For Quick Alerts
ALLOW NOTIFICATIONS  
For Daily Alerts

ಊಟವಾದ ತಕ್ಷಣವೇ ನೀರು ಕುಡಿಯುವುದು ಎಷ್ಟು ಆರೋಗ್ಯಕರ?

|

ಆರೋಗ್ಯ ಉತ್ತಮವಾಗಿರಬೇಕಾದರೆ 'ಸಾಕಷ್ಟು ನೀರನ್ನು ಕುಡಿಯಿರಿ' ಎಂದು ನಮಗೆ ಸದಾ ಎಲ್ಲರೂ ಹೇಳುತ್ತಲೇ ಇರುತ್ತಾರೆ. ಆದರೆ ಊಟವಾದ ತಕ್ಷಣ ನೀರು ಕುಡಿಯುವ ಬಗ್ಗೆ ಹಲವು ಜನರು ಭಿನ್ನವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ನೂರಾರು ವರ್ಷಗಳಿಂದ ಈ ವಿಷಯ ಚರ್ಚೆಗೆ ಗ್ರಾಸವಾಗಿದ್ದು ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ಹೆಚ್ಚಿನವರು ಹೊಂದಿರುವ ಅಭಿಪ್ರಾಯದ ಪ್ರಕಾರ ಊಟಕ್ಕೂ ಅರ್ಧ ಘಂಟೆ ಮುನ್ನ ಮಾತ್ರವೇ ನೀರು ಕುಡಿಯಬೇಕು, ಊಟದ ಬಳಿಕ ನೀರು ಕುಡಿಯಬಾರದು ಎಂಬ ಅಭಿಪ್ರಾಯ ಸುಳ್ಳೇ?

Water

ದಿನವಿಡೀ ಸಾಕಷ್ಟು ನೀರನ್ನು ಕುಡಿಯುವ ಮೂಲಕ ಹಲವಾರು ಕಾಯಿಲೆಗಳು ದೂರವಿರುತ್ತವೆ. ಊಟಕ್ಕೂ ಮುನ್ನ ಕೊಂಚ ನೀರನ್ನು ಕುಡಿಯುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತವೆ, ಆದರೆ ಈ ಪ್ರಮಾಣ ಚಿಕ್ಕದಾಗಿರುವುದು ಅಗತ್ಯ. ಏಕೆಂದರೆ ನೀರಿನ ಪ್ರಮಾಣ ಹೆಚ್ಚಾಗಿದ್ದರೆ ಹೊಟ್ಟೆ ತುಂಬಿಕೊಂಡಂತಾಗಿ ಅಗತ್ಯ ಪ್ರಮಾಣದ ಆಹಾರ ಸೇವನೆ ಸಾಧ್ಯವಾಗದೇ ಹೋಗಬಹುದು.

ಅಲ್ಲದೇ ಊಟದ ನಡುವೆಯೂ ಆಗಾಗ ಚಿಕ್ಕ ಪ್ರಮಾಣದಲ್ಲಿ ನೀರನ್ನು ಗುಟುಕರಿಸುವುದೂ ಒಳ್ಳೆಯದು ಎಂದು ಪರಿಗಣಿಸಲ್ಪಟ್ಟಿದೆ. ಈ ಮೂಲಕ ಸೇವಿಸುವ ಆಹಾರದಲ್ಲಿ ಹೆಚ್ಚಿನ ಆರ್ದ್ರತೆ ಸೇರಿಸಲು ಸಾಧ್ಯವಾಗುತ್ತದೆ ಹಾಗೂ ಈ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಮಲಬದ್ಧತೆಯಿಂದ ರಕ್ಷಿಸುತ್ತದೆ. ಆದರೆ ಊಟದ ಬಳಿಕ, ಅಂದರೆ ಊಟದ ಕೊನೆಯ ತುತ್ತು ನುಂಗಿದ ತಕ್ಷಣವೇ ನೀರನ್ನು ಕುಡಿಯುವುದು ಎಷ್ಟು ಉತ್ತಮ ಎಂಬ ಪ್ರಶ್ನೆಗೆ ಉತ್ತರ ಪಡೆಯುವುದೇ ಈ ಲೇಖನದ ಉದ್ದೇಶವಾಗಿದೆ.

