For Quick Alerts
ALLOW NOTIFICATIONS  
For Daily Alerts

ಕೊಬ್ಬರಿ ಹಾಕದ ಸ್ವಾದಿಷ್ಟ ಚಟ್ನಿಪುಡಿ

By Staff
|
Chatnipudi, anytime Indian spice
ಅನ್ನ, ಚಪಾತಿ, ರೋಟ್ಟಿ, ಇಡ್ಲಿ, ದೋಸೆ ಎಲ್ಲ ತಿಂಡಿಗಳ ಮೆಚ್ಚಿನ ಸಂಗಾತಿ ಈ ಚಟ್ನಿಪುಡಿ. ಎಣ್ಣೆ ಕಡಿಮೆಯಿದ್ದು ಕರಿಬೇವು ಜಾಸ್ತಿ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಡಯಾಬಿಟಿಸ್ ಮತ್ತು ಕೊಲೆಸ್ಟ್ರಾಲ್ ಸಮಸ್ಯೆ ಇರುವವರೂ ಇದನ್ನು ಸೇವಿಸಬಹುದು. ನಿಜ ಹೇಳಬೇಕಂದ್ರೆ ಕೊಲೆಸ್ಟ್ರಾಲ್ ಇರುವವರು ಚಟ್ನಿಪುಡಿ ತಿಂದರೆ ಕೊಬ್ಬು ಕಡಿಮೆಯಾಗುತ್ತದೆ. ಒಮ್ಮೆ ಪ್ರಯತ್ನಿಸಿ.

* ತೇಜಸ್ವಿನಿ ಹೆಗಡೆ, ಬೆಂಗಳೂರು.

ಈ ಚಟ್ನಿಪುಡಿಯ ವಿಶೇಷತೆ ಹಲವಾರು.

* ಇದನ್ನು ತಯಾರಿಸಲು ತೆಂಗಿನಕಾಯಿತುರಿಯನ್ನು ಹಾಕಬೇಕಾಗಿಲ್ಲ. ಹಾಗಾಗಿ ಡಯಾಬಿಟಿಸ್ ಹಾಗೂ ಕೊಲೆಸ್ಟ್ರಾಲ್ ಸಮಸ್ಯೆಗಳಿರುವವರೂ ಇದನ್ನು ಧಾರಾಳವಾಗಿ ಬಳಸಬಹುದಾಗಿದೆ.
* ಕಾಯಿಯನ್ನು ಬಳಸದಿದ್ದರೂ ಇದರ ಸ್ವಾದ ತುಂಬಾ ರುಚಿಕರ. ಅಲ್ಲದೇ ಇದರ ತಯಾರಿಕೆಯಲ್ಲಿ ಕೇವಲ ಕಾಲು ಚಮಚ ಎಣ್ಣೆಯನ್ನು ಬಳಸುವುದರಿಂದ ಇದು ಹೆಚ್ಚು ಸಮಯ ಬಾಳಿಕೆ ಬರುವುದು. ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 3-4 ತಿಂಗಳ ಕಾಲದವರೆಗೂ ರುಚಿಕೆಡದಂತಿರುತ್ತದೆ.
* ಈ ಚಟ್ನಿಪುಡಿಯ ತಯಾರಿಕೆಯಲ್ಲಿ ಬಳಸುವ ಬೇವಿನ ಗರಿಗಳ ಪ್ರಮಾಣ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಹಿತಕರ. ಅದೂ ಅಲ್ಲದೇ ಕೊಲೆಸ್ಟ್ರಾಲ್ ಹೆಚ್ಚಿರುವವರು ಬೇವಿನೆಲೆಯನ್ನು ಹೆಚ್ಚು ಸೇವಿಸಿದರೆ ಕೊಬ್ಬು ಕಡಿಮೆಯಾಗುತ್ತದೆ.
* ಟೊಮೇಟೋ ತಿಳಿಸಾರನ್ನೋ ಇಲ್ಲಾ ಯಾವುದೇ ಬಗೆಯ ಪಲ್ಯವನ್ನೋ ಧೀಡೀರನೆ ತಯಾರಿಸುವಾಗ, ಈ ಚಟ್ನಿಪುಡಿಯನ್ನು (ಮೆಣಸಿನ ಪುಡಿಯ ಬದಲು, ಇಲ್ಲಾ ಮೆಣಸಿನ ಪುಡಿಯ ಜೊತೆಗೆ) 2-3ಚಮಚ ಹಾಕಿ ಮಾಡಿದರೆ ಬೇರೇಯೇ ಸ್ವಾದದೊಂದಿಗೆ ಘಮ ಘಮಿಸುವ ಪರಿಮಳವನ್ನೂ ನೀಡುತ್ತದೆ.

ಸಾಮಾನ್ಯವಾಗಿ ಈ ಚಟ್ನಿ ಪುಡಿಯನ್ನು ಚಪಾತಿ, ದೋಸೆ, ಇಡ್ಲಿ ಮುಂತಾದ ತಿಂಡಿಗಳ ಜೊತೆಗೆ ತೆಂಗಿನೆಣ್ಣೆಯನ್ನು ಹಾಕಿಕೊಂಡು ಇಲ್ಲಾ ಹಾಗೇಯೇ ಸ್ವೀಕರಿಸುವುದುಂಟು.

