For Quick Alerts
ALLOW NOTIFICATIONS  
For Daily Alerts

ಬೇಯಿಸಿದ ಮಾವಿನಕಾಯಿಯ ಚಟ್ನಿ

By Super
|
Boiled Mango chutney
ಬಿಸಿಬಿಸಿ ಅನ್ನ, ಚಪಾತಿ, ದೋಸೆಯೊಂದಿಗೆ ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಚಟ್ನಿ ತುಂಬಾ ರುಚಿಕರವಾಗಿರುತ್ತದೆ. ಯುಗಾದಿ ಹಬ್ಬದಂದು ಬೇಯಿಸಿದ ಮಾವಿನಕಾಯಿ ಚಟ್ನಿಯನ್ನು ಮಾಡಲು ಮರೆಯಬೇಡಿ.

* ತೇಜಸ್ವಿನಿ ಹೆಗಡೆ, ಬೆಂಗಳೂರು

ಇನ್ನೇನು ಮಾವಿನ ಮರಗಳೆಲ್ಲಾ ಹೂಬಿಡುವ ಕಾಲ ಬಂದಿದೆ. ಹಾದಿ ಬೀದಿಯ ಮಾವಿನ ಮರದ ತುಂಬೆಲ್ಲಾ ಅದರದೇ ಹೂವಿನ ಪರಿಮಳ ಘಮ್ಮೆನ್ನುತ್ತದೆ. ತರಕಾರಿ ಮಾರುವವನ ಕೈಗಾಡಿಯೊಳಗೆ ಮಾವಿನಕಾಯಿಗಳೂ ನಮ್ಮನ್ನು ಸ್ವಾಗತಿಸುತ್ತವೆ. ಮಾವಿನ ಹಣ್ಣಿನ ರಸಾಯನ, ಮಾವಿನ ಕಾಯಿಯ ತಂಬುಳಿ, ಹಣ್ಣಿನ ಸಾಸಿಮೆ ಇತ್ಯಾದಿ ತಿನುಸುಗಳ ಮಾಸವಿದು ಎಂದರೂ ತಪ್ಪಾಗದು. ಹಾಗಾಗಿಯೇ ಬೇಯಿಸಿದ ಮಾವಿನಕಾಯಿಯ ರುಚಿಕರ ಚಟ್ನಿಯನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.

ಸುಮಾರು ಅರ್ಧ ಕೆ.ಜಿ. ಮಾವಿನ ಕಾಯಿಯನ್ನು ಮೊದಲೇ ಬೇಯಿಸಿಕೊಂಡು ಫ್ರಿಜ್‌ನಲ್ಲಿಟ್ಟರೆ ತಯಾರಿಸಬೇಕೆಂದಾಗ ಸುಲಭದಲ್ಲಿ ಮಾಡಬಹುದು ಈ ಚಟ್ನಿಯನ್ನು. ಇದಕ್ಕೆ ತಗಲುವ ಸಮಯ ಕೇವಲ 5ರಿಂದ 10 ನಿಮಿಷ ಅಷ್ಟೇ(ಮೊದಲೇ ಬೇಯಿಸಿಟ್ಟುಕೊಂಡರೆ). ಇಲ್ಲಿ ಒಂದು ದೊಡ್ಡ ಗಾತ್ರದಲ್ಲಿರುವ ಬೇಯಿಸಿದ ಮಾವಿನ ಕಾಯಿಯ ಚಟ್ನಿಯನ್ನು ತಯಾರಿಸುವ ವಿಧಾನವನ್ನು ಹೇಳುತ್ತಿದ್ದೇನೆ. ಒಂದು ದೊಡ್ಡ ಮಾವಿನಕಾಯಿಯಿಂದ ತಯಾರಿಸಿದ ಚಟ್ನಿಯನ್ನು 6ರಿಂದ 7 ಜನರಿಗೆ ಬಡಿಸಬಹುದಾಗಿದೆ.

