For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಿದ್ದರೂ ಈ ಕಾರಣಗಳಿಂದ ಟೆಸ್ಟ್ ನೆಗೆಟಿವ್ ಬರಬಹುದು

|

ತಾಯ್ತನವೆನ್ನುವುದು ಪ್ರತಿ ಹೆಣ್ಣಿಗೆ ಆಗುವಂತಹ ಅದ್ಭುತ ಅನುಭವ. ತಾಯಿಯಾಗಬೇಕೆಂದು ಬಯಸುವ ಪ್ರತಿಯೊಬ್ಬ ಹೆಣ್ಣು ಕೂಡಾ, ಉದರದಲ್ಲಿ ಕಂದನ ಮಿಸುಕಾಡುವಿಕೆಗಾಗಿ ಕಾಯುತ್ತಿರುತ್ತಾಳೆ. ಕಂದನ ನಿರೀಕ್ಷೆ ಇಟ್ಟುಕೊಂಡಿರುವ ಹೆಣ್ಣು ಮುಟ್ಟು ಆಗದೇ ಇದ್ದಾಗ ಮೊದಲು ಉತ್ಸಾಹ, ಕುತೂಹಲದಿಂದ ಮಾಡುವುದೇ ಪರೀಕ್ಷೆ. ಅದೂ ಮನೆಯಲ್ಲೇ ಮಾಡಬಹುದಾದ ಪರೀಕ್ಷೆ. ಇದೀಗ ಕೈಗೆಟಕುವ ದರದಲ್ಲೇ ಪ್ರೆಗ್ನೆನ್ಸಿ ಟೆಸ್ಟ್ ಕಿಟ್‌ಗಳು ಸಿಗುವುದರಿಂದ ಗರ್ಭಧರಿಸಿದ್ದೇವೆಯೇ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಬಳಸಲು ಸುಲಭವಾಗಿರುವ ಪ್ರೆಗ್ನೆನ್ಸಿ ಟೆಸ್ಟ್‌ ಕಿಟ್‌ ಬಳಸಲು ಅನುಕೂಲಕರವಾಗಿದ್ದರೂ ಕೆಲವೊಮ್ಮೆ ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ಕೆಲವೊಮ್ಮೆ ಮಸುಕಾದ ಗೆರೆ, ಚಿಕ್ಕ ರೇಖೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರಬಹುದು. ನಿಮ್ಮ ಈ ಅನುಮಾನಗಳಿಗೆ ಉತ್ತರ ಕೊಡುವ ಪ್ರಯತ್ನ ಈ ಲೇಖನ.

ಗರ್ಭಧಾರಣೆ ಪರೀಕ್ಷೆಯಲ್ಲಿ ಮಸುಕಾದ ಗೆರೆ

ಗರ್ಭಧಾರಣೆ ಪರೀಕ್ಷೆಯಲ್ಲಿ ಮಸುಕಾದ ಗೆರೆ

ಮೊದಲ ಬಾರಿಗೆ ಗರ್ಭಧಾರಣೆ ಪರೀಕ್ಷೆ ಮಾಡಿಸಿಕೊಳ್ಳುವವರು, ಅದೂ ಮನೆಯಲ್ಲೇ ಪರೀಕ್ಷೆ ಮಾಡಿಸಿಕೊಳ್ಳುವವರು ನೀವು ಯಾವ ರೀತಿಯ ಕಿಟ್‌ ಖರೀದಿಸಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ. ಕೆಲವೊಂದು ಕಿಟ್‌ನಲ್ಲಿ ಪ್ಲಸ್‌ , ಮೈನಸ್‌ ಚಿಹ್ನೆಗಳಿರಬಹುದು. ಕೆಲವೊಂದು ಕಿಟ್‌ನ ಸ್ಟ್ರೀನ್‌ನಲ್ಲಿ ಒಂದು ಅಥವಾ ಎರಡು ಸಾಲಿನ ರೇಖೆಗಳಿರುತ್ತವೆ.

