For Quick Alerts
ALLOW NOTIFICATIONS  
For Daily Alerts

ಆಹಾರಕ್ಕೆ ಪರ್ಯಾಯ ಪದವೇ ಕೆಂಪಕ್ಕಿ ಅನ್ನ

By * ಸತ್ಯಪ್ರಕಾಶ್, ಹೆಚ್.ಕೆ , ಬೆಂಗಳೂರು
|
Red Benefits of Red Rice
ಭತ್ತದಿಂದ ಅಕ್ಕಿ, ಅಕ್ಕಿಯಿಂದ ಅನ್ನ, ಆಹಾರಕ್ಕೆ ಪರ್ಯಾಯ ಪದವೇ ಅನ್ನ. ದಕ್ಷಿಣ ಭಾರತದಲ್ಲಿ ನಾವು ಹೆಚ್ಚು ಉಪಯೋಗಿಸುವ ಆಹಾರವೇ ಅನ್ನ. ಹಿಂದೆ ಒಬ್ಬನ ಶಕ್ತಿಯನ್ನು ಅಳೆಯುತ್ತಿದ್ದುದೇ ಅವನು ತಿನ್ನುವ ಅನ್ನದ ಅಳತೆಯಿಂದ. "ಪಾವಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ, ಸೇರಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ." ಎಂಬ ನಾಣ್ಣುಡಿಯಿದೆ.

ನಾವು ಮಾಡುತ್ತಿದ್ದ ಹಾಗೂ ಮಾಡುತ್ತಿರುವ ತಪ್ಪು ಇದೇ. ಅವಶ್ಯಕತೆಗಿಂತ ಹೆಚ್ಚು ಅನ್ನವನ್ನು ತಿನ್ನಬಾರದು. ಬಹುಶಃ ಭತ್ತವನ್ನು ಬೆಳೆಯುವ ಕಲೆಯನ್ನು ಕಲಿತ ಮೇಲೆ ದಿನನಿತ್ಯದ ಆಹಾರ ಹುಡುಕಬೇಕಾದ ಕಷ್ಟ ತಪ್ಪಿ ಮನುಷ್ಯ ನಿರಾಳನಾದನೆಂದು ಕಾಣುತ್ತದೆ. ಅದರಿಂದ, ಅನ್ನ ಅವನ ಎಲ್ಲಾ ಆಹಾರಪದಾರ್ಥಗಳಲ್ಲಿ ಮೊದಲ ಸ್ಥಾನ ಪಡೆಯಿತು.

ಈಗ ಉಪಯೋಗಿಸುತ್ತಿರುವ ಬಿಳಿಯ ಅಕ್ಕಿ ಯಾವ ಅಳತೆಗೋಲಿನಿಂದಲೂ ಸರಿಯಾದ ಆಹಾರ ಪದಾರ್ಥವಲ್ಲ. ತೌಡಿನಲ್ಲಿ ಎಲ್ಲಾ ಸತ್ವಗಳು ಹೊರಟುಹೋಗಿರುತ್ತವೆ. ನಾವು ಅಕ್ಕಿ ಎಂದು ಹೇಳಿದರೆ ಅದು ಕೆಂಪಕ್ಕಿಯೇ. ಹಿಂದೆ ಇದರಲ್ಲಿ ಅನೇಕ ತಳಿಗಳಿದ್ದವು.

ಈಗ 'ದೇವಮಲ್ಲಿಗೆ' ಎಂಬ ಒಂದೇ ರೀತಿಯ ತಳಿ ಉಳಿದಿದೆ. ಅದನ್ನೂ ಸಹ ಹೆಚ್ಚು ಪಾಲೀಶ್ ಮಾಡಿರುತ್ತಾರೆ. ಹಾಗೆ ಮಾಡದಂತೆ ವಿನಂತಿಸಿಕೊಳ್ಳಬೇಕು. ಅಕ್ಕಿಯನ್ನು ತಿಕ್ಕಿ ತಿಕ್ಕಿ ಅನೇಕ ಸಲ ತೊಳೆಯಬಾರದು. ಧೂಳು ಹೋಗುವಂತೆ ಒಮ್ಮೆ ತೊಳೆದರೆ ಸಾಕು. ಇಲ್ಲದಿದ್ದರೆ ಜೀವಸತ್ವಗಳು ನಷ್ಟವಾಗುತ್ತವೆ.

ಗಂಜಿಯನ್ನು ಬಸಿದು ಗಟಾರಕ್ಕೆ ಚೆಲ್ಲಬಾರದು. ಗಂಜಿಯನ್ನು ಇಂಗಿಸಿ ಅನ್ನ ಮಾಡಬೇಕು. ಇಲ್ಲದಿದ್ದರೆ ರೈಸ್ ಕುಕ್ಕರ್‍ನಲ್ಲಿ ಅನ್ನ ಮಾಡಬೇಕು.

