For Quick Alerts
ALLOW NOTIFICATIONS  
For Daily Alerts

ಸಾಬೂದಾಣಿ ಖಿಚಡಿ : ಇದು ಏಕಾದಶಿ ಪರಿಹಾರ

By Staff
|
Sabudana Khichadi
ಉಪ್ಪಿಟ್ಟು ವಿರೋಧಿಗಳಿಗೆ ಅನ್ಯ ಉಪಹಾರ. ರವೆ ಉಪ್ಪಿಟ್ಟು ಕಂಡರೇ ಆಗದವರಿಗೆ, ಪ್ರತಿ ಏಕಾದಶಿಯಂದು ಒಂದೇ ಬಗೆಯ ತಿಂಡಿ ತಿಂದು ರುಚಿಮಬ್ಬಾಗಿರುವವರಿಗೆ ಸಬ್ಬಕ್ಕಿ ಖಿಚಡಿ ಹೇಳಿ ಮಾಡಿಸಿದ ತಿಂಡಿ. ಸಬ್ಬಕ್ಕಿ ಉಪ್ಪಿಟ್ಟು ಮಾಡಲು ಸುಬ್ಬಣ್ಣನ ಸಲಹೆಗಳು.

* ಸುಬ್ಬಣ್ಣ, ನೆಲಮಂಗಲ

ಏಕಾದಶಿ ಬಂತೆಂದರೆ ನನಗೆ ಕುತ್ತಿಗೆಗೆ ಬಂದು ಕುಂತುಕೊಳ್ಳುತ್ತದೆ. ಅಂದರೆ, ನನ್ನಂಥ ಭಾರೀ ಅಲ್ಲದಿದ್ದರೂ ಸಾಧಾರಣ ತಿಂಡಿಪೋತನಿಗೆ ಈ ಏಕಾದಶಿ ತಿಂಡಿಗಳನ್ನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಹದಿನೈದು ದಿನಗಳಿಗೊಮ್ಮೆ ಉಪವಾಸ ಮಾಡಬೇಕೇನೋ ನಿಜ. ಆದ್ರೆ, ಯಾರು ಮಾಡ್ತಾರೆ ಹೇಳಿ? ಬೆಳೆಯುವ ಹುಡುಗರು, ಯುವಕರು, ಮುದುಕರಿಗೆ ನಿಶ್ಚಕ್ರ ಉಪವಾಸ (ದಿನಪೂರ್ತಿ ಏನೂ ತಿನ್ನದೆನೆ, ನೀರು ಕೂಡ ಕುಡಿಯದೆ ಕಳೆಯುವುದು, ಮರುದಿನ ದ್ವಾದಶಿ ಪಾರಣಿಯ ತನಕ) ಮಾಡಲಂತೂ ಸಾಧ್ಯವಿಲ್ಲ, ಮಾಡಲೂಬಾರದು. ಗ್ಯಾಸು ಹಾಳು ಮೂಳು ನೂರಾಯೆಂಟು ತಾಪತ್ರಯ. ಏಕಾದಶಿಯಂದು ಅನ್ನ, ಹೊಟೇಲೂಟ ಮುಟ್ಟುವ ಹಾಗಿಲ್ಲ. ಬೆಳಿಗ್ಗೆ ಚಪಾತಿ, ರಾತ್ರಿ ಉಪ್ಪಿಟ್ಟು ಕಟ್ಟಿಟ್ಟ 'ಬುತ್ತಿ'!

ಏನ್ಮಾಡ್ತೀರಾ? ಅಕ್ಕಪಕ್ಕದ ಮನೆಯಿಂದ ಘಮ್ಮನೆ ಮಸಾಲೆ ದೋಸೆ ಹುಯ್ದಿದ್ದೋ, ಮತ್ಯಾವ್ದೋ ತಿಂಡಿಗೆ ಒಗ್ಗರಣೆ ಹಾಕಿದ್ದೋ ವಾಸನೆ ಬಂದ್ರೆ ಸಾಕು ಮೂಗಲ್ಲ ಬಾಯಿ ಚಟಪಟ ಮಾಡಲು ಪ್ರಾರಂಭಿಸುತ್ತದೆ, ಹೆಚ್ಚಾಗಿ ಏಕಾದಶಿಯಂದೇ. ಮನೇಲಿ ಏನು ತಿನ್ನಬಾರದೆಂದು ಕಟ್ಟುನಿಟ್ಟು ಮಾಡಿರುತ್ತಾರೋ ಅದನ್ನೇ ತಿನ್ನಬೇಕೆಂಬ ಹಪಾಹಪಿ ಶುರುವಾಗುತ್ತದೆ. ಕದ್ದುಮುಚ್ಚಿ ತಿಂದು ಸಿಗ್ಹಾಕ್ಕೊಂಡ್ರಂತೂ ಮುಗಿದೇ ಹೋಯ್ತು. ಸುಮ್ಮನೆ ಯಾಕೆ ಮನೆಯವರಿಗೆಲ್ಲಾ ಬೇಜಾರೆಂದು ಪಾಲಿಗೆ ಬಂದದ್ದು ಪಂಚಾಮೃತ ಅಂತ ಇಂಥ ಏಕಾದಶಿಗಳಿಗೆ ಒಗ್ಗಿಕೊಂಡಿದ್ದೇನೆ.

