For Quick Alerts
ALLOW NOTIFICATIONS  
For Daily Alerts

ತಾಜಾ ತಾಜಾ ಅವರೆಕಾಳು ಉಸಳಿ

By Prasad
|
Avarekayi for avarekalu usali
ಅವರೆಕಾಳಿನ ಸೀಸನ್ನು ಇನ್ನೇನು ಮುಗೀತಾ ಬಂತು. ಅವರೆಕಾಳು ಉಪಯೋಗಿಸಿ ಯಾವ ತಿನಿಸನ್ನೂ ಇತ್ತೀಚೆಗೆ ಮಾಡೇಯಿಲ್ಲ ಅಂತ ನೀವು ತೊಳಲಾಡುತ್ತಿದ್ದರೆ ಇಲ್ಲಿದೆ ನೋಡಿ ರುಚಿಕರ ತಿನಿಸು. ರಾತ್ರಿಯ ಬೆಳದಿಂಗಳ ಊಟಕ್ಕೆ ಬಿಸಿಬಿಸಿ ಅವರೆಕಾಳಿನ ಉಸಳಿಯಿದ್ದರೆ ಮನೆಮಂದಿಗೆಲ್ಲ ಹಿಗ್ಗೋ ಹಿಗ್ಗು. ಮಲ್ಟಿಪರ್ಪೋಸ್ ಅವರೆಕಾಳು ಉಸಳಿಯನ್ನು ಯಾವುದೇ ತಿಂಡಿಯೊಡನೆ ಬೇಕಾದರೂ ಬೆರೆಸಿ ತಿನ್ನಬಹುದು. ಅಷ್ಟು ರುಚಿಯಾಗಿರುತ್ತದೆ.

* ಅರುಣಾ, ಮೈಸೂರು

ಬೇಕಾಗುವ ಪಡಿಪದಾರ್ಥಗಳು:

ತಾಜಾ ಅವರೆಕಾಯಿಯ ಕಾಳು : 2 ಕಪ್ಪು
ಈರುಳ್ಳಿ : ಮಧ್ಯಮಗಾತ್ರದ ಎರಡು
ಹಸಿಮೆಣಸಿನ ಕಾಯಿ : ಐದಾರು
ತೆಂಗಿನಕಾಯಿ ತುರಿ : ಒಂದು ಕಪ್ಪು
ಜೀರಿಗೆ : ಅರ್ಧ ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಮೆಂತ್ಯ : ಅರ್ಧ ಚಮಚ
ಅರಿಶಿನ : ಎರಡು ಚಿಟಿಕೆ
ಎಣ್ಣೆ : 2 ಚಮಚ
ಬೆಣ್ಣೆ : ನಿಂಬೆಹಣ್ಣಿನ ಗಾತ್ರ
ತುಪ್ಪ : 2 ಚಮಚ

ತಯಾರಿಸುವ ವಿಧಾನ :

ಅವರೆಕಾಳು, ಎಣ್ಣೆ, ಬೆಣ್ಣೆ, ತುಪ್ಪ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಾಗೂ ಹಸಿಮೆಣಸಿನಕಾಯಿಯನ್ನು ದಪ್ಪ ತಳ ಇರುವ ಪಾತ್ರೆಯಲ್ಲಿ ಹಾಕಿ. ಪಾತ್ರೆಯನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಬೇಯಿಸಿ. ಕಾಳು ಚೆನ್ನಾಗಿ ಬೆಂದ ಬಳಿಕ ಉಪ್ಪು, ತೆಂಗಿನಕಾಯಿ ತುರಿ, ಪುಡಿ ಮಾಡಿದ ಜೀರಿಗೆ, ಮೆಂತ್ಯ, ಅರಿಶಿನ ಹಾಕಿ. ನಂತರ, ಈ ಮಿಶ್ರಣವನ್ನು ಮತ್ತೊಮ್ಮೆ ಸಣ್ಣ ಉರಿಯ ಒಲೆಯ ಮೇಲೆ 10 ನಿಮಿಷ ಬೇಯಿಸಿ. ಪಾತ್ರೆಯ ಮೇಲೆ ಮುಚ್ಚಳ ಮುಚ್ಚುವುದನ್ನು ಮರೆಯಬೇಡಿ.

ಅರ್ಧಗಂಟೆಯಲ್ಲಿ, ರುಚಿಕರವಾದ ಅವರೆಕಾಳು ಉಸಲಿ ರೆಡಿ. ಬೇಕಿದ್ದರೆ ಇಂಗು, ಸಾಸಿವೆ ಒಗ್ಗರಣೆ ಹಾಕಿಕೊಳ್ಳಬಹುದು. ಇದನ್ನು ಚಪಾತಿ, ಬಿಸಿಬಿಸಿ ಅನ್ನದೊಡನೆ ತಿನ್ನಬಹುದು. ಹಸಿಎಣ್ಣೆಯಿಂದ ಹಚ್ಚಿದ ಅವಲಕ್ಕಿ ಯೊಡನೆಯೂ ತಿನ್ನಬಹುದು. ಒಮ್ಮೆ ಟ್ರೈ ಮಾಡಿ ನೋಡಿ.

X
Desktop Bottom Promotion