ಒಮ್ಮೆ ಮನೆಯಲ್ಲಿಯೇ ಮಾಡಿ-ಮೈಸೂರು ಮಸಾಲೆ ದೋಸೆ

By: Arshad
Subscribe to Boldsky

ದಕ್ಷಿಣ ಭಾರತದ ಅತಿ ಜನಪ್ರಿಯ ಬೆಳಗ್ಗಿನ ತಿಂಡಿ ಎಂದರೆ ಇಡ್ಲಿ ಮತ್ತು ದೋಸೆ. ಅದರಲ್ಲೂ ಎಲ್ಲರ ಮನೆಯ ದೋಸೆಯಲ್ಲಿ ತೂತು ಇದ್ದರೂ ಇದರಲ್ಲಿ ಹಾಕುವ ಮಸಾಲೆಯ ಮೂಲಕ ಇಂದು ಇಡಿಯ ಭಾರತದಲ್ಲಿಯೇ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಇತರ ದೋಸೆಗಿಂತಲೂ ಮಸಾಲೆ ದೋಸೆ ಗರಿಗರಿಯಾಗಿದ್ದು ಒಳಗಡೆ ಹಚ್ಚಿದ ಚಟ್ನಿ ಹಾಗೂ ಅಡಗಿಸಿಟ್ಟಿರುವ ಆಲುಗಡ್ಡೆಯ ಪಲ್ಯ - ಆಹಾ, ನೆನೆಸಿಕೊಂಡರೇ ಬಾಯಲ್ಲಿ ನೀರೂರುತ್ತದೆ. ಮಸಾಲೆ ದೋಸೆ ಎಂದರೆ ಸಾಕು, ಮಕ್ಕಳಿಂದ ಹಿಡಿದು ವೃದ್ಧರವರೆಗೂ 'ನನಗೂ ಒಂದು' ಎಂಬ ಬೇಡಿಕೆ ಮುಂದಿಡುತ್ತಾರೆ.

ಎಲ್ಲರ ಮನೆಯ ದೋಸೆ ತೂತಾಗಿದ್ದರೂ ಮಸಾಲೆ ಮಾತ್ರ ಬೇರೆ ಬೇರೆಯಾಗಿರುತ್ತದೆ. ಈ ಮಸಾಲೆಯಲ್ಲಿ ಭಿನ್ನತೆ ಪಡೆಯುವ ಮೂಲಕ ಮಸಾಲೆ ದೋಸೆಯಲ್ಲಿಯೂ ವೈವಿಧ್ಯತೆ ಸಾಧ್ಯ. ಆಲುಗಡ್ಡೆಯ ಜೊತೆಗೆ ಅಥವಾ ಬದಲಿಗೆ ಪನೀರ್, ಹೂಕೋಸು, ಚೀಸ್, ಮೆಕ್ಕೆಜೋಳ, ಅರ್ಧಬೆಂದ ಈರುಳ್ಳಿ ಇನ್ನಿತರ ಸಾಮಾಗ್ರಿಗಳನ್ನು ಬಳಸಿ ಈ ಮಸಾಲೆಯ ರುಚಿಯನ್ನು ಹಲವು ವಿಧದಲ್ಲಿ ಸವಿಯಬಹುದು. ಆದರೆ ವೈವಿಧ್ಯತೆ ಎಷ್ಟೇ ಇರಲಿ, ಅತಿ ಹೆಚ್ಚಿನ ರುಚಿ ಹಾಗೂ ಜನಪ್ರಿಯತೆ ಇರುವುದು ಮೈಸೂರು ಮಸಾಲೆ ದೋಸೆಗೆ.

ಬಗೆ ಬಗೆಯ ದೋಸೆ-ಬಾಯಲ್ಲಿ ನೀರೂರಿಸುತ್ತಿದೆ

ಈ ದೋಸೆಯ ವಿಶೇಷತೆ ಎಂದರೆ ತೆಳ್ಳಗೆ, ಮಡಚಿದರೆ ಮುರಿಯುವ ಅಗಲವಾದ ದೋಸೆ, ಇದರ ಮೇಲೆ ಹರಡಿರುವ ತುಪ್ಪ ಅಥವಾ ಬೆಣ್ಣೆ ಹಾಗೂ ಕೆಂಪು ಚಟ್ನಿ, ಆಲೂಗಡ್ಡೆಯ ಸರಳ ಪಲ್ಯ. ಒಟ್ಟಾರೆ ಸಂಯೋಜನೆಯ ಮೂಲಕ ಲಭ್ಯವಾದ ರುಚಿ ಎಲ್ಲರಿಗೂ ಮೆಚ್ಚು. ಬನ್ನಿ, ಗರಿಗರಿಯಾದ ಮೈಸೂರು ಮಸಾಲೆ ದೋಸೆ ಮಾಡುವುದು ಹೇಗೆ ಎಂಬುದನ್ನು ನೋಡೋಣ...

