For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಈ ಪ್ರಮುಖ ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಎಚ್ಚರ!

|

ಮಳೆಗಾಲ ಆರಂಭವಾದರೆ ಸಾಕು ಎಲ್ಲಾ ಕಡೆ ಕೆಮ್ಮು, ಶೀತ, ಜ್ವರ ಶುರುವಾಗಿಬಿಡುತ್ತೆ. ಸಣ್ಣ ಮಕ್ಕಳಿಂದ ಹಿಡಿದು ಮನೆ ಮಂದಿಗೆಲ್ಲಾ ಭಾದಿಸುವ ಸಮಸ್ಯೆಯೆಂದರೆ ಮಳೆಗಾಲದಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆ. ಮಳೆಗೆ ಒದ್ದೆ ಆದರೆ ಸಾಕು ಶೀತ ಅಂಟಿಕೊಂಡುಬಿಡುತ್ತೆ. ಇನ್ನು ಮನೆಮಂದಿಗೆಲ್ಲಾ ಸಮಪಾಲಿರಲಿ ಅಂತ ಎಲ್ಲರಿಗೂ ಸ್ಪ್ರೆಡ್‌ ಅಗೋದಂತೂ ಗ್ಯಾರಂಟಿ. ಮಳೆಗೆ ಒದ್ದೆಯಾಗಿ ಬರುವ ಅನಾರೋಗ್ಯ ಒಂದು ಕಡೆಯಾದರೆ, ಈ ಮಳೆಗಾಲದಲ್ಲಿ ಸೊಳ್ಳೆಗಳ ಕಾಟದಿಂದ ಶುರುವಾಗುವ ಅನಾರೋಗ್ಯ ಸಮಸ್ಯೆಗಳೇ ಹೆಚ್ಚು. ಮಳೆಗಾಲದಲ್ಲಿ ಕಂಡುಬರುವಂತಹ ಸೊಳ್ಳೆಗಳಿಂದ ಹರಡುವ ಸಮಸ್ಯೆ, ಗಾಳಿ, ನೀರಿನಿಂದ ಹರಡುವ ಸೋಂಕುಗಳ ಕುರಿತಾದ ಮಾಹಿತಿ ಈ ಲೇಖನದಲ್ಲಿದೆ ನೋಡಿ.

1. ಡೆಂಗ್ಯೂ

1. ಡೆಂಗ್ಯೂ

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಅನಾರೋಗ್ಯವೆಂದರೆ ಡೆಂಗ್ಯೂ. ಇತ್ತೀಚೆಗೆ ಹಲವೆಡೆ ಈ ಡೆಂಗ್ಯೂ ಕೇಸ್‌ಗಳು ಮಲೇರಿಯಾಗಿಂತ ಹೆಚ್ಚು ಕಂಡುಬರುತ್ತಿದೆ. ಈಡಿಸ್‌ ಇಜಿಪ್ಟಿ ಎನ್ನುವ ಸೊಳ್ಳೆಯಿಂದ ಹರಡುವ ಈ ಡೆಂಗ್ಯೂ ಜ್ವರ ಎಂದರೆ ಜನರಲ್ಲಿ ಒಂದು ರೀತಿಯ ಭಯ ಕಾಡುತ್ತೆ. ಯಾಕೆಂದರೆ ತೀವ್ರವಾದ ಜ್ವರ, ತಲೆನೋವು, ಸ್ನಾಯು, ಕೀಲುಗಳಲ್ಲಿ ನೋವು ಇದರ ಲಕ್ಷಣ. ಇಷ್ಟೇ ಅಲ್ಲ ಕಣ್ಣುಗಳ ಹಿಂದೆ ನೋವು, ಆಯಾಸ, ವಾಕರಿಕೆ, ವಾಂತಿಯೂ ಕಂಡುಬರುತ್ತದೆ. ಜ್ವರ ಪ್ರಾರಂಭವಾದ ಎರಡರಿಂದ ಐದು ದಿನಗಳ ನಂತರ ಮೈ ಮೇಲೆ ಕೆಂಪಾದ ದದ್ದು ಕಾಣಿಸಿಕೊಳ್ಳುತ್ತದೆ,ಮೂಗಿನಲ್ಲಿ, ಒಸಡುಗಳಲ್ಲಿ ರಕ್ತಸ್ರಾವವೂ ಆಗಬಹುದು, ಅಲ್ಲದೇ ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲೂ ಇಳಿಕೆಯಾಗಿಬಿಡುತ್ತದೆ. ಹೀಗಾದಾಗ ಡೆಂಗ್ಯೂ ಅಪಾಯ ಹೆಚ್ಚು. ಡೆಂಗ್ಯೂ ಜ್ವರ ಬಂದರೆ ಸಾಮಾನ್ಯವಾಗಿ ಹತ್ತು ದಿನಗಳವರೆಗೂ ಇರುತ್ತದೆ.