ಈ ಕಿಟ್‌ಗಳನ್ನು ಖರೀದಿಸಿದ ನಂತರ ಅದರ ಪ್ಯಾಕೇಜಿಂಗ್‌ನಲ್ಲಿ ಕೊಟ್ಟಿರುವಂತಹ ಸೂಚನೆಗಳನ್ನು ತಪ್ಪದೇ, ಎಚ್ಚರಿಕೆಯಿಂದ ಓದಿ. ಇದರ ಮೂಲಕ ಹೇಗೆ ಟೆಸ್ಟ್‌ ಮಾಡಬೇಕು ಎನ್ನುವುದನ್ನು ತಿಳಿಯಬಹುದು.

ನೀವು ಗರ್ಭಿಣಿಯಾದ ಮೇಲೆ, ಗರ್ಭಾವಸ್ಥೆ ತಾಳುವುದಕ್ಕೂ ಮುನ್ನ ಬೇಗನೇ ಪರೀಕ್ಷೆ ಮಾಡಿದಲ್ಲಿ ಕಿಟ್‌ನಲ್ಲಿ ಗೆರೆ ಅಥವಾ ಎರಡು ರೇಖೆಗಳು ತೆಳುವಾದ ರೇಖೆ ಮೂಡಿಸಬಹುದು, ಇದು ಕೆಲವೊಮ್ಮೆ ಕಾಣಿಸದೇ ಇರಬಹುದು. ಆದರೆ ನೀಡು ಗರ್ಭಿಣಿಯಾದ ತುಂಬಾ ದಿನಗಳ ನಂತರ ಪರೀಕ್ಷೆ ಮಾಡಿದರೆ ಆ ರೇಖೆಗಳು ಗಾಢವಾದ ಬಣ್ಣದಲ್ಲಿ ಕಾಣುತ್ತವೆ.

ಮನೆಯಲ್ಲಿಯೇ ಮೊದಲ ಗರ್ಭಧಾರಣೆಯ ಪರೀಕ್ಷೆ ಮಾಡುವವರಿಗೆ ಹೇಳುವ ಮುಖ್ಯ ವಿಷಯವೆಂದರೆ, ಪರೀಕ್ಷೆ ಮಾಡಿದ ನಂತರ ರೇಖೆ ಕಾಣದಿದ್ದಲ್ಲಿ, ನೆಗೆಟಿವ್‌ ಎಂದು ತೋರಿಸಿದಲ್ಲಿ ನೀವು ಚಿಂತಿಸಬೇಕಾದ ಅಗತ್ಯವಿಲ್ಲ. ಯಾಕೆಂದರೆ ನಿಮ್ಮ ಹೆಚ್‌ಸಿಜಿ ಅಂಶವು ಹೆಚ್ಚು ಬಿಡುಗಡೆಯಾಗದಿರುವ ಕಾರಣವೂ ಇರಬಹುದು. ಅದಕ್ಕಾಗಿಯೇ ಮನೆಯಲ್ಲಿ ನಾವು ಪ್ರೆಗ್ನೆನ್ಸಿ ಕಿಟ್‌ ಮೂಲಕ ಪರೀಕ್ಷೆ ಮಾಡಿದರೂ, ವೈದ್ಯರನ್ನು ಭೇಟಿ ಮಾಡಿದಾಗ ಹೆಚ್‌ಸಿಜಿ ಅಂಶವನ್ನು ಪರೀಕ್ಷೆ ಮಾಡಲು ಹೇಳಿಯೇ ಹೇಳುತ್ತಾರೆ.