ಊಟದ ನಡುವೆ ನೀರು ಕುಡಿಯುವುದು ಆರೋಗ್ಯಕರವೇನೋ ಹೌದು. ಆದರೆ ಊಟದ ಬಳಿಕ ನೀರನ್ನು ಸೇವಿಸುವುದರಿಂದ ಜೀರ್ಣಾಂಗಗಳಲ್ಲಿ ಜೀರ್ಣರಸಗಳು ಇನ್ನಷ್ಟು ತಿಳಿಯಾಗುತ್ತದೆ ಹಾಗೂ ಆಹಾರವನ್ನು ಪೂರ್ಣವಾಗಿ ಜೀರ್ಣಗೊಳಿಸಲು ಅಸಮರ್ಥವಾಗುತ್ತದೆ. ಬನ್ನಿ, ಈ ಬಗ್ಗೆ ವಾಸ್ತವವೇನು ಎಂಬುದನ್ನು ಅರಿಯೋಣ.

ನೀರು ಕುಡಿಯುವ ಸರಿಯಾದ ವಿಧಾನ:
ವೈದ್ಯರು ಮತ್ತು ಆಹಾರತಜ್ಞರು ಈ ಬಗ್ಗೆ ಭಿನ್ನವಾದ ಅಭಿಪ್ರಾಯ ಹೊಂದಿದ್ದಾರೆ. ಯಾವಾಗ ನೀರು ಕುಡಿಯುವುದು ಒಳ್ಳೆಯದು, ಯಾವಾಗ ಒಳ್ಳೆಯದಲ್ಲ ಎಂಬುದನ್ನು ಯಾರಾದರೂ ನಿರ್ಧರಿಸುವ ಮುನ್ನ ನಿಮ್ಮ ದೇಹ ಯಾವಾಗ ನೀರನ್ನು ಬೇಡುತ್ತದೆ ಎಂಬುದನ್ನು ಕಂಡುಕೊಳ್ಳಿ.

ಬಾಯಾರಿಕೆಯಾಗುವುದು ಒಂದು ನೈಸರ್ಗಿಕ ಕ್ರಿಯೆಯಾಗಿದೆ. ಆದ್ದರಿಂದ ಬಾಯಾರಿಕೆ ಯಾವುದೇ ಹೊತ್ತಿನಲ್ಲಿ ಆಗಲಿ, ನೀರನ್ನು ತಕ್ಷಣ ಕುಡಿಯುವುದು ಅಗತ್ಯವಾಗಿದೆ. ಆಯುರ್ವೇದ ವಿವರಿಸಿದ ಸಿದ್ದಾಂತಗಳನ್ನು ಅನುಸರಿಸುವುದಾದರೆ, ಊಟದ ನಡು ನಡುವೆ ನೀರನ್ನು ಕುಡಿಯಬೇಕು. ಇದರಿಂದ ಒಟ್ಟಾರೆ ಆಹಾರದ ಪ್ರಮಾಣವನ್ನು ಚಿಕ್ಕ ಪ್ರಮಾಣದಲ್ಲಿ ವಿಂಗಡಿಸಲು ಸಾಧ್ಯವಾಗುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಆದರೆ, ನೀರು ಸಾಮಾನ್ಯ ತಾಪಮಾನದಲ್ಲಿರುವುದು ಅಗತ್ಯ. ಅಂದರೆ ಫ್ರಿಜ್ಜಿನಲ್ಲಿಟ್ಟ ತಣ್ಣನೆಯ ನೀರೂ ಆಗಬಾರದು, ಕುದಿಯುವ ಬಿಸಿನೀರೂ ಆಗಬಾರದು. ಊಟದ ನಡುವೆ ಶೀತಲವಾದ ನೀರನ್ನು ಕುಡಿಯುವ ಮೂಲಕ ಜೀರ್ಣರಸಗಳು ತಮ್ಮ ಸಾಮಾನ್ಯ ಕ್ಷಮತೆಯನ್ನು ಕಳೆದುಕೊಳ್ಳುತ್ತವೆ. ಶೀತಲ ನೀರಿನ ಸೇವನೆಯ ಮೂಲಕ ಹುಳಿತೇಗು ಮತ್ತು ಎದೆಯುರಿಯುಂಟಾಗುವುದು ಸಾಮಾನ್ಯವಾಗಿದೆ. ಅಲ್ಲದೇ ಊಟದ ನಡುವೆ ಬುರುಗು ಬರುವ ಲಘು ಪಾನೀಯಗಳನ್ನು ಕುಡಿಯುವುದು ಅಹ್ಲಾದಕರವಾಗಿದ್ದರೂ ಇದು ಅತ್ಯಂತ ಅಪಾಯಕಾರಿ ಅಭ್ಯಾಸವಾಗಿದೆ. ಆಯುರ್ವೇದದ ಪ್ರಕಾರ ಊಟದ ತಕ್ಷಣವೇ ನೀರನ್ನು ಕುಡಿಯುವುದರಿಂದ ಈಗತಾನೇ ಸೇವಿಸಿದ್ದ ಆಹಾರ ತಣಿಯುತ್ತದೆ ಹಾಗೂ ಇದು ಸ್ಥೂಲಕಾಯಕ್ಕೆ ಕಾರಣವಾಗಬಹುದು.

