For Quick Alerts
ALLOW NOTIFICATIONS  
For Daily Alerts

ಶೀಘ್ರ ದೇಹದ ತೂಕ ಇಳಿಸಿಕೊಳ್ಳಬೇಡಿ! ಹೀಗೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

|

ಇಂದು ಆರೋಗ್ಯದ ಕಾಳಜಿಗಿಂತಲೂ ತೂಕ ಇಳಿಕೆಯ ಬಗ್ಗೆಯೇ ಹೆಚ್ಚಾಗಿ ಜನರು ಕುತೂಹಲ ವ್ಯಕ್ತಪಡಿಸುತ್ತಿರುವುದರಿಂದ ಯಾವುದೇ ಸರ್ಜ್ ಇಂಜಿನ್ ನಲ್ಲಿ ತೂಕ ಇಳಿಕೆ ಅಥವಾ ವೇಯ್ಟ್ ಲಾಸ್ ಎಂದು ದಾಖಲಿಸಿ ಹುಡುಕಿದರೆ ನಮಗೆ ಲಕ್ಷಾಂತರ ಲೇಖನ ಹಾಗೂ ವೀಡಿಯೋಗಳು ದೊರಕುತ್ತವೆ. ಇವೆಲ್ಲದರಲ್ಲಿರುವ ಒಂದು ಸಮಾನವಾದ ಮಾಹಿತಿ ಎಂದರೆ ತೂಕ ಇಳಿಸುವ ಮೂಲಕ ಗಳಿಸುವ ಆರೋಗ್ಯ! ಎಂದೇ ಆಗಿದೆ. ತೂಕವನ್ನು ಶೀಘ್ರವಾಗಿ ಇಳಿಸಲು ಏನು ಮಾಡಬೇಕು, ಏನು ತಿನ್ನಬೇಕು, ಏನು ತಿನ್ನಬಾರದು ಎಂಬೆಲ್ಲಾ ಬಗ್ಗೆ ಹಲವಾರು ಮಾಹಿತಿಗಳಿರುತ್ತವೆ. ಆದರೆ ತೂಕವನ್ನು ಶೀಘ್ರವಾಗಿ ಇಳಿಸಿಕೊಳ್ಳುವುದೂ ನಿಸರ್ಗಕ್ಕೆ ವಿರುದ್ದವಾದ ದಿಕ್ಕಿನಲ್ಲಿರುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಇದು ಆರೋಗ್ಯಕ್ಕೆ ಮಾರಕವೇ ಹೌದು.

ಉತ್ತಮ ಆರೋಗ್ಯಕ್ಕಾಗಿ ಉತ್ತಮ ದೇಹದಾರ್ಢ್ಯವನ್ನು ಹೊಂದಿರುವುದು ಹಾಗೂ ತೂಕವನ್ನು ಬಾಡಿ ಮಾಸ್ ಇಂಡೆಕ್ಸ್ ಅಥವಾ ಎತ್ತರಕ್ಕನುಗುಣವಾದ ತೂಕದ ಮಿತಿಗಳಲ್ಲಿ ಇರಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ನಾವೆಲ್ಲಾ ತಿಳಿದೇ ಇದ್ದೇವೆ.

ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಬೇಕೆಂದರೆ ನೀಡುವ ಕಾರಣಗಳು ಇಂತಿವೆ:

ಸ್ಥೂಲಕಾಯ ಆವರಿಸಿದ್ದು ಈ ಮೂಲಕ ಹಲವಾರು ಕಾಯಿಲೆಗಳು ಆವರಿಸತೊಡಗಿದಾಗ, ಅಜೀರ್ಣತೆಯಿಂದ ಹಿಡಿದು ಹೃದ್ರೋಗದವರೆಗಿನ ರೋಗಗಳು ಆಗಮಿಸಿದಾಗ ನಿಮ್ಮ ವೈದ್ಯರೇ ತೂಕ ಇಳಿಸಿಕೊಳ್ಳಲು ಸಲಹೆ ಮಾಡುತ್ತಾರೆ. ಸ್ಥೂಲಕಾಯದಿಂದ ದೇಹದ ರೂಪ ಅನಾಕರ್ಷಣೀಯವಾಗಿರುವುದನ್ನು ಸಹಿಸದೇ ಹಿಂದಿನ ಮೈಕಟ್ಟು ಪಡೆಯಲು ನಮ್ಮ ಅಕ್ಕಪಕ್ಕದವರ ಕುಹಕ ಮಾತುಗಳನ್ನು ಕೇಳಲು ಸಾಧ್ಯವಾಗದೇ ಅಥವಾ ಬೇರೆ ವೈಯಕ್ತಿಕ ಕಾರಣಗಳೂ ಇರಬಹುದು.

