For Quick Alerts
ALLOW NOTIFICATIONS  
For Daily Alerts

ಹೆರಿಗೆ ಬಳಿಕ ನೈಸರ್ಗಿಕವಾಗಿ ನಿಮ್ಮ ದೇಹವನ್ನು ಮೊದಲಿನ ಆಕಾರದಲ್ಲಿ ಪಡೆಯುವುದು ಹೇಗೆ?

|

ತಾಯಿಯಾಗುವ ಅನುಭವಕ್ಕೆ ಜಗತ್ತಿನ ಯಾವುದೇ ಅನುಭವ ಸಾಟಿಯಲ್ಲ. ತಾಯ್ತನದ ಒಂಭತ್ತು ತಿಂಗಳು ಮತ್ತು ಬಾಣಂತನದ ಮುಂದಿನ ಕೆಲವಾರು ತಿಂಗಳು ಆಕೆಯ ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ ಹಾಗೂ ಸ್ವಾಭಾವಿಕವಾಗಿಯೇ ಮೊದಲಿನ ಆಕಾರವೂ ಬದಲಾಗುತ್ತದೆ. ಹೆರಿಗೆಯ ಬಳಿಕ ದೇಹ ಕಳೆದುಕೊಂಡಿದ್ದ ಶಕ್ತಿಯನ್ನು ಮರುಪಡೆಯಲು ಹಾಗೂ ಶಿಶುವಿಗೆ ಉತ್ತಮ ಪ್ರಮಾಣದ ಹಾಲೂಡಿಸಲು ಪೌಷ್ಟಿಕ ಆಹಾರವನ್ನು ಸೇವಿಸಬೇಕಾಗುತ್ತದೆ. ಅಲ್ಲದೇ ಹೆರಿಗೆಯ ಬಳಿಕ ಹಿಂದಿನ ಋತುಚಕ್ರಕ್ಕೆ ಮರಳಲು ದೇಹದಲ್ಲಿ ಹಲವಾರು ಬಗೆಯ ರಸದೂತಗಳೂ ಸ್ರವಿಸಲ್ಪಡುತ್ತವೆ. ಪರಿಣಾಮವಾಗಿ ದೈಹಿಕ ಬದಲಾವಣೆಗಳ ಸಹಿತ ಮಾನಸಿಕ ಪರಿಣಾಮಗಳೂ, ಭಾವನಾತ್ಮಕ ಬದಲಾವಣೆಗಳೂ ಕಂಡುಬರುತ್ತವೆ.

ನೈಸರ್ಗಿಕ ವಿಧಾನ ದೀರ್ಘಕಾಲಕ್ಕೆ ಆರೋಗ್ಯಕರ

ನೈಸರ್ಗಿಕ ವಿಧಾನ ದೀರ್ಘಕಾಲಕ್ಕೆ ಆರೋಗ್ಯಕರ

ಬಾಣಂತನದ ಅವಧಿಯಲ್ಲಿ ತಾಯಿಯ ದೇಹ ಗರ್ಭಾವಸ್ಥೆಗೂ ಹಿಂದಿನ ಸ್ಥಿತಿಗೆ ಮರಳಲು ಸಾಕಷ್ಟು ಸಮಯ ಬೇಕಾಗುತ್ತದೆ ಹಾಗೂ ಗರ್ಭಾವಸ್ಥೆಯಲ್ಲಿ ಹೆಚ್ಚಿದ್ದ ತೂಕ ಈಗ ನಿಧಾನವಾಗಿ ಹಿಮ್ಮೆಟ್ಟಲು ಆರಂಭಿಸುತ್ತದೆ. ಪ್ರತಿ ತಾಯಿಯ ದೇಹ ಪ್ರಕೃತಿಯೂ ಕೊಂಚ ಭಿನ್ನವೇ ಆದ ಕಾರಣ ಆಹಾರ, ವಾತಾವರಣ, ಮಾನಸಿಕ ಸ್ಥಿತಿಯನ್ನನುಸರಿಸಿ ಹಿಮ್ಮೆಟ್ಟುವ ಸಮಯವೂ ಕೊಂಚ ಬದಲಾಗಬಹುದು. ಹಾಗಾಗಿ ಈ ಸಮಯದಲ್ಲಿ ಹಿಂದಿನ ಆಕಾರ ಪಡೆಯಲು ಎಂದಿಗೂ ದೇಹವನ್ನು ದಂಡಿಸಬಾರದು, ನಿಸರ್ಗಕ್ಕೆ ತಾನೇ ತಾನಾಗಿ ಸಹಜ ಆರೋಗ್ಯದ ಕಾಯ ಪಡೆಯುವಂತಾಗಲು ಸಮಯಾವಕಾಶ ಹಾಗೂ ಸೂಕ್ತ ಪೋಷಣೆಯನ್ನು ಒದಗಿಸಬೇಕು ಹಾಗೂ ಮುಖ್ಯವಾಗಿ ದೇಹಕ್ಕೆ ಮತ್ತು ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ನೀಡಬೇಕು.