ತಡೆಗಟ್ಟುವ ವಿಧಾನ: ಡೆಂಗ್ಯೂ ಬಾರದಂತೆ ತಡೆಗಟ್ಟುವ ವಿಧಾನವೆಂದರೆ ಸೊಳ್ಳೆಗಳ ಕಡಿತದಿಂದ ದೂರವಿರುವುದು. ಇದಕ್ಕಾಗಿ ಮನೆಯಲ್ಲಿ ಸೊಳ್ಳೆ ನಿವಾರಕಗಳನ್ನು ಬಳಸಿ, ಕಿಟಕಿ, ಬಾಗಿಲುಗಳಿಗೆ ಸಾಧ್ಯವಾದರೆ ಸೊಳ್ಳೆ ಪರದೆಯನ್ನು ಹಾಕಿ. ಮನೆಯ ಸುತ್ತಮುತ್ತಲಿನ ಜಾಗವನ್ನು ನೀರು ನಿಲ್ಲದಂತೆ ಸ್ವಚ್ಛವಾಗಿಡಿ. ನಿಮ್ಮ ಮನೆಯಲ್ಲಿ ಯಾರಿಗಾದರೂ ಡೆಂಗ್ಯೂ ಕಾಣಿಸಿಕೊಂಡಲ್ಲಿ ಇತರರಿಗೂ ಹರಡದಂತೆ ಎಚ್ಚರಿಕೆ ವಹಿಸಿ. ಸೊಳ್ಳೆ ಕಚ್ಚದಂತೆ ಕ್ರೀಂಗಳನ್ನು ಬಳಸಿ.

2. ಚಿಕುನ್‌ ಗುನ್ಯಾ

2. ಚಿಕುನ್‌ ಗುನ್ಯಾ

ಡೆಂಗ್ಯೂವಿನಂತೆ ಚಿಕುನ್‌ಗುನ್ಯಾ ಕೂಡಾ ಈಜಿಪ್ಟಿ ಎನ್ನುವ ಸೊಳ್ಳೆಯಿಂದ ಹರಡುವ ವೈರಲ್‌ ಖಾಯಿಲೆ. ಇದು ಚಿಕುನ್‌ ಗುನ್ಯಾ ವೈರಸ್‌ನಿಂದ ಉಂಟಾಗುತ್ತೆ. ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಈ ಸೊಳ್ಳೆಗಳು ರಾತ್ರಿ ಮಾತ್ರವಲ್ಲ ಹಗಲಿನಲ್ಲೂ ಕಚ್ಚುತ್ತವೆ ಹುಷಾರು.. ಸೋಂಕಿತ ಸೊಳ್ಳೆ ಕಚ್ಚಿದ ಮೂರೇಳು ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದರ ಮುಖ್ಯ ಲಕ್ಷಣವೇ ಜ್ವರ ಮತ್ತು ದೇಹದ ಕೀಲುಗಳಲ್ಲಿ ನೋವು. ಈ ಜ್ವರದ ಇನ್ನಿತರ ಲಕ್ಷಣವೆಂದರೆ ತಲೆನೋವು, ಸ್ನಾಯುಗಳಲ್ಲಿ ನೋವು, ಗಂಟುಗಳಲ್ಲಿ ಊತ ಹಾಗೂ ದ್ದುಗಳು ಕಾಣಿಸಿಕೊಳ್ಳಬಹುದು. ಜ್ವರ ಕಡಿಮೆಯಾದರೂ ಕೀಲುನೋವಂತೂ ಬೇಗ ಕಡಿಮೆಯಾಗದು.