ಆದ್ರೆ, ಕಂಡಿಷನ್ನೂ ಹಾಕಿದ್ದೇನೆ. ಅದೇನೆಂದ್ರೆ - ಬೆಳಿಗ್ಗೆ ಚಪಾತಿ, ರಾತ್ರಿ ಉಪ್ಪಿಟ್ಟು ಆಗಲೇಬಾರದು, ವೈಸ್ ವರ್ಸಾ ಕೂಡ. ರಾತ್ರಿ ಮೊಸರವಲಕ್ಕಿ, ಬೆಲ್ಲ ಹೆರೆದು ಹಾಲಿನಲ್ಲಿ ಮಿಕ್ಸ್ ಮಾಡಿದ ರುಚಿಕಟ್ಟಾದ ಅವಲಕ್ಕಿಯಾದರೂ ಪರವಾಗಿಲ್ಲ ಉಪ್ಪಿಟ್ಟು ಮಾತ್ರ ಆಗಲೇಬಾರದು. ನಮ್ಮನೇಲಿ ಮೊದಲಿನಿಂದಲೂ ಎರಡು ಬಗೆಯ ತಿಂಡಿ ಏಕಾದಶಿಯ ಬೆಳಿಗ್ಗೆ ಆಗಲೇಬೇಕು. ಒಂದು, ನಮ್ಮಂಥ ಹುಡುಗರಿಗೆ ಒಗ್ಗರಣೆ ಅವಲಕ್ಕಿ ಮತ್ತು ದೊಡ್ಡವರಿಗೆಲ್ಲ ಸಾಬುದಾಣಿ ಖಿಚಡಿ. ಮೊದಲಿನಿಂದಲೂ ಅಷ್ಟೇ, ಸಾಬೂದಾಣಿ ಖಿಚಡಿಯೆಂದರೆ ಅಷ್ಟಕ್ಕಷ್ಟೇ. ಅವರು ಆ ತಿಂಡಿಯನ್ನು ಖಿಚಡಿ ಅಂತ ಕರೀತಿದ್ದುದಕ್ಕೋ, ಮನೆಯಲ್ಲಿ ಮಾಡುತ್ತಿದ್ದ ರೀತಿಗೋ ಬಾಯಿರುಚಿ ನೋಡಿ ಅವಲಕ್ಕಿಗೆ ಬಾಯಿಹಾಕುತ್ತಿದ್ದೆ. ಆದರೆ, ಇತ್ತೀಚೆಗೆ ಸಾಬೂದಾಣಿ ಖಿಚಡಿ ಭಾರೀ ಇಷ್ಟವಾಗಲು ಪ್ರಾರಂಭವಾಗಿದೆ. ಉಪ್ಪಿಟ್ಟು ಅವಾಯ್ಡ್ ಮಾಡಿದ ಹಾಗೂ ಆಯಿತು ಬಾಯಿರುಚಿಗೆ ವೆರೈಟಿ ಸಿಕ್ಕಹಾಗೂ ಆಯಿತು.

ಆರೋಗ್ಯದ ವಿಷಯಕ್ಕೆ ಬಂದರೆ, ರವೆ ಉಪ್ಪಿಟ್ಟಿಗಿಂತ ಸಾಬೂದಾಣಿ ಖಿಚಡಿ ಅಥವಾ ಸಾಬೂದಾಣಿ ಉಪ್ಪಿಟ್ಟು ಎಷ್ಟೋ ಪಾಲು ಉತ್ತಮ. ಖಾಯಿಲೆ ಬಂದಾಗಲೆಲ್ಲ ಸಾಬೂದಾಣಿ ಗಂಜಿ ಮಾಡಿ ಕುಡಿದಿರಬಹುದು. ಹಾಗಂತ, ಸಾಬೂದಾಣಿ ಖಿಚಡಿ ಖಾಯಿಲೆ ಬಂದವರಿಗೆ ಮಾಡುವಂಥದ್ದೇನಲ್ಲ. ಇದನ್ನು ಯಾರು ಬೇಕಾದರೂ ತಿನ್ನಬಹುದು. ಒಂದು ಸಾರಿ ಹೊಟ್ಟೆಗೆ ಬಿದ್ದರಂತೂ ಮುಗಿಯಿತು ರಾತ್ರಿ ತನಕ ಹೊಟ್ಟೆ ಬೇರೇನನ್ನೂ ಕೇಳುವುದಿಲ್ಲ. ಮಾಡುವ ರೀತಿ ಮಾತ್ರ ಪರ್ಫೆಕ್ಟಾಗಿರಬೇಕು. ಹೀಗಿದೆ ನೋಡಿ ಖಿಚಡಿ ಮಾಡುವ ರೀತಿ.

