For Quick Alerts
ALLOW NOTIFICATIONS  
For Daily Alerts

ಮೂರನೆಯ ತ್ರೈಮಾಸಿಕದಲ್ಲಿ ಕಾಣಬರುವ ತೊಂದರೆಗಳಿಗೆ ಹೆದರಬೇಡಿ

|

ಗರ್ಭಾವಸ್ಥೆಯ ಮೂರು ಹಂತಗಳಲ್ಲಿ ಮೂರನೆಯ ತ್ರೈಮಾಸಿಕ ಅತಿ ಹೆಚ್ಚು ಪ್ರಮುಖವಾಗಿದ್ದು ಇದು ಗರ್ಭಧಾರಣೆಯ 28ನೆಯ ವಾರದಿಂದ ಪ್ರಾರಂಭವಾಗುತ್ತದೆ. ಹೆರಿಗೆಯ ದಿನ ಈ ಅವಧಿ ಕೊನೆಗೊಂಡು ಬಾಣಂತನದ ಅವಧಿ ಪ್ರಾರಂಭವಾಗುತ್ತದೆ. ಈ ಅವಧಿ ಕೇವಲ ಗರ್ಭಿಣಿಗೆ ಮಾತ್ರವಲ್ಲ, ಕುಟುಂಬ ಸದಸ್ಯರಿಗೂ ಹಲವು ಕುತೂಹಲ ನಿರೀಕ್ಷೆಗಳ ಸಮಯವಾಗಿದೆ.

Common Pregnancy Complications during Third Trimester in Kannada

ಈ ಅವಧಿಯಲ್ಲಿ ಹೊಟ್ಟೆ ಗಣನೀಯ ಪ್ರಮಾಣಕ್ಕೆ ಹಿಗ್ಗಿರುತ್ತದೆ ಹಾಗೂ ಮಗುವಿನ ಚಲನವನ್ನೂ ಅನುಭವಿಸಬಹುದು. ಆದರೆ ಈ ಅವಧಿಯಲ್ಲಿ ಗರ್ಭವತಿಗೆ ಹಿಂದಿನ ಎರಡು ತ್ರೈಮಾಸಿಕಗಳಲ್ಲಿ ಎದುರಾಗದೇ ಇದ್ದ ಸವಾಲುಗಳೂ ಎದುರಾಗುತ್ತವೆ.

ಗರ್ಭದ ಭಾರವನ್ನು ಸರಿದೂಗಿಸಲು ಗರ್ಭಿಣಿ ಕೊಂಚ ಹಿಂದಕ್ಕೆ ವಾಲಿ ಚಲಿಸುವುದು ಈ ಸಮಯದಲ್ಲಿ ಕಾಣಬರುತ್ತದೆ. ಆದರೆ ದೇಹದ ಒಳಗೆ ಇನ್ನೂ ಹಲವಾರು ಬದಲಾವಣೆಗಳು ಎದುರಾಗುತ್ತವೆ ಹಾಗೂ ಹೊಸ ಸವಾಲುಗಳು ಮತ್ತು ತೊಂದರೆಗಳು ಎದುರಾಗುತ್ತವೆ. ಇಂದಿನ ಲೇಖನದಲ್ಲಿ ಈ ಅವಧಿಯಲ್ಲಿ ಎದುರಾಗುವ ಇಂತಹ ಸಾಮಾನ್ಯ ಹತ್ತು ತೊಂದರೆಗಳನ್ನು ವಿವರಿಸಲಾಗಿದೆ, ಬನ್ನಿ ನೋಡೋಣ:

1. ಪ್ರೀಕ್ಲಾಂಪ್ಸಿಯಾ (Preeclampsia)

1. ಪ್ರೀಕ್ಲಾಂಪ್ಸಿಯಾ (Preeclampsia)

ಗರ್ಭವತಿಗೆ ಮೂರನೆಯ ತ್ರೈಮಾಸಿಕಕ್ಕೂ ಕೆಲವು ದಿನ ಮುನ್ನವೇ ಅಂದರೆ ಗರ್ಭಧಾರಣೆಯ 20ನೇ ವಾರದ ಬಳಿಕ ಈ ಸ್ಥಿತಿಯನ್ನು ಎದುರಾಗುತ್ತದೆ. ಇದು ಒಂದು ಕ್ಲಿಷ್ಟಕರ ಸ್ಥಿತಿಯಾಗಿದ್ದು ಮತ್ತು ತಕ್ಷಣದ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯ ಅಗತ್ಯವಿದೆ. ಸರಿಯಾದ ಚಿಕಿತ್ಸೆಯನ್ನು ಈ ಸಮಯದಲ್ಲಿ ಒದಗಿಸದಿದ್ದರೆ, ಅದು ಎಕ್ಲಾಂಪ್ಸಿಯಾ (eclampsia) ಅಥವಾ ಮೈನಡುಕ, ಮೂತ್ರಪಿಂಡಗಳ ವೈಫಲ್ಯ ಮತ್ತು ವಿಪರೀತ ಸಂದರ್ಭಗಳಲ್ಲಿ, ತಾಯಿ ಮತ್ತು ಹುಟ್ಟಲಿರುವ ಮಗುವಿನ ಸಾವಿಗೂ ಕಾರಣವಾಗಬಹುದು.

