For Quick Alerts
ALLOW NOTIFICATIONS  
For Daily Alerts

ಕರ್ನಾಟಕದ ಹೆಮ್ಮೆ: ರಾಗಿ ಕಂಡಿರಾ..ತಿಂದು ನೋಡ್ತಿರಾ...

By Mahesh
|
Ragi Millet Mela, Malleswaram, Bengaluru
ಕರ್ನಾಟಕದ ಹೆಮ್ಮೆಯ ಬೆಳೆಯಾದ ರಾಗಿ ದಕ್ಷಿಣ ಭಾಗದಲ್ಲಂತೂ ಪ್ರತಿನಿತ್ಯದ ಊಟದೊಡನೆ ಅವಿಭಾಜ್ಯವಾಗಿ ಬೆರೆತಿದೆ. ರಾಗಿಯಿಂದ ಬಗೆ ಬಗೆ ತಿನಿಸುಗಳು ತಯಾರಿಸಬಹುದಾದರೂ ರಾಗಿ ಮುದ್ದೆ ಮಸೊಪ್ಪು ಸಾರು ರುಚಿ ಬಲ್ಲವರೇ ಬಲ್ಲರು.

ಹೈಜನಿಕ್ ಫುಡ್, ಡಯೆಟ್ ಫುಡ್ ಎಂದೆಲ್ಲಾ ಹೇಳುವ ಹೈಟೆಕ್ ಬೆಂಗಳೂರಿಗರಲ್ಲಿ ಅನೇಕರು ಇಂದು ಮಧ್ಯಾಹ್ನದ ಬಿಸಿ ಊಟಕ್ಕೆ ರಾಗಿ ಮುದ್ದೆಯನ್ನು ಬಯಸುತ್ತಿದ್ದಾರೆ. ಸೊಪ್ಪಿನ ಸಾರು ಸಿಗದಿದ್ದರೂ ತರಕಾರಿ ಬೇಳೆ ಕೂಟು ಅಥವಾ ಶೇರ್ವಾ ಜೊತೆ ಮುದ್ದೆಯನ್ನು ಗುಳುಂ ಮಾಡಿ 'ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ! ಹಿಟ್ಟಂ ಬಿಟ್ಟಂ ಕೆಟ್ಟಂ' ಎಂದು ಗುನುಗುತ್ತಿದ್ದಾರೆ. ಇಷ್ಟೆಲ್ಲಾ ಹೊಗಳಿಕೆಗೆ ಪಾತ್ರವಾಗಿರುವ ರಾಗಿಯ ಮಹತ್ವ ಹಾಗೂ ರಾಗಿ ಬೆಳೆ ಪ್ರಚಾರದ ಉದ್ದೇಶದಿಂದ ಫೆ. 5 ಹಾಗೂ 6 ರಂದು ಮಲ್ಲೇಶ್ವರದ ಗಾಂಧಿಭವನದಲ್ಲಿ ರಾಗಿ ಮೇಳವನ್ನು ಸಾವಯವ ಕೃಷಿ ತಂಡ ಸಹಜ ಸಮೃದ್ಧಿ ಆಯೋಜಿಸಿದೆ.

ಬೆಂಗಳೂರಿನ ಶೇಷಾದ್ರಿಪುರಂನ ಕುಮಾರ ಪಾರ್ಕ್ ಈಸ್ಟ್ ಬಳಿ ಇರುವ ಗಾಂಧಿಭವನದಲ್ಲಿ ಫೆ. 5 ಹಾಗೂ 6 ರಂದು ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆವರೆಗೂ ರಾಗಿ ಮೇಳ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9731275656, 9900653364, 9986453324.

ಬೆಳಗ್ಗೆ ಸಂಜೆ ರಾಗಿ ಮಾಲ್ಟ್, ರಾಗಿ ಗಂಜಿ ಕುಡಿಯುತ್ತಾ ಬಂದರೆ ಉಷ್ಣ ದೇಹ ಪ್ರಕೃತಿ ಇರುವವರಿಗೆ ದೇಹದ ಸಮಶೀತೋಷ್ಣತೆ ಸರಿಯಾಗಿ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ರಾಗಿ ರೊಟ್ಟಿ, ರಾಗಿ ಮುದ್ದೆ ತಿಂದು ಮೈ ಮುರಿಯುವ ಹಾಗೆ ಕೆಲಸ ಮಾಡಿದ್ದರಿಂದಲೇ ನಮ್ಮ ನಿಮ್ಮ ಅಜ್ಜ ಅಜ್ಜಿಯಂದಿರು ಇಂದಿಗೂ ಗಟ್ಟಿ ಮುಟ್ಟಿಯಾಗಿರುವುದು ಎಂಬುದನ್ನು ಮರೆಯುವಂತಿಲ್ಲ.

