For Quick Alerts
ALLOW NOTIFICATIONS  
For Daily Alerts

ರಸಭರಿತ ಗೋರಿಕಾಯಿ ಪಲ್ಯ ಪದದ ಸ್ವಾರಸ್ಯ

By Staff
|
Gorikayi or Gavarkayi or Chavalikayi palya
ಗೋರಿಕಾಯಿ ಪಲ್ಯ ತಯಾರಿಸುವ ಮುನ್ನ 'ಗೋರಿ' ಪದ ಹೇಗೆ ಬಂತೆಂದು ಯಾರಾದರೂ ತಲೆ ಕೆಡಿಸಿಕೊಂಡಿದ್ದೀರಾ? ಪದೋನ್ನತಿಯ ಸ್ವಾರಸ್ಯವೇ ಹಾಗೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಇನ್ನೆಲ್ಲೋ ಮಾರಾಟವಾಗುವ ಹೊತ್ತಿಗೆ ಆ ತರಕಾರಿಯ ಹೆಸರು ಕೂಡ ಬದಲಾಗಿ ಹೋಗಿರುತ್ತದೆ. ಹಾಗೆಯೇ ಗೋರಿಕಾಯಿ ಹೆಸರು ಕೂಡ.

ಉತ್ತರ ಕರ್ನಾಟಕದಲ್ಲಿ ಗೋರಿಕಾಯಿಗೆ ಚವಳಿಕಾಯಿ ಅಥವಾ ಚೌಳಿಕಾಯಿ ಪಲ್ಯ ಅಂತ ಹೆಚ್ಚಾಗಿ ಕರೆಯುತ್ತಾರೆ. ಆದರೆ, ಗೋರಿಕಾಯಿ ಪದದ ಮೂಲ ಬಹುಶಃ ಮಹಾರಾಷ್ಟ್ರದಲ್ಲಿ ಇರಬಹುದು. ಬೆಳಗಾವಿ ಜಿಲ್ಲೆಯಲ್ಲಿ ಈ ಹಸಿರು ತರಕಾರಿಗೆ 'ಗವಾರ್ ಕಾಯಿ' ಅಂತ ಕರೆಯುತ್ತಾರೆ. ಗವಾರ್ ಕಾಯಿ ಎಂಬುದು ಉತ್ತರ ಕರ್ನಾಟಕದಿಂದ ದಕ್ಷಿಣಕ್ಕೆ ಪಯಣ ಬೆಳೆಸುವಷ್ಟರಲ್ಲಿ ಗೋರಿಕಾಯಿ ಆಗಿರಲೂಬಹುದು.

ಚವಳಿ ಊರ್ಫ್ ಗವಾರ್ ಉರ್ಫ್ ಗೋರಿ ಹೆಸರು ಕೇಳಿಯೇ ಗರಬಡಿದವರಂತೆ ಆಡಬೇಡಿ. ಹೆಚ್ಚು ನಾರಿನಂಶ ಇರುವ ಹಸಿರು ತರಕಾರಿ ಆರೋಗ್ಯಕ್ಕೆ ಬಲು ಹಿತಕಾರಿ.

* ಭಾರತಿ ಎಚ್.ಎಸ್., ಬೆಂಗಳೂರು

ಬೇಕಾಗುವ ಪದಾರ್ಥಗಳು

ಎಳೆಯ ಗೋರಿಕಾಯಿ (ನಾಲ್ವರಿಗಾಗುವಷ್ಟು)
ದೊಡ್ಡ ಗಾತ್ರದ ಒಂದು ಈರುಳ್ಳಿ
ಎಣ್ಣೆ ಮೂರು ಚಮಚ
ಸಾಸಿವೆ, ಅರಿಷಿಣ
ಕರಿಬೇವು, ಕೊತ್ತಂಬರಿ
ತುರಿದ ತೆಂಗಿನ ಕಾಯಿ ಅರ್ಧ ಬಟ್ಟಲು
ಸಾರಿನ ಪುಡಿ ಎರಡು ಚಮಚ
ತುಣುಕು ಬೆಲ್ಲ, ರುಚಿಗೆ ಉಪ್ಪು

ಮಾಡುವ ವಿಧಾನ

ಮಾರುಕಟ್ಟೆಗೆ ಹೋದಾಗಲೇ ಎಳೆಯ ಚೌಳಿಕಾಯಿ ಅಥವಾ ಗೋರಿಕಾಯಿಯನ್ನು ಆಯ್ದಕೊಂಡು ಬನ್ನಿ. ನೀರಲ್ಲಿ ಚೆನ್ನಾಗಿ ತೊಲೆದು ಬದಿಗಿರುವ ನಾರು ತೆಗೆದು ಹಸನು ಮಾಡಿಟ್ಟುಕೊಳ್ಳಿ. ನಂತರ ಚಾಕು ಪ್ರಯೋಗ ಮಾಡಿ ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.

ಇಷ್ಟಾದ ನಂತರ ಒಂದು ಬಾಣಲೆಗೆ ಎಣ್ಣೆ ಸುರುವಿ ಸಾಸಿವೆಯನ್ನು ಚಟಪಡಿಸಿ, ಅರಿಷಿಣ ಹಾಕಿ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಹಾಕಿ ಕಂದುಬಣ್ಣ ಬರುವವರೆಗೆ ಚೆನ್ನಾಗಿ ಬಾಡಿಸಿರಿ.

ಒಗ್ಗರಣೆಗೆ ಗೋರಿಕಾಯಿ ಸುರುವಿ ಒಗ್ಗರಣೆ ಹೊತ್ತುವ ಮೊದಲೇ ಒಂದಿಷ್ಟು ನೀರು ಹಾಕಿ ಕುದಿಗಿಡಿ. ತುಸು ಕುದಿಬಂದನಂತರ ಕರಣೆ ಬೆಲ್ಲ, ಸಾರಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಾಡಿಸಿ. ಚೆನ್ನಾಗಿ ಕುದ್ದ ನಂತರ ಬಾಣಲೆಯನ್ನು ಕೆಳಗಿಳಿಸಿ ಕಾಯಿತುರಿ, ಕೊತ್ತಂಬರಿ ಹಾಕಿ ಮತ್ತೆ ಕೈಯಾಡಿಸಿ. ಕಾಯಿತುರಿಯಲ್ಲಿ ಕೊಬ್ಬರಿ ಹಳಕುಗಳಿದ್ದರೆ ಪಲ್ಯ ತಿನ್ನಲು ಸಖತ್ತಾಗಿರುತ್ತದೆ. ಈ ರುಚಿಕಟ್ಟಾದ ಪಲ್ಯವನ್ನು ಚಪಾತಿ, ರೊಟ್ಟಿಯೊಡನೆ ತಿನ್ನಲು ಚೆನ್ನಾಗಿರುತ್ತದೆ.

Story first published: Monday, January 11, 2010, 15:58 [IST]
X
Desktop Bottom Promotion