For Quick Alerts
ALLOW NOTIFICATIONS  
For Daily Alerts

ಬಿಸಿಬಿಸಿ ಘಮ ಘಮ ಶುಂಠಿ-ಬೆಳ್ಳುಳ್ಳಿ ಬಾತ್

By Staff
|
Ginger-garlic rice dish recipe
ರಾತ್ರಿ ಮಾಡಿ ಉಳಿದ ಅನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ್ನ ಮಾಡಿ ಕೈತೊಳೆದುಕೊಳ್ಳುವುದು ಕರುನಾಡ ಕನ್ನಡಿಗರ ಅಡುಗೆ ಮನೆಗಳಲ್ಲಿ ಒಂದು ದೀರ್ಘ ಪರಂಪರೆ. ಆದರೆ, ಇದಕ್ಕಿಂತ ತುಸು ಭಿನ್ನವಾದದ್ದು ಪಚನಶಕ್ತಿ ವರ್ಧಿಸುವ ಶುಂಠಿ ಮತ್ತು ವಾಯುಹರ ಬೆಳ್ಳುಳ್ಳಿ ವ್ಯಾಲಂಟೈನ್ ಮಸಾಲೆ ಅನ್ನ. ಬೆಳ್ಳುಳ್ಳಿ ವಿರೋಧಿಗಳು ಬರೀ ಶುಂಠಿ ಬಳಸಿ ಮಾಡಲಿಕ್ಕಡ್ಡಿಯಿಲ್ಲ.

* ತೇಜಸ್ವಿನಿ ಹೆಗಡೆ, ಬೆಂಗಳೂರು.

ಶುಂಠಿ ಬಾತ್ ಒಂದು ದಿಢೀರನೆ ತಯಾರಿಸಬಹುದಾದ ರುಚಿಕರ ತಿನಿಸು. ತಯಾರಿಸಲು ಹೆಚ್ಚು ಸಮಯ ಹಾಗೂ ಸಾಮಗ್ರಿಗಳು ಎರಡೂ ಬೇಕಾಗಿಲ್ಲ. ಅನ್ನ ಉಳಿದಿದ್ದರೆ ಅಥವಾ ಅನ್ನ ಹೆಚ್ಚಾಗಿದ್ದರೆ ಇದನ್ನು ಮಾಡಿ ತಿನ್ನಬಹುದು. ಹೊಸ ರುಚಿಯ ಜೊತೆ ದೇಹಕ್ಕೂ ಹಿತವಾಗಿರುತ್ತದೆ. ಇದರ ತಯಾರಿಕೆಯಲ್ಲಿ ಬಳಸುವ ಬೆಳ್ಳುಳ್ಳಿ ವಾಯು ಪೀಡಿತರಿಗೆ ಉತ್ತಮ ಔಷಧಿಯಾಗಿದ್ದರೆ, ಶುಂಠಿ ಪಚನ ಕ್ರಿಯೆಯನ್ನು ಸುಲಲಿತಗೊಳಿಸಿ ಜೀರ್ಣಿಸಿಕೊಳ್ಳಲು ಸಹಕಾರಿಯಾಗಿದೆ.

ಬೆಳಗ್ಗಿನ ತಿಂಡಿಗೆ ಮಾತ್ರವಲ್ಲದೇ ಮಧ್ಯಾಹ್ನ ಹಾಗೂ ಸಂಜೆಯ ಊಟವಾಗಿಯೂ ಕುಡಾ ಈ ಶುಂಠಿ ಬಾತ್ ಸೇವಿಸಬಹುದಾಗಿದೆ. ಒಂದೊಮ್ಮೆ ಶುಂಠಿಯ ಬದಲು ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಿ ತಯಾರಿಸಿದ್ದರೆ ಅದನ್ನು ಬೆಳ್ಳುಳ್ಳಿ ಬಾತ್(Garlic Rice) ಎಂದೂ ಕರೆಯುತ್ತೇವೆ. ಮಸಾಲೆ ಜಾಸ್ತಿ ಬೇಕಾದವರು ಅನ್ನವನ್ನು ಕಡಿಮೆ ಪ್ರಮಾಣದಲ್ಲೂ, ಮಸಾಲೆ ಜಾಸ್ತಿ ಇಷ್ಟಪಡದವರು ಅನ್ನವನ್ನು ಹೆಚ್ಚಿನ ಪ್ರಮಾಣದಲ್ಲೂ ಹಾಕಬಹುದಾಗಿದೆ.