ಹಾಗಾಗಿ, ತೂಕ ಇಳಿಸುವ ಅಗತ್ಯ ಆರೋಗ್ಯದ ದೃಷ್ಟಿಯಿಂದಾದರೆ ಈ ನಿರ್ಧಾರವನ್ನು ಖಂಡಿತಾ ಕೈಗೊಳ್ಳಬೇಕು, ಆದರೆ ಆರೋಗ್ಯಕ್ಕೆ ಮಾರಕವಾಗದಂತೆ ಮಾತ್ರ! ಹಾಗಾಗದೇ ಹೋದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಒಂದು ವೇಳೆ ತೂಕ ಇಳಿಸುವುದೇ ಮುಖ್ಯವಾಗಿ ಹೆಚ್ಚಿನ ಒತ್ತು ನೀಡಿದರೆ ಇದರಿಂದ ಶೀಘ್ರವಾಗಿ ತೂಕವೇನೋ ಇಳಿಯುತ್ತದೆ. ಆದರೆ ಆರೋಗ್ಯಕ್ಕೆ ಎದುರಾಗುವ ತೊಂದರೆಗಳು ಹೀಗಿವೆ..

*ಸಾರ್ಕೋಪೀನಿಯಾ

*ಅಪೌಷ್ಟಿಕತೆ

*ದೇಹದಲ್ಲಿ ಎಲೆಕ್ಟ್ರೋಲೈಟುಗಳ ಅಸಮತೋಲನ

*ಪಿತ್ತಕೋಶದಲ್ಲಿ ಕಲ್ಲು

*ಹೃದ್ರೋಗಗಳು

*ಮಾಸಿಕ ದಿನಗಳಲ್ಲಿ ಏರುಪೇರು

*ಮಲಬದ್ದತೆ

*ಖಿನ್ನತೆ

*ಕ್ಯಾನ್ಸರ್

 ಸಾರ್ಕೋಪೀನಿಯಾ

ಸಾರ್ಕೋಪೀನಿಯಾ

ಕೆಲವು ಸಂದರ್ಭಗಳಲ್ಲಿ ತೂಕ ಇಳಿಸುವ ಭೂತ ಹೊಕ್ಕಿರುವ ವ್ಯಕ್ತಿಗಳು ಶೀಘ್ರವಾಗಿ ತಮ್ಮ ತೂಕ ಇಳಿಯಬೇಕೆಂದು ನಿತ್ಯದ ಊಟದ ಬದಲಿಗೆ ಸತ್ವವಿಲ್ಲದ ಊಟವನ್ನು ಮಾಡುವುದು ಅತಿಯಾದ ಪ್ರಮಾಣದ ವ್ಯಾಯಾಮ ಮಾದುವುದು, ಸಾಧ್ಯವಿದ್ದಷ್ಟೂ ಆಹಾರ ಸೇವನೆಯನ್ನು ನಿಲ್ಲಿಸುವುದು ಎಲ್ಲವನ್ನೂ ಮಾಡತೊಡಗುತ್ತಾರೆ. ಪರಿಣಾಮವಾಗಿ ತೂಕ ಇಳಿದರೂ, ದೇಹದ ಪ್ರಮುಖ ಅಂಗಗಳಿಗೂ ಸೂಕ್ತ ಪೋಷಕಾಂಶಗಳು ದೊರಕದೇ ಸೊರಗಿ ತೂಕ ಇನ್ನಷ್ಟು ಇಳಿಯುತ್ತವೆ. ಇದಕ್ಕೆ ಸಾರ್ಕೋಪೀನಿಯಾ ಅಥವಾ ಸ್ನಾಯುಗಳ ನಷ್ಟತೆ ಎಂದು ಕರೆಯುತ್ತಾರೆ. ದೇಹಕ್ಕೆ ಯಾವಾಗ ಸಾಕಷ್ಟು ಆಹಾರ ದೊರಕುವುದಿಲ್ಲವೋ ಆಗ ದೇಹ ಸ್ನಾಯುಗಳ ಪ್ರಮಾಣವನ್ನು ಕಡಿಮೆಗೊಳಿಸಿ ಕೇವಲ ಪ್ರಮುಖ ಅಂಗಗಳ ಆರೋಗ್ಯವನ್ನು ಮಾತ್ರವೇ ಕಾಪಾಡಿಕೊಳ್ಳಲು ಪ್ರಾಮುಖ್ಯತೆ ನೀಡುತ್ತದೆ. ಇದನ್ನೇ ಕನ್ನಡದಲ್ಲಿ 'ಮೂಳೆ-ಚಕ್ಕಳ' ಎಂದು ಹಿರಿಯರು ಕರೆಯುತ್ತಾ ಬಂದಿದ್ದಾರೆ. ಇದೊಂದು ಅಪಾಯಕರ ಸ್ಥಿತಿಯಾಗಿದ್ದು ತೂಕ ಶೀಘ್ರ ಕಳೆದುಕೊಳ್ಳುವವರಿಗೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು.