ಬೇಕಾಗುವ ಸಾಮಗ್ರಿಗಳು

ಮಾವಿನ ಕಾಯಿ - 1 (ದೊಡ್ಡ ಗಾತ್ರದ್ದು)
ತೆಂಗಿನ ಕಾಯಿ - ಅರ್ಧ ಭಾಗ
ಉಪ್ಪು - ರುಚಿಗೆ ತಕ್ಕಷ್ಟು
ಹಸಿಮೆಣಸು - 2 ಅಥವಾ 3 (ಖಾರಕ್ಕೆ ತಕ್ಕಂತೆ)
ಇಂಗು - ಕಡಲೇಕಾಳಿನ ಗಾತ್ರದಷ್ಟು
ಬೇವಿನ ಎಸಳು - 4 ಅಥವಾ 5
ಕಡ್ಡಿ ಮೆಣಸು (ಕೆಂಪು ಮೆಣಸು) - 1
ಸಾಸಿವೆ - 1/2 ಚಮಚ
ತೆಂಗಿನೆಣ್ಣೆ - 1 ಚಮಚ(ಒಗ್ಗರಣೆಗೆ)

ಮಾಡುವ ವಿಧಾನ

* ಮೊದಲಿಗೆ ಮಾವಿನ ಕಾಯಿಯನ್ನು ಒಂದು ಬೋಗುಣಿಯೊಳಗೆ ಇಟ್ಟು ಅದು ಮುಳುಗುವಷ್ಟು ನೀರನ್ನು ಹಾಕಿ ಬೇಯಿಸಲಿಡಬೇಕು. ಮೊದಲು ಕೆಲ ನಿಮಿಷಗಳ ಕಾಲ ಅದು ತುಸು ಮೇಲೆ ತೇಲುತ್ತಿರುತ್ತದೆ. ಆಮೇಲೆ ತಳಭಾಗ ಬೇಯುತ್ತಿದ್ದಂತೆ ಕಂತಲು ಶುರುವಾಗುತ್ತದೆ. 2 ನಿಮಿಷ ಬಿಟ್ಟು ಅದನ್ನು ಮೇಲೆ ಕೆಳಗೆ ಮಾಡಬೇಕು. ಆಗ ಎಲ್ಲಾ ಭಾಗಗಳೂ ಸರಿಯಾಗಿ ಬೇಯುತ್ತವೆ. 10 ನಿಮಿಷಗಳೊಳಗೆ ಒಂದು ಮಾವಿನಕಾಯಿ ಚೆನ್ನಾಗಿ ಬೆಂದಿರುತ್ತದೆ. ಬೆಂದ ನಂತರ ಇದನ್ನು ತಣಿಯಲು ಬಿಡಬೇಕು.
* ಚೆನ್ನಾಗಿ ತಣಿದ ಮಾವಿನಕಾಯಿಯನ್ನು ಸರಿಯಾಗಿ ನುರಿದು, ಇದಕ್ಕೆ ಉಪ್ಪು, ಹಸಿಮೆಣಸಿನ ಚೂರುಗಳು ಹಾಗೂ ಇಂಗನ್ನು ಹಾಕಿ ಕಾಯಿತುರಿಯೊಂದಿಗೆ ನುಣ್ಣಗೆ ಬೀಸಬೇಕು.
* ನೀರನ್ನು ಬೇಕಿದ್ದರೆ(ಗಟ್ಟಿಯಾಗಿದ್ದರೆ) ಸೇರಿಸಿ ಹದಮಾಡಬೇಕು. ಇದಕ್ಕೆ ಸಾಸಿವೆ, ಕರಿಬೇವಿನ ಎಸಳುಗಳು ಹಾಗೂ ಕಡ್ಡಿಮೆಣಸಿನ ಚೂರುಗಳ ಒಗ್ಗರಣೆ ಕೊಡಬೇಕು.
* ತುಸು ಸಿಹಿ ಬೇಕೆಂದೆನಿಸುವವರು ಬೇಕಿದ್ದಲ್ಲಿ ಸ್ವಲ್ಪ ಬೆಲ್ಲವನ್ನೂ ಚಟ್ನಿಗೆ ಹಾಕಿ ಕಲಕಬಹುದು.

ಬಿಸಿ ಅನ್ನಕ್ಕೆ, ಚಪಾತಿ, ದೋಸೆಗೆ ಈ ಚಟ್ನಿ ತುಂಬಾ ರುಚಿಕರವಾಗಿರುತ್ತದೆ. ಯುಗಾದಿ ಹಬ್ಬದಂದು ಬೇಯಿಸಿದ ಮಾವಿನಕಾಯಿ ಚಟ್ನಿಯನ್ನು ಮಾಡಲು ಮರೆಯಬೇಡಿ.

X
Desktop Bottom Promotion