ಗರ್ಭಾವಸ್ಥೆಯ ಪರೀಕ್ಷೆಯಲ್ಲಿ ಅತ್ಯಂತ ದುರ್ಬಲವಾದ ರೇಖೆಯ ಅರ್ಥ

ಗರ್ಭಾವಸ್ಥೆಯ ಪರೀಕ್ಷೆಯಲ್ಲಿ ಅತ್ಯಂತ ದುರ್ಬಲವಾದ ರೇಖೆಯ ಅರ್ಥ

ಗರ್ಭಾವಸ್ಥೆಯ ಪರೀಕ್ಷೆಯಲ್ಲಿ ಬಹಳ ಮಸುಕಾದ ರೇಖೆಯು ಸಾಮಾನ್ಯವಾಗಿ ಗರ್ಭವು ಕೂತಿದೆ ಎನ್ನುವುದನ್ನು ಸೂಚಿಸುತ್ತದೆ ಮತ್ತು ನೀವು ಗರ್ಭಾವಸ್ಥೆಯ ಆರಂಭಿಕ ಹಂತಗಳಲ್ಲಿರುತ್ತೀರಿ ಎಂದರ್ಥ. ಕೆಲವು ವಾರ ಬಿಟ್ಟು ಪರೀಕ್ಷೆ ಮಾಡಿದ ನಂತರ ಆ ರೇಖೆಯು ನೋಡಲು ದಪ್ಪವಾಗಿದ್ದರೆ ಮತ್ತು ಗಾಢವಾಗಿದ್ದರೆ ನಿಮ್ಮ ಗರ್ಭಾವಸ್ಥೆಯು ಪ್ರಗತಿಯಲ್ಲಿದೆ, ಮತ್ತು ಸುರಕ್ಷಿತವಾಗಿ ಗರ್ಭಧಾರಣೆಯಾಗಿದೆ. ತಾಯ್ತನದ ಮೊದಲ ಹಂತದಲ್ಲಿದ್ದೀರಿ ಎಂದು ಅರ್ಥಮಾಡಿಕೊಳ್ಳಬಹುದು.

ಗರ್ಭಧಾರಣೆ ಪರೀಕ್ಷೆಯಲ್ಲಿ ಮಸುಕಾದ ಗೆರೆ ಕಂಡುಬಂದರೆ ನೀವು ಗರ್ಭಿಣಿಯಾಗಿಲ್ಲ, ಅಥವಾ ಗರ್ಭಿಣಿಯಾದರೂ ಈ ಕಿಟ್‌ ಸರಿಯಾಗಿ ತೋರಿಸುತ್ತಿಲ್ಲ, ಈ ಕಿಟ್‌ ವ್ಯರ್ಥ ಎಂದುಕೊಳ್ಳಬೇಡಿ. ಯಾಕೆಂದರೆ ಈ ರೀತಿಯ ಸೂಚನೆಗಳು ನಿಮ್ಮ ಆರಂಭಿಕ ಗರ್ಭಧಾರಣೆಯ ಹಂತ ಅಥವಾ ಅಪಸ್ಥಾನೀಯ ಗರ್ಭಧಾರಣೆಯನ್ನೂ ಸೂಚಿಸಬಹುದು.

ಕೆಲವೊಮ್ಮೆ ನಿರೀಕ್ಷೆಯನ್ನಿಟ್ಟುಕೊಂಡು ಮಾಡುವ ಪರೀಕ್ಷೆಯಲ್ಲಿ ಮಸುಕಾದ ಗೆರೆ ಕಂಡಾಗ, ನಿಮ್ಮ ಉತ್ಸಾಹ ಧರೆಗಿಳಿಯಬಹುದು, ಅಸಾಮಾಧಾನವಾಗಬಹುದು. ಆದರೆ ಈ ಮಸುಕಾದ ಗೆರೆಯು ನಿಮ್ಮ ಗರ್ಭಿಣಿಯಾಗುವ ಸಾಮರ್ಥ್ಯದ ಮೇಲೆ ಯಾವ ಪರಿಣಾಮವೂ ಬೀರದು. ಇದನ್ನು ಧನಾತ್ಮಕವಾಗಿಯೇ ಸ್ವೀಕರಿಸಿ. ಇನ್ನೊಂದು ಉತ್ತಮ ಮಾರ್ಗವೆಂದರೆ, ನಿಮಗೆ ಪ್ರೆಗ್ನೆನ್ಸಿ ಟೆಸ್ಟ್‌ ಕಿಟ್‌ನಲ್ಲಿ ಅನುಮಾನವಿದ್ದರೆ ನೇರವಾಗಿ ಪ್ರಸೂತಿ ತಜ್ಞರನ್ನು ಭೇಟಿ ಮಾಡಿ, ಮಾತನಾಡಿ, ಅವರು ನಿಮಗೆ ರಕ್ತ ಪರೀಕ್ಷೆಯ ಮೂಲಕ ಹೆಚ್‌ಸಿಜಿ ಮಟ್ಟವನ್ನು ಪರೀಕ್ಷಿಸಲು ಹೇಳುತ್ತಾರೆ. ಇದು ಗರ್ಭಧಾರಣೆಯನ್ನು ತಿಳಿದುಕೊಳ್ಳಲು ನಿಮ್ಮ ಮುಂದಿರುವ ಸುಲಭ ವಿಧಾನ.

