For Quick Alerts
ALLOW NOTIFICATIONS  
For Daily Alerts

ಮೊದಲ ಬಾರಿಗೆ ನಿಮ್ಮ ಮಗು ದಂತ ವೈದ್ಯರ ತೆಕ್ಕೆಗೆ, ಯಾವಾಗ? ಏನೇನು ?

|

ಮನೆಗೊಂದು ಪುಟ್ಟ ಮಗುವಂತೂ ಬಂದಾಯಿತು . ಇನ್ನೇನಿದ್ದರೂ ಅದರ ತುಂಟ ನಗು ಮನೆಯ ತುಂಬೆಲ್ಲಾ ಪಸರಿಸುತ್ತದೆ ಎಂಬ ಅನುಭವ . ಯಾವುದೇ ಸಂಕೋಚ ಗೊಂದಲಗಳಿದ್ದರೂ ಮಕ್ಕಳ ವೈದ್ಯರಿದ್ದಾರೆ ಇನ್ನೇನು ಭಯ ಎಂಬ ಅಭಯ ಬೇರೆ . ಎಳೆಯ ಕಂದ ನಿಮ್ಮ ತರಲೆ ತುಂಟಾಟಗಳನ್ನು ನೋಡಿ ಕೇಕೆ ಹಾಕಿ ನಗುತ್ತಿರುತ್ತದೆ . ಆದರೆ ಬಾಯಿ ಬಿಟ್ಟಾಗ ಮಾತ್ರ ಇನ್ನೂ ಹಲ್ಲುಗಳು ಬಂದಿರುವುದಿಲ್ಲ . ಕೇವಲ ದ್ರವಾಹಾರವನ್ನಷ್ಟೇ ತೆಗೆದುಕೊಂಡು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿರುತ್ತದೆ . ತಾಯಿಯ ಮಮತೆಯಲ್ಲಿ ತಂದೆ ಪ್ರೀತಿಯಲ್ಲಿ ಆನಂದವಾಗಿ ಮಗು ತನ್ನದೇ ಆದ ಲೋಕದಲ್ಲಿ ತಾನು ಬೆಳೆಯುತ್ತಿರುತ್ತದೆ.

ಈ ಆನಂದ , ನಗು ಹೀಗೆ ಇರಬೇಕಾದರೆ ಆಗಾಗ ಮಕ್ಕಳ ವೈದ್ಯರ ಸಲಹೆ ಸೂಚನೆಗಳು ಅತ್ಯಗತ್ಯ . ಅಲ್ಲಿಗೆ ಹೋಗುವುದು , ಅವರನ್ನು ಭೇಟಿಯಾಗುವುದು , ಕಾಲಕಾಲಕ್ಕೆ ತಕ್ಕಂತೆ ಔಷಧಿಗಳನ್ನು ತಂದು ಮಗುವಿಗೆ ಕೊಡುವುದು ಇವೆಲ್ಲಾ ಸರ್ವೇ ಸಾಮಾನ್ಯ . ಮಗುವಿನ ಸಾಮಾನ್ಯ ದೇಹದ ಸ್ಥಿತಿಗೆ ತಕ್ಕಂತೆ ನಾವೆಲ್ಲಾ ನಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇವೆ . ಆದರೆ ನಾವು ಎಡವುವುದು ಒಂದು ವಿಷಯದಲ್ಲಿ ಮಾತ್ರ . ಅದು ಮಕ್ಕಳ ಹಲ್ಲುಗಳ ವಿಷಯ ಬಂದಾಗ . ಏಕೆಂದರೆ ಹಲ್ಲುಗಳ ವೈದ್ಯರೇ ಬೇರೆ ಇರುತ್ತಾರೆ . ಆದ್ದರಿಂದ ಅವರ ಬಳಿಗೆ ಮಗುವನ್ನು ಕರೆದುಕೊಂಡು ಇಂದು ಹೋಗಬೇಕೋ, ಇಲ್ಲ ನಾಳೆ ಹೋಗಬೇಕೋ , ಇಲ್ಲ ಮಗುವಿನ ಬಾಯಿಯಲ್ಲಿ ಪೂರ್ತಿ ಹಲ್ಲುಗಳು ಬಂದ ಮೇಲೆ ಹೋಗಬೇಕೋ ಎನ್ನುವುದೇ ಗೊಂದಲ.

