For Quick Alerts
ALLOW NOTIFICATIONS  
For Daily Alerts

ಮಂಗಳಸೂತ್ರ- ಪವಿತ್ರ ವೈವಾಹಿಕ ಬಂಧನದ ಸಂಕೇತ

By Arshad
|

ಹಿಂದೂ ಸಂಪ್ರದಾಯದಲ್ಲಿ ಮಂಗಳಸೂತ್ರವನ್ನು ಹೆಣ್ಣಿನ ಕೊರಳಿಗೆ ತೊಡಿಸುವ ಮೂಲಕ ಪ್ರಾರಂಭವಾಗುವ ವೈವಾಹಿಕ ಬಂಧನ ಪತಿ ಪತ್ನಿಯರ ನಡುವಿನ ಜೀವನಪರ್ಯಂತ ಪಾಲಿಸಬೇಕಾದ ಜೊತೆ ಮಾತ್ರವಲ್ಲದೇ ಒಬ್ಬರಿಗೊಬ್ಬರು ಬದ್ಧರಾಗಿರುವುದನ್ನೂ, ಜೀವನದ ಸುಖ ದುಃಖಗಳನ್ನು ಸಮಾನವಾಗಿ ಹಂಚಿ ಬದುಕುವುದನ್ನೂ, ಪರಸ್ಪರ ಪ್ರೀತಿ, ಗೌರವ ಆದರ ಮತ್ತು ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಜೀವಿಸುವುದನ್ನೂ ಬಿಂಬಿಸಲಾಗುತ್ತದೆ.

ವಿವಾಹ ಸಮಾರಂಭವೆಂದರೆ ಒಂದು ಸಂತೋಷಕೂಟಕ್ಕಿಂತಲೂ ಹೆಚ್ಚಿನದ್ದೇ ಆಗಿದೆ. ಇದು ಕೇವಲ ಪತಿ ಪತ್ನಿಯರ ನಡುವಣ ಸಂಬಂಧವಲ್ಲ, ಎರಡು ಕುಟುಂಬಗಳ, ಎರಡು ಊರುಗಳ ನಡುವಣ, ಎರಡು ರಾಜ್ಯಗಳ ನಡುವಣ ಬಾಂಧವ್ಯಕ್ಕೆ ನಾಂದಿಯಾಗಿದೆ. ವಿವಾಹ ಬಂಧನದಲ್ಲಿ ಬಂಧಿತರಾದ ಪತಿ ಪತ್ನಿಯರು ಜೀವನಪರ್ಯಂತ ಪಾಲಿಸಬೇಕಾದ ಸಂಸಾರದಲ್ಲಿ ನೆಮ್ಮದಿ, ಒಬ್ಬರು ಇನ್ನೊಬ್ಬರಿಗೆ ಬದ್ಧರಾಗಿರುವುದು, ಇನ್ನೊಬ್ಬರಿಗಾಗಿ ತ್ಯಾಗ ಮಾಡುವುದು, ಯಾವುದೇ ಪರಿಸ್ಥಿತಿಯಲ್ಲಿ ಬಿಟ್ಟು ಹೋಗದಿರುವುದು ಮೊದಲಾದವುಗಳನ್ನು ಸಹಾ ಮಂತ್ರಗಳನ್ನು ಉಚ್ಛರಿಸಿ ಅಗ್ನಿಯ ಎದುರು ಸಾಕ್ಷಿ ನುಡಿಯಬೇಕಾಗುತ್ತದೆ. ವಿವಾಹದ ವಿವಿಧ ಆಚರಣೆಗಳೂ ಈ ಎಲ್ಲಾ ವಿಷಯಗಳನ್ನು ಮನದಟ್ಟು ಮಾಡಿಸುತ್ತಾ ಹೋಗುತ್ತವೆ.

