For Quick Alerts
ALLOW NOTIFICATIONS  
For Daily Alerts

ಪಂಚಾಮೃತವೂ Pun-ಚಾ-ಅಮೃತ ಇತ್ಯಾದಿಯೂ...

By Super
|

ಪಂಚಾಮೃತದ ಹೊಸರುಚಿ ಬಾಯಿಗೆ, ಮತ್ತು ಪನ್‌ ಚಾ ಅಮೃತದ ರುಚಿ ಬ್ರೆೃನಿಗೆ !

  • ಶ್ರೀವತ್ಸ ಜೋಶಿ

ಹಿಂದೂ ಪೂಜಾವಿಧಿವಿಧಾನಗಳಲ್ಲಿ ಪಂಚಾಮೃತದ (ಕ್ಷೀರ, ದಧಿ, ಘೃತ, ಮಧು ಮತ್ತು ಶರ್ಕರಾ ಮಿಶ್ರಣ) ಮಹತ್ವ ನಿಮಗೆ ಗೊತ್ತೇ ಇದೆ. ಪಂಚಾಮೃತ ಎಂಬ ಇನ್ನೊಂದು ವಿಷಯ ನನಗೆ ಸಡನ್ನಾಗಿ ನೆನಪಿಗೆ ಬಂತು. ಅದು ದೇವರ ಪೂಜೆಯಲ್ಲಿ ಉಪಯೋಗಿಸೋ ವಸ್ತುವಲ್ಲ, ‘ಪೇಟ್‌ ಪೂಜೆ’ಗೆ ಮಾತ್ರ ಸೀಮಿತ. ನಿಮ್ಮ ಬಾಯಲ್ಲಿ ನೀರೂರಬಹುದು, ಆದರೆ ಹೇಳ್ತೇನೆ ಕೇಳಿ ಇದು ಬರೀ ಸಿಹಿಯಲ್ಲ. ಸಿಹಿ, ಖಾರ, ಉಪ್ಪು, ಹುಳಿ, ಕಹಿ - ಐದೂ ರುಚಿಗಳಿರುವಂಥದ್ದು! ಈ ಹೊಸ ಬಗೆಯ ಪಂಚಾಮೃತವನ್ನು ನಿಮಗೆ ಪರಿಚಯಿಸಲಾಗುತ್ತಿದೆ ವಿಚಿತ್ರಾನ್ನದ ಈ ಸಂಚಿಕೆಯಲ್ಲಿ. ಜತೆಗೇ ಎಂದಿನಂತೆ ಕೆಲವು ‘ಸಾಧಾರಣದಿಂದ ಸಾಕಷ್ಟು ಗಾಂಭೀರ್ಯದ’ ವಿಚಾರಗಳು ಕೂಡ.

 

ಪಂಚಾಮೃತ - ಇದೊಂದು ನಮೂನೆಯ ಉಪ್ಪಿನಕಾಯಿ. ಅಥವಾ ಗೊಜ್ಜು ಎಂದೂ ಕ್ವಾಲಿಫೈ ಆಗುತ್ತದೆ. ನಮ್ಮನೇಲಿ ಅಜ್ಜಿ, ಅಮ್ಮ, ಅತ್ತಿಗೆ ಹೀಗೆ ತಲೆತಲಾಂತರದಿಂದ ಈ ರೆಸಿಪಿಯನ್ನು ಬಳಸುತ್ತಿದ್ದಾರೆ. ನನ್ನ ಸಂಗ್ರಹದಲ್ಲಿ ಸಿಕ್ಕಿತು, ನಿಮಗೂ ತಿಳಿಸೋಣವೆನ್ನಿಸಿತು. ನೀವೂ ಮಾಡಿ ನೋಡಿ ‘ಪಂಚಾಮೃತ’ ಉಪ್ಪಿನಕಾಯಿ/ಗೊಜ್ಜು. ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನವನ್ನು ನೋಟ್‌ ಮಾಡಿಟ್ಟುಕೊಳ್ಳಿ.

ಹಸಿಮೆಣಸು - 1/4 ಕೆ.ಜಿ., ಹುಣಿಸೆಹಣ್ಣು - 100 ಗ್ರಾಂ, ಬೆಲ್ಲ - 1 ಅಚ್ಚು, ಉಪ್ಪು - 1 ಚಿಟಿಕೆ, ಜೀರಿಗೆ - 3 ಚಮಚ, ಮೆಂತ್ಯ - 3 ಚಮಚ, ಇಂಗು - 1 ಚಿಟಿಕೆ, ಎಣ್ಣೆ - ಹಸಿಮೆಣಸನ್ನು ಬಾಡಿಸಲು ಬೇಕಾಗುವಷ್ಟು ಮಾತ್ರ.