ಅಧಿಕ ರಕ್ತದೊತ್ತಡ, ಮೂತ್ರದಲ್ಲಿ ಪ್ರೋಟೀನ್, ನೀರು ಉಳಿಸಿಕೊಳ್ಳುವ ಕಾರಣದಿಂದ ಕೈ ಕಾಲುಗಳು ಊದಿಕೊಳ್ಳುವುದು ಮತ್ತು ಅತಿ ಎನಿಸುವಷ್ಟು ತೂಕದಲ್ಲಿ ಹೆಚ್ಚಳ ಇವೆಲ್ಲಾ ಪ್ರೀಕ್ಲಾಂಪ್ಸಿಯಾ ಸ್ಥಿತಿಯ ಲಕ್ಷಣಗಳಾಗಿವೆ. ತೀವ್ರತರವಾದ ಪ್ರಕರಣಗಳಲ್ಲಿ, ಗರ್ಭವತಿಗೆ ತಲೆನೋವು, ದೃಷ್ಟಿ ಮಂದವಾಗುವುದು ಮತ್ತು ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಸಹಾ ಕಾಣಿಸಿಕೊಳ್ಳಬಹುದು.

ನಿಮ್ಮ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಪರಿಶೀಲಿಸಿ ವೈದ್ಯರೇ ನಿಮಗೇನು ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಬೇಕೆಂದು ನಿರ್ಧರಿಸುತ್ತಾರೆ. ಒಂದು ವೇಳೆ ನೀವು 37ನೇ ವಾರವನ್ನು ದಾಟಿದ್ದರೆ, ತಕ್ಷಣವೇ ಸಿಸೇರಿಯನ್ ಹೆರಿಗೆಗೆ ವೈದ್ಯರು ಕರೆ ನೀಡುತ್ತಾರೆ. ನೀವು 34 ವಾರ ಅಥವಾ ಅದಕ್ಕಿಂತ ಕಡಿಮೆಯ ಗರ್ಭಾವಸ್ಥೆಯಲ್ಲಿದ್ದರೆ, ಭ್ರೂಣದ ಶ್ವಾಸಕೋಶದ ಬೆಳವಣಿಗೆಯನ್ನು ತ್ವರಿತಗೊಳಿಸಲು ಸೂಕ್ತ ಔಷಧಿಗಳನ್ನು ನೀಡಲಾಗುತ್ತದೆ.

2. ಅವಧಿಪೂರ್ವ ಹೆರಿಗೆ

2. ಅವಧಿಪೂರ್ವ ಹೆರಿಗೆ

ಮೂರನೇ ತ್ರೈಮಾಸಿಕದಲ್ಲಿ ಇದು ಸಾಮಾನ್ಯ ಗರ್ಭಧಾರಣೆಯ ತೊಡಕುಗಳಲ್ಲಿ ಒಂದಾಗಿದೆ. ಗರ್ಭಧಾರಣೆಯ ಸಾಮಾನ್ಯ ಮುಕ್ತಾಯದ ಅವಧಿಗೆ ಅಂದರೆ ಸುಮಾರು 37 ವಾರಗಳಿಗೂ ಮುಂಚಿತವಾಗಿ ನೀವು ಸಂಕೋಚನವನ್ನು ಪಡೆಯಲು ಪ್ರಾರಂಭಿಸಿದಾಗ ನೀವು ಅವಧಿಪೂರ್ವ ಹೆರಿಗೆ ಪಡೆಯಲಿದ್ದೀರಿ ಎಂದು ಹೇಳಲಾಗುತ್ತದೆ.ಅನೇಕ ಗರ್ಭಧಾರಣೆಯ ಮಹಿಳೆಯರು, ಅವರ ಹಿಂದಿನ ಗರ್ಭಧಾರಣೆಯ ಅವಧಿಪೂರ್ವ ಹೆರಿಗೆಯ ಇತಿಹಾಸ ಅಥವಾ ಗರ್ಭಾಶಯ ಮತ್ತು ಗರ್ಭಕಂಠಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರು ಅಕಾಲಿಕ ಹೆರಿಗೆಯಾಗುವ ಅಪಾಯದ ಸಾಧ್ಯತೆಯನ್ನು ಹೆಚ್ಚು ಹೊಂದಿರುತ್ತಾರೆ.

