For Quick Alerts
ALLOW NOTIFICATIONS  
For Daily Alerts

ಗುಲ್‌ಪೀಟ್ ಅಲ್ಲ ಗುಳಪಾಟಿ

By Staff
|
Gulpati
ಈ ವಿಶೇಷವಾದ ಸಿಹಿಯನ್ನು ರಾಮನವಮಿಯ ದಿನ ಮಾಡಿ ಕೋಸಂಬರಿ, ಪಾನಕದ ಜೊತೆ ನೈವೇದ್ಯಕ್ಕೆ ಇಡುತ್ತಾರೆ.

ಪ್ರಸಾದ ನಾಯಿಕ

ನಮ್ಮ ತಂದೆಯ ಚಿಕ್ಕಪ್ಪನ ಮಗನ ಹೆಂಡತಿಯ ಅಕ್ಕನ ಗಂಡನ ಕಸಿನ್‌ನ ಮಗಳು ಒಂದು ಬಾರಿ ಯಾವುದೋ ಟಿವಿಯ ಅಡುಗೆ ಕಾರ್ಯಕ್ರಮವೊಂದರಲ್ಲಿ ಬಂದಿದ್ದಳು. ನಮ್ಮ ದೂ.....ರದ ಸಂಬಂಧಿ, ಇವಳ್ಯಾವ ಸವಿರುಚಿ ಹೇಳಬಹುದೆಂದು ನಮಗೂ ಕಾತರ. ವೈಯ್ಯಾರದಿಂದ ನಾನೀಗ ಮಾಡುತ್ತಿರುವುದು ಗುಲ್‌ಪೀಟ್ ಅಂತ ಒಂದು ಬಗೆಯ ಸಿಹಿ ಅಂದಳು. ನಾವೆಲ್ಲ ಉತ್ತರ ಕರ್ನಾಟಕದವರಾದ್ದರಿಂದ ಇದ್ಯಾವ ಬಗೆಯ ಸಿಹಿ ಎಂದು ತಲೆ ಕೆರೆದುಕೊಂಡರೂ ಗೊತ್ತಾಗಲಿಲ್ಲ. ಅವಳು ಹೇಳುತ್ತಿರುವ ವಿವರಗಳನ್ನೆಲ್ಲ ಕೇಳಿದ ಕೂಡಲೆ... ಓ 'ಗುಳಪಾಟಿ'ನಾ ಅಂತ ಎಲ್ಲರೂ ಎದ್ದು ಬಿದ್ದು ನಗಲು ಪ್ರಾರಂಭಿಸಿದೆವು.

ನಗಲು ಕಾರಣ ನಾವೆಲ್ಲ ಸಿಹಿ ತಿನಿಸೇ ಆಗಲಿ, ಯಾರನ್ನಾದರೂ ಗುರುತಿಸುವುದೇ ಆಗಲಿ ಅದರಲ್ಲಿ ಒಂದು ಬಗೆಯ ವೈಶಿಷ್ಟ್ಯತೆ ಇರುತ್ತದೆ. ಉದಾಹರಣೆಗೆ ನಮ್ಮ ಮನೆಗೆ ಮದನ್ ಬಂದಿದ್ದ ಅಂದಕೂಡಲೆ ಹೆತ್ತಮ್ಮನಿಗೂ ಗೊತ್ತಾಗಲಿಕ್ಕಿಲ್ಲ. ಮುದ್ಯಾ ಬಂದಿದ್ದ ಅಂದರೆ ಥಟ್ಟನೆ ಗೊತ್ತಾಗಿ ಬಿಡುತ್ತದೆ.

ಗುಲ್‌ಪೀಟ್ ವಿಷಯದಲ್ಲೂ ಅದೇ ಆದದ್ದು. ಉತ್ತರ ಕರ್ನಾಟಕದ ಭಾಷೆಯ ಸೊಗಡು, ಯುನೀಕ್‌ನೆಸ್ ಇರುವುದೇ ಅಲ್ಲಿ. ದೋಸೆಗೆ ದ್ವಾಶಿ, ಸಬ್ಬಕ್ಕಿಗೆ ಸಾಬುದಾಣಿ, ಅಂತೆಯೇ ಗುಲ್‌ಪೀಟ್‌ಗೆ ಗುಳಪಾಟಿ. ನಮ್ಮಜ್ಜಿಯಂತೂ ಕೋಡಬಳೆಗೆ ಕಾಡಬೋಳಿ ಅಂತನೇ ಕರೆಯುತ್ತಿದ್ದರು. ನಾವೆಲ್ಲ ಕಾಡಕೋಳಿ, ಕಾಡಕೋಳಿ ಅಂತೆಲ್ಲ ತಮಾಷೆ ಮಾಡುತ್ತಿದ್ದೆವು.