ಅಕ್ಕಿಯಲ್ಲಿನ ಆಹಾರ ಸತ್ವಗಳು :
ಪ್ರತಿ 100 ಗ್ರಾಂ ನಲ್ಲಿ : ನೀರು 13.3%, ಸಸಾರಜನಕ 7.5%, ಖನಿಜಗಳು 0.9%, ಕ್ಯಾಲ್ಸಿಯಂ 10 ಮಿ.ಗ್ರಾಂ, ನಾರು 0.6%, ಪಿಷ್ಟ 76.7%, ಕ್ಯಾಲೋರಿ 346, ರಂಜಕ 90 ಮಿ.ಗ್ರಾಂ, ಕಬ್ಬಿಣ 3.2 ಮಿ.ಗ್ರಾಂ, ವಿಟಮಿನ್ 'ಬಿ'

ಅಕ್ಕಿ ಬೆಳೆದ ಕಥೆ :
ಕ್ರಿಸ್ತಪೂರ್ವ 3000 ದಿಂದ ಉಪಯೋಗಿಸುತ್ತಿರುವ ದಾಖಲೆಗಳಿವೆ. ಅಕ್ಕಿ, ರಾಗಿ, ಗೋಧಿ ಮೂರೂ ಪಿಷ್ಟ ಪದಾರ್ಥಗಳೇ ಆದರೂ ಅಕ್ಕಿಯಲ್ಲಿನ ಪಿಷ್ಟದಲ್ಲಿ ಅಮೈಲೋಪೆಕ್ಟಿನ್ ಎಂಬ ಅಂಶ ಹೆಚ್ಚು ಇದೆ. ಇದರಿಂದ ಗೋಧಿ, ರಾಗಿಗಳಿಗಿಂತ ಬೇಗ ಜೀರ್ಣವಾಗುತ್ತದೆ.

ಆದ್ದರಿಂದ ಮುದುಕರು, ರೋಗಿಗಳು,ಮಕ್ಕಳಿಗೆ ಅಕ್ಕಿ ಉತ್ತಮ ಆಹಾರ. ಇದರಲ್ಲಿರುವ ಸಸಾರಜನಕದ ಭಾಗ 7.5% ಮಾತ್ರ. ಆದರೆ ಇದರಲ್ಲಿಯ ಎಂಟು ಅವಶ್ಯ ಅಮೈನೋ ಆಮ್ಲಗಳಿವೆ. ಇವು ಒಳ್ಳೆಯ ಚರ್ಮ, ಕಣ್ಣಿನ ಹೊಳಪು ಉಂಟುಮಾಡುವುದಲ್ಲದೆ, ಹೃದಯ, ಶ್ವಾಸಕೋಶ, ಮಸ್ತಿಷ್ಕ ಮುಂತಾದುವುಗಳ ಜೀವಕೋಶಗಳನ್ನು ಬೆಳಸುತ್ತವೆ.

ಇದರಲ್ಲಿರುವ 'ಬಿ' ಕಾಂಪ್ಲೆಕ್ಸ್, ಥಯಾಮಿನ್, ರಿಬೋಫ್ಲೇವಿನ್ ಮತ್ತು ನಯಾಸಿನ್ ಗಳಿಂದ ಕೂಡಿದೆ. ಇದರಿಂದ ಚರ್ಮದ ಆರೋಗ್ಯ, ನರಗಳು, ಹಾರ್ಮೋನ್, ಇವುಗಳ ಬೆಳವಣಿಗೆಗೆ ಸಹಾಯಕ. ಶರೀರದ ಒಳಗಿನ ನೀರಿನ ಸಮತ್ವವನ್ನು ಕಾಯುತ್ತದೆ. ಕಬ್ಬಿಣವನ್ನು ರಕ್ತಕ್ಕೆ ಕೊಡುವುದರಿಂದ 'ಅನೀಮಿಯ' ಗುಣವಾಗುತ್ತದೆ.

ಆಯುರ್ವೇದ ಅಕ್ಕಿಯ ಬಗ್ಗೆ ಹೀಗೆ ಹೇಳುತ್ತದೆ. 'ರಕ್ತಶ್ಹಲಿರ್ವರಸ್ತೇಷಾಂ ಬಲ್ಯೋವ್ರಣ ತ್ರಿದೋಷಜಿತ್! ಚಕ್ಷುಷ್ಯೋ ಮೂತ್ರಲಃ ಸ್ವರ್ಯಃ ಶುಕ್ರಲಃ ತೃಟ್ ಜ್ವರಾಪಹಃ'-ಕೆಂಪು ಅಕ್ಕಿ ಬೇರೆ ಎಲ್ಲಾ ಅಕ್ಕಿಗಳಿಗಿಂತ ಶ್ರೇಷ್ಠವಾದದ್ದು.