ಅಪೌಷ್ಟಿಕತೆ

ಅಪೌಷ್ಟಿಕತೆ

ತೂಕ ಇಳಿಸಲು ಊಟದಿಂದ ವಿಮುಖರಾಗುವವರಿಗೆ ಇದು ಸ್ವಾಭಾವಿಕವಾಗಿ ಎದುರಾಗುತ್ತದೆ. ಯಾವಾದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರಕದೇ ಹೋಗುತ್ತವೆಯೋ ಆಗ ದೇಹ ಶಿಥಿಲವಾಗತೊಡಗುತ್ತದೆ ಹಾಗೂ ದೇಹಕ್ಕೆ ಶಕ್ತಿಯ ಒಳಹರಿಯುವಿಕೆ ಕಡಿಮೆಯಾಗಿ ನಿತ್ಯದ ಕೆಲಸಗಳಿಗೆಲ್ಲಾ ಶಕ್ತಿ ಸಾಲದೇ ಹೋಗುತ್ತದೆ ಹಾಗೂ ಸುಸ್ತು ಆವರಿಸುತ್ತದೆ. ಒಂದು ವೇಳೆ ಊಟ ಮಾಡದೇ ಇರುವ ಬಗ್ಗೆ ಈ ವ್ಯಕ್ತಿ ತನ್ನ ಹಠಮಾರಿತನವನ್ನು ಇನ್ನಷ್ಟು ಮುಂದುವರೆಸಿದರೆ, ದೇಹದ ಕೆಲವು ಪ್ರಮುಖ ಅಂಗಗಳು ಕಾರ್ಯನಿರ್ವಹಿಸಲು ವಿಫಲವಾಗಿ ಕೆಲವೊಮ್ಮೆ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ!