Mysore Masala Dosa

ಪ್ರಮಾಣ: ಸುಮಾರು ಮೂರದಿಂದ ನಾಲ್ಕು ದೋಸೆಗಳು

ಸಿದ್ಧತಾ ಸಮಯ: ಆರರಿಂದ ಎಂಟು ಘಂಟೆಗಳು

ತಯಾರಿಕಾ ಸಮಯ: ಹದಿನೈದು ನಿಮಿಷಗಳು

ದೋಸೆ ಹಿಟ್ಟಿಗೆ ಅಗತ್ಯವಿರುವ ಸಾಮಾಗ್ರಿಗಳು:

*ಅಕ್ಕಿ: ಎರಡು ಕಪ್

*ಉದ್ದಿನ ಬೇಳೆ: ಕಾಲು ಕಪ್ (ಮಿಕ್ಸಿಯಲ್ಲಿ ಕಡೆಯುವುದಾದರೆ ಮಾತ್ರ. ಕಲ್ಲಿನಲ್ಲಿ ಕಡೆಯುವುದಾದರೆ ಇನ್ನೂ ಕಡಿಮೆ ಉದ್ದು ಸಾಕು)

*ಕಡ್ಲೆ ಬೇಳೆ: ಎರಡು ದೊಡ್ಡ ಚಮಚ

*ಉಪ್ಪು: ರುಚಿಗನುಸಾರ

*ಎಣ್ಣೆ: ಎರಡು ದೊಡ್ಡ ಚಮಚ 

ಆಹಾ, ಬಿಸಿ ಬಿಸಿಯಾದ ಸೆಟ್ ದೋಸೆ ರೆಸಿಪಿ

ಮಸಾಲೆಗೆ:

*ಆಲೂಗಡ್ಡೆ: ಎರಡು (ಚೆನ್ನಾಗಿ ಬೇಯಿಸಿ ಸಿಪ್ಪೆ ಸುಲಿದು ಚಿಕ್ಕದಾಗಿ ತುಂಡರಿಸಿದ್ದು)

*ಈರುಳ್ಳಿ: ಎರಡು (ಚಿಕ್ಕದಾಗಿ ಹೆಚ್ಚಿದ್ದು)

*ಹಸಿಮೆಣಸು: ಎರಡು (ಚಿಕ್ಕದಾಗಿ ಕತ್ತರಿಸಿದ್ದು)

*ಬೆಳ್ಳುಳ್ಳಿ: ಮೂರು ಎಸಳು, ಸಿಪ್ಪೆ ಸುಲಿದು ಜಜ್ಜಿದ್ದು

*ಅರಿಶಿನ ಪುಡಿ: ಒಂದು ಚಿಕ್ಕ ಚಮಚ

*ಉಪ್ಪು: ರುಚಿಗನುಸಾರ

ಕೆಂಪು ಚಟ್ನಿಗೆ:

*ಕೆಂಪು ಮೆಣಸು: ನಾಲ್ಕರಿಂದ ಐದು

*ಕೆಂಪಗೆ ಹುರಿದ ಕಡ್ಲೆ ಬೇಳೆ: ಅರ್ಧ ಕಪ್

*ತೆಂಗಿನ ತುರಿ: ಅರ್ಧ ಕಪ್

*ಬೆಳ್ಳುಳ್ಳಿ: ಎರಡು ಎಸಳು

*ಹುಣಸೆ ಹುಳಿಯ ನೀರು: ಎರಡು ದೊಡ್ಡ ಚಮಚ

*ಉಪ್ಪು: ರುಚಿಗನುಸಾರ

ವಿಧಾನ:

1) ಮೊದಲು ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು ಸುಮಾರು ಆರರಿಂದ ಎಂಟು ಗಂಟೆ ನೆನೆಸಿಡಿ.