ಹುಣಸೆಹಣ್ಣನ್ನು ನೀರಲ್ಲಿ ನೆನೆಸಿಟ್ಟು ಚೆನ್ನಾಗಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ಹಸಿಮೆಣಸನ್ನು ತೊಟ್ಟು ತೆಗೆದು ಸಣ್ಣಗೆ ಹೆಚ್ಚಿ (ಉದ್ದುದ್ದ ಹೆಚ್ಚುವುದಕ್ಕಿಂತ ಅಡ್ಡಕ್ಕೆ, ಚಕ್ರಗಳಂತೆ ಹೆಚ್ಚುವುದು ಉತ್ತಮ) ಎಣ್ಣೆಯಲ್ಲಿ ಹುರಿಯಬೇಕು (ಗಮನಿಸಿ - ಕರಿಯುವುದಲ್ಲ, ಹುರಿಯುವುದು). ಚೆನ್ನಾಗಿ ಹುರಿದ ಮೆಣಸಿನಕಾಯಿ ಬಾಣಲೆಯಲ್ಲಿರುವಾಗಲೇ ಹುಣಿಸೆರಸ ಸೇರಿಸಿ ಉಪ್ಪು, ಇಂಗು, ಪುಡಿಮಾಡಿದ ಬೆಲ್ಲವನ್ನೂ ಹಾಕಿ ಚೆನ್ನಾಗಿ ಕುದಿಸಿ. ಒಲೆಯ ಜ್ವಾಲೆ ಮೀಡಿಯಂ ಆಗಿರಲಿ. ಈ ಟೈಮಲ್ಲಿ ಕ್ವಿಕ್ಕಾಗಿ ಜೀರಿಗೆ-ಮೆಂತ್ಯವನ್ನು ಪುಡಿಮಾಡಿಟ್ಟುಕೊಳ್ಳಿ. ಒಲೆಯ ಮೇಲಿನ ಮಿಶ್ರಣ ದಪ್ಪವಾಗುತ್ತ ಬರುತ್ತಿದ್ದಂತೆಯೇ ಇಳಿಸುವ ಮುನ್ನ ಜೀರಿಗೆ ಮತ್ತು ಮೆಂತ್ಯ ಪುಡಿ ಹಾಕಿ ಬಾಣಲೆಯನ್ನು ಒಲೆಯಿಂದ ಇಳಿಸಿ. ಆರಿದ ಮೇಲೆ ಗಾಜಿನ ಜಾಡಿಯಲ್ಲಿ ಹಾಕಿಡಿ. ಬೇಕಿದ್ದರೆ ‘ಪಂಚಾಮೃತ (ವಿಚಿತ್ರಾನ್ನದಲ್ಲಿ ಪ್ರಕಟಿತ)’ ಎಂದು ಲೇಬಲ್‌ ಹಚ್ಚಿಡಿ!

ಬಿಸಿಬಿಸಿ ಅನ್ನಕ್ಕೆ ಒಂದು ಚಮಚದಷ್ಟು ಪಂಚಾಮೃತ ಹಾಕಿ, ಒಂದಿಷ್ಟು ತುಪ್ಪ ಅಥವಾ ಎಣ್ಣೆಯನ್ನೂ ಹಾಕಿ ಕಲಸಿದರೆ... ಆಹಾ! ದೋಸೆ, ಚಪಾತಿ, ಪೂರಿಗೆ ಹಚ್ಚಿ ತಿನ್ನಲೂ ಸೂಪರ್‌ ಆಗಿರುತ್ತದೆ. ಜಾಡಿಯಲ್ಲಿ ಹಾಕಿಟ್ಟ ಪಂಚಾಮೃತ ಒಂದೆರಡು ತಿಂಗಳು ಕಾಲ ಕೆಡದೆ ಉಳಿಯಬಲ್ಲುದು. (ನಮ್ಮನೇಲಂತೂ ಅಷ್ಟೆಲ್ಲ ದಿನಗಳವರೆಗೆ ಉಳಿಯುವ ಸಾಧ್ಯತೆಯೇ ಇಲ್ಲ, ತೀವ್ರ ಬೇಡಿಕೆಯುಳ್ಳ ಪದಾರ್ಥ ಆಗಿರುವುದರಿಂದ!)

