For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಾಡುವ ನಿದ್ರಾಹೀನತೆಗೆ ಸುಲಭ ಪರಿಹಾರಗಳು

By Arshad
|

ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಸ್ರವಿಸುವ ಹಲವಾರು ಹಾರ್ಮೋನುಗಳ ಕಾರಣ ದೈಹಿಕವಾಗಿ ಆಗುವ ಬದಲಾವಣೆಗಳ ಜೊತೆಗೇ ನಿದ್ದೆಯೂ ಏರುಪೇರಾಗುತ್ತದೆ. ಹಗಲಿನಲ್ಲಿ ನಿದ್ದೆ ಬರುವುದು ಮತ್ತು ರಾತ್ರಿ ಬರದೇ ಇರುವುದು ಸಾಮಾನ್ಯವಾಗುತ್ತದೆ. ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆಯೇ ಈ ತೊಂದರೆಗಳೂ ಹೆಚ್ಚಾಗುತ್ತವೆ. ಇದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ವೈದ್ಯರು ಇದರ ಲಕ್ಷಣಗಳನ್ನು ನೋಡಿದ ಬಳಿಕವೇ ಸೂಕ್ತವಾದ ಔಷಧಿ ಮತ್ತು ಆರಾಮ ಮಾಡುವ ವಿಧಾನಗಳನ್ನು ಸೂಚಿಸಬಲ್ಲರು.

Tricks To Cure Sleeplessness In Pregnancy

ಒಂದು ಪ್ರದೇಶದಿಂದ ಸಮಯದಲ್ಲಿ ಬಹಳ ವ್ಯತ್ಯಾಸವಿರುವ ಊರಿಗೆ ಹೋದಾಗ ಎದುರಾಗುವ ಜೆಟ್ ಲ್ಯಾಗ್, ಬದಲಾದ ಸಮಯಗಳೂ ನಿದ್ರಾಹೀನತೆಗೆ ಕಾರಣವಾಗುತ್ತವೆ. ಇದರಿಂದ ದೇಹದಲ್ಲಿ ನೋವು, ಆಯಾಸ, ಹೊಟ್ಟೆಯಲ್ಲಿ ಉರಿ (gastroesophageal reflux disease (GERD) ಮೊದಲಾದವು ಎದುರಾಗುತ್ತವೆ. ಇದರ ಪರಿಣಾಮವಾಗಿ ನಿದ್ದೆಯಲ್ಲಿಯೂ ವಾಂತಿಯಾಗುವ ಸಾಧ್ಯತೆಗಳಿವೆ.

ಇನ್ನುಳಿದ ಕಾರಣಗಳೆಂದರೆ ಭಯಾನಕ ಕನಸು, ನಿದ್ದೆಯಲ್ಲಿ ನಡೆಯುವ ಅಭ್ಯಾಸ, ಯಾವುದಾದರೊಂದು ವಸ್ತು ಅಥವಾ ಸ್ಥಿತಿಗೆ ವಿಪರೀತ ಹೆದರುವುದು, ಸೂಕ್ತವಾದ ವ್ಯಾಯಮಗಳಿಲ್ಲದೇ ಇರುವುದು, ಸಾಕಷ್ಟು ನೀರು ಕುಡಿಯದೇ ಇರುವುದು, ಪ್ರಚೋದನೆ ನೀಡುವ ಔಷಧಿ ಅಥವಾ ಆಹಾರಗಳನ್ನು (stimulants) ಸೇವಿಸುವುದು ಇತ್ಯಾದಿಗಳೂ ನಿದ್ರಾಹೀನತೆಗೆ ಕಾರಣವಾಗಬಹುದು.

ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಯಿಂದಲೂ ನಿದ್ದೆಗೆ ಸಂಚಕಾರ ಉಂಟಾಗಬಹುದು. ಸುಮಾರು ಆರು ತಿಂಗಳ ಬಳಿಕ ದೊಡ್ಡದಾಗುವ ಮಗುವಿನ ಗಾತ್ರದ ಕಾರಣ ಹಿಂದೆ ಸುಖವಾಗಿ ಪವಡಿಸುತ್ತಿದ್ದ ಭಂಗಿಯಲ್ಲಿ ಈಗ ಪವಡಿಸಲು ಸಾಧ್ಯವಿಲ್ಲದ ಕಾರಣ ಮತ್ತು ವೈದ್ಯರು ಕೆಲವೊಂದು ಭಂಗಿಯಲ್ಲಿಯೇ ಮಲಗುವಂತೆ ಸಲಹೆ ನೀಡುವ ಕಾರಣವೂ ನಿದ್ದೆಯನ್ನು ಓಡಿಸಬಹುದು.

ಮಗುವಿನ ಭಾರದ ಕಾರಣ ಕೊಂಚ ಹಿಂದೆ ವಾಲಿ ನಡೆಯಬೇಕಾದ ಕಾರಣ ಕೆಲವು ಗರ್ಣಿಭಿಯರಿಗೆ ಬೆನ್ನುನೋವಿನ ತೊಂದರೆ ಕಾಡಬಹುದು. ಈ ಬೆನ್ನುನೋವು ಮತ್ತು ಇದರ ಮೂಲಕ ಎದುರಾದ ಸೆಳೆತಗಳೂ ನಿದ್ದೆಯನ್ನು ಕಸಿದುಕೊಳ್ಳಬಹುದು. ಆರು ತಿಂಗಳ ಬಳಿಕ ಮಗುವಿನ ಭಾರ ನೇರವಾಗಿ ತಾಯಿಯ ಮೂತ್ರಕೋಶದ ಮೇಲೆ ಬೀಳುವ ಕಾರಣ ಪದೇ ಪದೇ ಮೂತ್ರಕ್ಕೆ ಅವಸರವಾಗುತ್ತಾ ಇರುತ್ತದೆ. ಇದು ರಾತ್ರಿ ಮಲಗಿದ ಬಳಿಕ ಹಲವು ಬಾರಿ ನಿದ್ದೆಯಿಂದ ಏಳುವಂತೆ ಮಾಡುತ್ತದೆ.