ಗರ್ಭಿಣಿಯಾಗಿದ್ದರೆ ಗರ್ಭಧಾರಣೆ ಪರೀಕ್ಷೆಯ ಫಲಿತಾಂಶ ಹೀಗಿರುತ್ತದೆ

ಗರ್ಭಿಣಿಯಾಗಿದ್ದರೆ ಗರ್ಭಧಾರಣೆ ಪರೀಕ್ಷೆಯ ಫಲಿತಾಂಶ ಹೀಗಿರುತ್ತದೆ

ಗರ್ಭಿಣಿ ಎನ್ನುವ ಎಲ್ಲಾ ಲಕ್ಷಣಗಳು ನಿಮಗೆ ಕಾಣಿಸಿದಲ್ಲಿ ನೀವು ಮನೆಯಲ್ಲೇ ಗರ್ಭಧಾರಣೆ ಪರೀಕ್ಷೆ ಮಾಡಬಹುದು. ಆ ಸಂದರ್ಭದಲ್ಲಿ ಧನಾತ್ಮಕ ಫಲಿತಾಂಶವಿದ್ದರೆ, ನೀವು ಗರ್ಭಿಣಿ ಎಂದು ಗಾಢವಾದ ಅಡ್ಡಗೆರೆಗಳು ಅಥವಾ ಪ್ಲಸ್‌ ಚಿಹ್ನೆ ತೋರಿಸುತ್ತದೆ. ಇದು ಪಾಸಿಟಿವ್‌ ಎಂದು ತೋರಿಸಿದರೆ ಮಾತ್ರ ನೀವು ಗರ್ಭಿಣಿಯಾಗಿದ್ದೀರಿ ಎಂದರ್ಥ.

ಈ ಪರೀಕ್ಷೆ ವಿಶ್ವಾಸಾರ್ಹವೇ..?

ಈ ಪರೀಕ್ಷೆ ವಿಶ್ವಾಸಾರ್ಹವೇ..?

ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ಗರ್ಭಧಾರಣೆಯ ಪರೀಕ್ಷೆಯನ್ನು ನೂರಕ್ಕೆ ನೂರು ಪ್ರತಿಶತ ನಂಬಬಹುದೇ ಎನ್ನುವುದಾದರೆ, ಕೆಲವೊಮ್ಮೆ ಇಲ್ಲವೆಂದು ಹೇಳಬಹುದು. ಕೆಲವೊಮ್ಮೆ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಇದು ಋಣಾತ್ಮಕವೆಂದೂ ತೋರಿಬಹುದು. ಈ ಗೋಚರಿಸುವ ಗರ್ಭಧಾರಣೆಯ ಪರೀಕ್ಷೆಳು ಹೆಚ್‌ಸಿಜಿ ಯನ್ನು ಪತ್ತೆಹಚ್ಚುತ್ತವೆ, ಕೆಲವೊಮ್ಮೆ ಇದು ಗರ್ಭಧಾರಣೆಯ ನಷ್ಟವನ್ನೂ ಸೂಚಿಸಬಹುದು.

