For Quick Alerts
ALLOW NOTIFICATIONS  
For Daily Alerts

ಸುರ್ನೋಳಿ ಎಂದರೇನೆಂದು ಗೊತ್ತೇ ನಿಮಗೆ?

By Staff
|

ಏನು ವಿಶೇಷ 'ಸುರ್ನೋಳಿ’ ದೋಸೆಯದು? ಮೊದಲನೆಯದಾಗಿ ಸುರ್ನೋಳಿ ಹೆಚ್ಚಾಗಿ ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಮಾಡಲ್ಪಡುವ (ಅಂದರೆ ಮನೆಗಳಲ್ಲಿ ಮಾಡುವುದು ಕಡಿಮೆ) ದೋಸೆ.

ನಾನು ಮೂಲತಃ ಉಡುಪಿಜಿಲ್ಲೆಯ ಕಾರ್ಕಳದವನಾದ್ದರಿಂದ ಮತ್ತು ಕೆಲವರ್ಷಗಳ ಹಿಂದಿನವರೆಗೂ ನಮ್ಮದು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಾಗಿತ್ತಾದ್ದರಿಂದ, ಕರಾವಳಿಯ ಈ ಜಿಲ್ಲೆಗಳ ಕೆಲವು ಸ್ಪೆಷಾಲಿಟಿಗಳನ್ನೆಲ್ಲ ವಿಚಿತ್ರಾನ್ನದಲ್ಲಿ ಈಗಾಗಲೇ ಫೀಚರಿಸಿದ್ದೇನೆ. (ತನ್ಮೂಲಕ ನನ್ನ ಮಣ್ಣಿನ ಅಭಿಮಾನವನ್ನು ಮೆರೆದಿದ್ದೇನೆ?) 'ಕಾಫಿ‚ ಜತೆಗೆ ಬನ್ಸ್‌’, 'ಪತ್ರೊಡೆ’, 'ಭೂತಾರಾಧನೆ’ ಇತ್ಯಾದಿ ಪ್ರತ್ಯೇಕ ಲೇಖನಗಳಲ್ಲಿ ಕವರ್‌ ಆಗಿದ್ದರೆ ಯಕ್ಷಗಾನ, ಕಂಬಳ ಇತ್ಯಾದಿಯೆಲ್ಲ ಪದಬಂಧ-ರಸಪ್ರಶ್ನೆಗಳಲ್ಲಾದರೂ ಉಲ್ಲೇಖಿಸಲ್ಪಟ್ಟಿವೆ. ಈ ಸಲವೂ ಒಂದು ದ.ಕ ಸ್ಪೆಷಲ್‌ ನಿಮಗೆ ತಿಳಿಸುತ್ತಿದ್ದೇನೆ. ಅದೇ 'ಸುರ್ನೋಳಿ’.

'ಸುರ್ನೋಳಿ’ಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಸಿರ್ಸಿ ತಾಲೂಕಿನ ಸೋಂದಾದಲ್ಲಿ ಇರುವ 'ಸ್ವರ್ಣವಲ್ಲಿ’ ಮಠಕ್ಕೂ ಏನಾದರೂ ಸಂಬಂಧವಿರಬಹುದೇ ಎಂದು ನಿಮಗೆ ಅನುಮಾನ ಬರುವುದು ಬೇಕಾಗಿಲ್ಲ. 'ಸುರ್ನೋಳಿ’ ಎಂದರೆ ದೋಸೆಯ ಒಂದು ವೆರೈಟಿ! (ಒಂದಿಷ್ಟು ತತ್ಸಮ-ತದ್ಭವಗಳು ನನಗೆ ಬಾಯಿಪಾಠ ಇದ್ದರೂ 'ಸ್ವರ್ಣವಲ್ಲಿ’ಯ ತದ್ಭವ 'ಸುರ್ನೋಳಿ’ ಇರಬಹುದೇ ಎಂದು ತರ್ಕಿಸಲು ಇದುವರೆಗೆ ನಾನು ಹೋಗಿಲ್ಲ).

ಏನು ವಿಶೇಷ 'ಸುರ್ನೋಳಿ’ ದೋಸೆಯದು? ಮೊದಲನೆಯದಾಗಿ ಸುರ್ನೋಳಿ ಹೆಚ್ಚಾಗಿ ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಮಾಡಲ್ಪಡುವ (ಅಂದರೆ ಮನೆಗಳಲ್ಲಿ ಮಾಡುವುದು ಕಡಿಮೆ) ದೋಸೆ.