ಇನ್ನೊಂದು ಪ್ರಮುಖ ಕಾರಣವೆಂದರೆ ದುಗುಡ. ಹಾರ್ಮೋನುಗಳ ಪ್ರಭಾವದಿಂದ ನಿದ್ರಾಹೀನತೆಯ ಸಹಿತ ಇನ್ನೂ ಕೆಲವಾರು ಬದಲಾವಣೆಗಳು ಉಂಟಾಗಬಹುದು. ಇದರ ಬಗ್ಗೆ ಅರಿವಿರದೇ ಇದ್ದರೆ ಅಥವಾ ರಾತ್ರಿಯ ನಿದ್ದೆ ಭಂಗಗೊಂಡಿದ್ದರೆ ಇದು ತನ್ನ ಮಗುವಿನ ಆರೋಗ್ಯಕ್ಕೆ ಏನು ಮಾಡಬಹುದು ಎಂಬ ದುಗುಡ ತಾಯಿಯಾಗುವವಳಿಗೆ ಕಾಡಲು ತೊಡಗಬಹುದು. ಇದು ಇನ್ನಷ್ಟು ನಿದ್ರಾಹೀನತೆಗೆ ಕಾರಣವಾಗಬಹುದು.

ದುಗುಡ ಹೆಚ್ಚುತ್ತಾ ಹೋದಂತೆ ನಿದ್ದೆಯ ಜೊತೆಗೆ ನೆಮ್ಮದಿಯೂ ಹಾಳಾಗಬಹುದು. ಇದಕ್ಕೆ ವೈದ್ಯರ ಮತ್ತು ಮನೆಯವರ ಸಾಂತ್ವಾನ ಮತ್ತು ಅಭಯವಾಣಿಗಳು ಅಮೃತದಂತೆ ಕೆಲಸಮಾಡಬಲ್ಲವು. ವಿಶೇಷವಾಗಿ ತಾಯಿ ಬಳಿ ಇದ್ದರೆ ಈ ತೊಂದರೆ ಹೆಚ್ಚಾಗಿ ಕಾಡದು.

ನಿದ್ರಾಹೀನತೆಗೆ ಕಾರಣ ಏನು ಎಂದು ಗೊತ್ತಾದರೆ ತಾಯಿಯಾಗುವವಳು ಕೊಂಚ ಬದಲಾವಣೆಗಳನ್ನು ಅನುಸರಿಸುವ ಮೂಲಕ ಈ ತೊಂದರೆಯಿಂದ ಹೊರಬರಬಹುದು. ಆರು ತಿಂಗಳ ಬಳಿಕ ಬದಲಾದ ಹೊಟ್ಟೆಯ ಗಾತ್ರಕ್ಕೆ ಅನುಗುಣವಾಗಿ ನಿದ್ದೆಯ ಭಂಗಿಯನ್ನು ಬದಲಿಸುವ ಮೂಲಕ ಬೆನ್ನಿಗೆ ಹೆಚ್ಚಿನ ಒತ್ತಡ ಮತ್ತು ಭಾರ ನೀಡದೇ ನೋವು ಮತ್ತು ಸೆಳೆತಗಳಿಂದ ಕಾಪಾಡಿಕೊಳ್ಳಬಹುದು. ಇದಕ್ಕೆ ತಜ್ಞರು ಸೂಚಿಸುವ ಭಂಗಿ ಎಂದರೆ ಪಕ್ಕಕ್ಕೆ ಮಲಗಿ ಹೊಟ್ಟೆಯ ಕೆಳಭಾಗದಲ್ಲಿ ಮೃದುವಾದ ದಿಂಬು ಅಥವಾ ಬಟ್ಟೆಯ ಮೆತ್ತೆಯೊಂದನ್ನು ನೀಡುವುದು.

ರಾತ್ರಿ ಮಲಗುವ ಮುನ್ನ ಉಗುರುಬೆಚ್ಚನೆಯ ನೀರಿನಿಂದ ತಲೆಗೆ ನೀರು ಹೊಯ್ದುಕೊಳ್ಳದೇ ಸ್ನಾನ ಮಾಡಿ ಮಲಗುವುದು, ರಾತ್ರಿ ಹೊತ್ತು ಕಡಿಮೆ ಕಾರ್ಬೋಹೈಡ್ರೇಟುಗಳಿರುವ ಆಹಾರ ಸೇವಿಸುವ ಮೂಲಕ ಹೆಚ್ಚು ಸೆರೋಟೋನಿನ್ ಸ್ರವಿಸುವಂತೆ ಮಾಡಿ ಮೆದುಳಿಗೆ ಆರಾಮ ನೀಡುವುದು, ಕೊಂಚ ಹಾಲು ಕುಡಿದು ಮಲಗುವುದು ಇತ್ಯಾದಿಗಳ ಮೂಲಕ ಸುಖನಿದ್ದೆ ಪಡೆಯಬಹುದು.

English summary

Tricks To Cure Sleeplessness In Pregnancy

Sleeplessness during pregnancy, though uncomfortable, is in fact common. Do you know how an anticipating mother can deal with this problem? Insomnia, generally, is the inability to sleep or stay asleep for quite a long time. This sleep disorder can be caused by a wide range of factors, and each of those causes require their own methods to finally counter and cure insomnia.
X
Desktop Bottom Promotion