 

ಇತಿ ಪಂಚಾಮೃತ ತಯಾರಿ ವಿಧಾನಂ ಸಮಾಪ್ತಂ ।

* * *

ಓ‘ಪನ್‌’ ಲರ್ನಿಂಗ್‌ ಸಿಸ್ಟಂ!

‘ಓಪನ್‌ ಯುನಿವರ್ಸಿಟಿ’ ನಿಮಗೆ ಗೊತ್ತು. ಸಾಫ್ಟ್‌ವೇರ್‌ ‘ಓಪನ್‌ ಸಿಸ್ಟಮ್ಸ್‌’ ಬಗ್ಗೆ ಕೂಡ ನಿಮ್ಮಲ್ಲಿ ಕೆಲವರಿಗೆ ಗೊತ್ತಿರಲೂಬಹುದು. ಆದರೆ ಓ‘ಪನ್‌’ ಲರ್ನಿಂಗ್‌ ಸಿಸ್ಟಂ ಬಗ್ಗೆ ನೀವಿದುವರೆಗೆ ಕೇಳಿರಲಿಕ್ಕಿಲ್ಲ. ಅದು ವಿಚಿತ್ರಾನ್ನ ಸ್ಪೆಷಲ್‌ ಟರ್ಮಿನಾಲಜಿ! ಯಾವುದಾದರೂ ಒಂದು ಪದವನ್ನು ತೆಗೆದುಕೊಂಡು ಅದನ್ನು ಹಿಗ್ಗಾಮುಗ್ಗಾ ಟ್ವಿಸ್ಟಿಸಿ, ಅದಕ್ಕೆ ಬಹುಭಾಷಾ ವೇಷಭೂಷಣ ತೊಡಿಸಿ ಮಜಾ ಪಡೆದು ಜತೆಯಲ್ಲೇ ಸ್ವಲ್ಪ ಜ್ಞಾನಾರ್ಜನೆ ಮಾಡಿಕೊಳ್ಳುವುದು. ಇಂಟೆರೆಸ್ಟಿಂಗ್‌ ಆಗಿದೆಯೇ? ಒಂದು ಸ್ಯಾಂಪಲ್‌ಅನ್ನು ನೋಡೋಣ. ಇವತ್ತಿನ ಪದ ‘ಚಾಪಧರ’.

ಚಾಪಧರ: ಗೋಸ್ವಾಮಿ ತುಲಸೀದಾಸರು ‘ಆಜಾನುಭುಜ ಶರ ಚಾಪಧರ ಸಂಗ್ರಾಮ ಜಿತಖರದೂಷಣಂ...’ ಎಂದು ಕೃಪಾಳು ಶ್ರೀರಾಮಚಂದ್ರನನ್ನು ಭಜಿಸಿದ್ದಾರೆ. ಚಾಪ ಎಂದರೆ ಬಿಲ್ಲು. ಅದನ್ನು ಧರಿಸಿದವನಾದ್ದರಿಂದ ಶ್ರೀರಾಮ ಚಾಪಧರ. ಇದೇ ಪದಕ್ಕೆ ಒಂದು ಬಾಲವನ್ನಷ್ಟೇ ಸೇರಿಸಿ ‘ಛಾಪಧರ’ ಎಂದು ಮಾಡಿಕೊಳ್ಳಬಹುದು. ಛಾಪಧರ ಎಂದರೆ ಯಾರು? ಮತ್ತ್ಯಾರು, ‘ತೆಲಗಿ’ ಮತ್ತು ಆತನ ಛಾಪಾ-ಕಾಗದ ಹಗರಣದಲ್ಲಿನ ಎಲ್ಲ ಸಣ್ಣದೊಡ್ಡ ವ್ಯಕ್ತಿಗಳೂ ಛಾಪಧರರೇ! ಅವರಿಗೆಲ್ಲ ‘ತೆಲಗಿ ಮತ್ತವನ ಅನುನಾಯಿ(?)ಗಳೇ, ಭಾರತ ಬಿಟ್ಟು ತೊಲಗಿ’ ಎಂಬ ಇನ್ನೊಂದು ‘ಕ್ವಿಟ್‌ ಇಂಡಿಯಾ’ ಚಳುವಳಿ ಆರಂಭಿಸಿದರೆ ಹೇಗೆ?