ಕೆಲವರಿಗೆ ಹೆರಿಗೆಯ ಬಳಿಕ ಬದಲಾದ ತಮ್ಮ ದೇಹದ ಗಾತ್ರ ಆದಷ್ಟೂ ಬೇಗನೇ ಹಿಂದಿನ ಸ್ಥಿತಿ ತಲುಪಬೇಕೆಂಬ ಆತುರವಿರುತ್ತದೆ. ಆದರೆ ಈ ಆತುರ ನಿಮ್ಮ ಮತ್ತು ನಿಮ್ಮ ನವಜಾತ ಮಗುವಿನ ಆರೋಗ್ಯಕ್ಕೆ ಮಾರಕವಾಗಬಲ್ಲುದು. ಏಕೆಂದರೆ ಈ ನಿಟ್ಟಿನಲ್ಲಿ ನಡೆಸುವ ಪ್ರಯತ್ನಗಳು ರಸದೂತಗಳ ಪ್ರಮಾಣ ಮತ್ತು ಸ್ರವಿಸುವ ಸಮಯವನ್ನು ಏರುಪೇರಾಗಿಸಿ ಆರೋಗ್ಯವನ್ನು ಬಿಗಡಾಯಿಸಬಲ್ಲುದು.

ಸತತ ಒಂಭತ್ತು ತಿಂಗಳ ಕಾಲ ಹಲವಾರು ಬದಲಾವಣೆಗಳಿಗೆ ಒಳಗಾದ ನಿಮ್ಮ ದೇಹ ಏಕಾಏಕಿ ತೆಳ್ಳಗಾಗಬೇಕೆಂದರೆ ಹೇಗೆ? ಹಾಗಾಗಿ ಈ ಬಗ್ಗೆ ತಾಳ್ಮೆ ವಹಿಸಿ ನಿಸರ್ಗಕ್ಕೆ ತನ್ನ ಕೆಲಸ ಮಾಡಲು ಬಿಟ್ಟಷ್ಟೂ ಒಳ್ಳೆಯದು. ನಿಸರ್ಗದ ಕೆಲಸ ಸುಸೂತ್ರವಾಗಲು ಕೆಲವು ಸಲಹೆಗಳಿದ್ದು ಇವುಗಳನ್ನು ಅನುಸರಿಸುವ ಮೂಲಕ ದೇಹ ಮೊದಲಿನ ಸೌಷ್ಠವವನ್ನು ಪಡೆಯಲು ನೆರವಾಗಬಹುದು. ಬನ್ನಿ, ಇವು ಯಾವುದು ಎಂಬುದನ್ನು ನೋಡೋಣ:

ಹಾಲೂಡಿಸುವಿಕೆ

ಹಾಲೂಡಿಸುವಿಕೆ

ಹೆರಿಗೆಯ ಬಳಿಕ ದೇಹದ ಆಕಾರ ಮರುಪಡೆಯಲು ಅತ್ಯುತ್ತಮ ಮಾರ್ಗವೆಂದರೆ ಮಗುವಿಗೆ ಹಾಲೂಡಿಸುವುದು. ಅಚ್ಚರಿ ಎಂದು ಕಂಡರೂ ನಿಸರ್ಗ ಈ ಕ್ರಿಯೆಯ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿ ಬಾರಿ ಮಗುವಿಗೆ ಹಾಲೂಡಿಸಿದ ಬಳಿಕ ಹೆಚ್ಚಿನ ಶ್ರವಮಿಲ್ಲದೇ ಸುಮಾರು ಐನೂರು ಕ್ಯಾಲೋರಿಗಳನ್ನು ಕಳೆದುಕೊಳ್ಳಬಹುದು. ಹಾಗಾಗಿ, ಬಾಣಂತನದ ಅವಧಿಯಲ್ಲಿ ಹಾಲೂಡಿಸುವುದು ತಾಯಿಗೆ ಅತ್ಯುತ್ತಮವಾದ ವ್ಯಾಯಾಮವಾಗಿದೆ.

