For Quick Alerts
ALLOW NOTIFICATIONS  
For Daily Alerts

ಕೆನಿಮೊಸರು ಖಡಕ್ ರೊಟ್ಟಿ ಉಣ್ಣಾಕ ಬರ್ರಿ

By Staff
|
Khadak rotti, curd vending women in Banashankari
ಡಿಸೆಂಬರ್ 24ರಿಂದ ಬನಶಂಕರಿ ನವರಾತ್ರಿ ಪ್ರಾರಂಭವಾಗುತ್ತಿದೆ. ದೇವಿ ಬನಶಂಕರಿಯ ಕೃಪೆಗೆ ಪಾತ್ರರಾಗಲು ಅಲ್ಲಿ ಭಕ್ತವೃಂದವೇ ನೆರೆದಿರುತ್ತದೆ. ಚುರುಗುಟ್ಟುವ ಬಿಸಿಲಿಗೆ ದಣಿದ ದೇಹ, ಹಸಿದ ಹೊಟ್ಟೆಗೆ ಅಲ್ಲಿನ ತಾಯಂದಿರು ನೀಡುವ ಖಡಕ್ ರೊಟ್ಟಿ, ಕೆನಿಮೊಸರು, ತರಹೇವಾರಿ ಪಲ್ಯಕ್ಕಿಂತ ಅಪ್ಯಾಯಮಾನವಾದದ್ದೂ ಯಾವುದೂ ಇಲ್ಲ. ಪ್ರೀತಿಯ ಬುತ್ತಿ ಬಡಿಸುವ ಬನಶಂಕರಿ ಬುತ್ತಿ ತಾಯಂದಿರ ಹೊಟ್ಟೆ ತಣ್ಣಗಿರಲಿ.

* ವಿವೇಕ ಪಟಗಾರ್, ಬೆಟ್ಕುಳಿ

ಬರ್ರೀ ಅಣ್ಣಾವ್ರ ಊಟ ಮಾಡಬರ್ರೀ, ಕೆನಿ-ಮೊಸರು ಐತಿ ಬರ್ರೀ, ಮಜ್ಜಿಗೆ ಕುಡಿಬರ್ರೀ ಈ ರೀತಿಯಾಗಿ ನಿಮ್ಮನ್ನು ಊಟಕ್ಕೆ ಕರೆಯುತ್ತಿರುವುದು ಎಲ್ಲಿ ಎಂದು ಅನುಮಾನವೇ? ಹಾಗಾದರೇ ನೀವು ಒಮ್ಮೆ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಬಳಿಯಿರುವ ಬನಶಂಕರಿ ದೇವಾಲಯಕ್ಕೆ ಖಂಡಿತ ಬರಬೇಕು. ತಲೆಯ ಮೇಲೆ ಬುಟ್ಟಿ ಹೊತ್ತ ಮಾತೆಯರ ಪ್ರೀತಿಯ ಊಟದ ಸವಿಯನ್ನೊಮ್ಮೆ ಸವಿಯಬೇಕು.