ಕೆಲವರಂತೂ ಮಕ್ಕಳನ್ನು ಕರೆದುಕೊಂಡು ದಂತ ವೈದ್ಯರ ಬಳಿಗೆ ಹೋಗುವುದೇ ಇಲ್ಲ . ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಡುತ್ತಾರೆ . ಆದರೆ ನೆನಪಿಡಿ ಮಗುವಿನ ದೈಹಿಕ ಆರೋಗ್ಯದ ಬಗ್ಗೆ ನೀವು ಎಷ್ಟು ಜಾಗ್ರತೆಯಿಂದ ಗಮನ ವಹಿಸುತ್ತೀರೋ ಅಷ್ಟೇ ಮುಖ್ಯ ಮಗುವಿನ ಹಲ್ಲುಗಳ ವಸಡಿನ ಆರೋಗ್ಯ ಕೂಡ . ಇದರಲ್ಲಿ ಯಾವುದೇ ಅನುಮಾನ ಬೇಡ ಹಾಗಾದರೆ ನಿಮ್ಮ ಪುಟ್ಟ ಮಗುವನ್ನು ದಂತ ವೈದ್ಯರ ಬಳಿಗೆ ಕರೆದುಕೊಂಡು ಹೋಗಲು ಒಳ್ಳೆಯ ಸಮಯ ಯಾವುದು ?

ನಿಮ್ಮ ಬಾಯಿಯನ್ನು ಹೇಗೆ ಪ್ರತಿದಿನ ಬೆಳಗ್ಗೆ ಸಂಜೆ ಹಲ್ಲುಜ್ಜಿ ಶುಚಿಯಾಗಿ ಇಟ್ಟುಕೊಂಡಿರುತ್ತೀರೋ , ಹಾಗೆ ನಿಮ್ಮ ಮಗುವಿನ ಬಾಯಿಯ ಆರೋಗ್ಯ ಮತ್ತು ಸ್ವಾಸ್ಥ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ . ಅದು ಕುಡಿಯುವುದು ಬರೀ ಹಾಲೇ ಆದರೂ ಕೀಟಾಣುಗಳ ಹಾವಳಿ ಹೆಚ್ಚಾಗಿರುತ್ತದೆ . ಆದ್ದರಿಂದ ಮಗುವಿನ ಬಾಯಿಯನ್ನು ಆದಷ್ಟು ಸ್ವಚ್ಛವಾಗಿಡಲು ಪ್ರಯತ್ನಿಸಿ . " ಅಮೆರಿಕನ್ ಅಕಾಡೆಮಿ ಓಫ್ ಪೀಡಿಯಾಟ್ರಿಕ್ ಡೆಂಟಿಸ್ಟ್ರಿ " ಯ ವರದಿಯ ಪ್ರಕಾರ ನಿಮ್ಮ ಮಗುವನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುವ ಒಳ್ಳೆಯ ಸಮಯದ ಬಗ್ಗೆ ನೀವು ಹುಡುಕಾಟದಲ್ಲಿದ್ದರೆ , ಅದು ಬೇರೆ ಯಾವಾಗಲೂ ಅಲ್ಲ . ನಿಮ್ಮ ಮಗುವಿನ ಮೊದಲ ಹಲ್ಲುಗಳು ಮೂಡಿದಾಗ !!! ಈ ಸಮಯ ಖಂಡಿತ ಮಗುವಿನ ವಯಸ್ಸು ಕೇವಲ 6 ತಿಂಗಳಿಂದ 1 ವರ್ಷದೊಳಗೆ ಇದ್ದಾಗಲೇ ಆಗಿರುತ್ತದೆ . ವೈದ್ಯ ಲೋಕದ ಪ್ರಕಾರ ಈ ಸಮಯ ನಿಮ್ಮ ಮಗುವಿನ ಬಾಯಿಯ ಆರೋಗ್ಯವನ್ನು ಕಾಪಾಡಲು ಮತ್ತು ಮುಂದೆ ಬರುವ ಹಲ್ಲುಗಳ ಮತ್ತು ವಸಡಿನ ಸಮಸ್ಯೆಯನ್ನು ಆರಂಭದಲ್ಲೇ ತಡೆಯಲು ಬಹಳ ಅನುಕೂಲಕರ ಸಮಯ ಆಗಿರುತ್ತದೆ .

