For Quick Alerts
ALLOW NOTIFICATIONS  
For Daily Alerts

ಬೇವುಬೆಲ್ಲದ ಜೊತೆ ಮಾವಿನಕಾಯಿ ಗೊಜ್ಜು

By Prasad
|
Raw Mango gojju
ಗಿಡಮರಗಳ ಎಲೆಗಳೆಲ್ಲ ಹೊಸರೂಪ, ಹೊಸಬಣ್ಣ, ಹೊರದಿರಿಸು ತೊಟ್ಟುಕೊಂಡು ಚೈತ್ರದ ಆಗಮನಕ್ಕಾಗಿ ಕಾದು ಕುಳಿತಿವೆ. ಮಾವಿನ ಮರದ ಚಿಗುರು ಹಸಿರೆಲೆಯ ನಡುವಿನಿಂದ ಕೋಗಿಲೆ ಕುಹೂಕುಹೂ ಕೂಗಲು ಆರಂಭಿಸಿದೆ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬಂದಿದೆ. ಏಪ್ರಿಲ್ 4ರಂದು ಕನ್ನಡ ನಾಡಿನ ಎಲ್ಲೆಡೆಯಲ್ಲಿ ಹೊಸವರ್ಷದ ಸಂಭ್ರಮ. ಅಭ್ಯಂಜನ, ಹೊಸ ಬಟ್ಟೆ, ಬೇವುಬೆಲ್ಲ, ಹೋಳಿಗೆ ಮೃಷ್ಟಾನ್ನ ಭೋಜನ.

ಭೂರಿ ಭೋಜನದಲ್ಲಿ ಹೋಳಿಗೆ ಜೊತೆಗೆ ಮಾವಿನಕಾಯಿ ಚಿತ್ರಾನ್ನವಿದ್ದರಂತೂ ಮತ್ತೊಂದು ತುತ್ತು ತಿನ್ನಲು ಬಾಯಿಯಲ್ಲಿ ಚುಳ್ಳನೆ ನೀರೂರಿರುತ್ತದೆ. ಈ ಬಾರಿ ಮಾವಿನಕಾಯಿ ಚಿತ್ರಾನ್ನದ ಬದಲು ಬೇವುಬೆಲ್ಲ, ಮಾವಿನಕಾಯಿ ಮಿಶ್ರಣದ ಗೊಜ್ಜು ತಯಾರಿಸಿ. ಬಿಸಿ ಅನ್ನದ ಜೊತೆಗೆ ತಿನ್ನಲು ಮಾವಿನಕಾಯಿ ಗೊಜ್ಜು ಸಖತ್ತಾಗಿರುತ್ತದೆ. ಮನೆಮಂದಿಯೆಲ್ಲ ಸೇರಿಕೊಂಡು ಯುಗಾದಿ ಹಬ್ಬದಂದು ಟಿವಿಯಲ್ಲಿ ಬರುವ ಕನ್ನಡಚಿತ್ರಗಳನ್ನು ವೀಕ್ಷಿಸಿ ಕೊಂಡು ಮಾವಿನಕಾಯಿ ಗೊಜ್ಜು ಅನ್ನ ಜಮಾಯಿಸಿ.

ಬೇಕಾಗುವ ಪದಾರ್ಥಗಳು

ಹಸಿರು ಮಾವಿನಕಾಯಿ ಹೆರಕಲು 1 ಕಪ್
ಬೇವಿನ ಹೂವುಗಳು 2 ಚಮಚ
ಬೆಲ್ಲ 3 ಚಮಚ
ಸಾಸಿವೆ ಕಾಳು ಅರ್ಧ ಚಮಚ
ಉದ್ದಿನಬೇಳೆ, ಕಡಲೆಬೇಳೆ ಕಾಲು ಚಮಚ
ಹಸಿಮೆಣಸಿನಕಾಯಿ 2 ಅಥವಾ ಖಾರದ ಪುಡಿ
ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ

* ಸ್ವಲ್ಪ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ಸಾಸಿವೆ, ಬೇಳೆಕಾಳು, ಮೆಣಸಿನಕಾಯಿ, ಇಂಗು ಹಾಕಿ ಎರಡು ನಿಮಿಷ ತಾಳಿಸಿ.

* ಅದಕ್ಕೆ ಸ್ವಲ್ಪ ನೀರು ಬೆರೆಸಿ ಮಾವಿನಕಾಯಿ ಹೆರಕಲನ್ನು ಹಾಕಿ ಹತ್ತು ನಿಮಿಷದಷ್ಟು ಕುದಿಸಿಕೊಳ್ಳಿ.

* ಕುದಿಸಿಕೊಂಡ ಮಾವಿನಕಾಯಿಗೆ ಉಪ್ಪು, ಬೇವುಬೆಲ್ಲ ಹಾಕಿ ಮತ್ತೆ ಐದು ನಿಮಿಷಗಳ ಕಾಲ ಕುದಿಸಿರಿ.

* ಸೂಪರ್ ಸ್ಪೈಸಿ ಮಾವಿನಕಾಯಿ ಗೊಜ್ಜು ತಯಾರ್. ಸಿಹಿ ಜಾಸ್ತಿ ಬೇಕಿದ್ದರೆ ಒಂದು ಕರಣೆ ಬೆಲ್ಲ ಹೆಚ್ಚು ಹಾಕಿ. ಇದನ್ನು ಬಿಸಿಬಿಸಿ ಅನ್ನದ ಜೊತೆ ತುಪ್ಪ ಬೆರೆಸಿಕೊಂಡು ಹೊಟ್ಟೆಗಿಳಿಸಿ.

English summary

Raw mango gojju | Mavinakayi gojju for Ugadi | Ugadi recipe for you | ಮಾವಿನಕಾಯಿ ಗೊಜ್ಜು ರೆಸಿಪಿ | ಯುಗಾದಿ ಹೊಸವರ್ಷಕ್ಕೆ ಹೊಸರುಚಿ

Raw mango gojju recipe for Ugadi festival. Enjoy this new recipe made with neem, jaggery and mango with family and friends on new year. Have a wonderful year ahead.
X
Desktop Bottom Promotion