Mangalsutra - The Sacred Symbol of Marriage

ಸಾಂಪ್ರಾದಾಯಿಕವಾಗಿ ಹಿಂದೂ ಮಹಿಳೆ ವಿವಾಹದ ಬಳಿಕ ಐದು ವಿಧದ ಆಭರಣಗಳನ್ನು ತೊಡುತ್ತಾಳೆ. ಮಂಗಳಸೂತ್ರ ಅಥವಾ ತಾಳಿ, ಬೆಳ್ಳಿ ಕಾಲುಂಗುರ, ಕುಂಕುಮ, ಕೈ ಬಳೆಗಳು ಮತ್ತು ಮೂಗುತಿ. ಇದರಲ್ಲಿ ಮಂಗಳಸೂತ್ರಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಂಗಳ ಎಂದರೆ ಶುಭ, ಪವಿತ್ರವಾದ ಎಂದೂ ಸೂತ್ರ ಎಂದರೆ ದಾರ ಅಥವಾ ದಾರದಿಂದ ಬಂಧಿಸಲ್ಪಟ್ಟ ಎಂಬ ಅರ್ಥವಿದೆ. ಒಟ್ಟಾರೆ ಮಂಗಳ ಸೂತ್ರ ಎಂದರೆ ಪವಿತ್ರವಾದ ಬಂಧನಕ್ಕೆ ಒಳಗಾಗಿರುವವರು ಎಂದು ಅರ್ಥೈಸಿಕೊಳ್ಳಬಹುದು. ಆಭರಣಗಳನ್ನು ಧರಿಸುವುದರ ಹಿಂದಿನ ವೈಜ್ಞಾನಿಕ ಮಹತ್ವಗಳು

ಹಿಂದೂ ವಿವಾಹಿತ ಮಹಿಳೆಯರು ಮಂಗಳಸೂತ್ರವನ್ನು ಸದಾ ಧರಿಸಿರುವುದು ಕೇವಲ ಆಭರಣದ ತೋರುವಿಕೆಯಲ್ಲದೇ ತಮ್ಮ ವೈವಾಹಿಕ ಸ್ಥಾನಮಾನವನ್ನು ತೋರಲು, ಸುತ್ತಮುತ್ತಲ ಜನರು ತಮ್ಮ ಕುರಿತು ಸದ್ಭಾವನೆ ಪ್ರಕಟಿಸಲು ಮತ್ತು ವೈವಾಹಿಕ ಜೀವನದಲ್ಲಿ ಈಗಾಗಲೇ ಯಶಸ್ವಿಯಾಗಿ ಭಾಗಿಯಾಗಿರುವುದನ್ನು, ತನ್ಮೂಲಕ ಪತಿಗೆ ತಮ್ಮ ಜೀವನ ಬದ್ಧರಾಗಿರುವುದನ್ನು ಬಿಂಬಿಸುತ್ತದೆ. ಹಿಂದೂ ವಿವಾಹದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ತಾಳಿ ಅಥವಾ ಮಂಗಳಸೂತ್ರ ಜೀವನಪರ್ಯಂತ ಪಾಲಿಸುವ ಬಂಧನಕ್ಕೆ ಶಾಶ್ವತವಾದ ಸಂಕೇತವಾಗಿದೆ.

ಸಾವಿರಾರು ವೈವಿಧ್ಯತೆಗಳನ್ನೊಳಗೊಂಡ ಭಾರತದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಪಯಣಿಸಿದರೆ ಸಂಪ್ರದಾಯ, ಆಚರಣೆಗಳಲ್ಲಿ ಹಲವು ವ್ಯತ್ಯಾಸಗಳನ್ನು ಗಮನಿಸಬಹುದು. ಅಂತೆಯೇ ಮಂಗಳಸೂತ್ರದ ವಿನ್ಯಾಸ ಮತ್ತು ಹೆಸರಿನಲ್ಲಿ ಕೊಂಚ ವ್ಯತ್ಯಾಸ ಕಂಡುಬರಬಹುದು. ದಕ್ಷಿಣದ ರಾಜ್ಯಗಳಾದ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಮಾಂಗಲ್ಯಂ ಅಥವಾ ತಾಳಿ ಎಂದು ಕರೆದರೆ ಉತ್ತರ ಭಾರತದಲ್ಲಿ ಮಂಗಳಸೂತ್ರ ಎಂದು ಕರೆಯಲಾಗುತ್ತದೆ. ವಿವಾಹದಲ್ಲಿ ಮಂಗಳಸೂತ್ರವನ್ನು ತೊಡಿಸುವ ಕ್ರಮ ದಕ್ಷಿಣ ಭಾರತದಲ್ಲಿ ಮೊದಲು ಪ್ರಾರಂಭವಾಗಿರಬಹುದು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಈ ವಿಧಿಯ ಜನಪ್ರಿಯತೆ ಮತ್ತು ಕಟಿಬದ್ದತೆಯನ್ನು ಕಂಡುಕೊಂಡ ಉತ್ತರ ಭಾರತೀಯರು ಬಳಿಕ ಕ್ರಮೇಣ ಈ ವಿಧಾನವನ್ನು ತಮ್ಮ ಸಂಪ್ರದಾಯಕ್ಕೆ ಅಳವಡಿಸಿಕೊಂಡರು ಎನ್ನಲಾಗಿದೆ.