ಚಿಕುನ್‌ಗುನ್ಯಾ ತಡೆಗಟ್ಟಲು ಯಾವುದೇ ಲಸಿಕೆ ಅಥವಾ ಔಷಧಿ ಇಲ್ಲ. ಹಾಗಾಗಿ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದೇ ಪಾರಾಗುವುದೇ ಈ ಸೋಂಕಿನಿಂದ ದೂರವುರಲು ದಾರಿ. ಅಷ್ಟಾಗಿಯೂ ಚಿಕುನ್‌ಗುನ್ಯಾ ಭಾದಿಸಿದರೆ ಚಿಕಿತ್ಸೆ ಪಡೆಯಿರಿ ಜೊತೆಗೆ ವಿಶ್ರಾಂತಿಯೂ ಅಗತ್ಯ. ಮೊದಲೇ ವಿವರಿಸಿದಂತೆ ಸೊಳ್ಳೆ ಕಚ್ಚದಂತೆ ಸೊಳ್ಳೆ ನಿವಾರಕ ಕ್ರೀಂಗಳನ್ನು ಹಚ್ಚಿಕೊಳ್ಳಿ, ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ಪರದೆ ಹಾಕಿ. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ.

3. ಮಲೇರಿಯಾ

3. ಮಲೇರಿಯಾ

ಸೊಳ್ಳೆಯಿಂದ ಹರಡುವ ಸೋಂಕುಗಳಲ್ಲಿ ಕಂಗೆಡಿಸಿಬಿಡುವ ಆರೋಗ್ಯ ಸಮಸ್ಯೆಯೆಂದರೆ ಮಲೇರಿಯಾ. ಅನಾಫಿಲೀಸ್‌ ಎನ್ನುವ ಹೆಣ್ಣು ಸೊಳ್ಳೆಯ ಕಡಿತದ ಮೂಲಕ ಹರಡುವ ಈ ಸಮಸ್ಯೆಯನ್ನು ಗುಣಪಡಿಸಬಹುದಾದರೂ, ಕೆಲವೊಮ್ಮೆ ಇದು ಮಾರಣಾಂತಿಕವಾಗಬಹುದು. ಅದರಲ್ಲೂ 5ವರ್ಷಕ್ಕಿಂತ ಕೆಳಗಿನ ಮಕ್ಕಳೇ ಮಲೇರಿಯಾ ರೋಗಕ್ಕೆ ಒಳಗಾಗಿವುದು ಬೇಗ. ಸೊಳ್ಳೆ ಕಚ್ಚಿದ ಹತ್ತು ಹದಿನೈದು ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ತುಂಬಾ ಜ್ವರ, ಮೈಕೈನೋವು, ತೀವ್ರವಾದ ಶೀತ, ಚಳಿ ಜ್ವರ ಈ ಸೋಂಕಿನ ಲಕ್ಷಣ. ಅಲ್ಲದೇ ತಲೆನೋವು, ಕೆಮ್ಮು, ಉಸಿರಾಟದ ಸಮಸ್ಯೆ, ವಾಕರಿಕೆ, ವಾಂತಿ, ಅತಿಸಾರವೂ ಕಾಣಿಸಿಕೊಳ್ಳಬಹುದು. ಸರಿಯಾಗಿ ಚಿಕಿತ್ಸೆ ನೀಡದೇ ಇದ್ದಲ್ಲಿ ಇದು ಅನೀಮಿಯಾ ಹಾಗೂ ಜಾಂಡೀಸ್‌ ಸಮಸ್ಯೆಗೂ ಕಾರಣವಾಗುತ್ತೆ.

ಸೊಳ್ಳೆಯಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟುವ ಕ್ರಮಗಳು

* ಮೊದಲನೆಯದಾಗಿ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟುವುದು ಮಾಡಬೇಕಾದ ಮೊದಲ ಕೆಲಸ.

