For Quick Alerts
ALLOW NOTIFICATIONS  
For Daily Alerts

ಜೀರ್ಣಶಕ್ತಿ ವೃದ್ಧಿಸುವ ಹೆಸರು ಬೇಳೆ ಕೋಸಂಬರಿ

By Super Admin
|

ಹಬ್ಬ ಹರಿದಿನಗಳಲ್ಲಿ, ಮದುವೆ - ಮುಂಜಿಗಳಲ್ಲಿ, ಮನೆಗೆ ಅಪರೂಪದ ಅತಿಥಿಗಳು ಬಂದಾಗ ಮಾಡುವ ಔತಣ ಮುಂತಾದ (ವೈದಿಕವೂ ಸೇರಿದಂತೆ) ಶುಭ ಕಾರ್ಯಗಳಲ್ಲಿ ಮಾಡುವ ವಿವಿಧ ಭಕ್ಷ್ಯಗಳಲ್ಲಿ ಕೋಸಂಬರಿಯೂ ಒಂದು.

* ನಿವೇದಿತಾ ಪ್ರಭಾಕರ್, ಬೆಂಗಳೂರು

ಹಬ್ಬ ಹರಿದಿನಗಳಲ್ಲಿ ಮಿಗಿಲಾಗಿ ಭಾರಿ ಭೋಜನದಲ್ಲೇ ಈ ಎರಡು ಬಗೆಯ ಕೋಸಂಬರಿ ಮಾಡಲು ಕಾರಣ ಇದೆ. ಹೆಸರು ಹಾಗೂ ಕಡಲೆಬೇಳೆಗಳ ಕೋಸಂಬರಿಗಳು ಭರ್ಜರಿ ಭೋಜನದ ದುಷ್ಪರಿಣಾಮವನ್ನು ತಡೆಯುವ ಶಕ್ತಿ ಹೊಂದಿವೆ. ಇದು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಹೆಚ್ಚು ತಿಂದ ಕಾರಣ ಉಂಟಾಗುವ ಆಯಾಸವನ್ನೂ ಪರಿಹರಿಸುತ್ತದೆ.

ಹಸಿ ಬೇಳೆಯನ್ನು ಬೇಯಿಸದೇ, ನೆನೆಸಿ ಮಾಡುವ ಈ ತಿನಿಸು, ಪೌಷ್ಟಿಕಾಂಶಗಳಿಂದ ತುಂಬಿದ ಆರೋಗ್ಯವರ್ಧಕ. ಸಾಮಾನ್ಯವಾಗಿ ಕಡಲೆಬೇಳೆ, ಹೆಸರು ಬೇಳೆ ಕೋಸಂಬರಿ ಪ್ರಖ್ಯಾತ. ನವಧಾನ್ಯಗಳಿದ್ದಾಗ್ಯೂ ಈ ಎರಡೇ ಧಾನ್ಯಗಳಿಂದ ಕೋಸಂಬರಿ ಮಾಡುತ್ತಾರೆ. ಈ ಎರಡು ಧಾನ್ಯಗಳ ವೈಶಿಷ್ಟ್ಯವೇ ಅಂಥಹದ್ದು.

ಕಡಲೆಬೇಳೆ ರಕ್ತ, ಪಿತ್ತ ದೋಷಗಳಿಗೆ ರಾಮಬಾಣ. ಹೆಸರುಬೇಳೆ ಒಗರಿನಿಂದ ಕೂಡಿದ್ದು, ಪಿತ್ತ, ರಕ್ತ ವಿಕಾರಗಳಿಗೆ ಒಳ್ಳೆಯದು ಎನ್ನುತ್ತಾರೆ ಆಯುರ್ವೇದ ಪಂಡಿತರು. ನೇತ್ರರೋಗ, ಅತಿಸಾರ, ವಾತ, ಜ್ವರ, ಮೂತ್ರ ದೋಷಗಳೂ ಈ ಧಾನ್ಯದ ಸೇವನೆಯಿಂದ ತಹಬಂದಿಗೆ ಬರುತ್ತವೆ. ಹೊಟ್ಟೆಯುರಿ, ಎದೆಯುರಿಗೂ ಇದು ಸಿದ್ಧೌಷಧ. ದೇಹವನ್ನು ತಂಪು ಮಾಡುವ ಧಾನ್ಯಗಳಲ್ಲಿ ಇದೂ ಒಂದು. ಹೆಸರನ್ನು ನೆನೆಸಿ ತಿನ್ನುವುದರಿಂದ ಮನಸ್ಸು ಶಾಂತವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು :

ಕಡಲೆಬೇಳೆ ಅಥವಾ ಹೆಸರುಬೇಳೆ 3 ಬಟ್ಟಲು
ಕಾಯಿತುರಿ ಅರ್ಧ ಬಟ್ಟಲು
ಹಸಿ ಮೆಣಸಿನಕಾಯಿ 4
ಸೌತೆಕಾಯಿ 1
ಕೊತ್ತಂಬರಿ, ಇಂಗು, ಸಾಸಿವೆ

ಮಾಡುವ ವಿಧಾನ :

ಕಡಲೆ ಬೇಳೆ ಅಥವಾ ಹೆಸರು ಬೇಳೆಯನ್ನು ನೀರಿನಲ್ಲಿ ತೊಳೆದು, ಚೆನ್ನಾಗಿ ನೀರಿನಲ್ಲಿ ನೆನೆಸಿ, ಆನಂತರ ನೀರನ್ನು ಬಸಿಯಬೇಕು. ಇದಕ್ಕೆ ಹದವಾಗಿ ಕಾಯಿತುರಿ ಬೆರೆಸಬೇಕು. ಬಾಯಿ ರುಚಿಗೆ ಹಾಗೂ ಖಾರಕ್ಕಾಗಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗು, ಸಾಸಿವೆಯ ಒಗ್ಗರಣೆ ಹಾಕಬೇಕು. ಕೆಲವರು ಇದಕ್ಕೆ ಸಣ್ಣಗೆ ಹೆಚ್ಚಿದ ಸೌತೆಕಾಯಿಯನ್ನೂ ಸೇರಿಸುತ್ತಾರೆ. ನಿಂಬೆರಸ ಕಡ್ಡಾಯ. ಅಲ್ಲಿಗೆ ತಿನ್ನಲು ಕೋಸಂಬರಿ ರೆಡಿ.

Story first published: Monday, August 1, 2011, 10:52 [IST]
X
Desktop Bottom Promotion