ಮಂಗಳಸೂತ್ರವು ವಿವಾಹದ ದಿನ ಪತಿ ತನ್ನ ಪತ್ನಿಗೆ ಜೀವನಪರ್ಯಂತ ನೀಡುವ ಪ್ರೀತಿ, ಗೌರವ ಮತ್ತು ಬದ್ದತೆಯ ಸಂಕೇತವಾಗಿದೆ. ಈ ಶುಭದಿನದಂದು ಅರ್ಚಕರು ಪವಿತ್ರವಾದ ಮಂತ್ರಗಳನ್ನು ಪಠಿಸುತ್ತಿರುವಾಗ ಮಂಗಳವಾದ್ಯದ ಹಿನ್ನೆಲೆಯಲ್ಲಿ ಪತಿಯು ತನ್ನ ಪತ್ನಿಯ ಕೊರಳಿಗೆ ತಾಳಿಯನ್ನು ತೊಡಿಸಿ ಮೂರುಗಂಟುಗಳನ್ನು ಹಾಕುವ ಮೂಲಕ ವಿವಾಹ ಬಂಧನಕ್ಕೆ ಒಳಗಾಗುತ್ತಾನೆ. ಈ ಶುಭಸಂದರ್ಭದಲ್ಲಿ ದೇವದೇವತೆಯರು ಹಾಜರಾಗಿ ನವದಂಪತಿಗಳನ್ನು ಹರಸುತ್ತಾರೆ ಎಂಬು ನಂಬಲಾಗಿದೆ. ಎಲ್ಲಾ ಕಡೆಯೂ ಇದೇ ಕ್ರಮವನ್ನು ಪಾಲಿಸಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ಸಂಪ್ರದಾಯಗಳಲ್ಲಿ ಮೊದಲ ಗಂಟನ್ನು ಮಾತ್ರ ವರ ಕಟ್ಟಿದರೆ ಮುಂದಿನ ಎರಡು ಗಂಟುಗಳನ್ನು ಆತನ ಅಕ್ಕತಂಗಿಯರು ಅಥವಾ ಮನೆಯ ಇತರ ಸದಸ್ಯರು ಪೂರ್ಣಗೊಳಿಸುತ್ತಾರೆ.

Mangalsutra - The Sacred Symbol of Marriage

ಸಂಪ್ರದಾಯ ಮತ್ತು ಆಚರಣೆಯಲ್ಲಿರುವ ವೈವಿಧ್ಯತೆಯಂತೆಯೇ ಮಂಗಳಸೂತ್ರದ ವಿನ್ಯಾಸವೂ ಭಿನ್ನವಾಗಿರುತ್ತದೆ. ಪ್ರಮುಖವಾಗಿ ಕಪ್ಪುಮಣಿ ಅಥವಾ ಕರಿಮಣಿಗಳನ್ನು ಪೋಣಿಸಿ ಎರಡು ಎಳೆಗಳಲ್ಲಿ ಹೆಣೆದ ದಾರದ ನಡುವೆ ಒಂದು ಪದಕವಿರುತ್ತದೆ. ಕೆಲವೊಮ್ಮೆ ಈ ಕರಿಮಣಿಗಳ ನಡುವೆ ಚಿನ್ನದ ಚಿಕ್ಕ ಚಿಕ್ಕ ಮಣಿಗಳನ್ನು ಪೋಣಿಸಿ ನಡುವೆ ಚಿನ್ನದ ಪದಕವನ್ನು ಅಳವಡಿಸಿರಲಾಗುತ್ತದೆ.