ಅದು ಬಲಕಾರಿ,ಗಾಯಗಳನ್ನು ವಾಸಿಮಾಡುವುದು. ಮೂತ್ರ ದೋಷಗಳನ್ನೂ ತೆಗೆಯುವುದು, ಕಣ್ಣಿಗೆ ಹಿತಕರ, ಮೂತ್ರವನ್ನು ಸಡಿಲಿಸುವುದು, ಧ್ವನಿಯ ಆರೋಗ್ಯಕ್ಕೆ ಒಳ್ಳೆಯದು, ವೀರ್ಯವರ್ಧಕ, ಅತಿಯಾದ ಬಾಯಾರಿಕೆ, ಜ್ವರವನ್ನು ಕಳೆಯುವುದು. ಈ ಗುಣಗಳಿಂದ ಎಲ್ಲೆಲ್ಲಿ ಅದನ್ನು ಉಪಯೋಗಿಸಬೇಕೆಂದು ಅರಿವಾಗುತ್ತದೆ.

ಕಫದ ಕಾಯಿಲೆಗಳಲ್ಲಿ ಇದು ವರ್ಜ್ಯ. ಮಧುರ ರಸವು ಕಫವನ್ನು ಹೆಚ್ಚಿಸುವುದು. ನೆಗಡಿ, ಕೆಮ್ಮು, ಆಸ್ತಮಾಗಳಲ್ಲಿ ಹೆಚ್ಚು ಬಳಸಬಾರದು. ಅಕ್ಕಿಯಲ್ಲಿ ಕೊಬ್ಬು ಕಡಿಮೆ. ಕೆಂಪಕ್ಕಿಯಲ್ಲಿರುವ ಕ್ಯಾಲ್ಸಿಯಂ ಲವಣವು ನರಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದು. ಆದ್ದರಿಂದ ರಕ್ತದೊತ್ತಡದ ರೋಗಿಗಳಿಗೆ ಉತ್ತಮ ಆಹಾರ.

ಜೀರ್ಣಾಂಗಗಳಲ್ಲಿನ ಎಲ್ಲಾ ತೊಂದರೆಗಳಲ್ಲಿ ಅನ್ನವು ಬಹಳ ಉಪಕಾರಿ. ಇದರಲ್ಲಿ ನಾರಿನ ಅಂಶ ಕಡಿಮೆ ಇರುವುದರಿಂದ ಹೊಟ್ಟೆಗೆ ಹಿತಕರ. ಎಲ್ಲಾ ಜೀರ್ಣಾಂಗಗಳ ತೊಂದರೆಯಲ್ಲಿಯೂ ಇದನ್ನು ಉಪಯೋಗಿಸಬಹುದು. ಭೇದಿಯಲ್ಲಿಯೂ ಕೂಡ ಅನ್ನವನ್ನು ಗಂಜಿಯ ರೂಪದಲ್ಲಿ ಕೊಡಬಹುದು.

ಮೇಲೆ ಹೇಳಿದ ಎಲ್ಲಾ ಕಾರಣಗಳಿಂದ ಅನ್ನವು ಶರೀರಕ್ಕೆ ಅನುಕೂಲಕರವೆಂಬುದು ವ್ಯಕ್ತವಾಗುವುದು, ಆದರೆ ಕೆಂಪಕ್ಕಿಯನ್ನು ಉಪಯೋಗಿಸಬೇಕು. ಈ ಅನ್ನವನ್ನೂ ಸಹ ಹೆಚ್ಚು ತರಕಾರಿಗಳ ಜೊತೆ, ಮೊಳಕೆಯ ಕಾಳುಗಳೊಂದಿಗೆ ಸೇವಿಸಬೇಕು. ಜತೆಗೆ ಹಣ್ಣು, ಹಾಲು, ಮೊಸರು ಇತ್ಯಾದಿಗಳಿರಬೇಕು.

ಯಾವಾಗಲೂ ಅನ್ನ-ಸಾರು, ಬರೀ ಮೊಸರನ್ನ ಇಷ್ಟನ್ನೇ ಸೇವಿಸುತ್ತಿರಬಾರದು. ಸಮತ್ವದಿಂದ ಕೂಡಿದ್ದಲ್ಲಿ ತೊಂದರೆಯಿರುವುದಿಲ್ಲ. ನಾವು ಮಸಾಲೆಯೊಂದಿಗೆ ಬರೀ ಅನ್ನವನ್ನು ತಿನ್ನುವ ರೂಢಿ ಮಾಡಿಕೊಂಡಿದ್ದೇವೆ. ಇದು ತಪ್ಪು. ಹಿಂದಿನವರ ಆಹಾರದಲ್ಲಿಯೂ ಸಹ ಎಲ್ಲೂ ಬರೀ ಅನ್ನವಿರಲಿಲ್ಲ. ವೈವಿಧ್ಯಮಯವಾದ ಸೊಪ್ಪು-ತರಕಾರಿಗಳು, ಹಣ್ಣುಗಳು, ಹಾಲು ಇತ್ಯಾದಿಗಳಿದ್ದವು.

Story first published: Friday, July 9, 2010, 14:36 [IST]
X
Desktop Bottom Promotion