‘ಚಾಪಧರ’ ಪದಕ್ಕೆ ಇನ್ನೊಂದು ನಮೂನೆಯ ವಿಶ್ಲೇಷಣೆಯೂ ಇದೆ. ಇದು ತೆಲಗಿಯದಲ್ಲ , ತೆಲುಗಿನದು! ತೆಲುಗು ಭಾಷೆಯಲ್ಲಿ ಚಾಪ ಎಂದರೆ ಮೀನು. ಸೋ, ಚಾಪಧರ ಎಂದರೆ ಮೀನು ಹಿಡಿಯುವವನು ಎಂದು ನೀವು ಹೇಳಿದರೆ ಅದು ಸಾಮಾನ್ಯ ‘ಪನ್‌’ ಆಯಿತು. ಆ ಪನ್‌ನಲ್ಲೊಂದಿಷ್ಟು ಜನರಲ್‌ ನಾಲೆಡ್ಜೂ ಸೇರಬೇಕಿದ್ದರೆ ಈರೀತಿ ವಿವರಿಸಬೇಕು. ಹೈದರಾಬಾದ್‌ನ ಬಾತ್ನಿ ಗೌಡ ಎಂಬ ಕುಟುಂಬವೊಂದು ಸುಮಾರು 130 ವರ್ಷಗಳಿಂದಲೂ ಅಸ್ತಮಾ ರೋಗಿಗಳಿಗೆ ‘ಮೀನಿನ ಚಿಕಿತ್ಸೆ’ಯನ್ನು, ಅದೂ ಉಚಿತವಾಗಿ ನಡೆಸಿಕೊಂಡು ಬಂದಿದ್ದು ಅದು ವಿಶ್ವವಿಖ್ಯಾತವಾಗಿದೆ. ಮೃಗಶಿರಾ ನಕ್ಷತ್ರದ ಆರಂಭಕಾಲದಲ್ಲಿ ವಿಶೇಷ (ನಿಗೂಢ) ಔಷಧವೊಂದನ್ನು ಜೀವಂತ ಮೀನಿನ ಬಾಯಲ್ಲಿ ತುರುಕಿಸಿ, ಆ ಮೀನನ್ನು ಇಡಿಯಾಗಿ ಅಸ್ತಮಾ ರೋಗಿಯ ಗಂಟಲಲ್ಲಿಳಿಸುವ ಈ ಕಾರ್ಯಕ್ರಮಕ್ಕೆ ಪ್ರತಿವರ್ಷ ಅದೇನು ನೂಕುನುಗ್ಗಲು ಗೊತ್ತೇ! ಅಸ್ತಮಾ ರೋಗಿಗಳ ಮಟ್ಟಿಗೆ ಕಾಯಿಲೆಗೆ ‘ರಾಮ’ಬಾಣ ಕೊಡುವ ಆ ಗೌಡ ಕುಟುಂಬದ ಮಹಾಶಯರೂ ‘ಚಾಪಧರ’ರು; ಏನಂತೀರಾ?

* * *

‘ರೈಲಿನಲ್ಲಿ ಚಾ ಕುಡಿದರೆ ಮಳೆ ಬರುತ್ತದೆ...’ ಎಂಬುದು ಒಂದು ಒಗಟು ಎಂದು ಹೇಳಿದರೆ ಅದರ ತಲೆ ಬುಡ ನಿಮಗೆ ಅರ್ಥವಾಗಲಿಕ್ಕಿಲ್ಲ. ಆದರೆ Trainನಲ್ಲಿ Tಕು(ಕ)ಡಿದರೆ rain ಬರುತ್ತದೆ ಎಂದು ಹೇಳಿದರೆ ಈಗ ಅರ್ಥವಾಯಿತೇ?

ಚಾ ಕೆಟಲ್‌ನದು ಇನ್ನೊಂದು. What is that starts with T, ends with T and has Tea in it ? ಉತ್ತರ: Teapot.

* * *

ಊಟ ಶುರುಮಾಡುವ ಮೊದಲು ಪರಿಸಿಂಚನ ಮಾಡಿ, ಹಸ್ತೋದಕ ಪಡೆಯುವ ಪದ್ಧತಿ. ಅದನ್ನು ‘ಅಮೃತೋಪಸ್ತರಣಮಸಿ ಸ್ವಾಹಾ’ ಎಂದು ಸ್ವೀಕರಿಸಿ ಅಮೇಲೆ ಊಟ ಮಾಡುವುದು. ಊಟದ ಕೊನೆಯಲ್ಲೂ ಮತ್ತೆ ಪವಿತ್ರ ನೀರನ್ನು ‘ಅಮೃತಾಪಿಧಾನಮಸಿ...’ ಎಂದು ಸ್ವಾಹಾಕರಿಸಿ ಕೈತೊಳೆಯುವುದು. ಈ ಎರಡು ಸಣ್ಣ ವಾಕ್ಯಗಳ ಅರ್ಥ ಅನುಕ್ರಮವಾಗಿ, ಆಹಾರಸೇವನೆಯನ್ನು ಅಮೃತದಿಂದ ಆರಂಭಿಸುತ್ತೇನೆ ಮತ್ತು ಕೊನೆಯಲ್ಲಿ ಅಮೃತದ ಒಂದು ಲೇಯರ್‌ನಿಂದ ಮುಚ್ಚುತ್ತೇನೆ ಎಂಬುದು. (ಅಂದರೆ, ನಡುವೆ ಸ್ವಲ್ಪ ಕಚಡಾ ‘ಜಂಕ್‌ ಫುಡ್‌’ ಕೂಡ ಭಕ್ಷಿಸುತ್ತೇನೆ ಎಂದು ಇನ್‌ಡೈರೆಕ್ಟಾಗಿ ಒಪ್ಪಿಕೊಂಡಂತೆ!)