ಈ ಮಂಗಳಸೂತ್ರವನ್ನು ಸೌಂದರ್ಯದ ಪ್ರತೀಕಕ್ಕಿಂತಲೂ ಹೆಚ್ಚಾಗಿ ವೈವಾಹಿಕ ಬಂಧನವನ್ನು ಉಳಿಸಿಕೊಳ್ಳುವ ದೈವಿಕ ಪರಿಕರವೆಂದೇ ವಿವಾಹಿತ ಮಹಿಳೆಯರು ಪರಿಗಣಿಸುವುದರಿಂದ ಈ ಆಭರಣವನ್ನು ಎಂದಿಗೂ ತಮ್ಮ ಕೊರಳಲ್ಲಿಯೇ ಧರಿಸಿರುತ್ತಾರೆ. ಇದರಲ್ಲಿರುವ ಪ್ರತಿ ಕರಿಮಣಿಯೂ ದುಷ್ಟಶಕ್ತಿಗಳಿಂದ ಸಂಸಾರವನ್ನು ರಕ್ಷಿಸುವ, ವಿಶೇಷವಾಗಿ ಪತಿಯ ಆಯಸ್ಸನ್ನು ಹೆಚ್ಚಿಸುವ ಶಕ್ತಿ ಹೊಂದಿದೆ ಎಂದು ಭಾವಿಸಲಾಗುತ್ತದೆ. ಎಲ್ಲಾದರೂ ತಪ್ಪಿ ಇದರ ಒಂದು ಮಣಿ ಕಳೆದುಹೋದರೂ ಮಹಿಳೆಯರು ತುಂಬಾ ವ್ಯಾಕುಲರಾಗಿ ಈ ಮಣಿಯು ಅವರ ಮಂಗಳಸೂತ್ರದಲ್ಲಿ ಪುನಃ ಅಳವಡಿಕೆಯಾಗುವವರೆಗೂ ಚಡಪಡಿಸುತ್ತಲೇ ಇರುವುದನ್ನು ಗಮನಿಸಿದರೆ ಇದರ ಪ್ರಾಮುಖ್ಯತೆಯನ್ನು ಅಳೆಯಬಹುದು.

ಇಂದು ಮಂಗಳಸೂತ್ರಗಳು ವಿವಿಧ ವಿನ್ಯಾಸ ಮತ್ತು ಬೆಲೆಗಳಲ್ಲಿ ಲಭ್ಯವಾಗುತ್ತಿವೆ. ಗುಜರಾತಿ ಮತ್ತು ಮಾರವಾಡಿ ಜನರು ವಜ್ರದ ಪದಕವನ್ನು ಅಳವಡಿಸಿಕೊಂಡ ಮಂಗಳಸೂತ್ರವನ್ನು ಆಯ್ಕೆ ಮಾಡಿಕೊಂಡರೆ ಮಹಾರಾಷ್ಟ್ರ ರಾಜ್ಯದವರು ಪದಕದಲ್ಲಿ ಒಂದು ಅಥವಾ ಎರಡು ಗೋಲಗಳುಳ್ಳ (ಇದಕ್ಕೆ ವಾಟಿ ಎಂದೂ ಕರೆಯುತ್ತಾರೆ) ಪದಕಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇತ್ತೀಚಿನ ವಿನ್ಯಾಸಗಳಲ್ಲಿ ಹವಳಗಳನ್ನೂ ಅಳವಡಿಸಿಕೊಳ್ಳಲಾಗುತ್ತಿದೆ. ಮಂಗಳಸೂತ್ರ ಕೇವಲ ಹಿಂದೂ ಸಂಪ್ರದಾಯದಲ್ಲಿ ಮಾತ್ರವಲ್ಲದೇ ಇನ್ನೂ ಹಲವು ಸಂಪ್ರದಾಯಗಳಲ್ಲಿಯೂ ಬಳಕೆಯಾಗುತ್ತಿದೆ. ಜೈನರು, ಸಿಕ್ಖರು ಮತ್ತು ಮುಸ್ಲಿಮರ ಕೆಲವು ಒಳಪಂಗಡಗಳಲ್ಲಿಯೂ ಬಳಕೆಯಾಗುತ್ತದೆ. ಮುಸ್ಲಿಮರಲ್ಲಿ ಇದನ್ನು ಲಚ್ಛಾ ಎಂದು ಕರೆದರೆ ಗೋವಾದ ಕ್ರಿಶ್ಚಿಯನ್ನರು ಇದನ್ನು ಧಾರೆಮಣಿ ಎಂದು ಕರೆಯುತ್ತಾರೆ.

English summary

Mangalsutra - The Sacred Symbol of Marriage

A Hindu marriage symbolizes not just coming together of two individuals, but also the bonding of understanding, commitment, mutual love, oneness and spiritual growth. Traditionally, Hindu marriage is much more than just celebration and fun It demands sacrifice, companionship, dedication, and devotion from both the partners.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X