುಗಳನ್ನು ನಯವಾಗಿ ಕಿತ್ತು ತೆಗೆಯಬೇಕು. ಪತ್ರೊಡೆ ನೀಟಾಗಿರಬೇಕಾಗರೆ, ಎಲೆ ಎಲ್ಲಿಯೂ ತೂತಾಗಿರಬಾರದು.

ಈಗ ಕೆಸುವಿನೆಲೆಗಳನ್ನು ಟೇಬಲ್‌ ಮೇಲೆ ಚೆಂದಾಗಿ ಹರಡಿಕೊಂಡು ಎಲೆಯ ಹಿಂಬದಿ ಮೇಲೆ ಹಿಟ್ಟನ್ನು ತೆಳ್ಳಗೆ ಹಚ್ಚಿ. ಅದರ ಮೇಲೆ ಇನ್ನೊಂದು ಎಲೆ ಇಟ್ಟು ಮತ್ತೆ ಅದರ ಮೇಲೆ ಹಿಟ್ಟು ಹಚ್ಚಿ. ಎರಡೂ ಎಲೆಯ ಬದಿಗಳನ್ನು ತುಸುವೇ ಒಳಕ್ಕೆ ಮಡಚಿಕೊಂಡು ಎಲೆಯನ್ನು ನಿಮ್ಮ ಹಾಸಿಗೆ ಸುರುಳಿ ಸುತ್ತಿದ ಹಾಗೆ ಸುತ್ತಿ. ಹೀಗೆ ಇಪ್ಪತ್ತು ಎಲೆಯಲ್ಲಿ ಹತ್ತು ಪತ್ರೊಡೆಗಳು ರೆಡಿಯಾದ ನಂತರ ಅದನ್ನು ಹಬೆಯಲ್ಲಿ 30 ನಿಮಿಷ ಬೇಯಿಸಿದರೆ ಕರಾವಳಿಯ ಪತ್ರೊಡೆ ನಿಮ್ಮನೆ ಕುಕ್ಕರಿನಲ್ಲಿ ರೆಡಿ. ಬಿಸಿಬಿಸಿ ಪತ್ರೊಡೆಯನ್ನು ತುಪ್ಪ ಅಥವಾ ಬೆಣ್ಣೆ ಹಚ್ಚಿಕೊಂಡು ಹಾಗೇ ತಿನ್ನಬಹುದು. ಕಾಯಿ ಚಟ್ನಿ ಇದ್ದರಂತೂ ಪತ್ರೊಡೆ ರುಚಿ ಇನ್ನೂ ಸೂಪರ್.

X
Desktop Bottom Promotion