ಒಂದು ಲೋಟ ಅಕ್ಕಿಯ ಅನ್ನದ ಪ್ರಮಾಣದಲ್ಲಿ ತಯಾರಿಸುವಾಗ ಬೇಕಾಗುವ ಸಾಮಗ್ರಿಗಳು :

* ಅಕ್ಕಿ - 1 ಲೋಟ
* ಹಸಿ ಶುಂಠಿ - ಒಂದರಿಂದ ಒಂದೂವರೆ ಇಂಚು
* ಬೆಳ್ಳುಳ್ಳಿ - 10-12 ಎಸಳುಗಳು (ದೊಡ್ಡ ಗಾತ್ರದ್ದ ಎಸಳುಗಳಾಗಿದ್ದರೆ ಕಡಿಮೆಯೂ ಹಾಕಬಹುದು)
* ಲವಂಗ - 6-8
* ದಾಲ್ಚೀನಿ - 2 ಇಂಚು
* ಕಾಳು ಮೆಣಸು - 10-12 ಕಾಳುಗಳು
* ಕಾಯಿ ತುರಿ - 2 ಚಮಚ
* ತುಪ್ಪ - 4-5 ಚಮಚ (ತುಸು ಕಡಿಮೆಯೂ ಹಾಕಬಹುದು)
* ಜೀರಿಗೆ - ಒಂದರಿಂದ ಒಂದೂವರೆ ಚಮಚ
* ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

* ಮೊದಲಿಗೆ ಅನ್ನವನ್ನು ಮಾಡಿಟ್ಟುಕೊಳ್ಳಬೇಕು. ಅನ್ನ ತುಂಬಾ ಮೆತ್ತಗಾಗಬಾರದು. ಉದುರುದುರಾಗಿದ್ದರೆ ಉತ್ತಮ.
* ಶುಂಠಿ, ಬೆಳ್ಳುಳ್ಳಿ, ಲವಂಗ, ದಾಲ್ಚೀನಿ, ಕಾಳು ಮೆಣಸು ಹಾಗೂ ಕಾಯಿತುರಿ ಎಲ್ಲವನ್ನೂ ಹಸಿಯಾಗಿ ನೀರನ್ನು ಸೇರಿಸದೇ ರುಬ್ಬಬೇಕು.
* ಬಾಣಲೆಗೆ ತುಪ್ಪವನ್ನು ಹಾಕಿ ಜೀರಿಗೆಯನ್ನು ಹಾಕಬೇಕು. ಅದು ಚಟಪಟವೆನ್ನಲು ರುಬ್ಬಿಟ್ಟ ಮಿಶ್ರಣವನ್ನು ಹಾಕಿ, ಸ್ವಲ್ಪ ಸಮಯ ಪರಿಮಳ ಬರುವವರೆಗೆ ಹುರಿಯಬೇಕು.
* ಹುರಿದ ಮಿಶ್ರಣಕ್ಕೆ ಅನ್ನವನ್ನು ಹಾಕಿ, ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಬೇಕು.

ಈಗ ಬಾಯಲ್ಲಿ ನೀರೂರಿಸುವ ಘಮ್ಮೆನ್ನುವ ಶುಂಠಿ ಬಾತ್ ತಿನ್ನಲು ತಯಾರು.

Story first published: Wednesday, September 16, 2009, 17:37 [IST]
X
Desktop Bottom Promotion