For Quick Alerts
ALLOW NOTIFICATIONS  
For Daily Alerts

ಬಿಸಿಬಿಸಿ ಜಿಡ್ಡು ಕಡಿಮೆಯಿರುವ ಪಡ್ಡು

By Super
|
Paddu-Vegetarian breakfast recipe
ಈ ತಿಂಡಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದ್ದೇ. ತಿಳಿದವರಿಗೆ ನೆನಪಿಸುವುದು, ತಯಾರಿಸಲು ಗೊತ್ತಿಲ್ಲದಿದ್ದವರಿಗೆ ತಿಳಿಯಹೇಳುವುದು ಈ ಶುಕ್ರವಾರದ ಅಡುಗೆ ವಿಶೇಷ. ಪಡ್ಡುಗೆ ಗುಂತಪೊಂಗಳು ಅಥವಾ ಗುಂಡಪಂಗಳು ಎಂಬ ಹೆಸರೂಯಿದೆ. ನೋಡಲು ಸುಂದರ, ಬಾಯಿಗೆ ರುಚಿಕರವಾಗಿರುವ ಪಡ್ಡನ್ನು ಕಾಯಿಚಟ್ನಿಯೊಂದಿಗೆ ಇಲ್ಲಾ ಹಾಲುಪಾಯಸದೊಂದಿಗೆ ತೆಗೆದುಕೊಂಡರೆ ಮತ್ತೂ ರುಚಿಯಾಗಿರುತ್ತದೆ. ಬೆಳಗಿನ ತಿಂಡಿಗೆ ಸಾಮಾನ್ಯವಾಗಿ ಪಡ್ಡನ್ನು ಮಾಡುತ್ತಾರೆ. ಸಂಜೆಗೆ ಲಘು ಉಪಾಹಾರವಾಗಿಯೂ ಇದನ್ನು ಸೇವಿಸಬಹುದಾಗಿದೆ.

ಬೇಕಾಗುವ ಸಾಮಗ್ರಿಗಳು:

ಅಕ್ಕಿ - 2 1/2 ಲೋಟ
ಉದ್ದಿನಬೇಳೆ - 1/2 ಲೋಟ
ಮೆಂತೆ - 2 ಚಮಚ
ಕಡಲೇಬೇಳೆ - 2 ಚಮಚ
ತೊಗರಿಬೇಳೆ - 1 ಚಮಚ
ಟೊಮೇಟೋ - 2
ಈರುಳ್ಳಿ - 2
ಕರಿಬೇವು - 2 ಎಸಳು
ತೆಂಗಿನೆಣ್ಣೆ - ಬಾಣಲೆಗೆ ಸವರುವುದಕ್ಕೆ ಮಾತ್ರ
ಉಪ್ಪು - ರುಚಿಗೆ ತಕ್ಕಷ್ಟು
ಹಸಿಮೆಣಸು(ಬೇಕಿದ್ದರೆ)- 2-3
ಕೊತ್ತಂಬರಿಸೊಪ್ಪು - ನಿಮಗೆ ಬೇಕಾದ ಪ್ರಮಾಣದಲ್ಲಿ ಹಾಕಬಹುದು.

ಮಾಡುವ ವಿಧಾನ:

* ಅಕ್ಕಿ, ಉದ್ದಿನಬೇಳೆ, ಮೆಂತೆ, ತೊಗರಿಬೇಳೆ ಹಾಗೂ ಕಡಲೇಬೇಳೆ ಎಲ್ಲವನ್ನೂ ಒಟ್ಟಿಗೆ ನೆನೆಸಬೇಕು.
* ಚೆನ್ನಾಗಿ ನೆನೆದ ನಂತರ ನುಣ್ಣಗೆ ರುಬ್ಬಿ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ರಾತ್ರಿಯಿಡೀ ಇಟ್ಟು ಹುಳಿಬರಿಸಬೇಕು. ಬೆಂಗಳೂರಿನಲ್ಲಿ ತುಂಬಾ ಚಳಿಯಿರುವ ಕಾರಣ ಹುಳಿಬರಿಸಲು ತುಸು ಮೊದಲೇ ಅಂದರೆ ಸಾಯಂಕಾಲದಲ್ಲೇ ರುಬ್ಬಿಟ್ಟರೆ ಉತ್ತಮ. ಆಗ ಮರುದಿನ ಬೆಳಗ್ಗೆಯಾದರೂ ಹುಳಿಬಂದಿರುವುದು. ಕರಾವಳಿ ಪ್ರದೇಶದಲ್ಲಾದರೆ ರಾತ್ರಿ ಬೀಸಿಟ್ಟರೆ ಸಾಕು.
* ಪಡ್ಡು ಮಾಡುವ ಮೊದಲು ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸು ಹಾಗೂ ಟೊಮೇಟೋಗಳನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು.
* ಹುಳಿಬಂದಿರುವುದನ್ನು ಖಾತರಿಸಿಕೊಂಡು ಪಡ್ಡು ಕಾವಲಿಯೊಳಗಿನ ಗುಂಡಿಗಳಿಗೆ(ಇದಕ್ಕೆ ಕೆಲವೆಡೆ ಅಪ್ಪದ ಕಾವಲಿ ಎಂದೂ ಹೇಳುವರು) ತುಸು ಎಣ್ಣೆ ಬಿಟ್ಟು ಹಿಟ್ಟನ್ನು ಒಂದೊಂದೇ ಗುಂಡಿಯೊಳಗೆ ಹೊಯ್ಯಬೇಕು.
* ಹೊಯ್ದ ನಂತರ ಹೆಚ್ಚಿಟ್ಟಿರುವ ಪದಾರ್ಥಗಳನ್ನು ಮೇಲಿನಿಂದ ಉದುರಿಸಿ ಬಂಡಿ ಮುಚ್ಚುವ ಮುಚ್ಚಳದಿಂದ ಮುಚ್ಚಿಟ್ಟು ಚೆನ್ನಾಗಿ ಬೇಯಲು ಬಿಡಬೇಕು.
* ಒಂದು ಕಾವಲಿಯಲ್ಲಿ ಸಾಮಾನ್ಯವಾಗಿ 8 ಗುಂಡಿಗಳಾದರೂ ಇರುವುದರಿಂದ ಒಂದು ಸಲಕ್ಕೆ 8 ಪಡ್ಡುಗಳನ್ನು ಬೇಯಿಸಬಹುದಾಗಿದೆ.

ತೆಂಗಿನಕಾಯಿ ಚಟ್ನಿ ಅಥವಾ ಹಾಲುಪಾಯಸದೊಂದಿಗೆ ಬಡಿಸಿರಿ. ತೆಂಗಿನಕಾಯಿ ಚಟ್ನಿ ಮಾಡುವುದು ಸಾಮಾನ್ಯಕ್ಕೆ ಎಲ್ಲರಿಗೂ ಗೊತ್ತು. ಆದರೆ, ಚಟ್ನಿ ತಯಾರಿಸುವ ವಿಶೇಷ ಬಗೆ ಯಾವುದಾದರೂ ನಿಮಗೆ ತಿಳಿದಿದ್ದಲ್ಲಿ ದಟ್ಸ್ ಕನ್ನಡ ಅಡುಗೆ ಮನೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಿರಿ.

X
Desktop Bottom Promotion