For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿರುವ ಈ ವಿಶಿಷ್ಟ ಹಳ್ಳಿಗಳ ಜನರನ್ನು ನೋಡಿ ಕಲಿಯುವುದು ತುಂಬಾನೇ ಇದೆ!

|

ಭಾರತ ದೇಶದದಲ್ಲಿ ಸರಿಸುಮಾರು ಶೇ.70ಕ್ಕೂ ಹೆಚ್ಚು ಜನಸಂಖ್ಯೆ ಇಂದಿಗೂ ಹಳ್ಳಿಗಳಲ್ಲಿಯೇ ಇದ್ದಾರೆ. ಹೀಗಾಗಿ ಹಳ್ಳಿಗಳೇ ನಮ್ಮ ದೇಶದ ಆತ್ಮ ಎಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು. ನಗರದ ಜಂಜಾಟಗಳಿಂದ ದೂರವಿದ್ದು ಹಸಿರಿನ ಮಧ್ಯೆ ಶಾಂತ ಹಾಗೂ ನೆಮ್ಮದಿಯ ಜೀವನವನ್ನು ಹಳ್ಳಿಗರು ನಡೆಸುತ್ತಾರೆ.

ಆದಾಗ್ಯೂ ಶಿಕ್ಷಣ, ಆರೋಗ್ಯ, ಸ್ವಚ್ಛತೆ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆ ಈಗಲೂ ಹಳ್ಳಿಗಳಲ್ಲಿ ಇದ್ದೇ ಇದೆ. ಇನ್ನು ಮೂಢನಂಬಿಕೆಗಳು ಸಹ ಹಳ್ಳಿಗಳ ಹಿಂದುಳಿಯುವಿಕೆಗೆ ಕಾರಣವಾಗಿವೆ.

ಆದರೆ ಇವನ್ನೆಲ್ಲ ಮೀರಿ ಜಗತ್ತಿಗೇ ಮಾದರಿಯಾಗುವಂಥ ಹಳ್ಳಿಗಳು ಇಂದು ಭಾರತದಲ್ಲಿವೆ ಎಂದರೆ ನೀವು ನಂಬಲೇಬೇಕು. ತಮ್ಮ ಗ್ರಾಮದ ವಿಶಿಷ್ಟ ಆಚರಣೆಗಳ ಮೂಲಕ ಇವು ಇಡೀ ಜಗತ್ತಿಗೆ ಉತ್ತಮ ಸಂದೇಶವನ್ನು ನೀಡುತ್ತಿವೆ. ದೇಶಾದ್ಯಂತ ಹರಡಿರುವ ಅಂಥ ವಿಶಿಷ್ಟ ಹಾಗೂ ಸ್ಫೂರ್ತಿದಾಯಕ ಆಚರಣೆಗಳನ್ನು ಹೊಂದಿರುವ ಕೆಲ ಹಳ್ಳಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಪಟ್ಟಣವಾಸಿಗಳಿಗೂ ಜೀವನದ ಶ್ರೇಷ್ಠ ಪಾಠ ಹೇಳುತ್ತಿವೆ ಈ ಗ್ರಾಮಗಳು. ವಿಶಿಷ್ಟ ಹಾಗೂ ಸ್ಫೂರ್ತಿದಾಯಕ ಆಚರಣೆಗಳನ್ನು ಹೊಂದಿರುವ ಭಾರತದ ಗ್ರಾಮಗಳು:

ಪಿಪಲಂತ್ರಿ

ಪಿಪಲಂತ್ರಿ

ಪಿಪಲಂತ್ರಿ ಇದು ರಾಜಸ್ಥಾನದ ರಾಜಸಮಂದ ಜಲ್ಲೆಯಲ್ಲಿರುವ ಒಂದು ಗ್ರಾಮವಾಗಿದೆ. ಇಲ್ಲೊಂದು ವಿಶಿಷ್ಟ ಆಚರಣೆ ಇದೆ. ಗ್ರಾಮದಲ್ಲಿ ಪ್ರತಿಬಾರಿ ಹೆಣ್ಣು ಮಗುವೊಂದು ಜನಿಸಿದಾಗ ಗ್ರಾಮಸ್ಥರೆಲ್ಲ ಸೇರಿ 111 ಸಸಿಗಳನ್ನು ನೆಡುತ್ತಾರೆ. ಅಲ್ಲದೆ ಅವು ಬೆಳೆದು ಮರವಾಗುವಂತೆ ಎಲ್ಲರೂ ಅವುಗಳನ್ನು ನಿರಂತರವಾಗಿ ಪೋಷಿಸುತ್ತಾರೆ. ಹೆಣ್ಣು ಮಗು ಬೆಳೆದು ದೊಡ್ಡವಳಾದಂತೆ ಈ ಗಿಡಗಳು ಮರವಾಗುವಂತೆ ಅವರೆಲ್ಲ ಶ್ರಮವಹಿಸುತ್ತಾರೆ. ಗ್ರಾಮದ ಸುತ್ತಲಿರುವ ಖಾಲಿ ಪ್ರದೇಶಗಳಲ್ಲಿ ಈ ಗಿಡಗಳನ್ನು ಬೆಳೆಸಲಾಗುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಬೇವು, ಮಾವು, ನೆಲ್ಲಿ ಮುಂತಾದ ರೀತಿಯ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮರಗಳನ್ನು ಈ ಗ್ರಾಮಸ್ಥರು ಬೆಳೆಸಿದ್ದು ನಿಜವಾಗಿಯೂ ಪ್ರೇರಣಾದಾಯಿಯಾಗಿದೆ. ಗ್ರಾಮಸ್ಥರ ಹೆಣ್ಣು ಮಗುವಿನ ಹಾಗೂ ಪರಿಸರ ಕಾಳಜಿ ಇಷ್ಟಕ್ಕೆ ನಿಲ್ಲುವುದಿಲ್ಲ. ಮಗುವಿನ ಭವಿಷ್ಯದ ಭದ್ರತೆಗಾಗಿ ಗ್ರಾಮಸ್ಥರೆಲ್ಲ ಸೇರಿ 21 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ, ಅದರೊಂದಿಗೆ ಮಗುವಿನ ಪಾಲಕರಿಂದ 10 ಸಾವಿರ ರೂಪಾಯಿಗಳನ್ನು ಪಡೆದು ಸಂಪೂರ್ಣ ಮೊತ್ತವನ್ನು ಬ್ಯಾಂಕಿನಲ್ಲಿ ಫಿಕ್ಸೆಡ್ ಡಿಪಾಸಿಟ್ ಮಾಡುತ್ತಾರೆ.

Most Read: ದೇಹದ ಅಂಗಾಂಗಗಳು ನಿಮ್ಮ ವ್ಯಕ್ತಿತ್ವ ಹೇಳುವುದು!

ಪಿಪಲಂತ್ರಿ

ಪಿಪಲಂತ್ರಿ

ಹೆಣ್ಣು ಮಗುವಿಗೆ 20 ವರ್ಷಗಳಾದ ಬಳಿಕವೇ ಇದನ್ನು ತೆರೆಯಲಾಗುತ್ತದೆ. ಹೆಣ್ಣು ಮಗುವಿಗೆ ಸೂಕ್ತ ವಿದ್ಯಾಭ್ಯಾಸ ಮಾಡಿಸಲು ಸಹ ಇಲ್ಲಿನ ಜನತೆ ಕಟಿಬದ್ಧರಾಗಿದ್ದಾರೆ. ಮಗುವಿಗೆ ೧೮ ವರ್ಷಗಳಾಗುವ ಮುಂಚೆ ಮದುವೆ ಮಾಡಿಸುವುದಿಲ್ಲ ಎಂದು ಮಗುವಿನ ಪಾಲಕರ ಬಳಿ ಅಫಿಡವಿಟ್ ಅನ್ನು ಬರೆಸಿಕೊಳ್ಳಲಾಗುತ್ತದೆ. ಈ ಎಲ್ಲ ಕ್ರಮಗಳಿಂದ ಒಟ್ಟಾರೆಯಾಗಿ ಗ್ರಾಮದ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಉತ್ತಮಗೊಂಡಿದೆ. ನೆಟ್ಟ ಗಿಡಗಳಿಗೆ ಕೀಟ ಬಾಧೆ ತಗುಲಬಾರದು ಎಂಬ ಕಾರಣಕ್ಕೆ ಎಲ್ಲೆಡೆ ಸುಮಾರು ೨೫ ಲಕ್ಷದಷ್ಟು ಅಲೋ ವೆರಾ ಸಸಿಗಳನ್ನು ಗ್ರಾಮಸ್ಥರು ನೆಟ್ಟಿದ್ದರು. ಈ ಅಲೋ ವೆರಾ ಸಸಿಗಳು ಆಯುರ್ವೇದಿಕ ಔಷಧವಾಗಿದ್ದು, ಇವುಗಳನ್ನು ಸಂಸ್ಕರಿಸಿ ಅದರ ಉತ್ಪನ್ನಗಳನ್ನು ಸಹ ಮಾರಾಟ ಮಾಡಬಹುದು ಎಂಬುದು ಗ್ರಾಮಸ್ಥರಿಗೆ ನಂತರದ ದಿನಗಳಲ್ಲಿ ಗೊತ್ತಾಯಿತು. ಈಗ ಗ್ರಾಮದ ಜನತೆ ಈ ಅಲೋ ವೆರಾ ಸಸಿಗಳಿಂದ ಜೆಲ್, ಜ್ಯೂಸ್ ಮುಂತಾದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಹಿವರೆ ಬಜಾರ