ಯಾಕೆ ಹೊಟೇಲ್‌ಗಳಲ್ಲಿ ಮಾತ್ರ? ಸ್ವಲ್ಪ ಯೋಚಿಸಿದರೆ ನಿಮಗೆ ಉತ್ತರ ಸಿಗುತ್ತದೆ. ಸುರ್ನೋಳಿಗೆ ನಿರ್ದಿಷ್ಟ 'ರೆಸಿಪಿ’ ಏನೂ ಇಲ್ಲ. ರೆಸ್ಟೋರೆಂಟ್‌ನಲ್ಲಿ ದಿನದ ವ್ಯಾಪಾರ ವಹಿವಾಟು ಎಲ್ಲ ಮುಗಿದಾಗ ಅನ್ನ, ಮಜ್ಜಿಗೆ ಮತ್ತಿತರ ಖಾದ್ಯಗಳೇನೇ ಉಳಿದಿದ್ದರೂ ಅದೆಲ್ಲವನ್ನೂ ಒಟ್ಟಿಗೇ ಕಡಿದು (ಒಂದಿಷ್ಟು ಬೆಲ್ಲ ಕೂಡ ಹಾಕಿ) ಹಿಟ್ಟುಮಾಡಿಟ್ಟು ಮಾರನೇ ದಿನ ಬೆಳಿಗ್ಗೆಬೆಳಿಗ್ಗೆ ದೋಸೆ ಹುಯ್ದು ಮಾಡುವುದೇ ಸುರ್ನೋಳಿ. ಇಡ್ಲಿ ಬೇಯುವವರೆಗೆ 'ತಿಂಡಿ ಏನಿದೆ?’ ಅಂತ ಕೇಳಿದರೆ ಮಾಣಿ 'ಸುರ್ನೋಳಿ’ ಮಾತ್ರ ಹೇಳುವುದು! ಕಾರ್ಕಳದಿಂದ ಮಂಗಳೂರಿಗೆ, ಉಡುಪಿಗೆ ಫಸ್ಟ್‌ ಬಸ್‌ ಹೊರಡುವ ಸಮಯದಲ್ಲಿ ಮಾತ್ರ ಹೊಟೇಲಲ್ಲಿ ಸುರ್ನೋಳಿ ಲಭ್ಯ. ಬೆಂಗಳೂರು-ಕಾರ್ಕಳ ನೈಟ್‌ಬಸ್‌ ಬಂದು ತಲುಪುವಾಗ ಏಳು ಗಂಟೆಯಾದರೆ ಯಾವ ರೆಸ್ಟೋರೆಂಟಲ್ಲೂ ಸುರ್ನೋಳಿ ಸಿಗಲಾರದೇನೊ. ಅಂಥ ಅಲ್ಪಾಯುಷಿ ತಿಂಡಿಯೇ ಸುರ್ನೋಳಿ.

ಹೌದಾ? ಹಿಂದಿನ ದಿನ ಉಳಿದದ್ದನ್ನೆಲ್ಲ ಹಾಕಿ ದೋಸೆ ಮಾಡುತ್ತಾರಾ? ಎಂದು ನೀವು ಹುಬ್ಬೇರಿಸಬಹುದಾದರೂ ಒಮ್ಮೆ ಬಿಸಿಬಿಸಿ 'ಸುರ್ನೋಳಿ-ಬೆಣ್ಣೆ’ಯ ರುಚಿ ನೋಡಿದರೆ ಅಂತಹ ಸಂದೇಹಗಳೆಲ್ಲ ಮಾಯವಾಗುತ್ತವೆ. ಮನೆಯಲ್ಲೂ ಸುರ್ನೋಳಿ ಮಾಡಿ ಚಪ್ಪರಿಸಬಹುದಲ್ಲ ? ಖಂಡಿತ! ನೆನೆಸಿಟ್ಟ ಅಕ್ಕಿ-ಬೇಳೆ ಮಾತ್ರವಲ್ಲದೆ ಅದಕ್ಕೆ ಸ್ವಲ್ಪ ಅನ್ನ, ಮಜ್ಜಿಗೆ, ಬೆಲ್ಲ, ಹಿಡಿ ಅವಲಕ್ಕಿ, ತೆಂಗಿನಕಾಯಿ ತುರಿಯನ್ನೂ ಹಾಕಿ, ಹಿಟ್ಟುಮಾಡಿಟ್ಟು ರಾತ್ರೆಯಿಡೀ ಫರ್ಮೆಂಟಿಸಿ ಬೆಳಗಿನ ತಿಂಡಿಗೆ ಸುರ್ನೋಳಿ ಮಾಡಿ ! ಸಣ್ಣಗಾತ್ರದ 'ಮಂಗಳೂರು ಸೌತೆ’ಯನ್ನೂ ಸಿಪ್ಪೆತೆಗೆದು ಹೋಳುಗಳನ್ನು ಹಿಟ್ಟು ಕಡಿಯುವಾಗ ಹಾಕಿದರೆ ಒಂದುರೀತಿ ಪರಿಮಳ ಹೆಚ್ಚಾಗುತ್ತದೆ ಎಂದು ಕಾರ್ಕಳದ ಹೊಟೇಲೊಂದರ ಭಟ್ಟರು ನನಗೆ ಒಮ್ಮೆ ಹೇಳಿದ್ದರು.