ಈ ಸ್ಥಿತಿ ಎದುರಾಗುವ ಮುನ್ನ ಕೆಲವು ಲಕ್ಷಣಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ಅತಿಸಾರ, ಅತಿ ಎನಿಸುವಷ್ಟು ಮೂತ್ರ ವಿಸರ್ಜಿಸಲು ಅವಸರವಾಗುವುದು, ಕೆಳ ಬೆನ್ನಿನಲ್ಲಿ ನೋವು, ಹೊಟ್ಟೆಯ ಕೆಳಭಾಗದಲ್ಲಿ ಬಿಗಿಯಾದ ಭಾವನೆ, ಜನನಾಂಗದ ಸ್ರಾವ ಸತತವಾಗುವುದು ಹಾಗೂ ಜನನಾಂಗದ ಭಾಗದಲ್ಲಿ ಬಿಗಿತದ ಅನುಭವ ಮುಂತಾದ ಚಿಹ್ನೆಗಳೇನಾದರೂ ಇವೆಯೇ ಎಂದು ಗಮನಿಸಿ. ಕೆಲವು ಗರ್ಭವತಿಯರಿಗೆ ನೋವು ಅತಿಯಾಗಿದ್ದು ಸಂಕೋಚನ ಹಾಗೂ ಜನನಾಂಗದ ಸತತ ಸ್ರಾವವೂ ಕಂಡುಬರಬಹುದು. ಕೆಲವೊಮ್ಮೆ, ವೈದ್ಯರು ಅಕಾಲಿಕ ಹೆರಿಗೆಯಾಗುವುದನ್ನು ತಡೆಗಟ್ಟಲು ಮೆಗ್ನೀಸಿಯಮ್ ಸಲ್ಫೇಟ್ ಇರುವ ಔಷಧಿಗಳನ್ನು ಸೂಚಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ಗರ್ಭಧಾರಣೆಯ 34 ನೇ ವಾರಕ್ಕೂ ಮೊದಲು ಹೆರಿಗೆಯಾಗುವ ಲಕ್ಷಣಗಳು ಕಂಡುಬಂದರೆ ಭ್ರೂಣದ ಶ್ವಾಸಕೋಶದ ಬೆಳವಣಿಗೆಯನ್ನು ತ್ವರಿತಗೊಳಿಸಲು ಗರ್ಭಿಣಿ ಮಹಿಳೆಗೆ ಸ್ಟೀರಾಯ್ಡ್ ಔಷಧಿಗಳನ್ನೂ ನೀಡಲಾಗುತ್ತದೆ.

3. ಗರ್ಭಾಶಯದೊಳಗಿನ ಬೆಳವಣಿಗೆಯ ನಿರ್ಬಂಧ (Intrauterine Growth Restriction)

3. ಗರ್ಭಾಶಯದೊಳಗಿನ ಬೆಳವಣಿಗೆಯ ನಿರ್ಬಂಧ (Intrauterine Growth Restriction)

ಅತಿ ಅಪರೂಪದ ಸಂದರ್ಭಗಳಲ್ಲಿ, ಭ್ರೂಣವು ಬೆಳವಣಿಗೆಯನ್ನು ಪಡೆಯದೇ ಇದ್ದ ಹಾಗೇ ಇರುವುದನ್ನುಕಾಣಬಹುದು. ಈ ಸ್ಥಿತಿಯನ್ನು ಗರ್ಭಾಶಯದೊಳಗಿನ ಬೆಳವಣಿಗೆಯ ನಿರ್ಬಂಧ (IUGR) ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಆನುವಂಶಿಕ ಕಾರಣಗಳಿಂದಾಗಿ ಅತಿ ಚಿಕ್ಕ ಗಾತ್ರದ ಶಿಶುಗಳು ಜನಿಸಬಹುದು.

ಶಿಶುಗಳಲ್ಲಿ IUGR ಎದುರಾಗಲು ಕೆಲವಾರು ಕಾರಣಗಳಿರಬಹುದು - ಮಧುಮೇಹ, ರಕ್ತಹೀನತೆ, ಅಪೌಷ್ಟಿಕತೆ, ಮೂತ್ರಪಿಂಡದ ತೊಂದರೆಗಳು, ಗರ್ಭವತಿಗೆ ಇರುವ ಅಧಿಕ ರಕ್ತದೊತ್ತಡದ ಮಟ್ಟಗಳು ಇವುಗಳಲ್ಲಿ ಕೆಲವು ಕಾರಣಗಳು. ಭ್ರೂಣವು ತಾಯಿಯ ಗರ್ಭದಲ್ಲಿ ಬೆಳೆಯುವುದನ್ನು ನಿಲ್ಲಿಸಿದರೆ ತಕ್ಷಣವೇ ಸಿಸರೇನಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡುವಂತೆ ವೈದ್ಯರು ಶಿಫಾರಸ್ಸು ಮಾಡುತ್ತಾರೆ.

4. ಜರಾಯುವಿನ ಅಡೆತಡೆ (Placental Abruption)

4. ಜರಾಯುವಿನ ಅಡೆತಡೆ (Placental Abruption)

ಕೆಲವು ಅಪರೂಪದ ಸಂದರ್ಭಗಳಲ್ಲಿ, ಹೆರಿಗೆಯಾಗುವ ಮುನ್ನವೇ ಜರಾಯು ಮತ್ತು ಗರ್ಭಾಶಯಗಳು ಪ್ರತ್ಯೇಕಗೊಳ್ಳುತ್ತವೆ. ಅಂದರೆ ಜರಾಯು ಗರ್ಭಕೋಶದಿಂದ ಕಳಚಿಕೊಳ್ಳುತ್ತದೆ ಈ ಸ್ಥಿತಿಯನ್ನು ಜರಾಯು ಅಡೆತಡೆ (Placental Abruption) ಎಂದು ಕರೆಯಲಾಗುತ್ತದೆ. ಇದು ತಾಯಿಯ ಗರ್ಭದೊಳಗೇ ಮಗು ಸಾಯುವ ಅತ್ಯಂತ ಗಂಭೀರ ಸ್ಥಿತಿಯಾಗಿದೆ. ಇದು ತೀವ್ರವಾದ ಜನನಾಂಗದ ರಕ್ತಸ್ರಾವ, ಹೊಟ್ಟೆ ನೋವು ಮತ್ತು ಸಂಕೋಚನವನ್ನು ಉಂಟುಮಾಡುತ್ತದೆ ಮತ್ತು ದೇಹವು ಆಘಾತಕ್ಕೂ ಒಳಗಾಗಬಹುದು.

