ಹಸಿಯಾಗಿಯೇ ಸೇವಿಸಬೇಕಾದ ಹತ್ತು ಆರೋಗ್ಯಕರ ಆಹಾರಗಳು

Posted By: Arshad Hussain
Subscribe to Boldsky

ಕೆಲವು ಆಹಾರಗಳನ್ನು ಹಸಿಯಾಗಿಯೇ ಸೇವಿಸಿದಾಗಲೇ ಇದರ ಪೂರ್ಣ ಪ್ರಯೋಜನ ಪಡೆಯಬಹುದು. ಹಸಿ ಆಹಾರ ಕ್ರಮದ ಬಗ್ಗೆ ಕೇಳಿದ್ದೀರಾ? ಒಂದು ವೇಳೆ ನಿಮ್ಮ ಉತ್ತರ ಇಲ್ಲ ಎಂದಾದರೆ ಇದಕ್ಕೆ ಉತ್ತರ ಹೀಗಿದೆ: ಹಸಿ ಆಹಾರ ಕ್ರಮ (raw food diet) ಹಸಿಯಾದ ಆಹಾರ ಅಥವಾ ಸಂಸ್ಕರಿಸದ, ಬೇಯಿಸದ ಆಹಾರಗಳನ್ನೇ ದಿನದ ಅಗತ್ಯಕ್ಕೆ ಸೇವಿಸುವುದಾಗಿದೆ. ಈ ಮೂಲಕ ಅಡುಗೆಯ ಸಮಯದಲ್ಲಿ ಆಹಾರದಲ್ಲಿ ಆಗುವ ಬದಲಾವಣೆ ಅಥವಾ ಸಿದ್ದ ಆಹಾರದಲ್ಲಿ ಸೇರಿಸಿರುವ ಅನಾರೋಗ್ಯಕರ ಸಂರಕ್ಷಕಗಳು ಮೊದಲಾದವುಗಳಿಂದ ರಕ್ಷಣೆ ಪಡೆಯಬಹುದು. ಬೇಯಿಸಿದ ಆಹಾರ ಸೇವನೆಯಿಂದ ಕೆಲವೊಮ್ಮೆ ಸ್ಥೂಲಕಾಯ ಎದುರಾಗಬಹುದು. ಬದಲಿಗೆ ಹಸಿ ಆಹಾರದ ಸೇವನೆಯಿಂದ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಸಿದ್ದ, ಸಂಸ್ಕರಿತ ಆಹಾರಗಳು ಮೃದುವಾಗಿರುವ ಕಾರಣ ಸುಲಭವಾಗಿ ಜೀರ್ಣಗೊಳ್ಳುವಂತಹದ್ದಾಗಿದ್ದು ಹೆಚ್ಚಿನ ಕ್ಯಾಲೋರಿಗಳನ್ನು ದಹಿಸುವ ಅಗತ್ಯ ಬೀಳುವುದಿಲ್ಲ.

ಹಸಿ ಆಹಾರ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಉರಿಯೂತವನ್ನು ಕಡಿಮೆ ಮಾಡುವುದು, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದು, ಜೀರ್ಣಕ್ರಿಯೆಗೆ ಅಗತ್ಯವಿರುವ ಕರಗದ ನಾರನ್ನು ಒದಗಿಸುವುದು, ಹೃದಯದ ಕ್ಷಮತೆ ಹೆಚ್ಚಿಸುವುದು, ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುವುದು, ಮಲಬದ್ದತೆಯ ತೊಂದರೆಗೆ ಪರಿಹಾರ ಒದಗಿಸುವುದು ಹಾಗೂ ಆರೋಗ್ಯಕರ ತೂಕವನ್ನು ಹೊಂದಲು ನೆರವಾಗುವುದು ಮುಖ್ಯವಾಗಿವೆ. ಹಸಿ ಆಹಾರವೆಂದರೆ ಕೇವಲ ತಜಾ ಹಣ್ಣು ತರಕಾರಿಗಳು ಮಾತ್ರವಲ್ಲ. ಇದರ ಜೊತೆಗೇ ಒಣಫಲಗಳು, ಬೀಜಗಳು, ಮೊಳಕೆ ಬರಿಸಿದ ಧಾನ್ಯ ಹಾಗೂ ಹಸಿ ಡೈರಿ ಉತ್ಪನ್ನಗಳೂ ಸೇರಿವೆ. ಬನ್ನಿ, ಈ ಆಹಾರಗಳನ್ನು ಸೇವಿಸಿದಾಗ ಪಡೆಯಬಹುದಾದ ಹತ್ತು ಪ್ರಯೋಜನಗಳನ್ನು ಅರಿಯೋಣ:

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಹಲವರು ಆಲಿವ್ ಎಣ್ಣೆಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಆದರೆ ಆಲಿವ್ ಎಣ್ಣೆಯನ್ನು ಹಸಿಯಾಗಿಯೇ ಸೇವಿಸಿದರೆ ಅತ್ಯುತ್ತಮ ಪ್ರಯೋಜನ ಪಡೆಯಬಹುದು ಎಂದರೆ ಅಚ್ಚರಿಯಾಗುತ್ತದೆ. ಇದರಲ್ಲಿ ವಿಟಮಿನ್ ಇ ಹಾಗೂ ಆಂಟಿಆಕ್ಸಿಡೆಂಟುಗಳು ಸಮೃದ್ಧವಾಗಿದೆ, ಈ ಪೋಷಕಾಂಶಗಳು ಅಡುಗೆಯ ಸಮಯದಲ್ಲಿ ಎಣ್ಣೆಯನ್ನು ಬಿಸಿ ಮಾಡಿದಾಗ ನಷ್ಟವಾಗುತ್ತವೆ.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು

ಬೆರ್ರಿಗಳಲ್ಲಿಯೂ ಹಲವಾರು ಪೋಷಕಾಂಶಗಳಿದ್ದು ಇವುಗಳನ್ನು ಹಸಿಯಾಗಿ ಸೇವಿಸಿದಾಗ ಮಾತ್ರವೇ ಇದರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಒಮ್ಮೆ ಈ ಹಣ್ಣುಗಳನ್ನು ಬಿಸಿಮಾಡಿದರೆ ಇದರ ಪೋಷಕಾಂಶಗಳ ಗುಣ ಬಹಳಷ್ಟು ಮಟ್ಟಿಗೆ ನಾಶವಾಗುತ್ತದೆ. ಆದ್ದರಿಂದ ಕೆಲವು ಬೆರ್ರಿ ಹಣ್ಣುಗಳನ್ನು ಮೊಸರಿನೊಂದಿಗೆ ಬೆರೆಸಿ ಅಥವಾ ಕೊಂಚ ಪ್ರಮಾಣವನ್ನು ಹಾಗೇ ಬಾಯಿಗೆ ಹಾಕಿಕೊಂಡು ಆಗಾಗ ತಿನ್ನಬೇಕು.

ಈರುಳ್ಳಿ

ಈರುಳ್ಳಿ

ಈರುಳ್ಳಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿದೆ. ನೀರುಳ್ಳಿಯ ಕಟು ವಾಸನೆಗೆ ಇದರಲ್ಲಿರುವ ಗಂಧಕವೇ ಕಾರಣ. ಈರುಳ್ಳಿಯನ್ನು ಹಸಿಯಾಗಿ ಸೇವಿಸಿದಾಗ ಇದರಲ್ಲಿರುವ ಪೋಷಕಾಂಶಗಳು ಶ್ವಾಸಕೋಶದ ಕ್ಯಾನ್ಸರ್ ಹಾಗೂ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಗಳಿಂದ ರಕ್ಷಣೆ ಒದಗಿಸುತ್ತದೆ. ಮದ್ಯಾಹ್ನದ ಅಥವಾ ರಾತ್ರಿಯ ಊಟದಲ್ಲಿ ಒಂದೆರಡು ನೀರುಳ್ಳಿಯನ್ನು ಕತ್ತರಿಸಿ ಸಾಲಾಡ್ ರೂಪದಲ್ಲಿ ಸೇವಿಸಿ:

ಒಣಫಲಗಳು

ಒಣಫಲಗಳು

ಒಣಫಲಗಳನ್ನು ಎಂದಿಗೂ ಬಿಸಿಮಾಡಬಾರದು. ಬಿಸಿ ಮಾಡಿದಾಗ ಇದರ ಪೋಷಕಾಂಶಗಳ ಗುಣ ಕಡಿಮೆಯಾಗುತ್ತದೆ. ಹಸಿಯಾಗಿದ್ದಾಗ ಇದರಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೇಶಿಯಂ ಹಾಗೂ ಕಬ್ಬಿಣ ಇರುತ್ತದೆ. ಬಿಸಿ ಮಾಡಿದಾಗ ಇವೆರಡರ ಪ್ರಮಾಣ ಕುಗ್ಗುತ್ತದೆ ಹಾಗೂ ಕ್ಯಾಲೋರಿಗಳು ಮತ್ತು ಕೊಬ್ಬಿನ ಪ್ರಮಾಣ ಹೆಚ್ಚುತ್ತದೆ.