ಸರಿ, ಈಗ ಗುಲ್‌ಪೀಟ್ ಬದಲು ಗುಳಪಾಟಿಯನ್ನು ಹೇಗೆ ಮಾಡುವುದೆಂದು ನೋಡೋಣ.

ಬೇಕಾಗುವ ಸಾಮಗ್ರಿಗಳು :

ಗೋಧಿ ಹಿಟ್ಟು : ಎರಡು ಕಪ್ಪು
ತುಪ್ಪ : ಎರಡು ಕಪ್ಪು
ಬೆಲ್ಲ : ಒಂದು ಕಪ್ಪು
ಏಲಕ್ಕಿಪುಡಿ

ಮಾಡುವ ವಿಧಾನ :

ವಿಧಾನ ಅತ್ಯಂತ ಸುಲಭ ಮತ್ತು ಅತೀ ಶೀಘ್ರ. ನೀವಿದನ್ನು ನಿಮ್ಮಾಕೆಗೆ ಓದಿ ಹೇಳಿ ಮುಗಿಸುವ ಮೊದಲೇ ಗುಳಪಾಟಿ ಅಡುಗೆಮನೆಯಲ್ಲಿ ತಯಾರಾಗಿರುತ್ತದೆ.

ಮೊದಲು ಗೋಧಿ ಹಿಟ್ಟನ್ನು ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು, ಅದು ಕಂದು ಬಣ್ಣ ತಿರುಗುವವರೆಗೆ. ಪುಡಿಪುಡಿ ಮಾಡಿದ ಬೆಲ್ಲ ಮತ್ತು ತುಪ್ಪವನ್ನು ಹುರಿದ ಹಿಟ್ಟು ಬಿಸಿಯಾಗಿರುವಾಗಲೇ ಚೆನ್ನಾಗಿ ಬೆರೆಸಬೇಕು. ಬಿಸಿಯಾಗಿದ್ದಾಗೆ ಎಲ್ಲ ಬೆರೆಸಿದರೆ ಹಿಟ್ಟು, ತುಪ್ಪ, ಬೆಲ್ಲ ಚೆನ್ನಾಗಿ ಕೂಡಿಕೊಳ್ಳುತ್ತದೆ. ತುಪ್ಪ ಜಾಸ್ತಿಯಿದ್ದಷ್ಟೂ ಉತ್ತಮ. ಇದಕ್ಕೆ ಏಲಕ್ಕಿ ಪುಡಿಯನ್ನೂ ಸ್ವಲ್ಪ ಪ್ರಮಾಣದಲ್ಲಿ ಬೆರೆಸಿ ಉಂಡೆ ಮಾಡಿ ತಿನ್ನಬಹುದು. ತುಪ್ಪ ಜಾಸ್ತಿಯಿದ್ದಲ್ಲಿ ಉಂಡೆ ಮಾಡುವುದು ಸುಲಭ. ಅಲಂಕಾರಕ್ಕೆ ಗೋಡಂಬಿ, ದ್ರಾಕ್ಷಿಯನ್ನು ಬಳಸಬಹುದು.

ಈ ವಿಶೇಷವಾದ ಸಿಹಿಯನ್ನು ರಾಮನವಮಿಯ ದಿನ ಮಾಡಿ ನೈವೇದ್ಯಕ್ಕೆ ಇಡುತ್ತಾರೆ. ಪೂಜೆಯೆಲ್ಲ ಆದನಂತರ ಊಟದ ಜೊತೆ ಹೊಟ್ಟೆಗಿಳಿಸಬಹುದು.

ನಗಲೀಕತ್ತೀರಿ ನಗ್ರಿ : ನಮ್ ಕಡೆ ಗುಳಪಾಟಿ ಅಂತೇವಿ. ನಮ್ಮ ದೂ....ರದ ಸಂಬಂಧಿ ಗುಳಪಾಟಿ ಅಂದ್ರ ಬೆಂಗಳೂರಿನ ಕಡೆಯಾವ್ರು ಈ ಪಾಟಿ ನಗತಾರಂತ, ನಕ್ರ ಅಸಯ್ಯ ಆಗತದಂತ ಗುಲ್‌ಪೀಟ್ ಅಂತಾರ. ನಿಮ್ಮ ಕಡೆ ಈ ಸಿಹಿಗೆ ಏನಂತಾರ ಹೇಳ್ರಿಪಾ ಮತ್ತ... ನಾವೂ ಸ್ವಲ್ಪ ನಗೋಣಂತ... ಏನಂತೀರಿ?

Story first published: Friday, November 20, 2009, 12:20 [IST]
X
Desktop Bottom Promotion