ಊಟದ ಬಳಿಕ ತಕ್ಷಣವೇ ನೀರು ಕುಡಿಯುವುದನ್ನು ತಪ್ಪಿಸಿ:
ಆಹಾರ ತಜ್ಞರ ಪ್ರಕಾರ, ಊಟದ ತಕ್ಷಣ ನೀರು ಕುಡಿಯುವುದರಿಂದ ಕೆಲವಾರು ವಿಧದಲ್ಲಿ ಆರೋಗ್ಯ ಬಾಧೆಗೊಳಗಾಗುತ್ತದೆ. ಈ ಮೂಲಕ ಜೀರ್ಣ ಕ್ರಿಯೆ ನಿಧಾನಗೊಳ್ಳುತ್ತದೆ ಹಾಗೂ ಆಹಾರವನ್ನು ನಿಜವಾಗಿ ಜೀರ್ಣಗೊಳಿಸಲು ಬೇಕಾದ ಸಮಯಕ್ಕಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು.

ಊಟದ ಬಳಿಕ ನೀರನ್ನು ಕುಡಿಯುವ ಮೂಲಕ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ಆಹಾರ ಸೇವನೆಗೆ ಪ್ರಚೋದನೆ ದೊರಕುತ್ತದೆ. ಹೇಗೆಂದರೆ, ಊಟದ ತಕ್ಷಣವೇ ನೀರು ಕುಡಿಯುವುದರಿಂದ ಸಾಮಾನ್ಯ ಅವಧಿಗೂ ಮುನ್ನವೇ ಹಸಿವಾಗತೊಡಗುತ್ತದೆ. ಪರಿಣಾಮವಾಗಿ ಹೆಚ್ಚು ಸೇವಿಸಲು ಪ್ರಚೋದನೆ ದೊರಕುತ್ತದೆ. ಇದರಿಂದ ಹೊಟ್ಟೆಯುಬ್ಬರಿಕೆಯುಂಟಾಗುತ್ತದೆ.

ಊಟದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣರಸಗಳೂ ತಿಳಿಯಾಗುತ್ತವೆ ಹಾಗೂ ಜೀರ್ಣಕ್ರಿಯೆ ಪರಿಪೂರ್ಣವಾಗುವುದಿಲ್ಲ. ನಮ್ಮ ಜಠರ ದಿನವಿಡೀ ಸೇವಿಸುವ ಎಷ್ಟೇ ಪ್ರಮಾಣದ ನೀರನ್ನು ಕುಡಿದರೂ ಹೀರಿಕೊಳ್ಳಲು ಸಮರ್ಥವಾಗಿದ್ದರೂ ಊಟದ ಬಳಿಕ ಸೇವಿಸುವ ನೀರನ್ನು ಮಾತ್ರ ಜಠರ ಉಳಿದ ಸಮಯಗಳಷ್ಟು ಸಮರ್ಥವಾಗಿ ಹೀರಿಕೊಳ್ಳಲಾರದು. ಏಕೆಂದರೆ ಈ ನೀರು ಜಠರರಸಗಳನ್ನೇ ತಿಳಿಗೊಳಿಸಿರುತ್ತದೆ. ಪರಿಣಾಮವಾಗಿ ಆಮ್ಲೀಯತೆ, ಎದೆಯುರಿ ಮೊದಲಾದ ಕೆಲವಾರು ತೊಂದರೆಗಳು ಎದುರಾಗುತ್ತವೆ.