ಸರಿ, ಸುರ್ನೋಳಿಯ ಪರಿಚಯ ನಿಮಗಾಯಿತು. ಸುರ್ನೋಳಿ ಮಾಡಿ ತಿನ್ನಲು ನೀವು ನಿರ್ಧರಿಸಿದ್ದೂ ಆಯಿತು. ಆದರೆ ನನ್ನ ವಿಚಿತ್ರಾನ್ನ ಲೇಖನದ ಪುಟ ತುಂಬಲಿಲ್ಲವಲ್ಲ !? ಅದಕ್ಕಾಗಿ ಈವಾರ ಏನು ಮಾಡಿದ್ದೇನೆಂದರೆ ಅಳಿದುಳಿದ ಖಾದ್ಯ (ಸಣ್ಣಪುಟ್ಟ ಜೋಕುಗಳು, ಲಾಜಿಕ್ಕುಗಳು, ವರ್ಡ್‌-ಮ್ಯಾಜಿಕ್ಕುಗಳು ಇತ್ಯಾದಿ - ವಿಚಿತ್ರಾನ್ನದ ಒಂದು ಇಡೀ ಲೇಖನಕ್ಕೆ ಕ್ವಾಲಿಫೈ ಆಗದವು)ಗಳನ್ನೆಲ್ಲ ಒಟ್ಟು ಸೇರಿಸಿ ಒಂದು 'ಸುರ್ನೋಳಿ’ ಮಾಡಿ ಬಡಿಸಿದ್ದೇನೆ. ಹೇಗಿದೆ ನೋಡಿ.

*

1. 'ಸೋಮಾರಿ’ ಪದಕ್ಕೆ ಇವತ್ತಿನ ’ಪ್ರೊಫೆಷನಲ್‌ ಲೈಫ್‌’ನಲ್ಲಿ ಏನು ವ್ಯಾಖ್ಯೆ (ಡೆಫಿನೀಷನ್‌)?

'ಅರಿ’ ಎಂದರೆ ಶತ್ರು, ದ್ವೇಷಿಸುವವನು. ಸೋಮವಾರವನ್ನು ದ್ವೇಷಿಸುವವನು, ಅಂದರೆ ಇನ್ನೂ ವೀಕೆಂಡ್‌ನ ಸ್ಟ್ರಾಂಗ್‌ ಗುಂಗಿನಿಂದ ಹೊರಬರದವನು 'ಸೋಮಾರಿ’!

2. ಕನ್ನಡಿಗರು ಎಕ್ಸ್‌ಚೇಂಜಿಸಿಕೊಳ್ಳುವ ವೈಯಕ್ತಿಕ ಈ-ಮೈಲ್‌ಗಳು ಪ್ರೊಟೀನ್‌ ಸಮೃದ್ಧವಾಗಿರುತ್ತವೆ; ಏಕೆ?

