ಸ್ವಲ್ಪ ಹುಳಿ-ಸಕತ್ ರುಚಿ, ಮಾವಿನಕಾಯಿ ಚಿತ್ರಾನ್ನ ರೆಸಿಪಿ

By: Manasa K M
Subscribe to Boldsky

ಇನ್ನೇನು ಹಣ್ಣುಗಳ ರಾಜ ಮಾವಿನಹಣ್ಣಿನ ಕಾಲ ಬಂದೇಬಿಡ್ತು. ಮಾವಿನ ಹಣ್ಣು ಹೇಗೆ ರುಚಿಯೋ ಹಾಗೆಯೇ ಮಾವಿನ ಕಾಯಿ ಕೂಡ ತನ್ನದೇ ಆದ ಸೊಗಡನ್ನು ಹೊಂದಿರುತ್ತದೆ. ಆ ಹುಳಿ ನಾಲಿಗೆಗೆ ಕಚಗುಳಿ ಇಡುವಂತಹುದು. ಇನ್ನು ಸುವಾಸನೆಯ ಮಹಿಮೆ ಹೇಳಬೇಕೇ? ಮಾವಿನ ಕಾಯಿಯನ್ನು ಬಳಸಿ ಮಾಡುವ ಅಡುಗೆಗಳು ತರಹೇವಾರಿ. ಅದರಲ್ಲಿ ಒಂದು ಸರಳ ಅಡುಗೆ - ಮಾವಿನಕಾಯಿ ಚಿತ್ರಾನ್ನ.

ಇದು ಮಾಡುವುದು ಸುಲಭ ಹಾಗೂ ತಿನ್ನಲು ಹಿತಕರ. ಮಸಾಲೆ ಎಣ್ಣೆ ಹೆಚ್ಚಿಗೆ ಬೇಕಿಲ್ಲದ ಇದು ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂತಹುದು. ಹಾಗೆಯೇ ಯುಗಾದಿಯ ದಿನ ಈ ಚಿತ್ರಾನ್ನ ಒಂದು ಮಾಡಿ ತಿನ್ನುವುದು ವಸಂತ ಋತುವಿನ ಒಂದು ಸಂಭ್ರಮ. ಇನ್ನೇಕೆ ತಡ ಕೆಳಗೆ ನೀಡಿರುವ ವಿವರಣೆ ನೋಡಿ ನಾಳೆಗೆ ತಯಾರಿಸಿಬಿಡಿ ಮಾವಿನಕಾಯಿ ಚಿತ್ರಾನ್ನ.  ನಾಲಿಗೆ ಚಾಪಲ್ಯಕ್ಕೆ ಮಾವಿನಕಾಯಿ ಚಿತ್ರಾನ್ನ      

mango rice
 

ಬೇಕಾಗುವ ಪದಾರ್ಥಗಳು:

*ಉದುರುದುರಾಗಿ ಬೆಂದಿರುವ ಅನ್ನ - ಮೂರು / ನಾಲ್ಕು ಕಪ್

*ಮಾವಿನಕಾಯಿ ತುರಿ - ಒಂದು ಕಪ್

*ಈರುಳ್ಳಿ - ಒಂದು (ಸಣ್ಣಗೆ ಉದ್ದಕ್ಕೆ ಹಚ್ಚಿಕೊಳ್ಳಿ)

*ಹಸಿ ಮೆಣಸಿನಕಾಯಿ - ಐದು / ಆರು

*ಸಾಸಿವೆ - ಒಂದು ಚಮಚ

*ಕರಿಬೇವಿನ ಎಲೆಗಳು - ಹತ್ತು

*ಕಡಲೆ ಬೇಳೆ - ಒಂದು ಚಮಚ

*ಉದ್ದಿನ ಬೇಳೆ - ಒಂದು ಚಮಚ

*ಕಡಲೆ ಬೀಜ - ಒಂದು ಚಮಚ

*ಎಣ್ಣೆ - ನಾಲ್ಕು ಚಮಚ

*ತೆಂಗಿನ ತುರಿ - ಅರ್ಧ ಕಪ್

*ಉಪ್ಪು - ರುಚಿಗೆ ತಕ್ಕಹಾಗೆ

ಕೊತ್ತಂಬರಿ - ಅಲಂಕರಿಸಲು      ಬಾಯಲ್ಲಿ ನೀರೂರಿಸುತ್ತೆ ಮಾವಿನ ಕಾಯಿ ಅನ್ನ

ತಯಾರಿಸುವ ವಿಧಾನ

*ಮೊದಲಿಗೆ ಮಾವಿನಕಾಯಿಯನ್ನು ಕೊಳ್ಳುವಾಗ ಗಮನಿಸಿ ಕೊಂಡುಕೊಳ್ಳಿ. ಹಣ್ಣು ಆಗದೆ ಇನ್ನೂ ಹಸಿರಾಗಿ ಹುಳಿಯಾಗಿ ಗಟ್ಟಿ ಇರಬೇಕು. ಇಂತಹ ಕಾಯಿಗೆ ಮೇಲಿನ ಹಸಿರು ಬಣ್ಣದ ಸಿಪ್ಪೆ ತೆಗೆಯಿರಿ. ನಂತರ ತುರಿದು ಇಟ್ಟುಕೊಳ್ಳಿ.

*ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಸಾಸಿವೆ, ಕರಿಬೇವು, ಉದ್ದಿನ ಬೇಳೆ, ಕಡಲೆ ಬೇಳೆ, ಕಡಲೆ ಬೀಜ ಹಾಕಿ ಹುರಿಯಿರಿ. ಒಗ್ಗರಣೆಗೆ ಹಾಕಿದ ಯಾವುದೇ ಪದಾರ್ಥ ಸುಡದಂತೆ ಎಚ್ಚರವಿರಲಿ.

*ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ ಹಾಗೂ ಈರುಳ್ಳಿ ಹಾಕಿ ಈರುಳ್ಳಿ ಕೆಂಪಗೆ ಆಗುವವರೆಗೂ ಹುರಿಯಿರಿ.

*ನಂತರ ಇದೆ ಬಾಣಲಿಗೆ ತುರಿದ ಮಾವಿನಕಾಯಿ ಹಾಕಿ ಚೆನ್ನಾಗಿ ಕಲೆಸುತ್ತ ಇರಿ. ಮಾವಿನ ಕಾಯಿ ತುರಿ ಚೆನ್ನಾಗಿ ಬೆರೆತು ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಸುಮಾರು ಐದು ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಬೇಕು.  ಇದಕ್ಕೆ ಸ್ವಲ್ಪ ಉಪ್ಪು ಹಾಕಿಕೊಳ್ಳಿ. ಇನ್ನೊಂದು ಮೂರು ನಿಮಿಷ ಹುರಿದು ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಹಾಕಿ ಕಲಸಿ. ನಂತರ ಬಾಣಲೆಯನ್ನು ಸ್ಟೋವ್ ಮೇಲಿಂದ ಇಳಿಸಿಬಿಡಿ. ಇದು ಚಿತ್ರಾನ್ನದ ಗೊಜ್ಜು.

*ಈ ಗೊಜ್ಜು ಸ್ವಲ್ಪ ತಣ್ಣಗಾದ ಮೇಲೆ ಉದುರುದುರಾಗಿ ಬೇಯಿಸಿದ ಅನ್ನವನ್ನು ಚಿತ್ರಾನ್ನ ಕಲೆಸಿದಂತೆ ಕಲೆಸಿಕೊಳ್ಳಿ. ಹುಳಿ ಖಾರ ಗೊಜ್ಜಿನಲ್ಲಿಯೇ ಇದ್ದು, ಉಪ್ಪು ಬೇಕಾದಲ್ಲಿ ಸ್ವಲ್ಪ ಸೇರಿಸಿ. ಕಲಸುವಾಗ ತೆಂಗಿನ ತುರಿ ಹಾಕಿ ಕಲೆಸಿಕೊಂಡಲ್ಲಿ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಹತ್ತು ಹದಿನೈದು ನಿಮಿಷದಲ್ಲಿ ಹುಳಿಯನ್ನು ಅನ್ನವೆಲ್ಲ ಹೀರಿಕೊಂಡು ಬೊಂಬಾಟ್ ಚಿತ್ರಾನ್ನ ರೆಡಿಯಾಗುತ್ತದೆ.

*ತೆಂಗಿನ ತುರಿ ಹಾಕಿರುವುದರಿಂದ ಇದನ್ನು ತಕ್ಷಣವೇ ಸೇವಿಸಬೇಕು. ತೆಂಗಿನ ತುರಿಯನ್ನು ಸೇರಿಸದೆ ಇದ್ದಲ್ಲಿ ಇದು ಬಹಳ ಹೊತ್ತಿನವರೆಗೂ ಕೆಡದೆ ಇರುತ್ತದೆ. ಮಧ್ಯಾಹ್ನ ಲಂಚ್ ಬಾಕ್ಸ್‌ಗೆ ತೆಗೆದುಕೊಂಡು ಹೋಗಲು ಕೂಡ ಇದು ರುಚಿಯಾದ ಖಾದ್ಯ

English summary

Mango Rice recipe (seasonal)

As the season of Mangoes is nearing, it is time to plan recipes to cook for the hot season using Mangoes as the prime ingredient. Raw mangoes are high in vitamins particularly vitamin c so take a look at how to prepare this easy rice recipe
Subscribe Newsletter