For Quick Alerts
ALLOW NOTIFICATIONS  
For Daily Alerts

ಕಡ್ಲೆಬೇಳೆ ಸಬ್ಬಸಿಗೆ ಸೊಪ್ಪಿನ ಆಂಬೋಡೆ

By * ಕುಮುದಾ ಶಂಕರ್, ಸೌದಿ ಅರೇಬಿಯಾ
|
Kadlebele sabbasige Ambode
ನಿಮಗೆ ತಿಳಿದಿದಿಯೋ ಇಲ್ಲವೊ. ಆಂಬೋಡೆಯನ್ನು ಉತ್ತರ ಕರ್ನಾಟಕದಲ್ಲಿ ಬುರುಬುರಿ ಎಂದು ಕರೆಯುತ್ತಾರೆ. ಯಾವುದೇ ಹುಡುಗಿ ದುಂಡದುಂಡಗಾಗಿದ್ದರೆ 'ಬುರುಬುರಿ ಹಂಗ ಹೆಂಗ ಉಬ್ಯಾಳ ನೋಡು' ಅಂತ ಚಾಷ್ಟಿ ಮಾಡುತ್ತಾರೆ. ಇನ್ನು ಹಬ್ಬಹರಿದಿನ, ಮದುವೆಮನೆಗಳಲ್ಲಂತೂ ಆಂಬೋಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ. ಹೋಳಿಗೆ, ಚಿರೋಟಿ, ಜಿಲೇಬಿ ಮುಗಿದು ಮಜ್ಜಿಗೆ ಅನ್ನ ಬರುವ ಮೊದಲು ಆಂಬೋಡೆ ಬಿದ್ದರೇನೆ ಬಾಳೆಎಲೆಗೊಂದು ಕಳೆ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವಾಗ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಲ್ಲಿ ಚಹಾದ ಜೊತೆ ಈ ಕಡ್ಲೆಬೇಳೆ ಆಂಬೋಡೆಯನ್ನು ತಿಂದಿರಬಹುದು. ಮುಂಗಾರು ಮಳೆಗಾಲದಲ್ಲಿ ಹೊರಗಡೆ ಮಳೆ ಜಿಟಿಜಿಟಿ ಸುರಿಯುತ್ತಿದ್ದರೆ ಚಹಾ ಅಥವಾ ಕಾಫಿಯ ಜೋಡಿ ತಿನ್ನಲು ಬಲು ಪಸಂದಾಗಿರುತ್ತದೆ. ಮನೆಯ ಎಣ್ಣೆಯಲ್ಲಿ ಕರಿಯುವುದರಿಂದ ಗಂಟಲು ಕಟ್ಟಿಕೊಳ್ಳುವ ಅಪಾಯವೂ ಇರುವುದಿಲ್ಲ.

ಬೇಕಾಗುವ ಸಾಮಗ್ರಿಗಳು:

ಕಡ್ಲೆಬೇಳೆ - ಒಂದು ಬಟ್ಟಲು
ಹಸಿಮೆಣಸಿನಕಾಯಿ
ಒಂದು ಚೆಕ್ಕೆ, ಲವಂಗ
ಶುಂಠಿ - ಒಂದು ಇಂಚು
ಕೊತ್ತಂಬರಿ ಸೊಪ್ಪು
ಸಣ್ಣಗೆ ಹೆಚ್ಚಿದ ಈರುಳ್ಳಿ
ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪು
ಉಪ್ಪು ರುಚಿಗೆ

ತಯಾರಿಸುವ ವಿಧಾನ:

ಮೊದಲಿಗೆ ಕಡ್ಲೆಬೇಳೆಯನ್ನು ಮೂರು ಗಂಟೆ ನೆನೆಸಿ. ನೆನೆದ ಕಡ್ಲೆಬೇಳೆಯಿಂದ ನೀರು ಸೋಸಿಕೊಂಡು ಅದನ್ನು ಹಸಿಮೆಣಸಿನಕಾಯಿ, ಚೆಕ್ಕೆ, ಲವಂಗ, ಶುಂಠಿ, ಉಪ್ಪು ಮತ್ತು ಕೊತ್ತಂಬರಿಸೊಪ್ಪು ಹಾಕಿ ಗಟ್ಟಿಯಾಗಿ ಮತ್ತು ತರಿತರಿಯಾಗಿ ರುಬ್ಬಿಕೊಳ್ಳಿ.