ಕೆಂಪು ದೊಣ್ಣೆ ಮೆಣಸು

ಕೆಂಪು ದೊಣ್ಣೆ ಮೆಣಸು

ಒಂದು ಸಾಮಾನ್ಯ ಗಾತ್ರದ ಹಸಿ ಕೆಂಪುದೊಣ್ಣೆ ಮೆಣಸಿನಲ್ಲಿ ಕೇವಲ 32 ಕ್ಯಾಲೋರಿಗಳಿರುತ್ತವೆ ಹಾಗೂ ಇದರಲ್ಲಿ ವಿಟಮಿನ್ ಸಿ ಸಮೃದ್ದವಾಗಿದೆ. ಆದರೆ ಬೇಯಿಸಿದಾಗ ಈ ಪೋಷಕಾಂಶಗಳು ನಷ್ಟವಾಗುತ್ತವೆ. ಆದ್ದರಿಂದ ಈ ದೊಣ್ಣೆಮೆಣಸನ್ನು ಕತ್ತರಿಸಿ ಹಸಿಯಾಗಿ ಸೇವಿಸುವುದು ಆರೋಗ್ಯಕರ. ಬದಲಿಗೆ ಕೊಂಚವೇ ಗ್ರಿಲ್ ಮಾಡಿ ಹುಮ್ಮುಸ್ ಎಂಬ ಎಳ್ಳಿನ ಪದಾರ್ಥದೊಂದಿಗೆ ಸೇವಿಸಬಹುದು.

ತೆಂಗಿನ ತುರಿ

ತೆಂಗಿನ ತುರಿ

ತೆಂಗಿನ ತುರಿಯನ್ನು ಹಸಿಯಾಗಿ ಸೇವಿಸಿದಷ್ಟೂ ಆರೋಗ್ಯಕರ. ಏಕೆಂದರೆ ಇದರಲ್ಲಿ ಅಪಾರವಾಗಿರುವ ಪೋಷಕಾಂಶಗಳು ಮತ್ತು ಎಲೆಕ್ಟ್ರೋಲೈಟುಗಳು ಬಿಸಿ ಮಾಡಿದಾಗ ನಷ್ಟಗೊಳ್ಳುತ್ತವೆ. ಅಲ್ಲದೇ ವಿಶೇಷವಾಗಿ ಎಳನೀರಿನಲ್ಲಿ ಅದ್ಭುತ ಪ್ರಮಾಣದ ಎಲೆಕ್ಟ್ರೋಲೈಟುಗಳಿವೆ. ಇವು ದೇಹ ಬಳಲಿಕೆ ನೀಗುವುದರ ಜೊತೆಗೇ ಮೆಗ್ನೀಶಿಯಂ, ಪೊಟ್ಯಾಷಿಯಂ ಹಾಗೂ ಸೋಡಿಯಂ ಲವಣಗಳನ್ನೂ ಒದಗಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಮಸಾಲೆಯ ರೂಪದಲ್ಲಿ ಬೆರೆಸಿದ ಯಾವುದೇ ಖಾದ್ಯದ ರುಚಿ ಹೆಚ್ಚುತ್ತದೆ. ಬೆಳ್ಳುಳ್ಳಿಯನ್ನು ಬೇಯಿಸಿದಾದ ಇದಲ್ಲಿರುವ ಪೋಷಕಾಂಶಗಳ ಪ್ರಮಾಣ ಕುಗ್ಗುತ್ತದೆ. ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣವಿದೆ. ಈ ಗುಣದ ಪೂರ್ಣ ಪ್ರಯೋಜನ ಪಡೆಯಲು ಬೆಳ್ಳುಳ್ಳಿಯನ್ನು ಹಸಿಯಾಗಿಯೇ ಸೇವಿಸಬೇಕಾಗುತ್ತದೆ.

