For Quick Alerts
ALLOW NOTIFICATIONS  
For Daily Alerts

ಜೀರಿಗೆ ಓಂಕಾಳು ಮಿಶ್ರಣದ ಮೆಣಸಿನಕಾಯಿ ಬಜ್ಜಿ

By * ರಾಧಿಕಾ ಎಮ್.ಜಿ., ಬೆಂಗಳೂರು
|
ಆಷಾಢದ ಗಾಳಿ, ಆಗಾಗ ತನ್ನ ಬರವನ್ನು ತೋರಿಸುತ್ತಿರುವ ಮಳೆ, ಜೊತೆಗೆ ಚಳಿ. ಈ ಹವಾಮಾನಕ್ಕೆ ಹೇಳಿ ಮಾಡಿಸಿದ ಕುರುಕು ತಿಂಡಿ ಮೆಣಸಿನಕಾಯಿ ಬಜ್ಜಿ. ದಾವಣಗೆರೆಯ ಮಂದಿಗೆ ಬೇಸಿಗೆಯಲ್ಲೂ ಬೆಳಗಿನ ಉಪಾಹಾರಕ್ಕೆ ಮಂಡಕ್ಕಿಯ ಜೊತೆಯಾಗುವ "ಮಿರ್ಚಿ", ಬೆಂಗಳೂರಿಗರ ತಣ್ಣನೆಯ ಸಂಜೆಗಳನ್ನು ಬೆಚ್ಚಗಾಗಿಸುವ ಹಬೆಯಾಡುತ್ತಿರುವ ಕಾಫಿಯ ಸಂಗಾತಿ ಮೆಣಸಿನಕಾಯಿ ಬಜ್ಜಿ.

ಬೇಕಾದ ಸಾಮಗ್ರಿಗಳು:

ಬಜ್ಜಿ ಮೆಣಸಿನ ಕಾಯಿ - ಮನೆ-ಮಂದಿಗಾಗುವಷ್ಟು. ಗಿಡ್ಡ, ಹೆಚ್ಚು ಖಾರವಿಲ್ಲದ ಮೆಣಸಿನಕಾಯಿಯನ್ನು ಉಪಯೋಗಿಸಿದರೆ ರುಚಿಯಾದ ಬಜ್ಜಿಯನ್ನು ಸವಿಯಬಹುದು. ಬೆಂಗಳೂರಲ್ಲಿ ದೊರೆಯುವ ಬದನೆಕಾಯಿ ಗಾತ್ರದ ಮೆಣಸಿನ ಕಾಯಿಯನ್ನು ತರಕಾರಿಯಾಗಿ ಉಪಯೋಗಿಸಬಹುದೇ ಹೊರತು ಬಜ್ಜಿ ಮಾಡಲು ಅಲ್ಲ. ಮನೆಯಲ್ಲಿ ಬಜ್ಜಿ ಮಾಡಲು ಸ್ವಲ್ಪ ದಪ್ಪವಿರುವ ಆದರೆ ಹೆಚ್ಚು ಉದ್ದವಿರದ ಹಸಿರು ಮೆಣಸಿನಕಾಯಿಗಳು ಸೂಕ್ತ.

ಕಡಲೆ ಹಿಟ್ಟು : ಸಾಧ್ಯವಾದಲ್ಲಿ ಕಡಲೆ ಬೇಳೆಯನ್ನು ಬೀಸಿಸಿ ಮಾಡಿಸಿದ ಹಿಟ್ಟಾದರೆ ಒಳ್ಳೆಯದು. ಕೆಲವು ಅತಿ ಬುದ್ಧಿವಂತ ಮಾರಾಟಗಾರರು ಕಡಲೆ ಹಿಟ್ಟಿನ ಜೊತೆಗೆ ಜೋಳದ ಹಿಟ್ಟನ್ನೂ ಬೆರೆಸಿರುತ್ತಾರೆ.