ಈ ರುಬ್ಬಿದ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಕಲೆಸುವಾಗ ನೀರು ಹಾಕಬೇಡಿ. ಈರುಳ್ಳಿಯನ್ನು ಮತ್ತು ಸೊಪ್ಪಿನಲ್ಲಿ ನೀರಿನ ಅಂಶ ಇರುವುದರಿಂದ ಅದೇ ಸಾಕಾಗುತ್ತದೆ. ಎಲ್ಲವನ್ನೂ ಚೆನ್ನಾಗಿ ಹೊಂದಿಕೊಳ್ಳುವಂತೆ ಕಲೆಸಿ.

ಸಣ್ಣ ಸಣ್ಣ ಉಂಡೆ ಮಾಡಿಕೊಂಡು, ಅದನ್ನು ಅಂಗೈನಲ್ಲಿ ಸ್ವಲ್ಪ ದಪ್ಪವಾಗಿ ತಟ್ಟಿಕೊಂಡು ಕಾದಿರುವ ಎಣ್ಣೆಯಲ್ಲಿ ಒಂದೊಂದಾಗಿ ಹಾಕಿ ಕರಿಯಿರಿ. ಎಣ್ಣೆಗೆ ಹಾಕಿದ ತಕ್ಷಣ ಜಾಲರಿ ಹಾಕಿ ಅಲ್ಲಾಡಿಸಬೇಡಿ. ವಡೆಯ ಬಣ್ಣ ಸ್ವಲ್ಪ ಬದಲಾದ ನಂತರ ತಿರುವಿ ಹಾಕಿ, ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಮೇಲೆ ಹಾಕಿ, ಎಣ್ಣೆ ಚೆನ್ನಾಗಿ ಹೀರಿಕೊಳ್ಳಲಿ.

ಇದೇ ರೀತಿ ಮಿಕ್ಕ ಎಲ್ಲಾ ವಡೆಗಳನ್ನು ತಯಾರಿಸಿ. ರುಚಿಯಾದ ಸಬ್ಬಸ್ಸಿಗೆ ಕಡ್ಲೆಬೇಳೆ ಆಂಬೋಡೆ ತಿನ್ನಲು ಸಿದ್ಧವಾಗುತ್ತದೆ. ಇದನ್ನು ಬಿಸಿಬಿಸಿಯಾಗಿದ್ದಾಗಲೇ ತಿಂದರೆ ಚೆನ್ನ. ಅದರ ಜೊತೆ ಚಟ್ನಿ/ಸಾಸ್/ಕೆಚಪ್ ಕೂಡ ಸರ್ವ್ ಮಾಡಬಹುದು. ಜೊತೆಗೆ ಏನು ಇಲ್ಲದಿದ್ದರೂ ಚೆನ್ನಾಗಿರುತ್ತೆ. ಮಳೆಗಾಲದಲ್ಲಿ ಜಬರ್ದಸ್ತ್ ತಿನಿಸು. [ಕೃಪೆ : ಅಡಿಗೆ ಸವಿರುಚಿ]

English summary

Kadlebele sabbasige Ambode | Snacks in rainy season | ಕಡ್ಲೆಬೇಳೆ ಸಬ್ಬಸಿಗೆ ಆಂಬೋಡೆ | ಮಳೆಗಾಲದ ತಿನಿಸುಗಳು

Kadlebele sabbasige ambode, a perfect snacks for a rainy season. If you are concerned about health during rainy season, better prepare at home. A tasty recipe by Kumuda Shankar, Saudi Arabia.
Story first published: Monday, June 13, 2011, 13:52 [IST]
X
Desktop Bottom Promotion