ಮನೆಯಲ್ಲಿ ಮಾಡಲಾಗುವ ಈ ಗರ್ಭಧಾರಣೆಯ ಪರೀಕ್ಷೆಗಳು 99ಪ್ರತಿದಶದಷ್ಟು ಮಾತ್ರ ನಿಖರವಾಗಿರಬಹುದು. ಅಧ್ಯಯನದ ಪ್ರಕಾರ ಮನೆಯಲ್ಲಿ ಮಾಡುವ ಗರ್ಭಧಾರಣೆಯ ಪರೀಕ್ಷೆಯು ಕಡಿಮೆ ವಿಶ್ವಾಸಾರ್ಹವೆಂದು ಸೂಚಿಸಿವೆ.

ಕೆಲವೊಮ್ಮೆ ಈ ಕಾರಣಗಳಿಂದಲೂ ಪರೀಕ್ಷೆಯು ಪಾಸಿಟಿವ್‌ ಬರಬಹುದು..

ಮುಟ್ಟಾಗದೇ ಇದ್ದಾಗ ಗರ್ಭಿಣಿಯೋ ಏನೋ ಎನ್ನುವ ಆತಂಕ, ಕುತೂಹಲ ಇದ್ದೇ ಇರುತ್ತದೆ. ಆದರೆ ಪರೀಕ್ಷೆ ಮಾಡಿದಾಗ ಪಾಸಿಟಿವ್‌ ಬಂದರೆ ನೀವು ಗರ್ಭಿಣಿ ಎಂದು ಹೇಳಲು ಸಾಧ್ಯವಾಗದು. ಕೆಲವೊಮ್ಮೆ ಇತರ ಕಾರಣಗಳಿಂದಲೂ ಮಸುಕಾದ ರೇಖೆಯು ಕಾಣಿಸಿಕೊಳ್ಳಬಹುದು. ಆ ಕಾರಣಗಳೇನು ಎಂದರೆ,

ಋತುಬಂಧ

ಋತುಬಂಧ

ಪೆರಿಮೆನೋಪಾಸ್ ಅಥವಾ ಋತುಬಂಧದಲ್ಲಿರುವ ಮಹಿಳೆಯು ತನ್ನ ಮುಟ್ಟಾಗುವ ಅವಧಿಯನ್ನು ಕಳೆದುಕೊಂಡರೆ ಮತ್ತು ಗರ್ಭಧಾರಣೆಯ ಪರೀಕ್ಷೆಯನ್ನು ತೆಗೆದುಕೊಂಡರೆ, ಫಲಿತಾಂಶಗಳು ಕೆಲವೊಮ್ಮೆ ವಿರಳವಾಗಿ ಲ್ಯುಟೈನೈಜಿಂಗ್ ಹಾರ್ಮೋನ್ ಅಸಹಜವಾಗಿ ಏರಿಕೆಯಾಗುವ ಕಾರಣದಿಂದ ಗರ್ಭಧಾರಣೆಯ ಪರೀಕ್ಷೆಯಲ್ಲಿ ಧನಾತ್ಮಕವಾಗಿ ತೋರಿಸುತ್ತವೆ.

ಫಲವತ್ತತೆ ಮತ್ತು ಇತರ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವಾಗ.

ಫಲವತ್ತತೆ ಔಷಧಗಳು ಅಥವಾ hCG ಹೊಂದಿರುವ ಇತರ ಔಷಧಿಗಳ ಸೇವನೆಯಿಂದಲೂ ಈ ರೀತಿಯ ತಪ್ಪುಗಳಾಗಬಹುದು. ಕೆಲವೊಮ್ಮೆ ನೀವು ಫಲವತ್ತತೆಯ ಆರೈಕೆಯ ಭಾಗವಾಗಿ hCG ಚುಚ್ಚುಮದ್ದನ್ನು ಸ್ವೀಕರಿಸಿದರೆ, ನೀವು ಗರ್ಭಿಣಿಯಾಗಿಲ್ಲದಿದ್ದರೂ ಸಹ ಕನಿಷ್ಠ ಏಳು ದಿನಗಳವರೆಗೆ HCG ಮಟ್ಟ ಹೆಚ್ಚಾಗುವುದು.