ಹಿವರೆ ಬಜಾರ

ಮಹಾರಾಷ್ಟ್ರದ ಅಹ್ಮದ ನಗರ ಜಿಲ್ಲೆಯಲ್ಲಿರುವ ಹಿವರೆ ಬಜಾರ ಗ್ರಾಮವು ದೇಶದ ಅತಿ ಶ್ರೀಮಂತ ಹಳ್ಳಿಗಳಲ್ಲೊಂದಾಗಿದೆ. ಇಲ್ಲಿನ ತಲಾ ಆದಾಯ ದೇಶದ ತಲಾ ಆದಾಯಕ್ಕಿಂತಲೂ ಹೆಚ್ಚಾಗಿರುವುದು ವಿಶೇಷ. ೧೨೫೦ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಪ್ರತಿಯೊಬ್ಬರೂ ತಿಂಗಳಿಗೆ ಸರಾಸರಿ ೩೦ ಸಾವಿರ ರೂಪಾಯಿ ಆದಾಯ ಗಳಿಸುತ್ತಾರೆ. ಇಲ್ಲಿರುವ ೨೩೫ ಕುಟುಂಬಗಳ ಪೈಕಿ ೬೦ ಕುಟುಂಬಸ್ಥರು ಮಿಲಿಯನೇರ್‌ಗಳಾಗಿದ್ದಾರೆ ಎಂಬುದು ಆಶ್ಚರ್ಯವಾದರೂ ಸತ್ಯ. 1989 ಕ್ಕೂ ಮುಂಚೆ ಕೆಲಸಕ್ಕಾಗಿ ಪಟ್ಟಣಗಳಿಗೆ ವಲಸೆ ಹೋಗುವುದು, ಹೆಚ್ಚಿನ ಪ್ರಮಾಣದ ಅಪರಾಧ ಕೃತ್ಯಗಳು ಹಾಗೂ ನೀರಿನ ತೀವ್ರ ಅಭಾವ ಹೀಗೆ ಹಲವಾರು ಸಮಸ್ಯೆಗಳಿಂದ ಹಿವರೆ ಬಜಾರ ಗ್ರಾಮಸ್ಥರು ಕಂಗಾಲಾಗಿದ್ದರು. 1990 ರಲ್ಲಿ ಪೋಪಟರಾವ ಪವಾರ ಎಂಬುವರು ಗ್ರಾಮದ ಸರಪಂಚ್ (ಗ್ರಾಮ ಪಂಚಾಯಿತಿ ಮುಖ್ಯಸ್ಥ) ರಾದ ಮೇಲೆ ಇಲ್ಲಿನ ಪರಿಸ್ಥಿತಿ ಸುಧಾರಿಸಲಾರಂಭಿಸಿತು. ಸರಕಾರದಿಂದ ಹೆಚ್ಚಿನ ಅನುದಾನ ಪಡೆದು ಹಳ್ಳಿಯಲ್ಲಿನ ನೈಸರ್ಗಿಕ ಮೂಲಗಳಿಗೆ ಪುನಶ್ಚೇತನ ನೀಡಲಾಯಿತು. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯಲ್ಲಿ ದೇಶಕ್ಕೇ ಮಾದರಿಯಾದ ಅಣ್ಣಾ ಹಜಾರೆಯವರ ರಾಳೆಗಾಂವ ಸಿದ್ಧಿ ಗ್ರಾಮದ ಮಾದರಿಯಲ್ಲಿಯೇ ಈ ಗ್ರಾಮದಲ್ಲಿಯೂ ಕೆಲಸಗಳು ಸಾಗಿದವು. ಇಂಥ ಎಲ್ಲ ಪರಿಶ್ರಮದ ಕಾರಣದಿಂದ ಇವತ್ತು ಗ್ರಾಮದಲ್ಲಿ ೨೯೪ ತೆರೆದ ಬಾವಿಗಳು ಸದಾ ನೀರಿನಿಂದ ತುಂಬಿ ತುಳುಕುತ್ತಿವೆ. ಅಂತರ್ಜಲ ಮಟ್ಟವೂ ಸುಧಾರಿಸಿದೆ. ಕೆಲಸಕ್ಕಾಗಿ ಪಟ್ಟಣಕ್ಕೆ ವಲಸೆ ಹೋದ ಕುಟುಂಬಗಳು ನಿಧಾನವಾಗಿ ಗ್ರಾಮಕ್ಕೆ ವಾಪಸಾಗತೊಡಗಿದರು. ಒಂದು ಕಾಲಕ್ಕೆ ಕೇವಲ ೯೦ ಕುಟುಂಬಗಳು ಮಾತ್ರ ಗ್ರಾಮದಲ್ಲಿ ಉಳಿದುಕೊಂಡಿದ್ದವು. ಆದರೆ ಇವತ್ತು ೨೩೫ ಕುಟುಂಬಗಳು ಮತ್ತೆ ಗ್ರಾಮದಲ್ಲಿ ವಾಸಿಸುತ್ತಿರುವುದು ಈ ಗ್ರಾಮದ ಯಶೋಗಾಥೆಯನ್ನು ಜಗತ್ತಿಗೆ ಸಾರುತ್ತಿದೆ.