2) ಚಟ್ನಿಗಾಗಿ ವಿವರಿಸಿದ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಕೊಂಚ ನೀರಿನೊಂದಿಗೆ ನುಣ್ಣಗೆ ಅರೆದು ಒಂದು ಪಕ್ಕಕ್ಕಿಡಿ

3) ಆರು ಗಂಟೆ ನೆನೆಸಿಟ್ಟ ಅಕ್ಕಿಯಿಂದ ನೀರನ್ನು ಬಸಿದು ಒಂದು ಲೋಟದಲ್ಲಿ ಸಂಗ್ರಹಿಸಿ. ಈಗ ನೆನೆದ ಅಕ್ಕಿಯನ್ನು ಮಿಕ್ಸಿಯಲ್ಲಿ ಕೊಂಚವೇ ನೀರಿನೊಂದಿಗೆ ಅರೆಯುತ್ತಾ ಬನ್ನಿ, ನಡುನಡುವೆ ಬಸಿದಿದ್ದ ನೀರನ್ನೇ ಬಳಸಿ ಇನ್ನಷ್ಟು ನುಣ್ಣಗಾಗಿಸಿ. ದೋಸೆ ಹುಯ್ಯಲು ಸಾಕಾಗುವಷ್ಟು ಅರೆಯಿರಿ. ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ.

4) ಪಲ್ಯಕ್ಕಾಗಿ ಮೊದಲು ದಪ್ಪತಳದ ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.

5) ಬಳಿಕ ಬೆಳ್ಳುಳ್ಳಿ, ಹಸಿಮೆಣಸು, ಅರಿಶಿನ ಪುಡಿ ಹಾಗೂ ಬೆಂದ ಆಲೂಗಡ್ಡೆ ಹಾಕಿ ಚೆನ್ನಾಗಿ ಕಲಕಿ, ರುಚಿಗನುಸಾರ ಉಪ್ಪು ಸೇರಿಸಿ.

6) ಎಲ್ಲವೂ ಚೆನ್ನಾಗಿ ಮಿಶ್ರಣವಾದ ಬಳಿಕ ಉರಿ ಆರಿಸಿ ಮುಚ್ಚಳ ಮುಚ್ಚದೇ ಕೊಂಚ ಕಾಲ ತೆರೆದಿಡಿ.

7) ದೋಸೆ ಬಡಿಸುವ ಸಮಯಕ್ಕೂ ಕೊಂಚ ಮುನ್ನ ದೋಸೆಕಾವಲಿ ಅಥವಾ ನಾನ್ ಸ್ಟಿಕ್ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಇದರ ಮೇಲೆ ಒಂದು ಸೌಟು ದೋಸೆಹಿಟ್ಟನ್ನು ನಡುವೆ ಸವರಿ ಸಾಧ್ಯವಾದಷ್ಟು ತೆಳ್ಳಗೆ ಕಾವಲಿಯ ಅಂಚುಗಳಿಗೆ ಹರಡಿಸಿ.

8) ದೋಸೆ ನಡುವಿನಲ್ಲಿ ಕಂದು ಬಣ್ಣ ಪಡೆಯುತ್ತಿದ್ದಂತೆಯೇ ಒಂದು ಚಮಚದಿಂದ ಚಟ್ನಿಯನ್ನು ದೋಸೆಯ ಮೇಲೆ ಅವರಿ.

9) ಒಂದು ದೋಸೆಗೆ ಸಾಕಾಗುವಷ್ಟು ಮಸಾಲೆಯನ್ನು ದೋಸೆಯ ನಡುವೆ ಇರಿಸಿ.

10) ಈಗ ಮಸಾಲೆಯನ್ನು ದೋಸೆ ಆವರಿಸುವಂತೆ ಒಂದು ಬದಿಯಿಂದ ಸುರುಳಿ ಸುತ್ತುತ್ತಾ ಬನ್ನಿ.

11) ಬಳಿಕ ಬಿಸಿಬಿಸಿ ಇರುವಂತೆಯೇ ತಟ್ಟೆಯೊಂದರಲ್ಲಿ ಹಾಕಿ.

12) ಉಳಿದ ದೋಸೆಗಳನ್ನೂ ಇದೇ ವಿಧಾನದಲ್ಲಿ ತಯಾರಿಸಿ.

ದೋಸೆಗಾಗಿ ನೀರೂರಿಸಿಕೊಂಡು ಕಾಯುತ್ತಿರುವ ಮನೆಯ ಸದಸ್ಯರಿಗೆ ಚಟ್ನಿ ಮತ್ತು ಸಾಂಬಾರ್ ಜೊತೆಗೆ ಬಡಿಸಿ.

ಆಹಾ 'ಪಾಲಕ್ ಪನ್ನೀರ್ ದೋಸೆ'-ಬೊಂಬಾಟ್ ರುಚಿ...

English summary

Morning Breakfast Recipe-Mysore Masala Dosa

Here we bring you the authentic recipe for Mysore masala dosa.The inner part of this dosa is liberally smeared with ghee or butter, over which a layer of red chutney is spread and then masala is filled. So, here is the recipe for Mysore masala dosa.
Subscribe Newsletter