ಈ ಸ್ಥಿತಿಗೆ ನಿಖರವಾದ ಕಾರಣ ಇದುವರೆಗೆ ತಿಳಿದಿಲ್ಲವಾದರೂ, ಜರಾಯುವಿಗೆ ಅಡ್ಡಿಪಡಿಸುವ ಅಪಾಯವನ್ನು ಹೆಚ್ಚಿಸುವ ಅಂಶಗಳು ಮಧುಮೇಹ, ಮದ್ಯಪಾನ ಮತ್ತು ಧೂಮಪಾನ, ಅಧಿಕ ರಕ್ತದೊತ್ತಡ, ಅವಳಿ ಗರ್ಭಧಾರಣೆ, ಸಣ್ಣ ಹೊಕ್ಕುಳಬಳ್ಳಿ, ಮಾದಕ ದ್ರವ್ಯ ಸೇವನೆ, ಗರ್ಭವತಿಯ ಹೆಚ್ಚಿನ ವಯಸ್ಸು, ಮತ್ತು ಹೆಚ್ಚುವರಿ ಆಮ್ನಿಯೋಟಿಕ್ ದ್ರವದಿಂದಾಗಿ ಗರ್ಭಾಶಯದ ಗೋಡೆಯ ಉಬ್ಬುವಿಕೆ ಮೊದಲಾದ ಕಾರಣಗಳಿರಬಹುದು ಎಂದು ವೈದ್ಯರು ಅನುಮಾನಿಸುತ್ತಾರೆ.

ಈ ಸ್ಥಿತಿಗೆ ಒಳಗಾಗಿ ಬಳಲುತ್ತಿರುವ ಗರ್ಭವತಿಯನ್ನು ತಕ್ಷಣವೇ ಸಿಸರೇನಿಯನ್ ಅಥವಾ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ನಿರ್ಧಾರವನ್ನು ವೈದ್ಯರು ಕೈಗೊಳ್ಳುತ್ತಾರೆ. ಜನನಾಂಗದಿಂದ ಅತಿಯಾದ ರಕ್ತಸ್ರಾವ ಕಾಣಿಸಿಕೊಳ್ಳುವ ಕಾರಣ ಅತಿಯಾದ ರಕ್ತದ ನಷ್ಟವಾಗುತ್ತದೆ ಹಾಗೂ ಈ ಸಂದರ್ಭದಲ್ಲಿ ತಕ್ಷಣವೇ ಗರ್ಭಿಣಿಗೆ ರಕ್ತದಾನದ ಮೂಲಕ ರಕ್ತವನ್ನು ಒದಗಿಸಬೇಕಾಗುತ್ತದೆ.

5. ಜರಾಯು ಪ್ರಿವಿಯಾ (Placenta Previa)

5. ಜರಾಯು ಪ್ರಿವಿಯಾ (Placenta Previa)

ಗರ್ಭದಲ್ಲಿರುವ ಮಗುವಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಈ ಜರಾಯುವಿನಿಂದಲೇ ಬರುತ್ತವೆ. ಮಗು ಜನಿಸಿದ ನಂತರ ಜರಾಯು ಪೂರ್ಣವಾಗಿ ಕಳಚಿ ಹೊರಬರುತ್ತದೆ, ಬರಲೇಬೇಕು. (ವೈದ್ಯರು ಈ ಸ್ಥಿತಿಯನ್ನು ಎರಡನೇ ಹೆರಿಗೆ ಎಂದೂ ಕರೆಯುತ್ತಾರೆ) ಅಪರೂಪದ ಸಂದರ್ಭಗಳಲ್ಲಿ ಈ ಕಳಚಿದ ಜರಾಯು ಮಗು ಹೊರಬರುವ ಮುನ್ನವೇ ಹೊರಬರುವ ಮೂಲಕ ಗರ್ಭಕಂಠವನ್ನು ತೆರೆಯುವುದಕ್ಕೆ ಅಡ್ಡಿಯಾಗಿ ಮಗುವಿನ ಜನನಕ್ಕೆ ಅಡ್ಡಿಯುಂಟು ಮಾಡುತ್ತದೆ.