ತಮ್ಮ ಹೊಲ, ತೋಟಗಳಲ್ಲಿ ದುಡಿಯಲು ಈಗ ಇವರಾರೂ ಹೊರಗಿನ ಕೂಲಿಕಾರರನ್ನು ಅವಲಂಬಿಸಿಲ್ಲ. ಪ್ರತಿ ಮನೆಯಿಂದ ಕನಿಷ್ಠ ಇಬ್ಬರಿಂದ ಮೂವರು ಕೃಷಿ ಕಾಯಕದಲ್ಲಿ ತೊಡಗಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಕಾರಣರಾಗಿದ್ದಾರೆ.

Most Read: ರಾತ್ರಿ ಬೆಳಗಾಗುವುದರೊಳಗೆ ಮಗುವಿನ ಬಾಯಿಯಲ್ಲಿ ಮೂಡಿದ ಕೋರೆ ಹಲ್ಲು!

ಧರಣಾಯಿ

ಧರಣಾಯಿ

ಬಿಹಾರದ ಜಹಾನಾಬಾದ ಜಿಲ್ಲೆಯ ಬೋಧ ಗಯಾ ಬಳಿಯಲ್ಲಿ ಈ ಧರಣಾಯಿ ಗ್ರಾಮವಿದೆ. ೨೪೦೦ ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಕೆಲ ವರ್ಷಗಳ ಹಿಂದಿನವರೆಗೂ ವಿದ್ಯುತ್ ಸೌಕರ್ಯವೇ ಇರಲಿಲ್ಲ. ಆದರೆ ಗ್ರಾಮಸ್ಥರು ತಮ್ಮ ಸ್ವಪ್ರಯತ್ನದಿಂದಲೇ ಗ್ರಾಮದ ಸ್ಥಿತಿಯನ್ನು ಬದಲಾಯಿಸಿದ್ದು ಎಲ್ಲರಿಗೂ ಮಾದರಿಯಾಗಿದೆ.