ದೇಹದಲ್ಲಿ ಎಲೆಕ್ಟ್ರೋಲೈಟುಗಳ ಅಸಮತೋಲನ

ದೇಹದಲ್ಲಿ ಎಲೆಕ್ಟ್ರೋಲೈಟುಗಳ ಅಸಮತೋಲನ

ದೇಹದ ಅನಗತ್ಯ ತೂಕವನ್ನು ತಕ್ಷಣವೇ ಇಳಿಸಲಿಕ್ಕಾಗಿ ಕೆಲವರು ಅತಿ ಕಡಿಮೆ ಊಟ ಮತ್ತು ಕೊಬ್ಬು ಕರಗಿಸಲು ಇತರ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಖನಿಜಗಳು ದೊರಕದೇ ಹೋಗಬಹುದು ಹಾಗೂ ದೇಹದಲ್ಲಿದ್ದ ಖನಿಜದ ಸಂಗ್ರಹವೂ ಶೀಘ್ರವೇ ಖರ್ಚಾಗಿಬಿಡಬಹುದು. ಯಾವಾಗ ದೇಹಕ್ಕೆ ಅಗತ್ಯ ಪ್ರಮಾಣದ ಸೋಡಿಯಂ, ಗ್ಲುಕೋಸ್, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಕಬ್ಬಿಣ ಮೊದಲಾದವು ದೊರಕುವುದಿಲ್ಲವೋ ಆಗ ದೇಹದಲ್ಲಿ ಎಲೆಕ್ಟ್ರೋಲೈಟುಗಳ ಅಸಮತೋಲನ ಎದುರಾಗುತ್ತದೆ. ಪರಿಣಾಮವಾಗಿ ವಾಂತಿ, ಜ್ವರ, ಅತಿಸಾರ ಮೊದಲಾದವು ಎದುರಾಗುತ್ತವೆ.

ಪಿತ್ತಕೋಶದಲ್ಲಿ ಕಲ್ಲು

ಪಿತ್ತಕೋಶದಲ್ಲಿ ಕಲ್ಲು

ತೂಕವನ್ನು ಶೀಘ್ರವಾಗಿ ಇಳಿಸುವ ಮೂಲಕ ಎದುರಿಸಬೇಕಾದ ಇನ್ನೊಂದು ಅಪಾಯವೆಂದರೆ ಪಿತ್ತಕೋಶದ ಕಲ್ಲುಗಳು. ಸಾಮಾನ್ಯವಾಗಿ ಈ ಕಲ್ಲುಗಳು ಸ್ಥೂಲದೇಹಿಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ತೂಕ ಇಳಿಸಲು ಆಹಾರದ ಪ್ರಮಾಣ ಇಳಿಸುವ ಮತ್ತು ಅತಿ ಹೆಚ್ಚಿನ ವ್ಯಾಯಾಮ ಮೊದಲಾದ ಅನಾರೋಗ್ಯಕರ ಕ್ರಮಗಳನ್ನು ಕೈಗೊಳ್ಳುವವರಲ್ಲಿಯೂ ಈ ಕಲ್ಲುಗಳು ಕ್ಷಿಪ್ರಸಮದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಏಕೆಂದರೆ ತೀವ್ರಗೊಳಿಸುವ ದೇಹದ ಚಟುವಟಿಕೆಗಳ ಕಾರಣ ಪಿತ್ತಕೋಶದಲ್ಲಿ ಸ್ರವಿಸಿದ್ದ ಪಿತ್ತರಸ ಸಮರ್ಪಕವಾಗಿ ಬಳಸಿಕೊಳ್ಳದೇ ಕೊಂಚ ಪ್ರಮಾಣ ಉಳಿದುಬಿಡುತ್ತದೆ. ಪರಿಣಾಮವಾಗಿ ಯಕೃತ್ ನಲ್ಲಿ ಪಿತ್ತರಸ ಗಟ್ಟಿಯಾಗಲು ಹಾಗೂ ಪಿತ್ತಕೋಶದಲ್ಲಿಯೂ ಚಿಕ್ಕ ಚಿಕ್ಕ ಕಲ್ಲುಗಳಂತೆ ಹರಳುಗಟ್ಟುತ್ತವೆ. ಇವೇ ಪಿತ್ತಕೋಶದ ಕಲ್ಲುಗಳು ಅಥವಾ gallstones. ಈ ಸ್ಥಿತಿ ಎದುರಾದರೆ ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಬೀಳಬಹುದು!

ಹೃದ್ರೋಗಗಳು

ಹೃದ್ರೋಗಗಳು

ತೂಕ ಇಳಿಸಬೇಕೆಂಬ ಇರಾದೆಯಿಂದ ಊಟದ ಪ್ರಮಾಣವನ್ನೇ ತಗ್ಗಿಸಿದಾಗ ದೇಹದಲ್ಲಿ ಅಗತ್ಯ ಪ್ರಮಾಣದ ಪೋಷಕಾಂಶಗಳ ಕೊರತೆಯುಂಟಾಗುತ್ತದೆ. ಪರಿಣಾಮವಾಗಿ ರಕ್ತದ ಒತ್ತಡವೂ ಅತಿಯಾಗಿ ಕಡಿಮೆಯಾಗುತ್ತದೆ. ಈ ಕಡಿಮೆ ಒತ್ತಡದಲ್ಲಿ ಇರುವ ರಕ್ತವನ್ನೇ ದೇಹದ ಎಲ್ಲಾ ಭಾಗಗಳಿಗೆ ತಲುಪಿಸಲು ಹೃದಯಕ್ಕೆ ಹೆಚ್ಚಿನ ಶ್ರಮ ಬೀಳುತ್ತದೆ. ಪರಿಣಾಮವಾಗಿ ಹಲವಾರು ಹೃದಯ ಸಂಬಧಿ ತೊಂದರೆಗಳು ಮತ್ತು ಸ್ತಂಭನವೂ ಎದುರಾಗಬಹುದು. ನೆನಪಿರಲಿ! ಅಧಿಕ ರಕ್ತದೊತ್ತಡಕ್ಕಿಂತಲೂ ಕಡಿಮೆ ರಕ್ತದೊತ್ತಡವೇ ಹೆಚ್ಚು ಅಪಾಯಕಾರಿ! ರಕ್ತದೊತ್ತಡ ಅಧಿಕವಾಗಿದ್ದರೆ ಸಾವು ಸಂಭವಿಸುವ ಸಾಧ್ಯತೆ ಕಡಿಮೆ, ಆದರೆ ಕಡಿಮೆ ಹೃದಯದೊತ್ತಡದಿಂದ ಸಮಯಾವಕಾಶವನ್ನೇ ನೀಡದಂತೆ ವೈಫಲ್ಯ ಆವರಿಸಬಹುದು.

ಮಾಸಿಕ ದಿನಗಳಲ್ಲಿ ಏರುಪೇರು

ಮಾಸಿಕ ದಿನಗಳಲ್ಲಿ ಏರುಪೇರು

ತಮ್ಮ ದೇಹದ ತೂಕವನ್ನು ಶೀಘ್ರವಾಗಿ ಇಳಿಸಬೇಕೆಂಬ ಇರಾದೆಯಿಂದ ಒಂದು ವೇಳೆ ಮಹಿಳೆಯರೂ ತಮ್ಮ ಆಹಾರದ ಪ್ರಮಾಣವನ್ನು ಅತಿಯಾಗಿ ಕಡಿಮೆ ಮಾಡಿದರೆ ಅಥವಾ ದಿನವಿಡೀ ಕೇವಲ ಹಣ್ಣು ತರಕಾರಿಗಳನ್ನು ಮಾತ್ರವೇ ತಿಂದುಕೊಂದಿದ್ದರೆ ಇದು ಇವರ ಮಾಸಿಕ ದಿನಗಳನ್ನು ಅಪಾರವಾಗಿ ಏರುಪೇರುಗೊಳಿಸಬಹುದು ಹಾಗೂ ಫಲವತ್ತತೆಯ ಮೇಲೆ ಪ್ರಭಾವ ಬೀರಬಹುದು. ವಿಶೇಷವಾಗಿ ಮಹಿಳೆಯರಿಗೆ ಅಗತ್ಯವಾದ ಕೆಲವು ಪೋಷಕಾಂಶಗಳು ಹಾಗೂ ಖನಿಜಗಳು ಲಭಿಸದೇ ಹೋದರೆ ಇದರ ಪರಿಣಾಮ ಹಲವು ರಸದೂತಗಳ ಪ್ರಮಾಣದ ಮೇಲೆ ನೇರವಾಗಿ ಆಗುವ ಮೂಲಕ ಮಾಸಿಕ ದಿನಗಳಲ್ಲಿ ಏರುಪೇರು ಉಂಟುಮಾಡಬಹುದು.