ನಡುನಡುವೆ ಚಿಕ್ಕ ನಿದ್ದೆ ಪಡೆಯಿರಿ

ನಡುನಡುವೆ ಚಿಕ್ಕ ನಿದ್ದೆ ಪಡೆಯಿರಿ

ದಿನದ ಅವಧಿಯಲ್ಲಿ ಸಮಯ ಸಿಕ್ಕಂತೆಲ್ಲಾ ಕೊಂಚ ಸಮಯವಾದರೂ ಸರಿ, ನಿದ್ರಿಸಿ. ಅಂದರೆ ಐದು ನಿಮಿಷವಾದರೂ ಸರಿ, ಈ ನಿದ್ದೆ ಗಾಢನಿದ್ದೆಯಾಗಿರಬೇಕು. ಏಕೆಂದರೆ ಬಾಣಂತಿಗೆ ರಾತ್ರಿ ಸಮಯದಲ್ಲಿ ಮಗು ಅತ್ತಾಗಲೆಲ್ಲಾ ಎಚ್ಚರವಾಗಿ ನಿದ್ದೆ ಭಂಗಗೊಂಡಿರುತ್ತದೆ. ಹೀಗೆ ತಡೆತಡೆದು ನಿದ್ರಿಸಿದ ರಾತ್ರಿಯ ಬಳಿಕ ಮರುದಿನದ ಹಗಲಿನಲ್ಲಿ ನಿದ್ರಿಸದೆ ಇದ್ದರೆ ಇದು ಹಸಿವನ್ನು ಭುಗಿಲೆಬ್ಬಿಸುತ್ತದೆ ಹಾಗೂ ಅನಗತ್ಯ ಆಹಾರ ಸೇವನೆಗೆ ಕಾರಣವಾಗುತ್ತದೆ. ಪರಿಣಾಮವಾಗಿ ತೂಕ ಇಳಿಯುವ ಬದಲು ಹೆಚ್ಚತೊಡಗುತ್ತದೆ. ನೆನಪಿಡಿ, ಬಾಣಂತನದ ಅವಧಿಯಲ್ಲಿ ಹೆಚ್ಚತೊಡಗಿದ ಸ್ಥೂಲಕಾಯ ಕರಗಿಸುವುದು ಮುಂದೆ ಬಹಳ ಕಷ್ಟಕರವಾಗಲಿದೆ.

ಹಸಿವನ್ನು ಹತ್ತಿಕ್ಕದಿರಿ

ಹಸಿವನ್ನು ಹತ್ತಿಕ್ಕದಿರಿ

ಬಾಣಂತನದ ಅವಧಿಯಲ್ಲಿ ಬಲವಂತವಾಗಿ ಹಸಿವಿನಲ್ಲಿರುವುದು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಮಾರಕ! ಮಗುವಿಗೆ ಕುಡಿಸಬೇಕಾದ ಹಾಲಿನ ಉತ್ಪತ್ತಿಗಾಗಿ ನೀವು ಸಾಕಷ್ಟು ಪೌಷ್ಟಿಕ ಆಹಾರ ಸೇವಿಸಲೇಬೇಕು. ಹಾಗಾಗಿ ಹಸಿವನ್ನು ಹತ್ತಿಕ್ಕಿ ತೂಕವನ್ನು ಕಳೆದುಕೊಳ್ಳುವ ಯಾವುದೇ ವಿಚಾರವನ್ನು ಬಾಣಂತನದ ಅವಧಿ ಮುಗಿಯುವವರೆಗೆ ಮಾಡಲೇಬೇಡಿ.