ಕೆಲ ವರ್ಷಗಳ ಹಿಂದೆ ಗ್ರೀನಪೀಸ್ ಸಂಸ್ಥೆಯೊಂದಿಗೆ ಕೈಜೋಡಿಸಿದ ಗ್ರಾಮಸ್ಥರು, ೪೫೦ ಮನೆಗಳು ಹಾಗೂ ೫೦ ವಾಣಿಜ್ಯ ಸ್ಥಾವರಗಳಿಗೆ ವಿದ್ಯುತ್ ಪೂರೈಸಬಲ್ಲ ಸೋಲಾರ್ ಆಧಾರಿತ ವಿದ್ಯುತ್ ಉತ್ಪಾದನೆ ಘಟಕವನ್ನು ಸ್ಥಾಪಿಸಿದರು. ಒಟ್ಟು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಇಡೀ ಗ್ರಾಮಕ್ಕೆ ನಿರಂತರವಾಗಿ ವಿದ್ಯುತ್ ದೊರಕಲಾರಂಭಿಸಿತು. ಈಗ ಧರಣಾಯಿ ಗ್ರಾಮ ದೇಶದ ಪ್ರಥಮ ಸಂಪೂರ್ಣ ಸೋಲಾರ್ ಗ್ರಾಮವೆಂದು ಹೆಸರಾಗಿದೆ. ವಿದ್ಯುತ್ ಅಭಾವ ನೀಗಿದ್ದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಇದ್ದ ಅಡಚಣೆ ದೂರವಾಗಿದೆ. ರಾತ್ರಿ ಸಮಯದಲ್ಲಿ ಹೊರ ಹೋಗಲು ಹೆದರುತ್ತಿದ್ದ ಮಹಿಳೆಯರ ಭೀತಿ ದೂರವಾಗಿದೆ. ಇನ್ನು ಗ್ರಾಮದಲ್ಲಿರುವ ಚಿಕ್ಕ ಉದ್ದಿಮೆಗಳು ಸಹ ಬೆಳವಣಿಗೆ ಹೊಂದುತ್ತಿವೆ. ಹೀಗೆ ಸ್ವಪ್ರಯತ್ನದಿಂದ ಧರಣಾಯಿ ಗ್ರಾಮಸ್ಥರು ಸಮೃದ್ಧಿಯ ಕಡೆಗೆ ಸಾಗುತ್ತಿರುವುದು ಶ್ಲಾಘನೀಯವಾಗಿದೆ.

