For Quick Alerts
ALLOW NOTIFICATIONS  
For Daily Alerts

ನಿಂಬೆ ಹಣ್ಣಿನ ಚಿತ್ರಾನ್ನದ ಗೊಜ್ಜು

By * ರಾಧಿಕಾ ಎಮ್.ಜಿ., ಬೆಂಗಳೂರು
|
Chitrannada Gojju
ದರ್ಶಿನಿ, ಆಫೀಸಿನ ಕ್ಯಾಂಟೀನುಗಳಲ್ಲಿ ಮೆಣಸಿನಕಾಯಿ, ಈರುಳ್ಳಿ ಒಗ್ಗರಣೆ ಹಾಕಿದ ಅನ್ನವನ್ನೇ ಚಿತ್ರಾನ್ನವೆಂದುಕೊಂಡು ತಿಂದವರಿಗೆ ನಿಜವಾದ ಚಿತ್ರಾನ್ನದ ರುಚಿ ತಿಳಿಯಬೇಕಾದರೆ ಈ ಹೊಸರುಚಿಯನ್ನು ಮನೆಯಲ್ಲಿಯೇ ತಿನ್ನಬೇಕು. ಹುರುಳಿ ಕಾಯಿ, ಕ್ಯಾರೆಟ್, ಪುದೀನಾ ಸೊಪ್ಪು ಹಾಕಿ ಮಾಡಿದ ಚಿತ್ರಾನ್ನದ ಗೊಜ್ಜು ತಂಗಳು ಪೆಟ್ಟಿಗೆಯಲ್ಲಿಟ್ಟರೆ ಒಂದು ವಾರದವರೆಗೂ ಉಪಯೋಗಿಸಬಹುದು.

ಬೇಕಾದ ಸಾಮಗ್ರಿಗಳು :

ಹಸಿರು ಮೆಣಸಿನಕಾಯಿ : 10-15
ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಹಸಿ ಕರಿ ಬೇವು, ಕೊತ್ತಂಬರಿ ಸೊಪ್ಪು : ಒಗ್ಗರಣೆಗೆ ಬೇಕಾಗುವಷ್ಟು
ಪುಡಿ ಮಾಡಿದ ಹಿಂಗು : 4-5 ಚಿಟಿಕೆ
ಅರಿಷಿಣ : 4-5 ಚಿಟಿಕೆ
ಕಡಲೆ ಬೀಜ : ಎರಡು ಹಿಡಿ
ಗೋಡಂಬಿ : ಒಂದು ಹಿಡಿ
ಪುದೀನಾ ಸೊಪ್ಪು : ಒಂದು ಕಟ್ಟು
ಸಣ್ಣಗೆ ಹೆಚ್ಚಿದ ಹುರುಳಿ ಕಾಯಿ, ಕ್ಯಾರೆಟ್, ದೊಣ್ಣೆ ಮೆಣಸಿನ ಕಾಯಿ : ಎರಡು ಕಪ್
ಹಸಿ ಬಟಾಣಿ : ಒಂದು ಕಪ್
ಪುಡಿ ಉಪ್ಪು : ರುಚಿಗೆ ತಕ್ಕಷ್ಟು
ತೆಂಗಿನ ತುರಿ : ಅರ್ಧ ಹೋಳಿನದು
ಕಡಲೆ ಕಾಯಿ ಎಣ್ಣೆ : ಎರಡು ಕಪ್
ನಿಂಬೆ ಹಣ್ಣಿನ ರಸ : 4-5 ನಿಂಬೆ ಹಣ್ಣಿನದು

ಮಾಡುವ ವಿಧಾನ :

ಬಾಣಲಿಯಲ್ಲಿ ಅರ್ಧ ಕಪ್ ಎಣ್ಣೆ ಕಾಯಿಸಿ ಕಡಲೆ ಬೀಜ ಮತ್ತು ಗೋಡಂಬಿಯನ್ನು ಕರಿದುಕೊಂಡು ಪಕ್ಕಕ್ಕೆ ತೆಗೆದಿಡಿ. ಉಳಿದ ಎಣ್ಣೆಯನ್ನು ಬಾಣಲೆಗೆ ಹಾಕಿ ಕಾದ ಮೇಲೆ ಸಾಸಿವೆ ಹಾಕಬೇಕು. ಸಾಸಿವೆ ಸಿಡಿದ ಮೇಲೆ ಕರಿಬೇವು, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ (ಉದ್ದಿನ ಬೇಳೆ) ಕೆಂಬಣ್ಣ ಬರುವವರೆಗೆ ಕರಿಯಬೇಕು.

ನಂತರ ಅರಿಷಿಣ, ಹಿಂಗು, ಹೆಚ್ಚಿಟ್ಟುಕೊಂಡ ತರಕಾರಿ, ಬಟಾಣಿ ಹಾಕಿ ತಿರುವಿ 4-5 ನಿಮಿಷ ತಟ್ಟೆ ಮುಚ್ಚಿ, ಮಂದ ಉರಿಯಲ್ಲಿ ಬೇಯಲು ಬಿಡಬೇಕು. 5 ನಿಮಿಷದ ನಂತರ ತರಕಾರಿ ಬೆಂದಿರುತ್ತದೆ. ಇದಕ್ಕೆ ಪುದೀನಾ ಸೊಪ್ಪು, ಉಪ್ಪು ಹಾಕಿ ಒಂದೆರಡು ನಿಮಿಷ ಬೇಯಿಸಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಬೆರೆಸಿ, ಒಲೆಯಿಂದ ಬಾಣಲೆಯನ್ನು ಇಳಿಸಿ, ತಟ್ಟೆ ಮುಚ್ಚಿ ಇಡಬೇಕು.

ತೆಂಗಿನ ತುರಿ ಹಾಕಿದ ನಂತರ ಮಿಶ್ರಣವನ್ನು ಬೇಯಿಸಬಾರದು. ಮಿಶ್ರಣ ಸ್ವಲ್ಪ ಆರಿದ ನಂತರ ನಿಂಬೆ ರಸ ಬೆರೆಸಬೇಕು. ಚಿತ್ರಾನ್ನದ ಗೊಜ್ಜು ಈಗ ತಯಾರು. ಚಿತ್ರಾನ್ನಕ್ಕಾಗಿ ಅನ್ನ ಮಾಡುವಾಗ ಸ್ವಲ್ಪ ಉಪ್ಪು ಹಾಕಿ, ಉದುರು ಉದುರಾಗಿ ಮಾಡಬೇಕು. ಅನ್ನಕ್ಕೆ ಗೊಜ್ಜನ್ನು ಬೆರೆಸಿ, ಕರಿದ ಕಡಲೆ ಬೀಜ, ಗೋಡಂಬಿಯನ್ನು ಸೇರಿಸಿ, ಒಂದು ಕಪ್ ಗಟ್ಟಿ ಮೊಸರಿನೊಡನೆ ತಿಂದರೆ ರುಚಿಯೋ ರುಚಿ.

(ಕಡಲೆ ಬೀಜ, ಗೋಡಂಬಿಯನ್ನು ಗೊಜ್ಜಿಗೇ ಸೇರಿಸಬಹುದು ಆದರೆ ಅವು ಮೆತ್ತಗಾಗುತ್ತವೆ).

X
Desktop Bottom Promotion