ಆಹಾರದ ಪ್ರಮಾಣವನ್ನು ದೇಹದ ಸೂಚನೆಗೆ ಅನುಸಾರ ಸೇವಿಸಿ

ಆಹಾರದ ಪ್ರಮಾಣವನ್ನು ದೇಹದ ಸೂಚನೆಗೆ ಅನುಸಾರ ಸೇವಿಸಿ

ಒಂದು ವೇಳೆ ನೀವು ಸೇವಿಸುತ್ತಿರುವ ಅಹಾರದ ಪ್ರಮಾಣ ಕೊಂಚ ಹೆಚ್ಚಾಯಿತು ಎಂದು ನಿಮಗೆ ಅನಿಸಿದ್ದರೆ, ಇದನ್ನು ಮೊದಲು ಎರಡು ಭಾಗಗಳಾಗಿ ವಿಂಗಡಿಸಿ, ಮೊದಲ ಭಾಗವನ್ನು ಸೇವಿಸಿದ ಸುಮಾರು 15 ರಿಂದ 20 ನಿಮಿಷಗಳ ಬಳಿಕವೇ ಸೇವಿಸಿ. ಅಚ್ಚರಿ ಎಂದರೆ, ಒಂದು ವೇಳೆ ನಿಮ್ಮ ದೇಹಕ್ಕೆ ಈ ಆಹಾರ ನಿಜವಾಗಿ ಅಗತ್ಯವಿದ್ದರೆ ನಿಮಗೆ ತಿನ್ನುವ ಹಂಬಲವುಂಟಾಗುತ್ತದೆ. ಒಂದು ವೇಳೆ ಅಗತ್ಯವಿಲ್ಲವೆನಿಸಿದರೆ ಹದಿನೈದು ನಿಮಿಷಗಳ ಬಳಿಕ ನಿಮಗೆ ಇದನ್ನು ತಿನ್ನಬೇಕು ಎಂದು ಅನ್ನಿಸುವುದಿಲ್ಲ. ನಿಮ್ಮ ದೇಹ ನಿಮಗೆ ಯಾವ ಬಗೆಯ ಸೂಚನೆಯನ್ನು ನೀಡುತ್ತದೋ, ಹಾಗೇ ಮುಂದುವರೆಯಿರಿ. ಅಚ್ಚರಿ ಎನಿಸಿದರೂ, ಸಂಶೋಧನೆಗಳಿಂದ ಈ ಮಾಹಿತಿ ದೃಢಪಟ್ಟಿದೆ.

ಸಾಕಷ್ಟು ನಡೆಯಿರಿ

ಸಾಕಷ್ಟು ನಡೆಯಿರಿ

ಬಾಣಂತಿ ನಿರ್ವಹಿಸಬಹುದಾದ ಅತ್ಯುತ್ತಮವಾದ ವ್ಯಾಯಾಮ ಎಂದರೆ ಸಹಜಗತಿಯ ನಡಿಗೆ. ಸುಮಾರು ಅರ್ಧ ಘಂಟೆ ನಡೆದಾಡಿದರೆ ಸುಮಾರು ನೂರು ಕ್ಯಾಲೋರಿಗಳನ್ನು ಕಳೆದುಕೊಳ್ಳಬಹುದು. ಒಂಟಿಯಾಗಿ ನಡೆದಾಡುವ ಬದಲು ಮನೆಯ ಸದಸ್ಯರೊಂದಿಗೆ, ಸಂಗಾತಿಯೊಂದಿಗೆ ನಡೆದಾಡಿ. ಅಷ್ಟಕ್ಕೂ ದೂರ ಹೋಗಲೇಬೇಕೆಂದಿಲ್ಲ ಹತ್ತಿರದ ಸ್ಥಳಕ್ಕೆ ಆಗಾಗ ಹೋಗಿಬರುವುದು, ಮನೆಯೊಳಕ್ಕೇ ಅತ್ತಿತ್ತ ನಡೆದಾಡುವುದೇ ಬಹಳಷ್ಟಾಯಿತು. ಸಾಧ್ಯವಾದರೆ ಸಂಜೆಯ ಹೊತ್ತು, ಮಗುವನ್ನು ತಳ್ಳುಗಾಡಿಯಲ್ಲಿರಿಸಿಯೂ (ಮಗುವಿನ ಆರೋಗ್ಯವನ್ನು ಪರಿಗಣಿಸಿಯೇ) ನಡೆದಾಡಿ ಬರಬಹುದು.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಇತರ ಸಮಯಕ್ಕಿಂತಲೂ ಬಾಣಂತದ ಅವಧಿಯಲ್ಲಿ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ವಿಶೇಷವಾಗಿ ಮುಂಜಾನೆಯ ಉಪಾಹಾರಕ್ಕೂ ಮುನ್ನ ಎರಡು ಲೋಟ ನೀರು ಕುಡಿಯಲೇಬೇಕು. ಇದರಿಂದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಮುಖ್ಯವಾಗಿ ಸಿಹಿ ಸೇವನೆಯ ಬಯಕೆ ಇಲ್ಲವಾಗುತ್ತದೆ. ಮುಂಜಾನೆ ಬರೆಯ ನೀರಿನ ಬದಲಿಗೆ ಲಿಂಬೆರಸ ಬೆರೆಸಿಯೂ ಕುಡಿಯಬಹುದು. ಅಲ್ಲದೇ ದಿನದ ಅವಧಿಯಲ್ಲಿ ಆಗಾಗ, ಸಾಕಷ್ಟು ನೀರು ಕುಡಿಯುತ್ತಿರಬೇಕು. ಅದೇ ಪ್ರಕಾರ, ನಿಸರ್ಗದ ಕರೆಗೆ ಓಗೊಡಲು ತಡಮಾಡಬಾರದು.