ಶನಿ ಶಿಂಗಣಾಪುರ

ಶನಿ ಶಿಂಗಣಾಪುರ

ಮಹಾರಾಷ್ಟ್ರದ ಅಹ್ಮದ ನಗರ ಜಿಲ್ಲೆಯಲ್ಲಿದೆ ಈ ಶನಿ ಶಿಂಗಣಾಪುರ ಗ್ರಾಮ. ಯಾವುದೇ ಮನೆಗಳಿಗೂ ಬಾಗಿಲನ್ನು ಹೊಂದಿರದ ಇಂಥ ಊರು ಭಾರತದಲ್ಲಷ್ಟೆ ಅಲ್ಲದೇ ಇಡೀ ವಿಶ್ವದಲ್ಲಿಯೇ ಮತ್ತೊಂದಿರಲಾರದು. ದೇಶ ಪ್ರಸಿದ್ಧವಾದ ಶನಿ ಮಹಾತ್ಮನ ದೇವಸ್ಥಾನ ಈ ಗ್ರಾಮದಲ್ಲಿದೆ. ಈ ದೇವರು ಜಾಗೃತ ದೇವನೆಂದು ಭಕ್ತರಲ್ಲಿ ನಂಬಿಕೆ ಇದೆ. ಶನಿ ಮಹಾತ್ಮನ ಕೃಪೆಯಿಂದಾಗಿ ಗ್ರಾಮಸ್ಥರು ತಮ್ಮ ಮನೆಗಳ, ವಸ್ತುಗಳ ಭದ್ರತೆಯ ಬಗ್ಗೆ ಚಿಂತೆಯನ್ನೇ ಮಾಡುವುದಿಲ್ಲ. ಎಲ್ಲವನ್ನೂ ಆ ದೇವರೇ ಕಾಪಾಡುತ್ತಾನೆ ಎಂಬ ಬಲವಾದ ನಂಬಿಕೆ ಇಲ್ಲಿದೆ. ಇನ್ನೊಂದು ವಿಶೇಷವೆಂದರೆ 2011 ರಲ್ಲಿ ಯುನೈಟೆಡ್ ಕಮರ್ಶಿಯಲ್ (ಯುಕೊ) ಬ್ಯಾಂಕ್ ಗ್ರಾಮದಲ್ಲಿ ಲಾಕರ್ ಇಲ್ಲದ ಬ್ಯಾಂಕ್ ಶಾಖೆಯನ್ನು ಪ್ರಾರಂಭಿಸಿದೆ. ಇದು ದೇಶದಲ್ಲಿಯೇ ಪ್ರಥಮ ಲಾಕರ್ ರಹಿತ ಬ್ಯಾಂಕ್ ಆಗಿದೆ. ಈ ಭಾಗದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಶೂನ್ಯ ಎನ್ನವಷ್ಟು ಕಡಿಮೆ ಇರುವುದನ್ನು ಗಮನಿಸಿ ಬ್ಯಾಂಕ್ ಇಂಥ ಕ್ರಮಕ್ಕೆ ಮುಂದಾಯಿತು. ಕೆಲ ವರ್ಷಗಳ ಹಿಂದೆ ಎಲ್ಲೋ ಚಿಕ್ಕ ಪುಟ್ಟ ಕಳ್ಳತನದ ಪ್ರಕರಣಗಳು ನಡೆದವಾದರೂ ಗ್ರಾಮಸ್ಥರು ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಶನಿ ಮಹಾತ್ಮನ ಮೇಲೆ ದೃಢವಾದ ಭಕ್ತಿಯನ್ನು ಹೊಂದಿರುವ ಅವರು ಇಂದಿಗೂ ತಮ್ಮ ಮನೆಗಳಿಗೆ ಬಾಗಿಲನ್ನು ನಿರ್ಮಿಸಿಲ್ಲ.

Most Read: ಕಡಲೆಕಾಳಿನಲ್ಲಿದೆ ಲೆಕ್ಕಕ್ಕೂ ಸಿಗದಷ್ಟು ಆರೋಗ್ಯಕಾರಿ ಪ್ರಯೋಜನಗಳು

ಪುನ್ಸಾರಿ

ಪುನ್ಸಾರಿ

ಗುಜರಾತ್ ರಾಜ್ಯದಲ್ಲಿದೆ ಈ ಪುಟ್ಟ ಹಳ್ಳಿ ಪುನ್ಸಾರಿ. ಹಳ್ಳಿಯಾದರೂ ಬೃಹತ್ ಮೆಟ್ರೊ ಮಹಾನಗರಗಳಿಗೇ ಸೆಡ್ಡು ಹೊಡೆಯುವಂತಿದೆ ಈ ಗ್ರಾಮ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳು, ಶುದ್ಧ ಕುಡಿಯುವ ನೀರಿನ ಘಟಕ, ವಾತಾನುಕೂಲಿತ ಶಾಲಾ ಕೊಠಡಿಗಳು, ವೈಫೈ, ಬಯೊಮೆಟ್ರಿಕ್ ವ್ಯವಸ್ಥೆ ಹೀಗೆ ಎಲ್ಲ ಆಧುನಿಕ ಸೌಕರ್ಯಗಳಿಂದ ಪುನ್ಸಾರಿ ಸುಸಜ್ಜಿತವಾಗಿದೆ. ಇಲ್ಲಿನ ಪ್ರತಿ ಮನೆಯಲ್ಲೂ ಶೌಚಾಲಯವಿದೆ. ೫ ಪ್ರಾಥಮಿಕ ಶಾಲೆಗಳು, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಸೂಕ್ತ ಬೀದಿ ದೀಪಗಳ ವ್ಯವಸ್ಥೆ ಮತ್ತು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಒಳಚರಂಡಿ ವ್ಯವಸ್ಥೆಗಳು ಗ್ರಾಮದಲ್ಲಿವೆ. ಹಳ್ಳಿಯ ಎಲ್ಲ ಕಡೆಗೂ ೧೨೦ ಜಲ ನಿರೋಧಕ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಸರಕಾರದ ಹೊಸ ಯೋಜನೆಗಳು ಹಾಗೂ ಇನ್ನಿತರ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಗಳನ್ನು ಸರಪಂಚ್ ಅವರು ಈ ಸ್ಪೀಕರ್‌ಗಳ ಮೂಲಕ ಗ್ರಾಮಸ್ಥರಿಗೆ ತಿಳಿಸುತ್ತಾರೆ. ಅಲ್ಲದೆ ಮಹಾತ್ಮಾ ಗಾಂಧೀಜಿಯವರ ಭಜನೆ, ಹಾಡು, ಶ್ಲೋಕ ಮುಂತಾದುವುಗಳನ್ನು ಸಹ ಈ ಸ್ಪೀಕರ್‌ಗಳ ಮೂಲಕ ಬಿತ್ತರಿಸಲಾಗುತ್ತದೆ. ಗ್ರಾಮದ ಅನೇಕ ಕಡೆ ಗ್ರಾಮ ಪಂಚಾಯಿತಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರು ಸಿಗುವಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸಂಪೂರ್ಣ ಭೂಗತ ಒಳಚರಂಡಿ ವ್ಯವಸ್ಥೆಯೂ ಗ್ರಾಮದಲ್ಲಿದೆ. ಆದರೆ ಈ ಎಲ್ಲ ಸೌಕರ್ಯಗಳನ್ನು ಮಾಡಿಕೊಳ್ಳಲು ಗ್ರಾಮವು ಸರಕಾರದಿಂದ ಯಾವುದೇ ವಿಶೇಷ ಅನುದಾನವನ್ನು ಪಡೆದುಕೊಂಡಿಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಬಜೆಟ್‌ನಲ್ಲಿ ನೀಡುವ ಅನುದಾನದಲ್ಲಿಯೇ ಇವನ್ನೆಲ್ಲ ಮಾಡಲಾಗಿದೆ ಎಂಬುದು ವಿಶೇಷವಾಗಿದೆ.