ಹಿಂದಿನ ಬಾರಿ ಸಿಸರೇನಿಯನ್ ಹೆರಿಗೆಯಿಂದ ಮಗುವನ್ನು ಪಡೆದಿದ್ದ ಮಹಿಳೆಯರು, ಗರ್ಭಾಶಯದ ಶಸ್ತ್ರಚಿಕಿತ್ಸೆಯನ್ನು ಹೊಂದಿರುವ ಮಹಿಳೆಯರಲ್ಲಿ ಈ ಜರಾಯು ಸಾಮಾನ್ಯಕ್ಕಿಂತಲೂ ಅತಿ ಎನಿಸುವಷ್ಟು ದೊಡ್ಡ ಗಾತ್ರದ ಜರಾಯು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಧೂಮಪಾನ ಮಾಡುವ ಮಹಿಳೆಯರಲ್ಲಿಯೂ ಸಹ ಈ ಸ್ಥಿತಿಗೆ ಹೆಚ್ಚು ಕಾಣಬರುತ್ತದೆ. ಅತಿಯಾದ ರಕ್ತಸ್ರಾವವಾಗಿದ್ದರೆ ಅದು ಮಾರಕವೆಂದು ಸಾಬೀತುಪಡಿಸಬಹುದು.

ಈ ಸ್ಥಿತಿಯ ಸಾಮಾನ್ಯ ಲಕ್ಷಣವೆಂದರೆ ಇದ್ದಕ್ಕಿದ್ದಂತೆ ಯಾವುದೇ ನೋವು ಇಲ್ಲದೆ ಭಾರೀ ರಕ್ತಸ್ರಾವ. ಈ ಸಂದರ್ಭದಲ್ಲಿ ರಕ್ತವು ಅತಿ ಗಾಢ ಕೆಂಪು ಬಣ್ಣದ್ದಾಗಿರುತ್ತದೆ. ಸಾಮಾನ್ಯವಾಗಿ ಈ ಸ್ಥಿತಿ ಗರ್ಭಧಾರಣೆಯ 28 ನೇ ವಾರದ ನಂತರ ಪ್ರಾರಂಭವಾಗುತ್ತದೆ.

ರಕ್ತಸ್ರಾವವು ಕಡಿಮೆಯಾಗಿದ್ದರೆ ಅಥವಾ ನಿಲ್ಲಿಸಿದರೆ, ತಕ್ಷಣದ ಹೆರಿಗೆಯನ್ನು ತಪ್ಪಿಸಬಹುದು; ಇಲ್ಲದಿದ್ದರೆ, ತಕ್ಷಣವೇ ಸಿಸರೇನಿಯನ್ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.

6. ನಿದ್ರಾಹೀನತೆ

6. ನಿದ್ರಾಹೀನತೆ

ಕೆಲವು ಗರ್ಭಿಣಿಯರಿಗೆ ಗರ್ಭಧಾರಣೆಗೂ ಹಿಂದಿನ ದಿನಗಳಲ್ಲಿ ಇರದಿದ್ದ ನಿದ್ರಾಹೀನತೆ ಈಗ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚಿನವರಿಗೆ, ಮೂರನೇ ತ್ರೈಮಾಸಿಕದಲ್ಲಿ ಗರ್ಭಾವಸ್ಥೆಯಲ್ಲಿ ನಿದ್ರೆಯ ತೊಂದರೆಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ. ಗರ್ಭಧಾರಣೆಯ ಕೊನೆಯ ಹಂತದಲ್ಲಿ ಅನೇಕ ಮಹಿಳೆಯರಿಗೆ ಸಾಕಷ್ಟು ಗಾಢ ನಿದ್ರೆ ಪಡೆಯಲು ಸಾಧ್ಯವಾಗುವುದಿಲ್ಲ.

ನಿದ್ದೆಯಿಲ್ಲದ ರಾತ್ರಿಗಳಿಗೆ ಮೊದಲ ಕಾರಣವೆಂದರೆ ಉಬ್ಬಿರುವ ಹೊಟ್ಟೆ, ಇದು ಗರ್ಭಿಣಿಯರಿಗೆ ಆರಾಮದಾಯಕ ಭಂಗಿಯಲ್ಲಿ ಮಲಗಲು ಮತ್ತು ಆರಾಮವಾಗಿ ತಿರುಗಲು ಕಷ್ಟವಾಗುತ್ತದೆ.

ಮತ್ತೊಂದು ಪ್ರಮುಖ ಕಾರಣವೆಂದರೆ ಈಸ್ಟ್ರೊಜೆನ್ ರಸದೂತವು ಕೊನೆಯ ತ್ರೈಮಾಸಿಕದಲ್ಲಿ ಹೆಚ್ಚು ಸ್ರವಿಸುತ್ತದೆ ಹಾಗೂ ಇದರ ಪರಿಣಾಮಗಳೂ ಪ್ರಬಲವಾಗಿಯೇ ಇರುತ್ತವೆ. ಇವುಗಳನ್ನು ಹೊರತುಪಡಿಸಿ, ವಿಶ್ರಾಂತಿ ಪಡೆಯುವಾಗ ಭ್ರೂಣದ ನಿರಂತರ ಚಲನೆ ಅಥವಾ ಸತತವಾಗಿ ಮೂತ್ರವಿಸರ್ಜನೆಗೆ ಅವಸರವಾಗುವುದೂ ಮಹಿಳೆಯರನ್ನು ಆಗಾಗ್ಗೆ ಎಚ್ಚರವಾಗಿಸುತ್ತಾ ಇರುತ್ತದೆ.