ಬೇಕಾಗುವ ಸಾಮಗ್ರಿಗಳು:

1) ಸಾಬೂದಾಣಿ ಅಲಿಯಾಸ್ ಸಾಬೂದಾಣಾ ಅಲಿಯಾಸ್ ಸಬ್ಬಕ್ಕಿ ಒಬ್ಬರಿಗೊಂದು ಮುಟ್ಟಿಗೆಯಷ್ಟು
2) ಹಸಿಮಣಸಿನಕಾಯಿ, ಕೊತ್ತಂಬರಿ, ತುರಿದ ಹಸಿ ಕೊಬ್ಬರಿ, ಹಸಿ ಶುಂಠಿ
3) ಸಣ್ಣಗೆ ಹೆಚ್ಚಿಕೊಂಡ ಆಲೂಗೆಡ್ಡೆ ಅಥವಾ ಗಜ್ಜರಿ ಅಥವಾ ಎರಡೂ
4) ಶೇಂಗಾ ಪುಡಿ ಅರ್ಥಾತ್ ಕಡಲೆಕಾಯಿ ಪುಡಿ

ಮಾಡುವ ವಿಧಾನ:

ಇದು ದಿಢೀರ್ ಅಂತ ಮಾಡುವ ತಿಂಡಿಯಲ್ಲ. ಮಾಡಿ ಮುಗಿಸಿ ಬಾಯಿಗೆ ಇಟ್ಟುಕೊಳ್ಳುವರೆಗೆ ಸ್ವಲ್ಪ ತಾಳ್ಮೆ ಬೇಕು. ಖಿಚಡಿ ಮಾಡುವ ಒಂದು ಗಂಟೆ ಮೊದಲು ಸಾಬೂದಾಣಿಯನ್ನು ನೀರಿನಲ್ಲಿ ನೆನೆಸಿ ಇಡಬೇಕು. ಇದು ತುಂಬಾ ಅಗತ್ಯ. ಮುಂದಿನದೆಲ್ಲ ಒಗ್ಗರಣೆ ಅವಲಕ್ಕಿ ಮಾಡುವ ವಿಧಾನವೇ. ಒಗ್ಗರೆಣೆಗೆ ಹೆಚ್ಚಿಟ್ಟುಕೊಂಡ ಹಸಿಮಣಸಿನಕಾಯಿ, ಹಸಿ ಶುಂಠಿ, ಆಲೂಗೆಡ್ಡೆ, ಗಜ್ಜರಿ (ಕ್ಯಾರೆಟ್) ಹಾಕಿ ಚೆನ್ನಾಗಿ ತಾಳಿಸಿಕೊಳ್ಳಬೇಕು. ನಂತರ ನೆನೆಸಿಟ್ಟ ಸಾಬೂದಾಣಿಯನ್ನು ಒಗ್ಗರೆಣೆಗೆ ಹಾಕಿ ಚೆನ್ನಾಗಿ ಬೇಯಿಸಬೇಕು. ಅದಕ್ಕೆ ಶೇಂಗಾ ಪುಡಿ ಉದುರಿಸುತ್ತಲೇ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಾಡಿಸಬೇಕು. ಅಲ್ಲಿಗೆ ಸಾಬೂದಾಣಿ ಖಿಚಡಿ ತೈಯಾರ್. ನಿಂಬೆಹಣ್ಣು ಹಿಂಡಿ ಹತ್ತು ನಿಮಿಷ ಹಾಗೇ ಮುಚ್ಚಳ ಮುಚ್ಚಿಟ್ಟು ನಂತರ ತಿನ್ನುವ ಮೊದಲು ಅದರ ಮೇಲೆ ಹಸಿ ಕಾಯಿತುರಿ ಮತ್ತು ಕೊತ್ತಂಬರಿ ಹಾಕಿ ಸವಿಯಬಹುದು.

Story first published: Sunday, December 27, 2009, 16:40 [IST]
X
Desktop Bottom Promotion