ಮನೆಯೊಳಗೆ ಮತ್ತು ಮನೆಯ ಸುತ್ತಲು ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ.

* ಮನೆಯಲ್ಲಿ ನೀರು ಸಂಗ್ರಹಿಸಿಡುವಂತಹ ವಸ್ತುಗಳಾದ ಕೂಲರ್‌, ಬಕೆಟ್‌ಗಳನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಿ, ಸ್ವಚ್ಛಗೊಳಿಸಿ.

* ತ್ಯಾಜಗಳನ್ನು ವಿಲೇವಾರಿ ಮಾಡಿ, ಸ್ವಚ್ಛತೆಯನ್ನು ಆದಷ್ಟು ಕಾಪಾಡಿಕೊಳ್ಳಿ, ಬಾತ್‌ರೂಮ್‌, ಶೌಚಾಲಯವನ್ನು ಆಗಾಗ ಸ್ವಚ್ಛಗೊಳಿಸಿ.

* ಮನೆಯಲ್ಲಿ ನೀರಿನ ಸಂಗ್ರಹಣೆ ಮಾಡುವ ಟ್ಯಾಂಕ್‌, ನೀರಿನ ತೊಟ್ಟಿಗಳಿಗೆ ಕೀಟನಾಶಕಗಳನ್ನು ಬಳಸಿ.

* ಮನೆಯ ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ಪರದೆಯನ್ನು ಅಳವಡಿಸಿಕೊಳ್ಳಿ.

* ಮನೆಯಿಂದ ಹೊರಗೆ ಹೋಗುವಾಗಲೂ, ಮನೆಯೊಳಗೆ ಇದ್ದಾಗಲೂ ಕೈ, ಕಾಲುಗಳನ್ನು ಆದಷ್ಟು ಮುಚ್ಚಲ್ಪಡುವ ಬಟ್ಟೆ ಧರಿಸಿ

* ಬೆಡ್‌ಗೂ ಸಾಧ್ಯವಾದರೆ ಸೊಳ್ಳೆ ಪರದೆಯನ್ನು ಹಾಕಿ.

4. ಗಾಳಿಯಿಂದ ಹರಡುವ ಆರೋಗ್ಯ ಸಮಸ್ಯೆ

4. ಗಾಳಿಯಿಂದ ಹರಡುವ ಆರೋಗ್ಯ ಸಮಸ್ಯೆ

ವೈರಲ್‌ ಜ್ವರ, ಶೀತ, ಕೆಮ್ಮು, ಗಂಟಲು ನೋವು ಇತ್ಯಾದಿ ಜ್ವರ, ಫ್ಲೂ ಇತರ ರೋಗಗಳಂತೆ ಗಾಳಿಯ ಮೂಲಕ ಬಹು ಬೇಗನೇ ಹರಡಬಲ್ಲ ರೋಗಗಳಾಗಿವೆ. ಈ ಸಮಸ್ಯೆಗಳು ಮಳೆಗಾಲದಲ್ಲೇ ಹೆಚ್ಚು. ಮಳೆಗಾಲ ಆರಂಭದಿಂದ ಹಿಡಿದು ಡಿಸೆಂಬರ್‌ನವರೆಗೂ ಈ ವೈರಲ್‌ ಫಿವರ್‌, ಶೀತ, ಕೆಮ್ಮು ತಪ್ಪುವುದೇ ಇಲ್ಲ. ಆದರೆ ಮಳೆಗಾಲದಲ್ಲಿ ಗಾಳಿಯಿಂದ ಹರಡುವ ಸೋಂಕುಗಳಿಂದ ಅಪಾಯ ಕಡಿಮೆ, ಆದರೆ ಬೇಗನೆ ಎಲ್ಲರಿಗೂ ಹರಡುತ್ತೆ. ವೃದ್ಧರು, ರೋಗನಿರೋಧಕಶಕ್ತಿ ಕಡಿಮೆ ಇರುವ ಮಕ್ಳಳು, ವಯಸ್ಕರಲ್ಲಿ ತೀವ್ರವಾದ ವೈರಲ್‌ ಜ್ವರವೂ ಕಾಣಿಸಿಕೊಳ್ಳಬಹುದು.