ಮಲಬದ್ಧತೆ

ಮಲಬದ್ಧತೆ

ಶೀಘ್ರವಾಗಿ ತೂಕ ಇಳಿಸಲೆಂದು ಯಾವುದೋ ನಿಯಮದಂತೆ ಪ್ರಸ್ತುತಗೊಳಿಸಲ್ಪಟ್ಟ ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುವವರ ಆರೋಗ್ಯವನ್ನು ಪರಿಶೀಲಿಸಿದ ಪರೀಕ್ಷೆಗಳು ಹಾಗೂ ಸಮೀಕ್ಷೆಗಳ ಮೂಲಕ ಈ ವ್ಯಕ್ತಿಗಳಲ್ಲಿ ಹೆಚ್ಚಿನವರಿಗೆ ಅಜೀರ್ಣತೆ ಮತ್ತು ಮಲಬದ್ದತೆ ಎದುರಾಗಿರುವುದು ಕಂಡುಬಂದಿದೆ. ಏಕೆಂದರೆ ದೇಹಕ್ಕೆ ಅಗತ್ಯ ಪ್ರಮಾಣದ ಕರಗದ ಮತ್ತು ಕರಗುವ ನಾರು ಲಭಿಸದೇ ಹೋಗುವ ಕಾರಣ ಕರುಳುಗಳಲ್ಲಿ ಜೀರ್ಣಗೊಂಡ ಆಹಾರ ವಿಪರೀತ ಗಟ್ಟಿಯಾಗಿಬಿಡುತ್ತದೆ ಹಾಗೂ ಇದೇ ಮಲಬದ್ದತೆಗೆ ಮೂಲವಾಗುತ್ತದೆ.

ಖಿನ್ನತೆ

ಖಿನ್ನತೆ

ಇಂದಿನ ದಿನಗಳಲ್ಲಿ ಮಾನಸಿಕ ಒತ್ತಡದ ಕಾರಣದಿಂದಾಗಿ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಏರುಕ್ರಮದಲ್ಲಿದೆ ಹಾಗೂ ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂದು ಈ ಸ್ಥಿತಿಗೆ ತಲುಪಿರುವವರು ಇದಕ್ಕೆ ತಮ್ಮ ತೂಕ ಇಳಿಸುವ ಕೆಲವು ಕ್ರಮಗಳೇ ಕಾರಣವೆಂಬುದನ್ನು ಸರ್ವಥಾ ಒಪ್ಪುವುದಿಲ್ಲ, ಏಕೆಂದರೆ ಖಿನ್ನತೆ ಮಾನಸಿಕ ಕಾಯಿಲೆಯಾಗಿದ್ದು ದೇಹಕ್ಕೆ ಕೈಗೊಂಡ ಕ್ರಮದಿಂದಾಗಿ ಈ ತೊಂದರೆ ಹೇಗೆ ಬರಲು ಸಾಧ್ಯ ಎಂಬ ತರ್ಕವನ್ನು ಒಡ್ಡುತ್ತಾರೆ. ವಾಸ್ತವವಾಗಿ ನಾವು ಸೇವಿಸುವ ಆಹಾರದ ಹೆಚ್ಚಿನ ಪೋಷಕಾಂಶ ಮತ್ತು ರಕ್ತಪರಿಚಲನೆಯ ಸಿಂಹಪಾಲು ನಮ್ಮ ಮೆದುಳಿಗೇ ಬೇಕಾಗಿರುತ್ತದೆ. ಪೋಷಕಾಂಶಗಳ ಪ್ರಮಾಣ ಕಡಿಮೆಯಾದಾಗ ಮೆದುಳಿಗೆ ತಲುಪುವ ಪ್ರಮಾಣವೂ ಕಡಿಮೆಯಾಗುತ್ತದೆ ಹಾಗೂ ಇದು ಮೆದುಳಿನ ಕಾರ್ಯವಿಧಾನಕ್ಕೆ ಅಗತ್ಯವಾಗಿರುವ ಕೆಲವು ರಾಸಾಯನಿಕಗಳ ಪ್ರಮಾಣದಲ್ಲಿ ಏರುಪೇರಾಗಲು ಕಾರಣವಾಗಬಹುದು. ಇದು ಉದ್ವೇಗ, ಖಿನ್ನತೆ, ಮಾನಸಿಕ ಒತ್ತಡ ಮೊದಲಾದವುಗಳಿಗೆ ಕಾರಣವಾಗಬಹುದು.