ನೀವು ಆರಂಭಿಕ ಗರ್ಭಧಾರಣೆಯ ನಷ್ಟವನ್ನು ಹೊಂದಿರುವಾಗ.

ಗರ್ಭಧಾರಣೆಯ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದರೆ ರಾಸಾಯನಿಕ ಗರ್ಭಧಾರಣೆ, ಅಪಸ್ಥಾನೀಯ ಗರ್ಭಧಾರಣೆ ಅಥವಾ ಇತರ ರೀತಿಯ ಆರಂಭಿಕ ಗರ್ಭಧಾರಣೆಯ ನಷ್ಟವನ್ನು ಸಹ ಸೂಚಿಸುತ್ತದೆ.

ಅನಾರೋಗ್ಯ

ಹಾರ್ಮೋನುಗಳ ಉತ್ಪಾದನೆಗೆ ಅಡ್ಡಿಪಡಿಸುವ ಕೆಲವು ಕ್ಯಾನ್ಸರ್‌ಗಳು ಗರ್ಭಧಾರಣೆಯ ಪರೀಕ್ಷೆಯಲ್ಲಿ ಪಾಸಿಟಿವ್‌ ಎಂದು ಫಲಿತಾಂಶ ಬರುವಂತೆ ಮಾಡಬಹುದು. ಆದರೆ ಈ ಸಾಧ್ಯತೆಗಳು ಅತಿ ವಿರಳ.

ಗರ್ಭಿಣಿಯಾಗಿದ್ದರೂ, ಟೆಸ್ಟ್‌ನಲ್ಲಿ ನೆಗೆಟಿವ್‌..?

ಗರ್ಭಿಣಿಯಾಗಿದ್ದರೂ, ಟೆಸ್ಟ್‌ನಲ್ಲಿ ನೆಗೆಟಿವ್‌..?

ಹೆಣ್ಣು ಗರ್ಭ ಧರಿಸಿದ ನಂತರ ಅಲ್ಲಿ ಹೊಸ ಜೀವ ಬೆಳೆಯಲು ಸಮಯ ತೆಗೆದುಕೊಳ್ಳುತ್ತದೆ. ಮುಟ್ಟು ನಿಂತಾಗ ಬೇಗನೇ ಮನೆಯಲ್ಲಿ ಕಿಟ್‌ನಿಂದ ಪರೀಕ್ಷೆ ಮಾಡಿ ನೋಡಿದರೆ ನೆಗೆಟಿವ್‌ ಬಂದರೆ ಆತಂಕ ಪಡಬೇಡಿ. ಮೊದಲೇ ಹೇಳಿದಂತೆ ಹೆಚ್‌ಸಿಜಿ ಸಾಂದ್ರತೆಯೂ ಇನ್ನೂ ಪತ್ತೆಹಚ್ಚಬಹುದಾದ ಮಟ್ಟವನ್ನು ತಲುಪಿರುವುದಿಲ್ಲ. ಹಾಗಾಗಿ ಒಮ್ಮೆ ನೆಗೆಟಿವ್‌ ಬಂದರೆ ಒಂದು ವಾರ ತಾಳ್ಮೆಯಿಂದ ಕಾದು ನೋಡಿ, ಮತ್ತೆ ಪರೀಕ್ಷೆ ಮಾಡಿ.

ಪ್ರೆಗ್ನೆನ್ಸಿ ಟೆಸ್ಟ್‌ ಮಾಡುವುದು ಒಂದು ರೀತಿಯ ಉದ್ವೇಗವನ್ನು ಹೆಚ್ಚಿಸುತ್ತದೆ. ಆದರೆ ಈ ಸಮಯದಲ್ಲಿ ನೀವು ಉಪಯೋಗಿಸುವಂತಹ ಪರೀಕ್ಷಾ ಕಿಟ್‌ನ ಪ್ಯಾಕೇಜ್‌ ಅನ್ನು ವಿವರವಾಗಿ ಓದಬೇಕು. ಅದರಲ್ಲಿ ಕೊಟ್ಟಿರುವ ಸಮಯವನ್ನು ಕೂಡಾ ಗಮನಿಸುವುದು ಮುಖ್ಯ. ಅದರಲ್ಲಿ ಕೊಟ್ಟಿರುವ ಸಮಯವನ್ನು ಪರೀಕ್ಷೆ ಮಾಡುವಾಗ ನೋಡಿ. ಹೆಚ್ಚು ಸಮಯ ಕಾಯಿರಿ. ತೊಂದರೆಯೇನಿಲ್ಲ.