ಬಾದಾಮಿಯಿಂದ ಮೂರು ಕಿ.ಮೀ. ದೂರದಲ್ಲಿರುವ ಬನಶಂಕರಿಯು ರಾಜ್ಯದಲ್ಲಿರುವ ಪ್ರಾಚೀನ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಬನಶಂಕರಿಯು ಆದಿ ದೇವತೆ ಬನದೇವಿ, ಬನಶಂಕರಿ, ಅಥವಾ ಶಾಕಾಂಬರಿ ಎಂದು ಕರೆಯಲ್ಪಡುವ ದೇವತೆಯ ಭಕ್ತರು ಜಗತ್ತಿನ ಎಲ್ಲೆಡೆಯಲ್ಲಿಯೂ ಇದ್ದಾರೆ. ಬನಶಂಕರಿ ದೇವಾಲಯವು ಚಾಲುಕ್ಯರ ಕಾಲದ ಸುಂದರ ದೇವಾಲಯವಾಗಿದೆ. ಬಾದಾಮಿಯಲ್ಲಿರುವ ಮೇಣದ ಬಸದಿಗಳು, ಗುಹೆಯಲ್ಲಿನ ಸುಂದರ ಕೆತ್ತನೆಗಳು ಇಂದಿಗೂ ಪ್ರವಾಸಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ಬಾದಾಮಿ ಬಯಲು ಪ್ರದೇಶವಾದರೂ, ಬನಶಂಕರಿ ದೇವಾಲಯವಿರುವ ಪ್ರದೇಶ ಮಲೆನಾಡಿನ ನಿಸರ್ಗವನ್ನು ನೆನಪಿಗೆ ತರುವಂತೆ ಇದೆ. ದೇವಸ್ಥಾನದ ಪಕ್ಕದಲ್ಲಿಯೇ ಹರಿಯುವ ಸರಸ್ವತಿ ಹಳ್ಳವು ಹಸುರಿನ ಬನಸಿರಿಯ ಬಾಯಾರಿಕೆಯನ್ನು ಇಂಗಿಸುತ್ತಿರುತ್ತಿದೆ. ಬನಶಂಕರಿ ದೇವಾಲಯದ ಮುಂದಿರುವ ಹೊಂಡಕ್ಕೆ ಹರಿಶ್ಚಂದ್ರ ತೀರ್ಥವೆಂದು ಕರೆಯಲಾಗುತ್ತದೆ. ಈ ಹೊಂಡದ ಮೂರು ಕಡೆಯು ಸುಂದರ ಕಲ್ಲಿನ ಮಂಟಪವಿದೆ. ಪ್ರತಿ ವರ್ಷ ಸಂಕ್ರಾಂತಿಯ ತರುವಾಯ ಬರುವ ಬನದ ಹುಣ್ಣಿಮೆಯ ಸಮಯಕ್ಕೆ ಬನಶಂಕರಿಯ ದೇವಿಯ ಜಾತ್ರೆ ನಡೆಯುವುದು. ಲಕ್ಷಾಂತರ ಭಕ್ತಾದಿಗಳು ಅಲ್ಲಿಗೆ ಬರುವರು. ಸುಮಾರು ಒಂದು ತಿಂಗಳವರೆಗೆ ಈ ಜಾತ್ರೆಯು ನಡೆಯುತ್ತದೆ.

ಬನಶಂಕರಿಯ ಸುತ್ತಲಿನ ಸುಂದರ ಪರಿಸರ ಒಂದು ತೂಕವಾದರೆ ಅಲ್ಲಿನ ಮಹಿಳೆಯರು ತಲೆಯ ಮೇಲೆ ಬುಟ್ಟಿಯಲ್ಲಿ ಹೊತ್ತು ಮಾರುವ ಕೆನಿ ಮೊಸರು, ಖಡರ್ ರೊಟ್ಟಿಯ ರುಚಿಯದ್ದೇ ಒಂದು ತೂಕ. ಬಿರಿಬಿಸಿಲಿಗೆ ಮೈಯೊಡ್ಡಿ ದಣಿದ ದೇಹಕ್ಕೆ ತಣ್ಣನೆಯ ಮೊಸರು, ಭಕ್ಕರಿ, ಗಡಿಗೆಯ ಮಜ್ಜಿಗೆ ಇಳಿಯುತ್ತಿದ್ದರೆ ದಣಿವೆಲ್ಲ ಮರೆತುಹೋಗಿರುತ್ತದೆ. ಮನೆಯ ಊಟವನ್ನು ನೆನಪಿಗೆ ತರುವ ಬನಶಂಕರಿಯ ಬುತ್ತಿ ಅದನ್ನು ಬಡಿಸುವ ಆ ಮಹಿಳೆಯರ ಪ್ರೀತಿ, ಅಕ್ಕರೆಯ ಮಾತು ಮಾತ್ರ ಬಾದಾಮಿಯ ಪ್ರವಾಸವನ್ನು ಚಿರಕಾಲ ನೆನಪಿನಲ್ಲಿಡುವುದು.