ಗಾಳಿಯಿಂದ ಹರಡುವ ರೋಗಗಳನ್ನು ತಡೆಗಟ್ಟುವಾಗ ವಿಧಾನ

* ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ. ಕೊರೋನಾ ಸಾಂಕ್ರಾಮಿಕ ಬಂದಮೇಲಂತೂ ಎಲ್ಲರೂ ಮಾಸ್ಕ್‌ ಧರಿಸಿಯೇ ಧರಿಸುತ್ತಾರೆ. ಮನೆಯಲ್ಲೂ ಫ್ಲೂ ಸಮಸ್ಯೆ ಕಾಣಿಸಿಕೊಂಡರೆ ಬೇರೆಯವರಿಗೂ ಹರಡದಂತೆ ಮಾಸ್ಕ್‌ ಧರಿಸುವುದು ಒಳಿತು

* ಮಕ್ಕಳನ್ನು ಸೋಂಕಿತ ವ್ಯಕ್ತಿಯಿಂದ ದೂರವಿಡಿ. ಮಕ್ಕಳು ಹೊರಗೆ ಆಟವಾಡಿ ಬಂದ ಮೇಲೆ ಕೈಕಾಲುಗಳನ್ನು ತೊಳೆಯುವ ಮೂಲಕ ನೈರ್ಮಲ್ಯಕ್ಕೆ ಆದ್ಯತೆ ನೀಡಿ.

* ಪ್ರತಿ ಗಂಟೆಗಳಿಗೊಮ್ಮೆ ಬೆಚ್ಚಗಿನ ನೀರು ಕುಡಿಯಿರಿ

* ಮನೆಯೊಳಗೆ ಸರಿಯಾಗಿ ಗಾಳಿ, ಬೆಳಕು ಬರುವಂತೆ ನೋಡಿಕೊಳ್ಳಿ.

* ಪ್ರತಿ ವರ್ಷ ಫ್ಲೂ ಲಸಿಕೆಯನ್ನು ಪಡೆಯಿರಿ.

5. ನೀರಿನಿಂದ ಹರಡುವ ರೋಗಗಳು

5. ನೀರಿನಿಂದ ಹರಡುವ ರೋಗಗಳು

ಕಲುಷಿತ ನೀರಿನ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಕೂಡಾ ಅನೇಕ. ಅದೂ ಮಳೆಗಾಲದಲ್ಲೇ ಹೆಚ್ಚು. wHO ಪ್ರಕಾರ ಕನಿಷ್ಟ 2 ಕೋಟಿಯಷ್ಟು ಜನರು ಕಲುಷಿತ ನೀರಿನ ಮೂಲವನ್ನು ಬಳಸುತ್ತಾರೆ, ಇದು ಪ್ರತಿವರ್ಷ 4.8 ಲಕ್ಷ ಅತಿಸಾರದಿಂದ ಉಂಟಾಗುವ ಸಾವುಗಳಿಗೆ ಕಾರಣವಾಗುತ್ತಿದೆ. ಅದರಲ್ಲೂ ಈ ಸಮಸ್ಯೆ ಮಕ್ಕಳಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ಹಾಗಾದರೆ ನೀರಿನಿಂದ ಹರಡುವಂತಹ ರೋಗಗಳು ಯಾವುದು ನೋಡೋಣ.