ಈ ರೀತಿ ‘ಹೊರಕವಚಕ್ಕೆ ಮಾತ್ರ ಅಮೃತ, ಒಳಗೆಲ್ಲ ವಿಷ...’ ಊಟ ಮಾತ್ರವಲ್ಲದೆ ನಮ್ಮ ಬದುಕಿನ ವಿವಿಧ ಸನ್ನಿವೇಶಗಳಲ್ಲೂ ಕಂಡುಬರುತ್ತದೆ. ATMಗಳು ಬರುವ ಮೊದಲು ಬ್ಯಾಂಕಲ್ಲಿ ನೀವು ದುಡ್ಡು ಪಡೆವಾಗ ಹತ್ತರ ನೋಟುಗಳ ಬಂಡಲ್‌ನಲ್ಲಿ ಮೇಲಿನವು ಮತ್ತು ಕೆಳಗಿನವು ಮಾತ್ರ ಕೆಲವು ಗರಿಗರಿ ನೋಟುಗಳಿದ್ದು ಒಳಗೆ ಹರಕುಮುರುಕು ನೋಟುಗಳಿರುತ್ತಿರಲಿಲ್ಲವೇ? ಗಾರೆ ಕೆಲಸದ ಕಂಟ್ರಾಕ್ಟರ್‌ ಹೊರಗೆ ಚಂದ ಕಾಣುವಂತೆ ಮಾಡಿ ಒಳಗೆ ಬರೀ ಮರಳನ್ನು ತುಂಬಿಸಿ ನಿಮ್ಮನ್ನು ಮರುಳು ಮಾಡುವುದಿಲ್ಲವೇ? ಹಿಸ್ಟರಿ ಪರೀಕ್ಷೆಯಲ್ಲಿ Essay type ಪ್ರಶ್ನೆಗಳಿಗೆ ಮೊದಲ ಪ್ಯಾರಾಗ್ರಾಫ್‌ ಮಾತ್ರ ಒಳ್ಳೆಯದಾಗಿ ಬರೆದು ನಡುವೆ ಸಾಕಷ್ಟು ಸ್ವಂತದ ಸ್ಟಫ್‌ ತುರುಕಿ ಕೊನೆಯಲ್ಲಿ ಮತ್ತೆ ಕ್ರಮಬದ್ಧ ವಾಕ್ಯಗಳನ್ನು ಬರೆಯುವ ಮೇಧಾವಿಗಳಿಲ್ಲವೇ? ಆಡಿಯೋ ಕ್ಯಾಸೆಟ್‌ನ ‘ಎ’ಬದಿಯ ಮೊದಲ ಹಾಡೂ, ‘ಬಿ’ ಬದಿಯ ಕೊನೆಯ ಸಾಂಗೂ ತುಂಬ catchy ಆಗಿರುವಂತೆ ನೋಡಿಕೊಳ್ಳುವ ಆಡಿಯೋ ಕ್ಯಾಸೆಟ್‌ ಕಂಪೆನಿಗಳಿಲ್ಲವೇ?

ಇನ್ನೂ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ಹೊರಗೆ ಅಮೃತದ ಒಂದು ತೆಳು ಲೇಪನ. ಒಳಗೆ ಕೆಟ್ಟ ಕಲ್ಮಶ. ಗಾದೆಮಾತೇ ಇದೆಯಲ್ಲ , ತೋಟ ಶೃಂಗಾರ ಒಳಗೆ ಗೋಳಿಸೊಪ್ಪು!

English summary

Panchamruta !

Vchitranna-68 : panchamruta ! some infotainment blah blah about Pun, chaa, amruta etc.!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more