ಯಾವಾಗ ಜೀರ್ಣಕ್ರಿಯೆ ಕುಂಠಿತಗೊಂಡಿತೋ ಆಗ ಆಹಾರ ಜೀರ್ಣವಾಗುವ ಗತಿಯೂ ಏರುಪೇರಾಗುತ್ತದೆ ಹಾಗೂ ಒಟ್ಟು ಆಹಾರ ಬೇಕಾಬಿಟ್ಟಿಯಾಗಿ ಅರ್ದಂಬರ್ಧ ಜೀರ್ಣಗೊಳ್ಳುತ್ತದೆ. ಅಲ್ಲದೇ ಜೀರ್ಣಗೊಳ್ಳದ ಆಹಾರದಲ್ಲಿರುವ ಗ್ಲುಕೋಸ್ ಜೀರ್ಣಗೊಳ್ಳದೇ ಇರುವ ಕಾರಣ ಅನಿವಾರ್ಯವಾಗಿ ಕೊಬ್ಬಾಗಿ ಮಾರ್ಪಡುತ್ತದೆ ಹಾಗೂ ದೇಹದಲ್ಲಿ ಸಂಗ್ರಹಗೊಳ್ಳುತ್ತದೆ. ಇದು ಇನ್ಸುಲಿನ್ ಪ್ರಮಾಣದ ಹೆಚ್ಚಳಕ್ಕೂ ಕಾರಣವಾಗುತ್ತದೆ. ಪರಿಣಾಮವಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಥಟ್ಟನೇ ಏರುತ್ತದೆ ಹಾಗೂ ಸ್ಥೂಲಕಾಯ ಮತ್ತು ಮಧುಮೇಹಗಳಿಗೆ ಮುಕ್ತ ಸ್ವಾಗತ ಕೋರುತ್ತದೆ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ದಿನವಿಡೀ ನೀರನ್ನು ಸೇವಿಸುವುದನ್ನು ಮಾತ್ರ ಎಂದಿಗೂ ನಿಲ್ಲಸಬಾರದು. ಒಂದೇ ಬಾರಿ ಹೆಚ್ಚು ನೀರು ಕುಡಿಯಲು ಅತ್ಯುತ್ತಮ ಸಮಯಗಳೆಂದರೆ ಬೆಳಗ್ಗೆದ್ದ ತಕ್ಷಣ ಮಾತ್ರ. ಊಟದ ಬಳಿಕ ನೀರು ಕುಡಿಯದೇ ಇದ್ದರೆ ಸಾಧ್ಯವೇ ಇಲ್ಲ ಎನ್ನುವಷ್ಟು ವ್ಯಸನರಾಗಿದ್ದರೆ ಊಟದ ಬಳಿಕ ಕನಿಷ್ಟ ಹತ್ತು ಅಥವಾ ಹದಿನೈದು ನಿಮಿಷವಾದರೂ ಬಿಟ್ಟು ಎಷ್ಟು ಬೇಕೋ ಅಷ್ಟು ನೀರು ಕುಡಿಯಬಹುದು.

ಅಲ್ಲದೇ ಊಟದ ನಡುನಡುವೆಯೂ ಕೊಂಚ ಕೊಂಚವೇ ನೀರನ್ನು ಗುಟುಕರಿಸುತ್ತಾ ಕುಡಿಯಬೇಕು. ಆದರೆ ಗುಟುಕು ಚಿಕ್ಕದಾಗಿರಬೇಕು, ಈ ಮೂಲಕ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆ ಬಾಧೆಗೊಳಗಾಗಬಾರದಂತೆ ನೋಡಿಕೊಳ್ಳಬಹುದು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Should You Drink Water Immediately After Eating?

Drinking enough water helps your body keep distance from several diseases. Drinking a bit of water before a meal helps your body prepare itself for a better digestion, but yes, remember to drink a small amount of water before your meal, because if it is taken in a large quantity, it can make your tummy feel full, eventually making you eat less. Having some water is always beneficial, but having it immediately after your meal can actually dilute the digestive enzymes in your body, making your body struggle to digest the food that you just had.
X
Desktop Bottom Promotion