ನಿದ್ದೆ ಬರುತ್ತಿಲ್ಲ ಎಂದು ಗರ್ಭಿಣಿಯರು ನಿದ್ದೆಯ ಮಾತ್ರೆಗಳನ್ನು ತೆಗೆದುಕೊಳ್ಳದಿರುವುದೇ ಲೇಸು. ಆದ್ದರಿಂದ, ಗರ್ಭಾವಸ್ಥೆಯಲ್ಲಿ ನಿದ್ರಾಹೀನತೆಯಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಮನಸ್ಸನ್ನು ವಿಶ್ರಾಂತಿ ಪಡೆಯಲು ನಿದ್ರೆಗೆ ಹೋಗುವ ಮುನ್ನ ಧ್ಯಾನ ಮಾಡಬಹುದು, ಅಥವಾ ಮನಸ್ಸಿಗೆ ಮುದ ನೀಡುವ ಹಿತವಾದ ಸಂಗೀತವನ್ನು ಕೇಳಬಹುದು ಅಥವಾ ಲ್ಯಾವೆಂಡರ್, ಕ್ಯಾಮೊಮೈಲ್ ಅಥವಾ ಶ್ರೀಗಂಧದಂತಹ ಕೆಲವು ಅವಶ್ಯಕ ತೈಲಗಳೊಂದಿಗೆ ಮಸಾಜ್ ಪಡೆಯಬಹುದು. ಅವರು ತಮ್ಮ ಎಡಭಾಗಕ್ಕೆ ತಿರುಗಿ ತಮ್ಮ ದೇಹದ ಬೆಂಬಲ ಮತ್ತು ಸೌಕರ್ಯವನ್ನು ಒದಗಿಸಲು ಕೆಲವು ದಿಂಬುಗಳನ್ನು ತಮ್ಮ ಕಾಲುಗಳ ನಡುವೆ ಮತ್ತು ಹೊಟ್ಟೆಯ ಕೆಳಗೆ ಇರಿಸಿಕೊಂಡು ಮಲಗಿದರೆ ಸಾಕಷ್ಟು ನಿದ್ದೆ ಪಡೆಯಬಹುದು.

7. ಉಸಿರಾಟದ ತೊಂದರೆಗಳು

7. ಉಸಿರಾಟದ ತೊಂದರೆಗಳು

ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ ಉಸಿರಾಟದ ತೊಂದರೆಗಳು ಮುಖ್ಯವಾಗಿ ಗರ್ಭಾಶಯದ ವಿಸ್ತರಣೆಯಿಂದಾಗಿ ಎದುರಾಗುತ್ತದೆ. ಗರ್ಭಾಶಯವು ಉಬ್ಬಿದಷ್ಟೂ, ಶ್ವಾಸಕೋಶವು ವಿಸ್ತರಿಸಲು ಲಭಿಸುವ ಸ್ಥಳಾವಕಾಶ ಕಡಿಮೆಯಾವುದೇ ಇದಕ್ಕೆ ಕಾರಣ, ಇದರಿಂದಾಗಿ ಮಹಿಳೆಗೆ ಉಸಿರಾಡಲು ಕಷ್ಟವಾಗುತ್ತದೆ. ತಲೆ ಮತ್ತು ಭುಜಗಳನ್ನು ಹೆಚ್ಚು ದಿಂಬುಗಳಿಂದ ಕೊಂಚ ಮೇಲಕ್ಕಿರಿಸುವ ಮೂಲಕ ಇದನ್ನು ಆದಷ್ಟೂ ಮಟ್ಟಿಗೆ ಕಡಿಮೆ ಮಾಡಬಹುದು.

8. ಗರ್ಭಾವಸ್ಥೆಯ ಮಧುಮೇಹ

8. ಗರ್ಭಾವಸ್ಥೆಯ ಮಧುಮೇಹ

ಗರ್ಭಾವಸ್ಥೆಯಲ್ಲಿ, ಹಾರ್ಮೋನುಗಳ ಬದಲಾವಣೆಯಿಂದ ದೇಹವು ಇನ್ಸುಲಿನ್ ಅನ್ನು ಸಮರ್ಥವಾಗಿ ಬಳಸಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ, ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೆಚ್ಚಾಗುತ್ತದೆ. ಈ ಸ್ಥಿತಿ ತಾತ್ಕಾಲಿಕವಾಗಿದ್ದು ಹೆರಿಗೆಯ ಬಳಿಕ ಬಾಣಂತನದ ಅವಧಿಯಲ್ಲಿ ತನ್ನಿಂತಾನೇ ಸರಿಯಾಗುತ್ತದೆ. ಇದು ತಾಯಿಗೆ ಯಾವುದೇ ಅಪಾಯವನ್ನುಂಟುಮಾಡುವುದಿಲ್ಲವಾದರೂ, ಒಳಗೆ ಬೆಳೆಯುತ್ತಿರುವ ಭ್ರೂಣಕ್ಕೆ ಇದು ಅಪಾಯಕಾರಿಯಾಗಬಹುದು. ಈ ಸ್ಥಿತಿಯು ಭ್ರೂಣದ ಅತಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ, ಇದು ಸಿಸೇರಿಯನ್ ಹೆರಿಗೆಯ ಅಗತ್ಯತೆಯನ್ನು ಹೆಚ್ಚು ಖಾತರಿಪಡಿಸುತ್ತದೆ. ಗರ್ಭಾವಸ್ಥೆಯ ಮಧುಮೇಹವನ್ನು ತಡೆಗಟ್ಟಲು ಅಥವಾ ಎದುರಿಸಲು ಏಕೈಕ ಮಾರ್ಗವೆಂದರೆ ಗರ್ಭವತಿ ತನ್ನ ದೈನಂದಿನ ಆಹಾರಕ್ರಮ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು.