ಮಲಿನಾಂಗ್

ಮಲಿನಾಂಗ್

ಮೇಘಾಲಯ ರಾಜ್ಯದ ಪ್ರಕೃತಿ ಸೌಂದರ್ಯದ ಮಧ್ಯದ ಈಸ್ಟ್ ಖಾಸಿ ಹಿಲ್ಸ್‌ನಲ್ಲಿರುವ ಮಲಿನಾಂಗ್ ಗ್ರಾಮವು ಏಶಿಯಾದಲ್ಲಿಯೇ ಅತಿ ಸ್ವಚ್ಛ ಗ್ರಾಮವೆಂದು ಖ್ಯಾತಿ ಪಡೆದಿದೆ. ಇಲ್ಲಿನ ಜನರು ಪ್ರಕೃತಿಯೊಂದಿಗೆ ಬದುಕುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಶಿಲ್ಲಾಂಗ್‌ನಿಂದ ೯೦ ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮದ ಜನತೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದಾರೆ. ನೈಸರ್ಗಿಕ ಸೌಂದರ್ಯದ ಸ್ವರ್ಗವೆನಿಸುವ ಮಲಿನಾಂಗ್, ಪಕ್ಕದ ಹಳ್ಳಿ ರಿವಾಂಗ್‌ನೊಂದಿಗೆ ಬೇರುಗಳಿಂದ ನಿರ್ಮಾಣವಾದ ಸೇತುವೆಯನ್ನು ಹೊಂದಿದೆ. ಚಾರಣಪ್ರಿಯರು ಇಲ್ಲಿ ಟ್ರೆಕ್ಕಿಂಗ್ ನಡೆಸಬಹುದು. ನೈಸರ್ಗಿಕವಾಗಿ ಒಂದು ಬಂಡೆಕಲ್ಲಿನ ಮೇಲೆ ಮತ್ತೊಂದು ಕಲ್ಲು ನಿಂತಿರುವುದು (ಬ್ಯಾಲೆನ್ಸಿಂಗ್ ರಾಕ್) ಇಲ್ಲಿನ ವಿಶೇಷವಾಗಿದೆ. 2015, ಜೂನ್ ತಿಂಗಳ ಪ್ರಕಾರ ಗ್ರಾಮದ ಜನಸಂಖ್ಯೆ 500ರಷ್ಟಿದೆ. ಗ್ರಾಮದಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಗ್ರಾಮಸ್ಥರು ಖುದ್ದಾಗಿ ನಿರ್ವಹಣೆ ಮಾಡುತ್ತಾರೆ. ಪ್ರತಿದಿನ ಸಂಜೆ ನಡೆಯುವ ಕಳೆ ಕೀಳುವುದು, ಕಸ ಗುಡಿಸುವುದು, ಉದ್ಯಾನಗಳನ್ನು ಸ್ವಚ್ಛಗೊಳಿಸುವುದು ಮುಂತಾದ ಕಾರ್ಯಗಳಲ್ಲಿ ಗ್ರಾಮಸ್ಥರೆಲ್ಲರೂ ಪಾಲ್ಗೊಳ್ಳುತ್ತಾರೆ.