ಕ್ಯಾನ್ಸರ್

ಕ್ಯಾನ್ಸರ್

ಕೆಲವಾರು ವೈಜ್ಞಾನಿಕ ಸಂಶೋಧನೆಗಳಲ್ಲಿ ಕಂಡುಕೊಂಡಿರುವಂತೆ ಅತಿ ಶೀಘ್ರವಾಗಿ ತೂಕ ಇಳಿಸುವವರಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯಿಂದ ದೇಹದ ಅಂಗಗಳು ಶಿಥಿಲವಾಗುವುದು ಮಾತ್ರವಲ್ಲ, ಕೆಲವು ಬಗೆಯ ಕ್ಯಾನ್ಸರ್ ಆವರಿಸಲು ಕಾರಣವೂ ಆಗಬಹುದು. ವಿಶೇಷವಾಗಿ ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮೊದಲಾದವು. ಅತಿಯಾದ ಆಹಾರದ ಕಟ್ಟುನಿಟ್ಟು ಮತ್ತು ವ್ಯಾಯಾಮದಿಂದ ದೇಹದ ಸಹಜ ರಾಸಾಯನಿಕ ಕ್ರಿಯೆಗಳು ಬದಲಾಗುವ ಕಾರಣ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆಗಳಿಗೆ ಹೆಚ್ಚಿನ ಚುರುಕು ದೊರಕುತ್ತದೆ. ಆರೋಗ್ಯಕರ ಆಹಾರಗಳ ಬದಲಿಗೆ ಸಂಸ್ಕರಿತ ಮತ್ತು ಸಿದ್ಧ ಆಹಾರಗಳನ್ನು ಬಹುಕಾಲದವರೆಗೆ ಸೇವಿಸಿದಾಗಲೂ ದೇಹದಲ್ಲಿ ಅನಗತ್ಯ ರಾಸಾಯನಿಕಗಳು ಮತ್ತು ಕೊಬ್ಬಿನ ಸಂಗ್ರಹ ಹೆಚ್ಚುತ್ತಾ ಹೋಗುತ್ತವೆ. ತೂಕ ಇಳಿಸಲು ಆಹಾರಕ್ರಮದಲ್ಲಿ ಕಟ್ಟುನಿಟ್ಟು ಪ್ರಾರಂಭಿಸಿದಾಗ ಕೊಬ್ಬನ್ನು ದೇಹ ಬಳಸಿಕೊಂಡು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ತನ್ಮೂಲಕ ಈ ಕೊಬ್ಬಿನ ಕಣಗಳಲ್ಲಿ ಸಂಗ್ರಹವಾಗಿದ್ದ ಅನಗತ್ಯ ರಾಸಾಯನಿಕಗಳೂ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ. ಈ ಅಪಾರ ಪ್ರಮಾಣದ ರಾಸಾಯನಿಕಗಳನ್ನು ಕಡಿಮೆ ಸಮಯದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗದೇ ಇವುಗಳ ಪ್ರಭಾವಕ್ಕೆ ಒಳಗಾದ ಜೀವಕೋಶಗಳು ನಿಯಂತ್ರಣ ತಪ್ಪಿ ದ್ವಿಗುಣಗೊಳ್ಳುತ್ತಾ ಸಾಗುತ್ತವೆ, ಈ ಸ್ಥಿತಿಗೆ cancer cascade ಎಂದು ಕರೆಯುತ್ತಾರೆ. ಮುಂದುವರೆಯುವ ಈ ಸ್ಥಿತಿ ನಿಧಾನವಾಗಿ ಅಂಗವನ್ನೇ ಕಬಳಿಸುತ್ತಾ ಕ್ಯಾನ್ಸರ್ ಗಡ್ಡೆಯ ರೂಪ ತಳೆಯುತ್ತದೆ.

English summary

Dangers Of Unhealthy Weight Loss

We must definitely make an effort to lose weight when we need to, however, it must be done in a healthy way, otherwise, weight loss can be dangerous. So, here are surprising reasons why unhealthy weight loss can be harmful for health.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more