6. ಟೈಫಾಯಿಡ್‌

6. ಟೈಫಾಯಿಡ್‌

ಟೈಫಾಯಿಡ್‌ ಜ್ವರ ಕಲುಷಿತ ನೀರು, ಹಾಳಾದ ಆಹಾರದ ಸೇವನೆಯಿಂದ ಉಂಟಾಗುವ ಜ್ವರ. ಸಾಲ್ಮೊನೆಲ್ಲಾ ಟೈಫಿ ಎನ್ನುವ ರೋಗಾಣುವಿಂದ ಉಂಟಾಗುವ ಈ ಜ್ವರವು ಮಾರಣಾಂತಿಕವೂ ಆಗಬಹುದು. ತುಂಬಾ ಜ್ವರ, ಆಯಾಸ, ತಲೆನೋವು, ವಾಕರಿಕೆ, ಹೊಟ್ಟೆನೋವು, ಮಲಬದ್ಧತೆ, ಅತಿಸಾರ ಈ ಜ್ವರದ ಲಕ್ಷಣಗಳಾಗಿದೆ. ವೈಡಲ್‌ ಪರೀಕ್ಷೆಯ ಮೂಲಕ ಟೈಫಾಯಿಡ್‌ ಜ್ವರವನ್ನು ಪತ್ತೆಹಚ್ಚಬಹುದು. ಈ ಸಮಸ್ಯೆ ಭಾದಿಸಿದರೆ ಹೊಸದಾಗಿ ತಯಾರಿಸಿದ ಆಹಾರ, ಬೇಯಿಸಿದ ಆಹಾರವನ್ನೇ ಸೇವಿಸಿ. ಹೆಚ್ಚು ಕುದಿಸಿ, ಆರಿಸಿದ ನೀರು ಅಥವಾ ಫಿಲ್ಟರ್‌ ಮಾಡಿದ ನೀರು ಕುಡಿಯುವುದು ಉತ್ತಮ,

7. ಕಾಲರಾ

7. ಕಾಲರಾ

ಕಲುಷಿತ ನೀರು ಅಥವಾ ಆಹಾರದಲ್ಲಿ ವಿಬ್ರಿಯೋ ಕಾಲರಾ ಎಂಬ ಬ್ಯಾಕ್ಟೀರಿಯಾವಿರುತ್ತದೆ. ಈ ಕಲುಷಿತವಾದ ಆಹಾರ ನೀರಿನ ಸೇವನೆ ಕಾಲರಾಗೆ ದಾರಿಮಾಡಿಕೊಡುತ್ತದೆ. ಇದು ಒಂದು ರೀತಿಯ ಅತಿಸಾರ. ಈ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಿದ ಐದು ಗಂಟೆ ಅಥವಾ ಐದು ದಿನಗಳಲ್ಲಿ ರೋಗಲಕ್ಷಣಗಳು ಕಂಡುಬರುತ್ತವೆ. ಇದು ಮಕ್ಕಳಲ್ಲಿ ಸೇರಿದಂತೆ ವಯಸ್ಕರಲ್ಲೂ ಕಂಡುಬರುತ್ತದೆ. ಇದಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ ಸಾವಿಗೂ ಕಾರಣವಾಗಬಹುದು.

8. ಲೆಪ್ಟೊಸ್ಪಿರೋಸಿಸ್

8. ಲೆಪ್ಟೊಸ್ಪಿರೋಸಿಸ್

ಲೆಪ್ಟೊಸ್ಪೈರೋಸಿಸ್ ಎನ್ನುವುದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಕಂಡುಬರುತ್ತದೆ. ಇದು ಲೆಪ್ಟೊಸ್ಪೈರಾ ಕುಲದ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾವು ಸೋಂಕಿತ ಪ್ರಾಣಿಗಳ ಮೂತ್ರದ ಮೂಲಕ ಹರಡುತ್ತದೆ, ಅದು ನೀರು ಅಥವಾ ಮಣ್ಣಿನಲ್ಲಿ ಪ್ರವೇಶಿಸಬಹುದು ಮತ್ತು ವಾರಗಳಿಂದ ತಿಂಗಳುಗಳವರೆಗೆ ಅಲ್ಲಿ ಬದುಕಬಲ್ಲದು. ಇದು ಕಲುಷಿತ ನೀರು ಮನುಷ್ಯನ ಸಂಪರ್ಕಕ್ಕೆ ಬಂದಾಗ, ಮನುಷ್ಯರಿಗೂ ಈ ಸೋಂಕು ಹರಡಬಹುದು. ಕೊಳಕು ನೀರು ಅಥವಾ ಕೆಕೆಸರಿನ ಸಂಪರ್ಕದಿಂದಾಗಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಸಂಭವಿಸುತ್ತದೆ. ಈ ಸೋಂಕಿನ ಲಕ್ಷಣಗಳೆಂದರೆ ಅಧಿಕ ಜ್ವರ, ತಲೆನೋವು, ಶೀತ, ಇತ್ಯಾದಿ ಸೇರಿವ್ಯಾಪಕವಾದ ರೋಗಲಕ್ಷಣಗಳನ್ನು ಉಂಟುಮಾಡಬಹುದು.