ಅಕ್ಕಿ ಹಿಟ್ಟು: ಒಂದು ಹಿಡಿ (ಬಜ್ಜಿ ಗರಿ ಗರಿಯಾಗಿರಲು)

ಜೀರಿಗೆ ಮತ್ತು ಓಂ ಕಾಳುಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮಾಡಿದ ಪುಡಿ (ಜೀರಿಗೆ ಮತ್ತು ಓಂ ಕಾಳುಗಳ ಪುಡಿಯನ್ನು ಹೆಚ್ಚಿಗೆ ಮಾಡಿಟ್ಟು ಕೊಂಡಿದ್ದಲ್ಲಿ ಮೊಸರಿಗೆ ಈ ಪುಡಿಯನ್ನು ಬೆರೆಸಿ, ಉಪ್ಪು, ಖಾರದ ಪುಡಿಯನ್ನು ಸೇರಿಸಿ ಚಪಾತಿ ಜೊತೆಗೆ ತಿನ್ನಲು ಚೆನ್ನಾಗಿರುತ್ತದೆ.)

ಪುಡಿ ಉಪ್ಪು, ಚಿಟಿಕೆಯಷ್ಟು ಅಡುಗೆ ಸೋಡ, ಬಜ್ಜಿ ಕರಿಯಲು ಎಣ್ಣೆ.

ಮಾಡುವ ವಿಧಾನ:

ಹಸಿರು ಮೆಣಸಿನಕಾಯಿಗಳನ್ನು ತೊಟ್ಟು ಬಿಡಿಸದೆ, ನೀರಿನಲ್ಲಿ ತೊಳೆಯಬೇಕು. ಜೀರಿಗೆ ಮತ್ತು ಓಂ ಕಾಳುಗಳ ಪುಡಿಯ ಜೊತೆ ಪುಡಿ ಉಪ್ಪನ್ನು ಬೆರೆಸಿ ಒಂದೆಡೆ ಇಟ್ಟುಕೊಳ್ಳಿ. ಮೆಣಸಿನಕಾಯಿಗಳನ್ನು ತೊಟ್ಟಿನಿಂದ, ತುದಿಯ ನಡುವೆ ಚಾಕುವಿನಿಂದ ಸೀಳಿ (ಪೂರ್ತಿ ತುಂಡಾಗುವ ಹಾಗೆ ಸೀಳಬಾರದು), ಜೀರಿಗೆ, ಉಪ್ಪಿನ ಮಿಶ್ರಣವನ್ನು ತುಂಬಬೇಕು.

ಪ್ರತಿಯೊಂದು ಮೆಣಸಿನಕಾಯಿಗೆ ಮಿಶ್ರಣ ತುಂಬುವುದರ ಬದಲು ಕಡಲೆ ಹಿಟ್ಟಿಗೇ ಬೆರೆಸಿದರೆ ಆಯಿತಲ್ಲ ಅಂತೀರಾ? ಹಾಗೆ ಮಾಡಿದರೆ ಅದರ ರುಚಿಯೇ ಬೇರೆ, ಮಿಶ್ರಣವನ್ನು ತುಂಬಿ ಮಾಡಿದರೆ ರುಚಿಯೇ ಬೇರೆ. ಎಲ್ಲಾ ಮೆಣಸಿನಕಾಯಿಗಳಿಗೂ ಮಿಶ್ರಣವನ್ನು ತುಂಬಿ ಪಕ್ಕಕ್ಕಿಡಿ.

ಕಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಒಂದು ಹಿಡಿ ಅಕ್ಕಿ ಹಿಟ್ಟು, ಚಿಟಿಕೆ ಅಡುಗೆ ಸೋಡ, ಒಂದೆರಡು ಚಮಚ ಕಾದ ಎಣ್ಣೆ ಸೇರಿಸಿ ಮಿಶ್ರ ಮಾಡಿ ನಂತರ ನೀರಿನ ಜೊತೆ ಬಜ್ಜಿಗೆ ಬೇಕಾಗುವ ಹದಕ್ಕೆ ಕಲಸಬೇಕು. ಬಜ್ಜಿ ಹದ ಎಂದರೆ ಇಡ್ಲಿ ಹಿಟ್ಟಿನ ಹದವಿದ್ದರೆ ಸಾಕು. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮೆಣಸಿನಕಾಯಿಯನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ, ಎಣ್ಣೆಗೆ ಹಾಕುವ ಮುನ್ನ, ಕಡಲೆ ಹಿಟ್ಟಿರುವ ಪಾತ್ರೆಯ ಅಂಚಿಗೆ ಮೆಣಸಿನಕಾಯಿಯನ್ನು ಸವರಬೇಕು. ಆಗ ಮೆಣಸಿನಕಾಯಿಯ ಒಂದು ಭಾಗಕ್ಕೆ ಕಡಲೆ ಹಿಟ್ಟು ಹತ್ತಿರುವುದಿಲ್ಲ. (ಮೆಣಸಿನಕಾಯಿ ಸರಿಯಾಗಿ ಬೇಯಲು ಹೀಗೆ ಮಾಡುವುದು ಅಗತ್ಯ). ಹೀಗೆ ಹಿಟ್ಟು ಹಚ್ಚಿದ ಮೆಣಸಿನಕಾಯಿಯನ್ನು ಕಾದ ಎಣ್ಣೆಯಲ್ಲಿ ಹದವಾಗಿ ಕರಿಯಬೇಕು. ಗರಿ ಗರಿ ಮೆಣಸಿನಕಾಯಿ ಬಜ್ಜಿ ಸವಿಯಲು ತಯಾರು.

ಖಾರ ಮುರಿಯಲು ಬಜ್ಜಿಯನ್ನು ಮಂಡಕ್ಕಿಯ(ಕಡಲೆಪುರಿ) ಜೊತೆ ತಿನ್ನಬಹುದು. ವಿಶ್ವೇಶ್ವರ ಪುರದ ತಿಂಡಿ ಬೀದಿಯಲ್ಲಿ ಮಾಡುವಂತೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾರೆಟ್ ತುರಿಗೆ, ಉಪ್ಪು, ನಿಂಬೆ ಹುಳಿ ಬೆರೆಸಿ, ಮೆಣಸಿನಕಾಯಿ ಬಜ್ಜಿಯನ್ನು ಎರಡು ತುಂಡು ಮಾಡಿ, ಈರುಳ್ಳಿ, ಕ್ಯಾರೆಟ್ ಮಿಶ್ರಣದ ಜೊತೆ ತಿನ್ನಲೂ ಬಲು ರುಚಿ.

ಬಜ್ಜಿ ಇಷ್ಟ, ಆದರೆ ಖಾರ ತಿನ್ನಲು ಆಸಾಧ್ಯ ಅನ್ನುವವರು, ಜೀರಿಗೆ ಪುಡಿ ತುಂಬುವ ಮುನ್ನ ಮೆಣಸಿನಕಾಯಿಯ ಬೀಜವನ್ನು ಸ್ವಲ್ಪ ಅಥವಾ ಸಂಪೂರ್ಣವಾಗಿ ತೆಗೆದು ನಂತರ ಜೀರಿಗೆ ಪುಡಿ ತುಂಬಿ ಮಾಡಬಹುದು. ಮತ್ತೊಂದು ವಿಧಾನವೆಂದರೆ, ಸೀಳಿದ ಮೆಣಸಿನಕಾಯಿಗಳನ್ನು, ನಿಂಬೆರಸ ಮಿಶ್ರಿತ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿ, ನಂತರ ಜೀರಿಗೆ ಪುಡಿ ತುಂಬಿ ಬಜ್ಜಿ ಮಾಡುವುದು. ಯಾವುದೇ ವಿಧಾನದಲ್ಲಿ ಮಾಡಿದರೂ ರುಚಿಕರ ಬಜ್ಜಿ ತಯಾರು!

English summary

Green chilli bajji | Mirchi bajji Spicy food | Monsoon recipes | ಮೆಣಸಿನಕಾಯಿ ಬಜ್ಜಿ | ಆಘಾಢದ ಮಳೆ

Green chilli bajji (mirchi bajji) for a rainy ashadha masa.
X
Desktop Bottom Promotion