ಬೀಟ್ರೂಟ್

ಬೀಟ್ರೂಟ್

ಇದರ ಗಾಢ ಕೆಂಪುಮಿಶ್ರಿತ ನೇರಣೆ ಬಣ್ಣ ನೀಡಲು ಕಾರಣವಾಗಿರುವ ಪೋಷಕಾಂಶಗಳೇ ಇದರ ರುಚಿಗೂ ಕಾರಣವಾಗಿವೆ. ಇದರಲ್ಲಿ ಅದ್ಭುತ ಪ್ರಮಾಣದ ಫೋಲೇಟ್ ಇದೆ. ಇದು ಜೀವಕೋಶಗಳ ಬೆಳವಣಿಗೆ ಹಾಗೂ ಮೆದುಳಿನ ಕ್ಷಮತೆ ಹೆಚ್ಚಲು ಅಗತ್ಯವಾಗಿದೆ. ಆದರೆ ಬೀಟ್ರೂಟ್ ಅನ್ನು ಬಿಸಿ ಮಾಡಿದಾಗ ಇದರ ಒಟ್ಟಾರೆ ಪೋಷಕಾಂಶಗಳಲ್ಲಿ ಕಾಲು ಭಾಗದಷ್ಟು ನಷ್ಟಗೊಳ್ಳುತ್ತವೆ.

ಟೊಮಾಟೋ

ಟೊಮಾಟೋ

ಟೊಮಾಟೋ ಒಂದು ಹಣ್ಣು, ನಾವಿದನ್ನು ತರಕಾರಿಯಾಗಿ ಬಳಸುತ್ತಿದ್ದೇವೆ. ಇದರಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವಾರು ವಿಟಮಿನ್ನುಗಳು, ಖನಿಜಗಳು ಹಾಗೂ ಪೋಷಕಾಂಶಗಳಿವೆ. ಟೊಮಾಟೋ ಹಸಿಯಾಗಿ ಸೇವಿಸಿದರೆ ಈ ಪೋಷಕಾಂಶಗಳ ಗರಿಷ್ಟ ಪ್ರಯೋಜನ ಪಡೆಯಲು ಸಾಧ್ಯ. ಹಸಿ ಟೋಮಾಟೋ ಸೇವನೆ ಮೂಳೆಗಳ ಸವೆತ, ಕ್ಯಾನ್ಸರ್, ಮಧುಮೇಹ, ಮೂತ್ರಪಿಂಡಗಳಲ್ಲಿ ಕಲ್ಲು, ಹೃದಯ ಸ್ತಂಭನ ಹಾಗೂ ಸ್ಥೂಲಕಾಯ ಮೊದಲಾದವುಗಳ ವಿರುದ್ದ ರಕ್ಷಣೆ ನೀಡಬಲ್ಲುದು.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಬೆಣ್ಣೆಹಣ್ಣು ಅಥವಾ ಅವೋಕ್ಯಾಡೋ ದಲ್ಲಿಯೂ ಹೆಚ್ಚಿನ ಪ್ರಮಾಣದ ಕರಗುವ ನಾರು ಇದೆ ಹಾಗೂ ಕಾರ್ಬೋಹೈಡ್ರೇಟುಗಳು ಕಡಿಮೆ ಪ್ರಮಾಣದಲ್ಲಿವೆ. ಹಾಗೂ ಇದರಲ್ಲಿ ಕ್ಯಾರೋಟಿನಾಯ್ಡುಗಳೂ ಉತ್ತಮ ಪ್ರಮಾಣದಲ್ಲಿವೆ. ಈ ಹಣ್ಣನ್ನು ಸಹಾ ಹಸಿಯಾಗಿ ಸಾಲಾಡ್, ಸ್ಯಾಂಡ್ವಿಚ್ ಹಾಗೂ ರೊಟ್ಟಿಯನ್ನು ಮುಳುಗಿಸಿ ತಿನ್ನಬಹುದಾದ ಖಾದ್ಯದ ರೂಪದಲ್ಲಿ ಸೇವಿಸಬಹುದು. ಆದರೆ ಇದರ ತಿರುಳನ್ನು ಬೇಯಿಸಿದಾಗ ಇದರ ಬಹುತೇಕ ಪೋಷಕಾಂಶಗಳು ನಷ್ಟವಾಗುತ್ತವೆ. ಒಂದು ವೇಳೆ ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಆಪ್ತರು ಹಾಗೂ ಸ್ನೇಹಿತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಅವರೂ ಇದರ ಪ್ರಯೋಜನವನ್ನು ಪಡೆಯುವಂತಾಗಲಿ.

English summary

10 Healthy Foods That Can Be Eaten Raw

Have you ever heard of a raw food diet? If you are unfamiliar with the term, then let us tell you that raw-food diet is mostly eating unprocessed and uncooked foods, so that you get all the nutrients without the dangerous additives. This means that eating cooked food can sometimes let you gain weight, while people who eat raw food are more inclined to lose weight. This is because highly processed foods are more easy to digest and it's softer and requires less energy from our bodies to break it down.