ಇದಲ್ಲದೆ, ಕಲುಷಿತ ನೀರಿನಿಂದ ಸಾಮಾನ್ಯವಾಗಿ ಸಂಭವಿಸುವ ಇತರ ಕಾಯಿಲೆಗಳು ಕಾಮಾಲೆ, ಹೆಪಟೈಟಿಸ್ A ಮತ್ತು ಗ್ಯಾಸ್ಟ್ರೋಎಂಟರೈಟಿಸ್‌ನಂತಹ ಗ್ಯಾಸ್ಟ್ರೋ-ಕರುಳಿನ ಸೋಂಕುಗಳನ್ನು ಒಳಗೊಂಡಿರುತ್ತದೆ.

ಆಹಾರ ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವುದು ಹೇಗೆಂದರೆ..

ಆಹಾರ ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವುದು ಹೇಗೆಂದರೆ..

* ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಬಳಸಿ.

* ಆಹಾರ ತಯಾರಿಸುವಾಗ, ಶೇಖರಿಸುವಾಗ ಸಾಕಷ್ಟು ನೈರ್ಮಲ್ಯದ ಬಗ್ಗೆ ಜಾಗರೂಕರಾಗಿರಿ

* ನಿಮ್ಮ ಕೈಗಳನ್ನು ಆಗಾಗ ತೊಳೆಯಿರಿ.

* ನೀರು ಸೇವಿಸುವ ಮೊದಲು ಯಾವಾಗಲೂ ನೀರನ್ನು ಕುದಿಸಿ ಕುಡಿಯಿರಿ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ

* ನೀವಿರುವ ಪ್ರದೇಶದಲ್ಲಿ ತೆರೆದ ಚರಂಡಿಗಳು ಮತ್ತು ಗುಂಡಿಗಳು ಮುಚ್ಚಲ್ಪಟ್ಟಿದೆಯಾ ಎನ್ನುವುದನ್ನು ಗಮನಿಸಿ.

* ಪ್ರಾಣಿಗಳ ಮೂತ್ರದಿಂದ ಕಲುಷಿತಗೊಳ್ಳಬಹುದಾದ ನೀರಿನಲ್ಲಿ ಈಜಬೇಡಿ

* ಸೋಂಕಿತ ಪ್ರಾಣಿಗಳೊಂದಿಗೆ ಸಂಪರ್ಕವನ್ನು ನಿವಾರಿಸಿ

* ನಿಮ್ಮ ಮಕ್ಕಳು ಈಗಾಗಲೇ ಲಸಿಕೆಯನ್ನು ಪಡೆಯದೇ ಇದ್ದರೆ ಅವುಗಳನ್ನು ಹಾಕಿಸಿ.

ರೋಗ ಬಂದಮೇಲೆ ಚಿಕಿತ್ಸೆ ಪಡೆಯುವ ಬದಲು, ರೋಗ ಬರದಂತೆ ಎಚ್ಚರಿಕೆ ವಹಿಸುವು ಮುಖ್ಯ. ಮಳೆಗಾಲದಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳ ಬಗ್ಗೆ ನಿಮಗೂ ತಿಳಿದಿರಿ. ಈ ಮೇಲೆ ತಿಳಿಸಿರುವಂತಹ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ. ನೀವೇ ವೈದ್ಯರಾಗಲು ಹೋಗಬೇಡಿ ಅಥವಾ ಗೂಗಲ್‌ನಲ್ಲಿ ಹುಡುಕಿ ಔಷಧಿಯನ್ನು ತೆಗೆದುಕೊಳ್ಳುವ ಕೆಲಸ ಮಾಡಬೇಡಿ.

English summary

Most Common Monsoon Diseases; Know Prevention & Precautions Tips in Kannada

you must know about Most Common Monsoon Diseases and Prevention and Precautions Tips in Kannada...
X
Desktop Bottom Promotion