ಮೊದಲನೇ ಬಾರಿಗೆ ನಿಮ್ಮ ಮಗುವನ್ನು ದಂತ ವೈದ್ಯರ ಬಳಿಗೆ ಕರೆದುಕೊಂಡು ಹೋದಾಗ ಅವರ ಪ್ರತಿಕ್ರಿಯೆ ಹೇಗಿರುತ್ತದೆ ?

ಇದು ಸಾಮಾನ್ಯವಾಗಿ ಎಲ್ಲಾ ಪೋಷಕರಿಗೂ ಇರುವ ಭಯ . ಎಲ್ಲಿ ನಮ್ಮ ಮಗುವಿಗೆ ಸೂಜಿ ಚುಚ್ಚುತ್ತಾರೋ , ಈಗ ನಮ್ಮ ಮಗುವಿನ ವೈದ್ಯರು ಕೊಡುತ್ತಿರುವ ಸಾಮಾನ್ಯ ಔಷಧಿಗಳ ಜೊತೆಗೆ ಇವರು ಇನ್ನಷ್ಟು ಔಷಧಿಗಳನ್ನು ಕೊಡುತ್ತಾರೋ , ಇದರಿಂದ ನಮ್ಮ ಮಗುವಿನ ಮುಂದಿನ ಆರೋಗ್ಯದ ಸ್ಥಿತಿ ಏನಾಗುತ್ತದೋ ? ಹೀಗೆ ನಿಮ್ಮ ಮನಸ್ಸಿನಲ್ಲಿ ಹತ್ತು ಹಲವಾರು ಗೊಂದಲಗಳ ಗೂಡೇ ನಿರ್ಮಾಣವಾಗಿ ಬಿಟ್ಟಿರುತ್ತದೆ . ಆದರೆ ಭಯ ಪಡಬೇಡಿ . ನೀವಂದುಕೊಂಡ ಹಾಗೇನು ಇರುವುದಿಲ್ಲ . ಮೊದಲ ಬಾರಿಗೆ ನಿಮ್ಮ ಮುದ್ದು ಮಗುವನ್ನು ದಂತ ವೈದ್ಯರು ನೋಡಿದಾಗ ಮಗುವಿನ ಹಲ್ಲುಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಮಾತ್ರ ಗಮನಿಸುತ್ತಾರೆ . ಮಗುವಿನಲ್ಲಿ ಹುಳುಕು ಹಲ್ಲುಗಳು ಪ್ರಾರಂಭ ಆಗುತ್ತಿದ್ದರೆ ಅದನ್ನೂ ಕೂಡ ಆಗಲೇ ಪತ್ತೆ ಹಚ್ಚುತ್ತಾರೆ ಮತ್ತು ಅದನ್ನು ತಡೆಯಲು ಸೂಕ್ತ ಸಲಹೆ ಸೂಚನೆಗಳನ್ನು ಕೊಡುತ್ತಾರೆ . ನಿಮ್ಮ ಮೊದಲ ಭೇಟಿಯಲ್ಲಿ ದಂತ ವೈದ್ಯರು ಮಗುವಿಗೆ ಹೇಗೆ ಬ್ರಷ್ ಮಾಡಿಸಬೇಕು ಮತ್ತು ಬಾಯಿಯಲ್ಲಿ ನೀರು ಹಾಕಿ ಹೇಗೆ ಬಾಯಿ ಸ್ವಚ್ಛ ಮಾಡಬೇಕು ಎಂಬುದನ್ನೂ ಹೇಳುತ್ತಾರೆ .

ಪುಟ್ಟ ಮಗುವನ್ನು ದಂತ ವೈದ್ಯರ ಬಳಿ ಕರೆದುಕೊಂಡು ಹೋಗುವುದು ಎಷ್ಟು ಮುಖ್ಯ ?