ಗರ್ಭಧಾರಣೆಯ ಪರೀಕ್ಷಯನ್ನು ಬೆಳಗ್ಗೆ ಎದ್ದ ತಕ್ಷಣ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಮಾಡಬೇಕು ಎನ್ನುತ್ತಾರೆ. ನಿಮ್ಮ ಯೂರಿನ್ ಹೆಚ್‌ಸಿಜಿ ಪತ್ತೆಹಚ್ಚುವ ಪರೀಕ್ಷೆಗೆ ತುಂಬಾ ದುರ್ಬಲವಾಗಿದ್ದರೆ, ಫಲಿತಾಂಶವು ನಿಖರವಾಗಿದು. ಇಂದಿನ ಕಾಲದಲ್ಲಿ ಗರ್ಭಧಾರಣೆಯ ಪರೀಕ್ಷೆಗಳು ಅತೀ ಸೂಕ್ಷ್ಮವಾಗಿದ್ದು, ಯಾವ ಸಮಯದಲ್ಲಾದರೂ ಪರೀಕ್ಷೆ ಮಾಡಬಹುದು. ಆದರೆ ನೀವು ಹೆಚ್ಚು ನೀರು ಕುಡಿಯಬೇಕು. ದೇಹವನ್ನು ಹೈಡ್ರೇಟ್‌ ಆಗಿ ಇರಿಸಿಕೊಳ್ಳಬೇಕು.

ಕೆಲವೊಮ್ಮೆ ನೀವು ಅವಧಿ ಮೀರಿದ ಪರೀಕ್ಷಾ ಕಿಟ್‌ಗಳನ್ನು ಬಳಸುವುದರಿಂದ, ಅಥವಾ ದೋಷವಿರುವ ಪರೀಕ್ಷಾ ಕಿಟ್‌ಗಳನ್ನು ಬಳಸುವುದರಿಂದಲೂ ನೆಗೆಟಿವ್‌ ಬರಬಹುದು. ಹಾಗಾಗಿ ಪರೀಕ್ಷಾ ಕಿಟ್‌ಗಳನ್ನು ಬಳಸಿ ನೆಗೆಟಿವ್‌ ಎಂದು ಬಂದರೆ ಅಥವಾ ಅದರಲ್ಲಿ ಕಾಣುವ ಗೆರೆಯು ಮಸುಕಾಗಿದ್ದಲ್ಲಿ, ಹೆಚ್ಚು ಯೋಚನೆ ಮಾಡದೇ ಉತ್ತಮ ಪ್ರಸೂತಿ ತಜ್ಞರು ಅಥವಾ ಮಹಿಳಾ ರೋಗ ತಜ್ಞರನ್ನು ಭೇಟಿ ಮಾಡಿ. ಮುಟ್ಟಾಗಿ 45 ಅಥವಾ ಅದಕ್ಕಿಂತ ಹೆಚ್ಚು ದಿನಗಳಾಗಿದ್ದಲ್ಲಿ ಹೃದಯ ಬಡಿತ ಪರೀಕ್ಷಿಸಬಹುದು, ಅಥವಾ ಹೆಚ್‌ಸಿಜಿ ಟೆಸ್ಟ್ ಮಾಡಬಹುದು.

English summary

Faint Line on a Pregnancy Test: What Does It Mean in Kannada

you must know all about faint line pregnancy test in kannada, read on....
X
Desktop Bottom Promotion