ಅತಿಥಿ ದೇವೊಭವ ಎಂದು ನಂಬಿರುವ ಭಾರತೀಯರ ಸಂಸ್ಕ್ರತಿಯನ್ನು ಬಿಂಬಿಸುವ ಈ ಬನಶಂಕರಿಯ ಬುತ್ತಿ ಈ ಕಾಲದಲ್ಲಿನ ಒಂದು ವಿಶೇಷವಾಗಿದೆ. ಬನಶಂಕರಿಗೆ ಬಂದಾಗ ಇಲ್ಲಿನ ಮಹಿಳೆಯರು ತಲೆಯ ಮೇಲೆ ಬುತ್ತಿಯ ಬುಟ್ಟಿಯನ್ನು ಹೊತ್ತುಕೊಂಡು "ಬರ್ರೀ ಅಣ್ಣವ್ರ ಊಟ ಮಾಡಬರ್ರೀ, ಕೆನಿ-ಮೊಸರು ಐತಿ ಬರ್ರೀ, ಮಜ್ಜಿಗೆ ಕುಡಿಬರ್ರೀ" ಎಂದು ಪ್ರೀತಿಯಿಂದ ಕರೆದಾಗ ಪ್ರವಾಸಿಗರು, ಭಕ್ತಾದಿಗಳು, "ತಡ್ರೇವ್ವರ್ರೇ ಬನಶಂಕರಿ ಅಮ್ಮಗ ಕಾಯಿ ಒಡೆಸಿಕೊಂಡು ಹರಿಕೆ ಸಲ್ಲಸಿ ಬಂದು ಊಟ ಮಾಡ್ತಿವಿ" ಎಂದು ಹೇಳಿ ಹರಿಕೆಯನ್ನು ಸಲ್ಲಿಸಿ ಊಟಕ್ಕೆ ಬರುತ್ತಾರೆ.

ಆ ಬನಶಂಕರಿಯ ಬುತ್ತಿಯನ್ನು ಬಿಚ್ಚಿದಾಗ ಅಮೃತದ ಸವಿಯನ್ನ ತಂದುಕೊಡುವ ಹಲವಾರು ಭೋಜ್ಯಗಳಿರುವುದು. ಬನಶಂಕರಿಯು ತನ್ನಲ್ಲಿಗೆ ಬರುವ ಬಡವ-ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರನ್ನು ಕಾಡುವ ಹಸಿವೆಯನ್ನು ತಣಿಸಲು ಈ ಬುತ್ತಿಯೊಂದೇ ಸಾಕು. ಇದರಲ್ಲಿ ಸಜ್ಜಿ-ರೋಟ್ಟಿ, ಬಿಳಿ ಜೋಳದ ಖಡಕ್ ರೊಟ್ಟಿ, ಚೌಳಿಕಾಯಿ ಪಲ್ಲೆ, ಬದನೆಕಾಯಿ ಪಲ್ಲೆ, ಕಡಲೇಕಾಯಿ ಪಲ್ಲೆ, ಹೆಸರುಬೇಳೆಯ ಪಲ್ಲೆ, ಮಡಕೆ ಕಾಳಿನ ಉಸಳಿ, ಅಲಸಂದಿ ಕಾಳಿನ ಪಲ್ಲೆ, ಹಸಿರು ತೊಪ್ಪಲು ಪಲ್ಲೆಗಳಾದ ರಾಜಗಿರಿ, ಸಬ್ಬಸಿಗೆ, ಮೆಂತ್ತೆ ಸೊಪ್ಪು, ಪುಂಡಿ ಪಲ್ಲೆ ನುಚ್ಚು, ಖುಸಬಿ ಪಲ್ಲೆ, ಹತ್ತರಕಿ ಪಲ್ಲೆ, ಹುಣಸಿ ತಕ್ಕು, ನಿಂಬೆ ಹಣ್ಣಿನ ಉಪ್ಪಿನಕಾಯಿ, ಊಟದೊಂದಿಗೆ ಕಡೆದು ತಿನ್ನಲು ಉಳ್ಳಾಗಡ್ಡಿ, ನೆಂಜಿಕೊಳ್ಳಲು ಶೇಂಗಾದ ಹಿಂಡಿ, ಗುರೆಳ್ಳ ಚಟ್ನಿ, ಅಗಸಿ ಹಿಂಡಿ, ಉತ್ತರ ಕನ್ನಡಿಗರ ವಿಶೇಷವಾದ ಕಲ್ಹನ ಚಟ್ನಿ ಕೆಂಪ್ಹಿಂಡಿ ಇದೆಲ್ಲವುಗಳ ಜೊತೆಗೆ ಸ್ವಾದಿಷ್ಟವಾದ ಕೆನೆ-ಮೊಸರು. ನಿಮಗೆ ಬೇಕಾದ ರೀತಿಯ ಆಹಾರವನ್ನು ಕೇಳಿ ಪಡೆಯಬಹುದು. ಬೆಂಗಳೂರಿನಂಥ ನಗರಗಳಲ್ಲಿ ಹೊಟೇಲುಗಳಿಗೆ ನಾವು ಸುರಿಯುವ ದುಡ್ಡಿನ ಮುಂದೆ ಹೊಟ್ಟೆ ತಣ್ಣಗಾಗಿರುವ ತಾಯಂದಿರಿಗೆ ನೀಡುವ ಹಣ ಏನೇನೂ ಅಲ್ಲ.