ರಾಗಿಯಲ್ಲಿ ಅಂತದ್ದೇನಿದೆ?: ಏನಿದೆ ಎನ್ನುವುದಕ್ಕಿಂತಲೂ ಏನಿಲ್ಲ ಎಂದು ಪ್ರಶ್ನಿಸಿಕೊಳ್ಳುವುದು ಉತ್ತಮ. ರಾಗಿ ಸಹಜವಾಗಿ ಸರಾಗವಾಗಿ ಪಚನವಾಗಬಲ್ಲ ಆಹಾರ. ನಗರ ಪ್ರದೇಶದಲ್ಲಿ ಸಿಗುವ ಆಹಾರ ಧಾನ್ಯ ಸೇವಿಸುವವರಿಗೆ ಅದರಿಂದ ಉಪಯುಕ್ತ ವಿಟಮನ್ ಸಿಗುವುದೋ ಇಲ್ಲವೋ ಕೆಲವರಿಗೆ ಅಲರ್ಜಿಯಂತೂ ಉಂಟಾಗುತ್ತದೆ.

ಆದರೆ, ರಾಗಿ ಸೇವನೆ ಅಲರ್ಜಿ ಮುಕ್ತವಾಗಿಸುತ್ತದೆ. ನಾರಿನಂಶ, ಬಿ ಕಾಂಪ್ಲೆಕ್ಸ್ ವಿಟಮಿನ್ನುಗಳು, ಅಮಿನೋ ಆಮ್ಲ, ವಿಟಮಿನ್ ಇ ಅಲ್ಲದೆ ಖನಿಜ, ಕಬ್ಬಿಣ, ಫಾಸ್ಪರಸ್ ಹಾಗೂ ಪೊಟಾಶಿಯಂಗಳು ರಾಗಿಯಲ್ಲಿ ಅಡಕವಾಗಿವೆ. ಮಧುಮೇಹಿಗಳು ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸಿ, ಕ್ಯಾನ್ಸರ್ ಅಪಾಯದಿಂದ ದೂರಾಗಿಸಿ, ರೋಗಮುಕ್ತ ಉತ್ತಮ ಜೀವನ ಶೈಲಿ ಹೊಂದಬೇಕಾದರೆ ರಾಗಿ ಸೇವನೆ ಅಗತ್ಯವಿದೆ.

ಭತ್ತ ಹಾಗೂ ಗೋಧಿಯನ್ನೇ ನೆಚ್ಚಿಕೊಂಡಿರುವವರಿಗೆ ರಾಗಿ ಉತ್ತಮ ವೈವಿಧ್ಯತೆ ಒದಗಿಸಬಲ್ಲ ಆಹಾರವಾಗಿದೆ. ರಾಗಿ ಬೆಳೆಯುವುದರಿಂದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ತಗ್ಗುತ್ತದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಡುತ್ತಾರೆ. ಇಷ್ಟೆಲ್ಲಾ ವಿಶೇಷತೆಯಿದ್ದರೂ ರಾಗಿ ದೈನಂದಿನ ಆಹಾರ ಪಟ್ಟಿಯಿಂದ ಕಣ್ಮರೆಯಾಗುತ್ತಿದೆ.

ನಗರವಾಸಿಗಳಿಗೆ ರಾಗಿ ಮಹತ್ವ ಅರಿವಾಗಬೇಕಾದರೆ ಇಂಥ ಮೇಳಗಳು ಅಗತ್ಯವಿದೆ ಎಂದು ರಾಗಿಗೆ ಮತ್ತೊಮ್ಮೆ ಮಹತ್ವ ಬರಬೇಕಿದ್ದಾರೆ ಇಂಥ ಮೇಳಗಳು ಅವಶ್ಯವಾಗಿ ನಡೆಯಬೇಕು. ರಾಗಿಯನ್ನೇ ನಂಬಿಕೊಂಡು ರಾಗಿಗೆ ಅಘೋಷಿತ ರಾಯಭಾರಿಯಾಗಿರುವ ಮಾಜಿ ಪ್ರಧಾನಿ ದೇವೇಗೌಡ ಮುಂತಾದವರು ರಾಗಿ ಪರ ಜಾಹೀರಾತು ನೀಡುತ್ತಾ ಬಂದರೆ ದೇಶದ ಆರ್ಥಿಕ, ಸಮಾಜಿಕ, ಆರೋಗ್ಯ ಕಾಪಾಡಲು ಸಾಧ್ಯ. ಹಾಗಾಗಿ ರಾಗಿ ಬಗ್ಗೆ ಇನ್ನಷ್ಟು ತಿಳಿಯಲು ತಪ್ಪದೇ ಭೇಟಿ ಕೊಡಿ.

English summary

Millet Mela Gandhibhavan | Ragi Karnataka | Food Mela Seshadripuram | Sahaja Samrudha | ರಾಗಿ ಮೇಳ ಗಾಂಧಿಭವನ | ರಾಗಿ ಕರ್ನಾಟಕ | ಆಹಾರ ಮೇಳ ಶೇಷಾದ್ರಿಪುರಂ | ಸಹಜ ಸಮೃದ್ಧ |

Sahaja Samrudha a organic group has organised Millet (Ragi) Mela at Gandhibhavan near Shivananda Circle, Malleswaram Bangalore. Minerals and Vitamins enriched healthy food from Ragi is mainly and specially consumed in southern parts of Karnataka.
X
Desktop Bottom Promotion