ಸದೃಢ ದೇಹಕ್ಕೆ ಇನ್ನಷ್ಟು ಸಲಹೆಗಳು

ಸದೃಢ ದೇಹಕ್ಕೆ ಇನ್ನಷ್ಟು ಸಲಹೆಗಳು

ಇತರ ಸಮಯಕ್ಕಿಂತಲೂ ಬಾಣಂತನದ ಅವಧಿಯಲ್ಲಿ ಸೇವಿಸಬೇಕಾದ ಆಹಾರ ಭಿನ್ನವಾಗಿರಬೇಕು. ಏಕೆಂದರೆ ಹೆರಿಗೆಯಲ್ಲಿ ಕಳೆದುಕೊಂಡಿದ್ದ ಅಂಶಗಳನ್ನು ಮರುದುಂಬಿಸಲು ಇವು ಅವಶ್ಯವಾಗಿವೆ. ವಿಶೇಷವಾಗಿ ಕಬ್ಬಿಣದ ಕೊರತೆ, ಇದನ್ನು ಸರಿದೂಗಿಸಲು ವಾರದಲ್ಲಿ ನಾಲ್ಕಾರು ಬಾರಿಯಾದರೂ ಕಬ್ಬಿಣದ ಅಂಶ ಹೆಚ್ಚಿರುವ ಬಸಳೆ ಸೊಪ್ಪು ಅಥವಾ ಪಾಲಕ್ ಸೊಪ್ಪು ಸೇವಿಸಬೇಕು. ಉಳಿದಂತೆ ಒಣ ಅಂಜೂರ, ಒಣ ಪೀಚ್ ಹಣ್ಣುಗಳು, ಖರ್ಜೂರ, ಬಾದಾಮಿ ಮೊದಲಾದವನ್ನು ಆಗಾಗ ಸೇವಿಸುತ್ತಿರಬೇಕು. ಮಾಂಸಾಹಾರ ಅಗತ್ಯವಿದ್ದರೂ ಇದು ಮಿತವಾಗಿದ್ದಷ್ಟೂ ಒಳ್ಳೆಯದು. ಅಪ್ಪಿ ತಪ್ಪಿಯೂ ನೋಡಲು ಸುಂದರವಾದ ಸಿದ್ಧ ಆಹಾ ರಗಳು ಬೇಡ. ಮೈದಾ ಆಧಾರಿತ, ಹುರಿದ, ಕರಿದ, ಅತಿ ಸಕ್ಕರೆಯ, ಪೊಟ್ಟಣದಲ್ಲಿ ಸಿದ್ಧವಿರುವ, ವಿಶೇಷವಾಗಿ ಅಜಿನೋಮೋಟೋ ಹಾಕಿದ ಆಹಾರಗಳೆಲ್ಲವನ್ನೂ ಬಾಣಂತನದ ಅವಧಿಯಲ್ಲಿ ತ್ಯಜಿಸುವುದೇ ಒಳ್ಳೆಯದು. ಮನೆಯಲ್ಲಿ ಅಮ್ಮ ಮಾಡಿದ ಮನೆಯೂಟವೇ ನಿಮಗೆ ಅಮೃತಸಮಾನ. ಅಲ್ಲದೇ ಆಹಾರದ ಪ್ರಮಾಣ ಅಗತ್ಯಕ್ಕೆ ತಕ್ಕಷ್ಟೇ ಇರಲಿ.

ಈ ಸಲಹೆಗಳನ್ನು ಪಾಲಿಸುವ ಮೂಲಕ ಬಾಣಂತನ ಅವಧಿ ಯಾವುದೇ ತೊಂದರೆಯಿಲ್ಲದೇ ಮುಗಿಯುವಾಗ ನಿಮ್ಮ ಹಿಂದಿನ ಆಕಾರ ತಾನೇ ತಾನಾಗಿ ಒಲಿದು ಬಂದಿರುವುದನ್ನು ಕಂಡು ನಿಮಗೇ ಅಚ್ಚರಿಯಾಗುವುದರಲ್ಲಿ ಸಂಶಯವಿಲ್ಲ.

ಮೊದಲಿನ ಆಕಾರ

English summary

How To Get Your Body In Shape After Pregnancy Naturally

After those 9 months of weight gain and pampering, you now want that extra fat to melt and come down immediately. We can understand the impatience that new mothers have for weight loss. However, to lose weight after pregnancy, you need to be patient enough, as your body can't take a lot of physical and mental exertion. Your body is still recovering after delivery, so you can't starve yourself for weight loss or do vigorous exercises. Let your body reshape naturally and regain your original shape in its own period of time. Don't force yourself into tough weight loss efforts, give your body sometime and relax.
X