ಏಕೆಂದರೆ ಪ್ರತಿ ಈಮೈಲ್‌ನಲ್ಲೂ ಒಂದು 'ಅವರೆ’ಕಾಳು ಇದ್ದೇ ಇರುತ್ತದೆ! ಉದಾಹರಣೆಗೆ - ಶ್ರೀವತ್ಸ ಅವರೆ, ಶಾಮ್‌ ಅವರೆ, ರಾಜಲಕ್ಷ್ಮಿ ಅವರೆ, ವಿಜಯಾ ಅವರೆ,... ಹೀಗೆ ಆರಂಭವಾಗುವ, ಅವರೆಕಾಳಿಂದ ಅಲಂಕೃತ ಈ- ಮೈಲ್‌ಗಳು ನಿಮ್ಮ ಇನ್‌ಬಾಕ್ಸಿಗೂ ಆಗೊಮ್ಮೆ ಈಗೊಮ್ಮೆ ಬಂದು ಬೀಳುವುದಿರಬಹುದು. ಅದರಲ್ಲಿರುವ ಪ್ರೋಟೀನ್‌ ಸಮೃದ್ಧತೆಯನ್ನು ಗಮನಿಸದೆ ಡಿಲೀಟಿಸಬೇಡಿ!

3. 'ಬಂಧನ’ ಚಲನಚಿತ್ರದಲ್ಲಿ ವಿಷ್ಣುವರ್ಧನ್‌ ಇನ್ನೂ ತುಂಬಾ ಡೈಲಾಗ್‌ ಹೇಳಬೇಕಿತ್ತು, ಹೇಳಲಿಲ್ಲ ಏಕೆ?

(ವಿಚಿತ್ರಾನ್ನದಲ್ಲಿ ಡಾ।ರಾಜ್‌ ಆಗೊಮ್ಮೆ ಈಗೊಮ್ಮೆ ಉಲ್ಲೇಖಿಸಲ್ಪಟ್ಟಿದ್ದಾರಾದರೂ ವಿಷ್ಣು ಅಭಿಮಾನಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ನಿರಾಸೆಯಾಗಬಾರದೆಂದು ಇಲ್ಲಿ ಈ ಪ್ರಸ್ತಾಪ !)

ಏಕೆಂದರೆ ಅದೇ ಚಿತ್ರದಲ್ಲಿನ ಹಾಡಿನಂತೆ 'ತುಟಿ ಮೇಲೆ ಬಂದಂಥ ಮಾತೊಂದೇ ಒಂದು... ಎದೆಯಲ್ಲಿ ಉಳಿದದ್ದು ಮುನ್ನೂರ ಒಂದು....’!

4. 'ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ ಎಲ್ಲಿಗೆ ಹೋಗಿದ್ದೆ? ’ ಪ್ರಶ್ನೆಗೆ 21ನೇ ಶತಮಾನದ ಬೆಕ್ಕಿನ ಉತ್ತರ ಏನಿರಬಹುದು?

ಮೈಸೂರು ಅರಮನೆ.ಕಾಂ ಗೆ login ಆಗಿದ್ದೆ...

ಬೆಕ್ಕೇ ಬೆಕ್ಕೇ ಬೇಗನೆ ಹೇಳೆ ನೋಡಿದ ಆನಂದ...

ರಾಣಿಯ ಕಂಪ್ಯೂಟರ್‌ ಬಳಿಯಲೆ ಕಂಡೆನು ಇನ್ಫ್ರಾರೆಡ್‌ ಮೌಸೊಂದ...

5. ವಿಂಡೋಸ್‌ ಆಪರೇಟಿಂಗ್‌ ಸಿಸ್ಟಮ್‌ ಕರ್ನಾಟಕದ ರಾಜಧಾನಿ ಬೆಂಗಳೂರು ಇದ್ದಂತೆ. ಏಕೆ?

ಮೇಲೆ ಮೆನು 'ಬಾರ್‌’, ಅದರ ಕೆಳಗೆ ಟೂಲ್‌'ಬಾರ್‌’, ಬಲಬದಿಯಲ್ಲಿ ಸ್ಕೊೃೕಲ್‌'ಬಾರ್‌’, ಕೆಳಗಡೆ ಸ್ಟಾಟಸ್‌ 'ಬಾರ್‌’, ಎಡಬದಿಯಲ್ಲಿ ಮಾರ್‌'ಜಿನ್‌’. ಇಷ್ಟು ಸಾಲದೇ?

English summary

A very special South Canara recipe Surnoli

How to prepare Surnoli - a south canara recipe.
X