9. ಖಿನ್ನತೆ

9. ಖಿನ್ನತೆ

ನಿದ್ರಾಹೀನತೆಯಂತೆ, ನಿಮ್ಮ ಗರ್ಭಧಾರಣೆಯ ಆರಂಭಿಕ ದಿನಗಳಿಂದಲೇ ಖಿನ್ನತೆ ಕಾಣಿಸಿಕೊಳ್ಳಬಹುದು. ಆದರೂ, ಹೆಚ್ಚಿನ ತಾಯಂದಿರು ಇದನ್ನು ಮೂರನೇ ತ್ರೈಮಾಸಿಕದಿಂದ ಹೆಚ್ಚಾಗಿ ಅನುಭವಿಸಲು ಪ್ರಾರಂಭಿಸುತ್ತಾರೆ, ಮತ್ತು ಅನೇಕರಿಗೆ, ಇದು ಹೆರಿಗೆಯ ಬಳಿಕವೂ ಮುಂದುವರೆಯಬಹುದು. ಇದು ಪ್ರಾಥಮಿಕವಾಗಿ ಹಾರ್ಮೋನುಗಳ ಬದಲಾವಣೆಯ ಪರಿಣಾಮವಾಗಿದೆ. ಪ್ರಸವಪೂರ್ವ ಖಿನ್ನತೆಯು ಮಗುವಿನ ಕಡಿಮೆ ಜನನ ತೂಕಕ್ಕೆ ಕಾರಣವಾಗಬಹುದು ಏಕೆಂದರೆ ತಾಯಿಗೆ ಹಸಿವು ಕಡಿಮೆಯಾಗಬಹುದು ಮತ್ತು ಸಾಕಷ್ಟು ವಿಶ್ರಾಂತಿ ಇಲ್ಲದ ಕಾರಣ ತೀವ್ರ ಬಳಲಿಕೆಯಿಂದ ಬಳಲುತ್ತಾರೆ. ಇದು ಖಿನ್ನತೆಗೆ ಮುಖ್ಯ ಕಾರಣವಾಗಿದೆ.

ಗರ್ಭಾವಸ್ಥೆಯಲ್ಲಿ ಖಿನ್ನತೆ-ಶಮನಕಾರಿ ಔಷಧಿಗಳನ್ನು ತೆಗೆದುಕೊಳ್ಳುವುದು ಅಪಾಯಕರ; ಬದಲಾಗಿ, ಧ್ಯಾನ ಮತ್ತು ಪ್ರಸವಪೂರ್ವ ಯೋಗದ ಮೂಲಕ ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನೀವು ಉತ್ತಮ ಮತ್ತು ಸಕಾರಾತ್ಮಕ ಪುಸ್ತಕಗಳನ್ನು ಸಹ ಓದಬಹುದು ಮತ್ತು ನಿಮ್ಮನ್ನು ಶಾಂತಗೊಳಿಸಲು ಹಿತವಾದ ಸಂಗೀತವನ್ನೂ ಆಲಿಸಬಹುದು.

10. ನರಗೊಳಗೆ ರಕ್ತ ಹೆಪ್ಪುಗಟ್ಟುವುದು (Deep Vein Thrombosis)

10. ನರಗೊಳಗೆ ರಕ್ತ ಹೆಪ್ಪುಗಟ್ಟುವುದು (Deep Vein Thrombosis)