ಬೇಕಾಗುವ ಸಾಮಗ್ರಿಗಳು

ಕಡಲೇ ಬೇಳೆ - 1 ಲೋಟ
ಉದ್ದಿನ ಬೇಳೆ - 1 ಲೋಟ
ಬಿಳೇ ಎಳ್ಳು - 1/2 ಲೋಟ
ಇಂಗು - 5 ಗ್ರಾಂ
ಕರಿಬೇವಿನ ಗರಿಗಳು - 10 (ಕೇವಲ 10 ಎಲೆಗಳಲ್ಲ, ಎಲೆಗಳನ್ನೊಳಗೊಂಡ ಗರಿಗಳು ಒಟ್ಟೂ 10)
ಕೊತ್ತೊಂಬರಿ - 1 ಚಮಚ
ಜೀರಿಗೆ - 1 ಚಮಚ
ಜಾಯಿಕಾಯಿ - ಸಣ್ಣ ಚೂರು
ತೆಂಗಿನೆಣ್ಣೆ - 1/4 ಚಮಚ
ಹುಳಿ ಪುಡಿ - 1/4 ಚಮಚ (ರುಚಿಗೆ ತಕ್ಕಷ್ಟು, ನಿಮಗೆ ಬೇಕಿದ್ದಷ್ಟು)
ಉಪ್ಪು - ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ - ಸಾಮಾನ್ಯವಾಗಿ 2-3 ಚಮಚ. (ಖಾರವನ್ನು ಉಪಯೋಗಿಸುವುದರ ಮೇಲೆ ಪ್ರಮಾಣವನ್ನು ಹೆಚ್ಚು/ಕಡಿಮೆ ಮಾಡಿಕೊಳ್ಳಬಹುದು. ಮೆಣಿಸಿನ ಪುಡಿಯನ್ನು ಜಾಸ್ತಿ ಪ್ರಮಾಣದಲ್ಲಿ ಹಾಕಿದರೆ ಉಪ್ಪು, ಹುಳಿಯನ್ನೂ ಜಾಸ್ತಿ ಪ್ರಮಾಣದಲ್ಲಿ ಹಾಕಬೇಕು.)

ಮಾಡುವ ವಿಧಾನ

ಕಡಲೇ ಬೇಳೆ + ಉದ್ದಿನ ಬೇಳೆ + ಬಿಳೇ ಎಳ್ಳು + ಕರಿಬೇವಿನೆಲೆಗಳನ್ನು ಬೇರೆಬೇರೆಯಾಗಿ(ಪ್ರತ್ಯೇಕವಾಗಿ) ಹುರಿದಿಟ್ಟುಕೊಳ್ಳಬೇಕು. ಕೊತ್ತಂಬರಿ ಹಾಗೂ ಜೀರಿಗೆ ಎರಡನ್ನೂ ಒಟ್ಟಿಗೇ ಸೇರಿಸಿ ಹುರಿದುಕೊಂಡು ಪುಡಿಮಾಡಿಟ್ಟುಕೊಳ್ಳಬೇಕು.

ಇಂಗಿಗೆ ಕೇವಲ 1/4 ಚಮಚ ತೆಂಗಿನೆಣ್ಣೆಯನ್ನು ಸೇರಿಸಿ ಅದು ಕಂದು ಬಣ್ಣಕ್ಕೆ ಬರುವಷ್ಟು ಹುರಿಯಬೇಕು. ಗ್ಯಾಸ್ ಆರಿಸಿ, ಹುರಿದ ಇಂಗಿಗೆ ಮೊದಲಿಗೆ ಹುರಿದಿಟ್ಟು ಕೊಂಡಿರುವ ಬೇಳೆಗಳನ್ನು, ಜಾಯಿಕಾಯಿ ಚೂರನ್ನೂ ಹಾಗೂ ಜೀರಿಗೆ+ ಕೊತ್ತುಂಬರಿ ಪುಡಿಯನ್ನೂ ಸೇರಿಸಬೇಕು. ಚೆನ್ನಾಗಿ ತಣಿದ ನಂತರ ಮಿಕ್ಸಿಯಲ್ಲಿ ಹಾಕಿ ಸಣ್ಣದಾಗಿ ಪುಡಿಮಾಡಬೇಕು.

ನಂತರ ದೊಡ್ಡ ಬಾಣಲೆಯಲ್ಲಿ ಈ ಪುಡಿಯನ್ನು ಹಾಕಿ ಅದಕ್ಕೆ ಉಪ್ಪು, ಹುಳಿಪುಡಿ ಹಾಗೂ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಘಮ್ಮೆನ್ನುವ ರುಚಿಕರ ಚಟ್ನಿಪುಡಿ ಸೇವಿಸಲು ಸಿದ್ಧ. ಊಟದ ಮೇಜಿನ ಮೇಲೆ ಚಟ್ನಿಪುಡಿ ಡಬ್ಬ ಇಲ್ಲದಿದ್ದರೆ ಊಟಕ್ಕೆ ಕಳೆಯಿಲ್ಲ!

Story first published: Monday, November 24, 2008, 12:13 [IST]
X
Desktop Bottom Promotion