ಮೇಲೆ ಹೇಳಿದಂತೆ ಕೇವಲ ವೈದ್ಯರು ಮಗುವಿನ ಹುಳುಕು ಹಲ್ಲುಗಳನ್ನು ನೋಡಿ ಬಾಯಿಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ಮಾತ್ರ ಕೊಡುತ್ತಾರೆ ಎಂದುಕೊಳ್ಳಬೇಡಿ . ಮಗು ಬೆಳೆಯುತ್ತಾ ಹೋದಂತೆ ಹೇಗೆ ಕೊಟ್ಟ ಆಹಾರವನ್ನು ತಿನ್ನಬೇಕು ಮತ್ತು ಸ್ವಚ್ಛವಾಗಿ ಹೇಗೆ ಮಾತನಾಡಬೇಕು ಎಂಬುದನ್ನೂ ಕೂಡ ದಂತ ವೈದ್ಯರು ತಿಳಿಸುತ್ತಾರೆ . ಅಷ್ಟೇ ಅಲ್ಲದೆ ಮಗುವಿಗೂ ದಂತ ವೈದ್ಯರು ಪರಿಚಯ ಆದಂತೆ ಆಗುತ್ತದೆ . ಮುಂದಿನ ದಿನಗಳಲ್ಲಿ ಅದನ್ನು ಮಕ್ಕಳ ವೈದ್ಯರ ಬಳಿಗೆ ಕರೆದುಕೊಂಡು ಬಂದಾಗ ಅದು ಭಯ ಪಡುವುದಿಲ್ಲ

ವಿಶೇಷ ಸೂಚನೆ

ಕೇವಲ ಮಗುವನ್ನು ದಂತ ವೈದ್ಯರ ಬಳಿಗೆ ಸರಿಯಾದ ಸಮಯಕ್ಕೆ ಕರೆದುಕೊಂಡು ಹೋಗುವುದಷ್ಟೇ ಅಲ್ಲ ನಿಮ್ಮ ಜವಾಬ್ದಾರಿ . ನಿಮ್ಮ ಮಗುವಿನ ಸಂಪೂರ್ಣ ರಕ್ಷಣೆಯ ಭಾರ ನಿಮ್ಮದು . ಬೆಳಗ್ಗಿನಿಂದ ರಾತ್ರಿಯವರೆಗೂ ಮಗು ನಿಮ್ಮ ಬಳಿಯಲ್ಲಿಯೇ ಇರುತ್ತದೆ . ಆದ್ದರಿಂದ ಅದರ ಆರೋಗ್ಯ , ಅದರ ಆಹಾರ , ಅದರ ಔಷಧಿ ಎಲ್ಲವೂ ನಿಮ್ಮ ಬಹು ಮುಖ್ಯ ಜವಾಬ್ದಾರಿ . ನೀವು ಹೇಗೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜಿ ಬಾಯಿಯನ್ನು ಶುಚಿಯಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತೀರೋ ಹಾಗೇ ಅದರಂತೆಯೇ ನಿಮ್ಮ ಮಗುವಿಗೂ ದಿನಕ್ಕೆ ಎರಡು ಬಾರಿ ಹಲ್ಲುಜ್ಜಿ ಶುದ್ಧ ನೀರಿನಿಂದ ಬಾಯಿ ತೊಳೆಯಿರಿ ಯಾವುದೇ ಕಾರಣಕ್ಕೂ ಮಲಗುವ ಮುಂಚೆ ಅದರ ಕೈ ಗೆ ಬಾಟಲಿಗಳು ಸಿಗದಂತೆ ನೋಡಿಕೊಳ್ಳಿ ಏಕೆಂದರೆ ಮಗು ಅದನ್ನು ಕಚ್ಚುವ ಬರದಲ್ಲಿ ವಕ್ರ ದಂತ ಸಮಸ್ಯೆ ಉಂಟಾಗುವ ಪ್ರಮೇಯ ಬರುತ್ತದೆ . ಮಗುವಿನ ದೇಹದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ನೀವು ಅದರ ಹಲ್ಲುಗಳ ಬಗ್ಗೆಯೂ ಗಮನ ಕೊಡಬೇಕಲ್ಲವೇ ?

English summary

When to take your baby to a dentist for the first time?

When is the right time to take a baby to a dentist? Well, this surely is a complex question. For most of the parents, it is after the baby gets his/her full set of teeth, while for some it is not until they have some dental problem. But the right age is earlier than you might think.
X
Desktop Bottom Promotion