ಅತೀ ಸ್ವಚ್ಛ ಹಳ್ಳಿ

ಅತೀ ಸ್ವಚ್ಛ ಹಳ್ಳಿ

ಚಿಕ್ಕ ಮಕ್ಕಳಿಗೆ ಆರಂಭದಿಂದಲೇ ಸ್ವಚ್ಛತೆಯ ಪಾಠವನ್ನು ಹೇಳಿಕೊಡಲಾಗುತ್ತದೆ. ಹೀಗಾಗಿ ಎಲ್ಲಿಯಾದರೂ ಕಸ ಬಿದ್ದಿದ್ದರೆ ಮಕ್ಕಳು ಸಹ ಅದನ್ನು ಎತ್ತಿ ಕಸದ ಡಬ್ಬಿಗೆ ಹಾಕುತ್ತಾರೆ. ಸಮರ್ಪಕ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯೂ ಗ್ರಾಮಕ್ಕಿದೆ. 2003 ರಲ್ಲಿ ಏಶಿಯಾದ ಅತಿ ಸ್ವಚ್ಛ ಹಳ್ಳಿ ಹಾಗೂ ೨೦೦೫ರಲ್ಲಿ ಭಾರತದ ಅತಿ ಸ್ವಚ್ಛ ಹಳ್ಳಿ ಪುರಸ್ಕಾರಗಳನ್ನು ಮಲಿನಾಂಗ್ ಪಡೆದುಕೊಂಡಿದೆ. ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿರುವ ಈ ಗ್ರಾಮದಿಂದ ಬಾಂಗ್ಲಾ ದೇಶ ಗಡಿಯಲ್ಲಿನ ಗುಡ್ಡಗಳ ರುದ್ರ ರಮಣೀಯ ದೃಶ್ಯವನ್ನು ನೋಡಬಹುದು. ಸ್ವಚ್ಛತೆ ಎಂಬುದನ್ನು ಬಹು ಹಿಂದಿನಿಂದಲೇ ಮಲಿನಾಂಗ್ ಗ್ರಾಮಸ್ಥರು ತಮ್ಮ ಜೀವನ ಶೈಲಿಯಲ್ಲಿಯೇ ಅಳವಡಿಸಿಕೊಂಡಿದ್ದಾರೆ. ಗ್ರಾಮದ ಎಲ್ಲ ರಸ್ತೆಯ ಮೂಲೆಗಳಲ್ಲಿಯೂ ಬಾಂಬೂಗಳಿಂದ ತಯಾರಿಸಿದ ಡಸ್ಟ್ ಬಿನ್‌ಗಳನ್ನು ಇಡಲಾಗಿದೆ. ಸಾವಯವ ಹಾಗೂ ಇನ್ನಿತರ ಕಸಕ್ಕಾಗಿ ಪ್ರತ್ಯೇಕ ಡಬ್ಬಿಗಳನ್ನು ವ್ಯವಸ್ಥೆ ಮಾಡಿದ್ದು ಕಂಡುಬರುತ್ತದೆ. ಗ್ರಾಮದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

English summary

Some unique villages in India that inspire us

With over 60 percent of India’s population still living in villages, it is not an overstatement to say that the soul of India lives in its villages. Villages are peaceful, calm, green, and away from the hustle of city lives. However, Indian villages are also often plagued with lack of education, healthcare, sanitation, and regressive beliefs. There are however, several villages in India, which go beyond the stereotype, and define a league of their own. Here is a list of few unique villages in India which inspire us all
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more