For Quick Alerts
ALLOW NOTIFICATIONS  
For Daily Alerts

ಕಾಳ್‌ ಕಾಳ್‌ ಕಾಳ್‌ ಅವರೆಕಾಳ್‌!

By Super
|

ಬದನೆಕಾಯಿ, ಬೆಂಡೇಕಾಯಿ, ಹುರುಳಿಕಾಯಿ, ಆಲೂಗೆಡ್ಡೆ, ಎಲೆ ಕೋಸಿಗೆ ಎರಡು ವಾರ ರಜ ಕೊಡಿ!!!

ಹೇಮಂತಋತು. ಅವರೆ ಕಾಳಿನ ಕಾಲ. ಕರ್ನಾಟಕದಲ್ಲಿ ಈಗ ಅವರೆಕಾಯಿ ಸುಗ್ಗಿ. ಮಾರುಕಟ್ಟೆಯಲ್ಲಿ ಲಾರಿಗಟ್ಟಳೆ ಅವರೆ. ಬೀದಿ ಗಾಡಿಗಳಲ್ಲಿ, ಫುಟ್‌ಪಾತ್‌ ಮಗ್ಗುಲಲ್ಲಿ ಹೇರಳವಾಗಿ ಲಭ್ಯ. ಈ ಬಾರಿ ಅವರೆ ಸ್ವಲ್ಪ ದುಬಾರಿ ಎಂದು ಸುದ್ದಿಯಿದೆ. ಆದರೇನಂತೆ, ಈ ಕಾಲದ ಜನ ದುಡ್ಡಿಗೆ ಕೇರ್‌ ಮಾಡಲ್ಲ. ಗಂಡನನ್ನು ಪ್ರೀತಿಮಾಡುವವರೆಲ್ಲ ಅವರೆ ಖರೀದಿಸುತ್ತಾರೆ. ಉಸುಳಿಯಂತೆ, ಬಸ್ಸಾರಂತೆ, ಹುಳಿಯಂತೆ, ನಿಪ್ಪಟ್ಟಂತೆ... ಬಗೆಬಗೆಯ ಅವರೆಕಾಯಿ ಅಡುಗೆ ಮಾಡಿ ತಿಂದು ಬೆಚ್ಚಗೆ ಮಲಗುವ ಕಾಲವನ್ನು ನಿರಾಕರಿಸುವುದಿಲ್ಲ.

ಮಾಗಿಯ ಚಳಿಗೆ ಸೊಗಡಾಗಿ ಸಿಗುವ ಅವರೆ ಕಾಳು ರುಚಿಕರವಷ್ಟೇ ಅಲ್ಲ. ಪೌಷ್ಟಿಕ ಕೂಡ. ವಾಯು ಪ್ರಕೋಪಕ್ಕೆ ಅವರೆಕಾಯಿ ಕಾರಣ ಎಂಬ ಆರೋಪವಿದೆ. ಆದರೆ, ಅವರೆ ಚಳಿಯನ್ನು ತಡೆಯುವ ಶಕ್ತಿಯನ್ನೂ ವೃದ್ಧಿಸುತ್ತದಲ್ಲ. ತಡವೇಕೆ ನೀವು ಅವರೆಕಾಳು ಬಿಡಿಸಿ ಇಟ್ಟುಕೊಳ್ಳಿ. ತಯಾರಿಸುವ ವಿಧಾನವನ್ನು ನಾವು ಹೇಳಿಕೊಡುತ್ತೇವೆ.

ಅವರೆಕಾಳು ನಿಪ್ಪಟ್ಟು :

ಬೇಕಾಗುವ ಪದಾರ್ಥ : ಒಂದು ದೊಡ್ಡ ಲೋಟದಷ್ಟು ಬೇಯಿಸಿದ ಎಳೆ ಅವರೆಕಾಳು. ಒಂದು ಪಾವಿನಷ್ಟು ಅಕ್ಕಿಹಿಟ್ಟು, ಒಂದು ಚಮಚ ಚಿರೋಟಿ ರವೆ, ಒಂದು ಚಮಚ ಮೈದಾಹಿಟ್ಟು, ಖಾದ್ಯತೈಲ, ಒಂದು ಚಮಚ ಹುರಿದ ಎಳ್ಳು, ಅರ್ಧ ಲೋಟದಷ್ಟು ತುರಿದ ಒಣಕೊಬರಿ.
ಜೊತೆಗೆ ಅರ್ಧ ಲೋಟದಷ್ಟು ಹುರಿದು ದಪ್ಪ ದಪ್ಪನಾಗಿ ಪುಡಿಮಾಡಿದ ಕಡಲೇಕಾಯಿ ಬೀಜ, ರುಚಿಗೆ ತಕ್ಕಷ್ಟು ಉಪ್ಪು, ಒಣಮೆಣಸಿನ ಕಾಯಿ ನಿಮ್ಮ ರುಚಿಗೆ ಅನುಗುಣವಾಗಿ.

ಮಾಡುವ ವಿಧಾನ : ಅಕ್ಕಿ ಹಿಟ್ಟಿನೊಂದಿಗೆ, ಚಿರೋಟಿ ರವೆಯನ್ನು ಒಂದೆರಡು ಚಮಚ ಕಾದ ಎಣ್ಣೆಯಾಡನೆ ಕಲೆಸಿ, ಆನಂತರ ಅವರೆಕಾಳು, ಮೈದಾಹಿಟ್ಟು, ಎಳ್ಳು, ತುರಿದ ಕೊಬ್ಬರಿ, ಮುರಿದ ಒಣಮೆಣಸಿನ ಕಾಯಿ ಹಾಗೂ ಉಪ್ಪನ್ನು ಬೆರೆಸಿ ಕಲೆಸಿದರೆ ನಿಪ್ಪಟ್ಟಿನ ಹಿಟ್ಟು ಸಿದ್ಧ.

ಆನಂತರ ಪ್ಲಾಸ್ಟಿಕ್‌ ಹಾಳೆಯ ಮೇಲೆ ಇಲ್ಲವೆ ಚಪಾತಿ ಮಣೆಯ ಮೇಲೆ ಅಂಗೈಅಗಲದ ಹಾಳೆಗಳನ್ನು ತಟ್ಟಿ. ಬಾಣಲೆಯಲ್ಲಿ ಕಡಲೆಕಾಯಿ ಎಣ್ಣೆ ಅಥವಾ ರೀಫೈನ್ಡ್‌ ಆಯಿಲ್‌ ಹಾಕಿ ಒಲೆಯ ಮೇಲಿಡಿ. ಎಣ್ಣೆ ಕಾದ ತರುವಾಯ ನಿಪ್ಪಟ್ಟಿನ ಹಾಳೆ ಹಾಕಿ ಕರೆದರೆ ಗರಮಾಗರಂ ನಿಪ್ಪಟ್ಟು ಸಿದ್ಧ. ಸಾಮಾನ್ಯವಾಗಿ ವಾರ 10 ದಿನಗಳ ಕಾಲ ನಿಪ್ಪಟ್ಟು ಕೆಡದೆ ಇರುತ್ತದೆ.

X
Desktop Bottom Promotion