For Quick Alerts
ALLOW NOTIFICATIONS  
For Daily Alerts

ಕರಿಬೇವಿನ ಹಸಿ ಹಸಿ ಚಟ್ನಿ ರೆಸಿಪಿ

By Super
|
Good food : Curry leaves chutney
ಕರಿಬೇವು (curry leaf) ಬಹೂಪಯೋಗಿ. ಅದಿಲ್ಲದೆ ನಮ್ಮ ಅಡುಗೆ ಮನೆಗಳು ಭಣಭಣ. ಏನೇ ಅಡುಗೆ ಕಾರ್ಯಕ್ರಮವಿದ್ದರೂ ಚಟಪಟ ಒಗ್ಗರಣೆಗೆ ಕರಿಬೇವು ಹಾಜರಿರಲೇಬೇಕು. ಸಾಮಾನ್ಯವಾಗಿ ನಾವು ಅದನ್ನು ಒಂದು ಪೂರಕ ಸಾಮಗ್ರಿಯಾಗಿ ಬಳಸುವುದು ರೂಢಿ. ಆದರೆ ಅದನ್ನೇ ಮುಖ್ಯ ವಸ್ತು ಮಾಡಿಕೊಂಡು ಇತರ ಆರೋಗ್ಯಕರ ಅಡುಗೆ ಪದಾರ್ಥಗಳನ್ನು ತಯಾರಿಸಬಹುದು. ಈ ವಾರ ಕರಿಬೇವಿನ ಚಟ್ನಿ ಮಾಡಿದರೆ ಹೇಗೆ?

* ತೇಜಸ್ವಿನಿ ಹೆಗಡೆ, ಬೆಂಗಳೂರು.

ಕರಿಬೇವು ಅತ್ಯುತ್ತಮ ಕ್ರಿಮಿನಾಶಕ ಸಸ್ಯ ಪ್ರಬೇಧ. ಕ್ಯಾಲ್ಶಿಯಮ್ ಕೊರತೆಗೆ, ಕೊಲೆಸ್ಟ್ರಾಲ್ ಹತೋಟಿಗೆ ದಿವ್ಯೌಷಧಿ. ಪ್ರತಿದಿನ 5 ಕರಿಬೇವಿನೆಲೆಗಳ ಸೇವನೆಯಿಂದ ರಕ್ತ ಶುದ್ಧಿಯಾಗುವುದಲ್ಲದೇ ಕೊಲೆಸ್ಟ್ರಾಲ್ ಕೂಡಾ ತಹಬಂದಿಗೆ ಬರುವುದು. ಇದರ ತಂಬುಳಿಯನ್ನು ಅಜೀರ್ಣಕ್ಕೆ ಉಪಯೋಗಿಸುತ್ತಾರೆ. ಬೇವಿನ ಚಟ್ನಿಯನ್ನು ಬೆಳಗಿನ ತಿಂಡಿಯಾದ ದೋಸೆ, ಇಡ್ಲಿ, ಚಪಾತಿಯ ಜೊತೆಗೆ ಇಲ್ಲವೇ ಬಿಸಿ ಅನ್ನಕ್ಕೆ ಕಲಸಿಕೊಂಡೂ ತಿನ್ನಬಹುದು.

ಈ ಚಟ್ನಿಯನ್ನು ಹಸಿಮೆಣಸನ್ನು ಹಾಕಿಯೂ ಇಲ್ಲಾ ಕಡ್ಡಿ ಮೆಣಸನ್ನು ಬಳಸಿಯೂ ತಯಾರಿಸಬಹುದು. ಎರಡರಲ್ಲಿ ಒಂದನ್ನು ಮಾತ್ರ ಬಳಸಬೇಕು.

ಅಗತ್ಯ ಸಾಮಗ್ರಿಗಳು :

ಹಸಿಮೆಣಸನ್ನು ಬಳಸುವುದಾದರೆ - 2-3 (ತುಂಬಾ ಖಾರವಿದ್ದರೆ ಕಡಿಮೆಯೂ ಹಾಕಬಹುದು. ಖಾರಕ್ಕೆ ತಕ್ಕಂತೆ ಬಳಸುವುದು.)
ಕಡ್ಡಿಮೆಣಸನ್ನು ಬಳಸುವುದಾದರೆ 3-4
ಕರಿಬೇವಿನ ಗರಿ - 12
ಕಾಯಿ ತುರಿ - 1 ಕಪ್
ಹುಣಸೇ ಹಣ್ಣು - ರುಚಿಗೆ ತಕ್ಕಷ್ಟು (ಸಾಮಾನ್ಯವಾಗಿ ಎರಡು ಕಡಲೇ ಕಾಳಿನ ಗಾತ್ರಷ್ಟು)
ಉಪ್ಪು - ರುಚಿಗೆ ತಕ್ಕಷ್ಟು
ಇಂಗು - ಕಡಲೇ ಕಾಳಿನ ಗಾತ್ರದಷ್ಟು
ಸಾಸಿವೆ - 1/4 ಚಮಚ
ಎಣ್ಣೆ - 1-2 ಚಮಚ

ಮಾಡುವ ವಿಧಾನ :

* ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಬೇಕು.
* ಬಾಣಲೆಯಲ್ಲಿ ಎಣ್ಣೆ ಹಾಕಿ ಇಂಗು, ಮೆಣಸು(ಕಡ್ಡಿ ಅಥವಾ ಹಸಿ ಮೆಣಸು) ಹಾಗೂ ಕರಿಬೇವಿನೆಲೆಗಳನ್ನು ಹಾಕಿ ಬಾಡಿಸಿಕೊಳ್ಳಬೇಕು.
* ತಣಿದ ನಂತರ ಕಾಯಿತುರಿಯ ಜೊತೆಗೆ ಹುಳಿ ಹಾಗೂ ಉಪ್ಪನ್ನು ಹಾಕಿ ಬಾಡಿಸಿಕೊಂಡ ಮಿಶ್ರಣವನ್ನೂ ಸೇರಿಸಿ ನುಣ್ಣಗೆ ರುಬ್ಬಬೇಕು.
* ನಂತರ ಇದಕ್ಕೆ ಸಾಸಿವೆ ಒಗ್ಗರಣೆಯನ್ನು ಕೊಡಬೇಕು.

X
Desktop Bottom Promotion