ಮೂರನೆಯ ತ್ರೈಮಾಸಿಕದಲ್ಲಿ ಕಾಲುಗಳು ಊದಿಕೊಳ್ಳುವುದು ಸಾಮಾನ್ಯವಾಗಿದೆ ಆದರೆ ಇದು ನಿಮಗೆ ನೋವನ್ನುಂಟುಮಾಡುತ್ತದೆಯೇ? ಉತ್ತರ ಹೌದು ಎಂದಾದರೆ, ನೀವು ನರಗೊಳಗೆ ರಕ್ತ ಹೆಪ್ಪುಗಟ್ಟುವುದು (DVT) ಯಿಂದ ಬಳಲುತ್ತಿರಬಹುದು. ಈ ಸ್ಥಿತಿಯಲ್ಲಿ, ರಕ್ತನಾಳದ ಒಳಗಿನ ಯಾವುದೋ ಭಾಗದಲ್ಲಿ ಕೊಂಚ ರಕ್ತ ಹೆಪ್ಪುಗಟ್ಟಿ ಕವಲು ಅಥವ ನರದ ತಿರುವು ಇರುವಲ್ಲಿ ಅಡ್ಡನಿಂತು ತಡೆಯನ್ನು ರೂಪಿಸುತ್ತದೆ (lesion). ಈ ತಡೆಗಳು ದೊಡ್ಡದಾಗಿದ್ದರೆ ಅವು ರಕ್ತದ ಪರಿಚಲನೆಗೆ ಅಡ್ಡಿಯುಂಟು ಮಾಡುತ್ತವೆ. (DVT)ಯ ಯಾವುದೇ ಲಕ್ಷಣಗಳು (ನೋವು, ಚರ್ಮ ಕೆಂಪಗಾಗುವುದು ಅಥವಾ ಕಾಲಿನ ಬಣ್ಣ ಬದಲಾಗುವುದು, ಅಥವಾ ಉಷ್ಣತೆಯ ಭಾವನೆ) ಕಂಡುಬಂದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಗರ್ಭಾವಸ್ಥೆಯಲ್ಲಿಯೂ ಸಹ ಇದನ್ನು ಔಷಧಿಗಳೊಂದಿಗೆ ಚಿಕಿತ್ಸೆ ನೀಡಬಹುದು.

ಮೂರನೆಯ ತ್ರೈಮಾಸಿಕವು ನಿರ್ಣಾಯಕವಾಗಿದೆ ಮತ್ತು ಇದು ನಿಮಗೆ ಮತ್ತು ನಿಮ್ಮ ಹುಟ್ಟಲಿರುವ ಮಗುವಿಗೆ ಸವಾಲಿನ ಸಮಯವಾಗಿರುತ್ತದೆ. ಆದರೆ ಇದರ ಬಗ್ಗೆ ಆತಂಕಕ್ಕೆ ಒಳಗಾಗುವ ಕಾರಣವಿಲ್ಲ. ಮಾನಸಿಕ ಒತ್ತಡ ನಿಮ್ಮ ಗರ್ಭಧಾರಣೆಯ ತೊಂದರೆಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಹೇಗಾದರೂ, ಮೇಲಿನ ಯಾವುದೇ ಪರಿಸ್ಥಿತಿಗಳ ಲಕ್ಷಣಗಳನ್ನು ನೀವು ಅನುಭವಿಸಿದರೆ, ತಕ್ಷಣ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ. ನಿಮಗೆ ಅತಿ ಚಿಕ್ಕ ಅಥವಾ ಪ್ರಮುಖವಲ್ಲ ಎನಿಸುವ ಯಾವುದೇ ತೊಂದರೆ ಅಥವಾ ಅನುಭವವನ್ನೂ ವೈದ್ಯರಿಗೆ ತಿಳಿಸಿ. ಇದು ಮುಖ್ಯವೋ ಅಲ್ಲವೋ ಎಂಬುದನ್ನು ವೈದ್ಯರೇ ನಿರ್ಧರಿಸಲಿ. ಸಾಮಾನ್ಯವಾಗಿ ಕೆಲವು ಗರ್ಭಿಣಿಯರು ಮಾನಸಿಕ ತೊಳಲಾಟದಿಂದ ಮುಖ್ಯ ವಿಷಯಗಳನ್ನೂ ವೈದ್ಯರಿಗೆ ಹೇಳುವುದನ್ನು ಮರೆತು ಬಿಡುತ್ತಾರೆ ಮತ್ತು ಮುಂದಿನ ಬಾರಿ ಈ ಸ್ಥಿತಿ ಉಲ್ಬಣಗೊಂಡಾಗ ವೈದ್ಯರಿಂದ ಬೈಸಿಕೊಳ್ಳುತ್ತಾರೆ. ಆದ್ದರಿಂದ ನಿಮಗೆ ಕಾಣಬರುವ ಯಾವುದೇ ತೊಂದರೆಗಳ ಬಗ್ಗೆ ಕ್ಷಿಪ್ರವಾಗಿ ಒಂದೆಡೆ ಬರೆದಿಟ್ಟುಕೊಳ್ಳಿ ಅಥವಾ ಮೊಬೈಲಿನಲ್ಲಿ ದಾಖಲಿಸಿ. ವೈದ್ಯರು ಬಂದಾಗ ಈ ವಿಷಯಗಳು ನೆನಪಾಗಲು ಈ ವಿವರಗಳು ನೆರವಾಗುತ್ತವೆ.

ಶುಭವಾಗಲಿ, ನಿಮ್ಮ ಹೆರಿಗೆ ಸುಖಕರವಾಗಿರಲಿ ಹಾಗೂ ತಾಯ್ತನದ ದಿನಗಳು ಸಂತೋಷದಿಂದ ಕೂಡಿರಲಿ ಎಂದು ಹಾರೈಸುತ್ತೇವೆ.

English summary

Common Pregnancy Complications during Third Trimester in Kannada

Here we are discussing about Common Pregnancy Complications during Third Trimester in Kannada. However, it does bring with it its share of some major pregnancy-related problems. Here is an article to tell you all about pregnancy problems that women may face in their third trimester. Read more.
X
Desktop Bottom Promotion