ಊಟಕ್ಕೆ ಬಡಿಸುವ ಮಹಿಳೆಯರು ಪಕ್ಕದಲ್ಲಿಯೇ ಕುಳಿತು ಪ್ರೀತಿಯಿಂದ ಊಟ ಬಡಿಸುತ್ತಾ ಅಕ್ಕರೆಯ ಮಾತುಗಳನ್ನ ಆಡುವಾಗ ಯಾವುದೋ ಕಾಲದ ಸಂಬಂಧ ಇವರೊಂದಿಗೆ ಇರುವಂತೆ ಅವರು ನಮಗೆ ಉಣ ಬಡಿಸಿದಂತೆ ಭಾಸವಾಗುತ್ತದೆ. ಊಟವನ್ನು ನೀಡಿದ ಆ ತಾಯಿ ಹೋಗುವಾಗ ಸ್ವಲ್ಪ ಹೊತ್ತು ಆರಾಮ ಮಾಡಿ ಹೋಗ್ರೀ ಅಪ್ಪಾವ್ರೇ, ಆ ನಮ್ಮವ್ವ ಬನಶಂಕರಿ ನಿಮಗೆಲ್ಲಾ ಒಳ್ಳೆಯದನ್ನ ಮಾಡ್ಲಿ ಎಂದು ಹ್ರದಯ ತುಂಬಿ ಹರಸಿ ಹೋಗುತ್ತಾಳೆ.

ಜಾತಿ, ಧರ್ಮ ಎಂದು ಹೊಡೆದಾಡುತ್ತಾ ಅಧಿಕಾರ, ಅಂತಸ್ತು, ದುಡ್ಡು ಎನ್ನುತ್ತಾ ಈ ಮಾಯಾ ಜಿಂಕೆಯ ಬೆನ್ನು ಹತ್ತಿರುವ ಸಮಾಜದಲ್ಲಿ ಬಂದವರಿಗೆಲ್ಲ ಸಮಾನವಾಗಿ ನೊಡುತ್ತಾ ಉತ್ತರ ಕರ್ನಾಟಕ ಶೈಲಿಯ ಊಟವನ್ನು ನೀಡುತ್ತಿರುವ ಬನಶಂಕರಿಯ ಬುತ್ತಿಯನ್ನು ನೀಡುತ್ತಿರುವ ಎಲ್ಲಾ ಮಹಿಳೆಯರು ನಿಜಕ್ಕೂ ಧನ್ಯರು. ನೀವು ಒಮ್ಮೆ ಬನಶಂಕರಿಗೆ ಹೋಗಿ ಬನ್ನಿ.

Story first published: Tuesday, December 29, 2009, 12:38 [IST]
X
Desktop Bottom Promotion