For Quick Alerts
ALLOW NOTIFICATIONS  
For Daily Alerts

ನಮಗೆ ನಾವೇ ಕ್ವಾರಂಟೈನ್ ಮಾಡಿಕೊಳ್ಳುವುದು ಹೇಗೆ?

|

ಕೋವಿಡ್10 ಅಥವಾ ಕೊರೋನಾ ವೈರಸ್ ವಿಶ್ವವನ್ನೇ ತಲ್ಲಣಗೊಳಿಸಿ ಸ್ಥಗಿತಗೊಳಿಸಿದ ಸಾಂಕ್ರಾಮಿಕ ಸೋಂಕು ಇಂದು ಭರದಿಂದ ಎಲ್ಲೆಡೆ ಹರಡುತ್ತಿದೆ. ಹೀಗಾಗಬಾರದು ಎಂದೇ ವಿಶ್ವದ ಎಲ್ಲಾ ದೇಶಗಳು ಒಟ್ಟಾಗಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನಗಳನ್ನು ಅನುಷ್ಠಾನಕ್ಕೆ ತಂದಿವೆ. ಲಾಕ್ ಡೌನ್ ಅಥವಾ ಪರಿಪೂರ್ಣ ನಿರ್ಬಂಧ ಇದರಲ್ಲೊಂದು ಕ್ರಮ.

quarantine tips

ಖಂಡಿತವಾಗಿಯೂ ಈ ಕ್ರಮ ಯಾರಿಗೂ ಇಷ್ಟವಿಲ್ಲದ ಮತ್ತು ಅಸಂಖ್ಯಾತ ಪರೋಕ್ಷ ತೊಂದರೆಗಳಿಗೆ ಕಾರಣ ಹೌದು. ಆದರೂ ವೈರಸ್ ಸೋಂಕು ಹರಡದೇ ಇರಲು ಈ ಕ್ರಮ ಅನಿವಾರ್ಯ. ದೇಹದ ಪ್ರಧಾನಿಗಳೇ ಈ ಕ್ರಮವನ್ನು ಅನುಷ್ಠಾನಗೊಳಿಸಿ ಪ್ರಜೆಗಳಲ್ಲಿ ನಿವೇದಿಸಿಕೊಳ್ಳುತ್ತಾರೆಂದರೆ ಇದರ ಗಂಭೀರತೆಯನ್ನು ಅರಿತುಕೊಳ್ಳಬಹುದು. ಹಾಗಾಗಿ, ದೇಶದ ಕಾನೂನು ಅನ್ವಯಿಸಿದ ಕಟ್ಟುಪಾಡುಗಳನ್ನು ಅನುಸರಿಸುವುದು ಪ್ರಜೆಗಳಾಗಿ ನಮ್ಮೆಲ್ಲರ ಕರ್ತವ್ಯವೂ ಹೌದು.

ಇದಕ್ಕೆ ಸಹಕಾರಿಯಾಗಿ, ಸೋಂಕು ಹರಡುವುದನ್ನು ತಪ್ಪಿಸಲು ನಮಗೆ ನಾವೇ ಹೇರಿಕೊಳ್ಳುವ ಪ್ರತ್ಯೇಕಿಸುವಿಕೆಯನ್ನು (ಅಥವಾ ಕ್ವಾರಂಟೈನ್) ಸ್ವಯಂ-ಪ್ರತ್ಯೇಕಿಸುವಿಕೆ ಅಥವಾ ಸ್ವಯಂ-ಪ್ರತಿಬಂಧ (self-quarantine) ಎಂದು ಕರೆಯಬಹುದು. ಹೀಗೆ ನಮ್ಮನ್ನು ನಾವೇ ಇತರರಿಂದ ಪ್ರತ್ಯೇಕಿಸಿಕೊಳ್ಳುವ ಮೂಲಕ ನಮ್ಮಿಂದ ಇತರರಿಗೆ ಹರಡಬಹುದಾಗಿದ್ದ ಸೋಂಕು (ಒಂದು ವೇಳೆ ನಮಗೆ ಈಗಾಗಲೇ ಸೋಂಕು ಎದುರಾಗಿದ್ದರೆ) ಅಥವಾ ಇತರರಿಂದ ನಮಗೆ ಬರಬಹುದಾಗಿದ್ದ ಸೋಂಕಿನಿಂದ (ನಮಗೆ ಸೋಂಕು ಇಲ್ಲದಿದ್ದರೂ ಸೋಂಕು ಇರುವ ಇತರ ವ್ಯಕ್ತಿಗಳ ಒಡನಾಟದಿಂದ) ತಪ್ಪಿಸಿಕೊಳ್ಳಬಹುದು. ಬನ್ನಿ, ಇದನ್ನು ಹೇಗೆ ಸಾಧಿಸುವುದು ಎಂದು ನೋಡೋಣ:

ಮನೆಯಲ್ಲೇ ಇರಿ

ಮನೆಯಲ್ಲೇ ಇರಿ

ನೀವು ವೈದ್ಯರನ್ನು ನೋಡಲೇಬೇಕಾದ ಅನಿವಾರ್ಯತೆ ಎದುರಾಗುವವರೆಗೂ ಮನೆಯಲ್ಲೇ ಇರಿ. ಕೆಲಸ, ಶಾಲೆ ಅಥವಾ ಶಾಪಿಂಗ್ ಮೊದಲಾದ ಎಲ್ಲಾ ಹೊರಾಂಗಣ ಕೆಲಸಗಳಿಗೆ ರಜೆ. ನಿಮ್ಮ ಕೋಣೆಯಿಂದ ನೀವು ಹೊರಗೆ ಬರಬೇಕಾದರೆ, ಮಾಸ್ಕ್ ಧರಿಸಿ. ಮತ್ತು ಟವೆಲ್ ಮೊದಾಲದ ನಿಮ್ಮ ವೈಯಕ್ತಿಕ ವಸ್ತುಗಳನ್ನು ಮನೆಯ ಸದಸ್ಯರೊಂದಿಗೆ ಹಂಚಿಕೊಳ್ಳಬೇಡಿ.

ಕೊರೋನವೈರಸ್ ಸೋಂಕು ಎದುರಾಗಿರುವ ಅನುಮಾನದಿಂದ ನೀವು ಸ್ವಯಂ-ಪ್ರತ್ಯೇಕಿಸುವಿಕೆಗೆ ಒಳಗಾಗಿದ್ದರೆ ನೀವು ಮನೆಯಲ್ಲಿದ್ದಷ್ಟೂ ಹೊತ್ತು ಅವಶ್ಯಕವಾಗಿ ಅನ್ವಯಿಸಿಕೊಳ್ಳಬೇಕಾದ ಕೆಲವು ನಿಯಮಗಳು ಹೀಗಿವೆ:

  • ಸ್ವಯಂ-ಪ್ರತ್ಯೇಕಿಸುವಿಕೆ ಅನುಸರಿಸಿ ತಮ್ಮನ್ನು ತಾವು ಪ್ರತ್ಯೇಕವಾಗಿರಲು ಅಥವಾ ಮನೆಯಲ್ಲೇ ಇರುವಂತೆ ಚೀನಾ ಮತ್ತು ಇರಾನ್‌ನ ಕೆಲವು ಭಾಗಗಳಿಂದ ಹಿಂದಿರುಗಿದ ಜನರನ್ನು ಕೇಳಿಕೊಳ್ಳಲಾಗಿತ್ತು. ಆದರೆ ಈ ಜನರು ನಿಯಮವನ್ನು ಪಾಲಿಸದೇ ಇರುವ ಕಾರಣ ಈ ಸೋಂಕು ಭಾರೀ ವೇಗದಿಂದ ಸಮುದಾಯದಲ್ಲಿ ಪ್ರಸರಣಗೊಂಡು ಈ ಜನರು ಓಡಾಡಿದ ದೇಶಗಳಲ್ಲೆಲ್ಲಾ ಸೋಂಕನ್ನು ಹರಡಿದ್ದರು. ಹೀಗೆ ಹರಡಲು ಮುಖ್ಯ ಕಾರಣವೆಂದರೆ ಈ ವ್ಯಕ್ತಿಗಳು ಸೋಂಕಿಗೆ ಒಳಗಾಗಿದ್ದರೂ ಯಾವುದೇ ಲಕ್ಷಣಗಳನ್ನು ತೋರದಿರುವ ಕಾರಣ ತಮ್ಮಿಂದ ಇತರರಿಗೆ ಸೋಂಕು ಹರಡಬಹುದೆಂದೇ ಇವರಿಗೆ ತಿಳಿದಿರಲಿಲ್ಲ.
  • ಇದು ವಾಸ್ತವದಲ್ಲಿ ಹೊರಗೆಲ್ಲೂ ಹೋಗದೇ ಮನೆಯಲ್ಲಿಯೇ ಆರಾಮವಾಗಿರುವ ರಜೆಯಂತೆ ಕಾಣಿಸಬಹುದು, ಇದು ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ಸಿನೆಮಾಗಳನ್ನು ನೋಡಲು ಮತ್ತು ಹೆಚ್ಚು ಸಮಯ ನಿದ್ರಿಸಲು ಸೂಕ್ತ ಸಮಯ ಎಂದೇ ಹೆಚ್ಚಿನವರು ಭಾವಿಸುತ್ತಾರೆ. ವಾಸ್ತವದಲ್ಲಿ ನಿಮ್ಮನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಂದ ದೂರವಿರಿಸುವುದು ಹೇಳಿದಷ್ಟು ಸುಲಭವಲ್ಲ. ಏಕೆಂದರೆ ಪ್ರತ್ಯೇಕಗೊಂಡ ಅವಧಿಯಲ್ಲಿಯೂ ನಿಮಗೆ ಅಗತ್ಯವಿರುವ ಆಹಾರ, ನಿತ್ಯದ ವಸ್ತುಗಳ ಪೂರೈಕೆ ಮೊದಲಾದವು ಪ್ರಾಯೋಗಿಕವಾಗಿ ನಿರ್ವಹಿಸುವುದು ಸವಾಲಾಗಬಹುದು ಮತ್ತು ನೀರಸವಾದ ಕಾಯುವಿಕೆ ಈ ಅವಧಿಯನ್ನು ಇನ್ನಷ್ಟು ಕಠಿಣವಾಗಿಸುತ್ತದೆ.
  • ಮನೆಯಲ್ಲಿ ಪ್ರತ್ಯೇಕವಾಗಿರುವ ನಿಯಮಗಳು ಕಠಿಣವಾಗಬಹುದು ಮತ್ತು ಇದು ಸಾಮಾನ್ಯವಾಗಿ ಎರಡು ವಾರಗಳವರೆಗೆ ಇರುತ್ತದೆ, ಈ ಅವಧಿಯಲ್ಲಿ, ಒಂದು ವೇಳೆ ನೀವು ಸೋಂಕಿಗೆ ಒಳಗಾಗಿದ್ದರೆ ವೈರಸ್ ನಿಮ್ಮ ದೇಹದ ತೇವ ಭಾಗಗಳಲ್ಲಿ ಅತಿ ಹೆಚ್ಚಾಗಿ ಅಭಿವೃದ್ದಿಗೊಳ್ಳುತ್ತದೆ. ಆ ಬಳಿಕವೇ ನಿಮಗೆ ಸೋಂಕಿನ ಲಕ್ಷಣಗಳು ಎದುರಾಗಬಹುದು. ಅಂದರೆ ಸೋಂಕು ತಗುಲಿದ ದಿನದಿಂದ ಪ್ರಾರಂಭಿಸಿ ಎಂಟರಿಂದ ಹತ್ತು ದಿನಗಳ ಬಳಿಕ! ಸೂಕ್ತ ಚಿಕಿತ್ಸೆಗಳೊಂದಿಗೆ ಈ ಲಕ್ಷಣಗಳು ಹದಿನಾಲ್ಕನೆಯ ದಿನಕ್ಕೆ ಇಳಿಮುಖವಾಗುತ್ತವೆ. ಹಾಗಾಗಿ, ನಿಮಗೆ ಸೋಂಕು ತಗುಲಿರುವ ಎಳ್ಳಷ್ಟೂ ಅನುಮಾನವಿದ್ದರೆ ಸ್ವಯಂ-ಪ್ರತ್ಯೇಕಿಸಿಕೊಳ್ಳುವಿಕೆಗೆ ಒಳಗಾಗುವುದು ಅನಿವಾರ್ಯ. ಮನೆಯಲ್ಲಿ ನೀವು ಕಾಳಜಿ ವಹಿಸುವ ಚಿಕ್ಕ ಮಕ್ಕಳು ಅಥವಾ ವಯಸ್ಸಾಗಿರುವ ಹಿರಿಯ ನಾಗರಿಕರಿದ್ದರೆ, ಅಥವಾ ಒಂದೇ ಕೋಣೆಯಲ್ಲಿ ಹಲವು ರೂಮ್‌ಮೇಟ್‌ಗಳೊಂದಿಗೆ ಇಕ್ಕಟ್ಟಾದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರೆ ಅದು ಈ ಪ್ರತ್ಯೇಕಿಸುವಿಕೆಯನ್ನು ಸಾಧಿಸುವುದು ದೊಡ್ಡ ಸವಾಲಾಗುತ್ತದೆ.
  • ಪ್ರತ್ಯೇಕಿಸಿಕೊಳ್ಳುವಿಕೆ (isolation)

    ಪ್ರತ್ಯೇಕಿಸಿಕೊಳ್ಳುವಿಕೆ (isolation)

    • ನೀವು ಸೋಂಕಿಗೆ ಒಳಗಾಗಿರುವುದು ಖಚಿತವಾಗಿದ್ದರೆ ಅಥವಾ ಕೊರೋನವೈರಸ್‌ಗೆ ಸೋಂಕು ಇರುವ ವ್ಯಕ್ತಿಗಳ ಒಡನಾಟದಲ್ಲಿದ್ದರೆ, ನಿಮ್ಮ ಸಂಗಾತಿ, ನಿಮ್ಮ ಜೊತೆಗೆ ಕೋಣೆಯಲ್ಲಿರುವವರು, ನಿಮ್ಮ ಮಕ್ಕಳು, ನಿಮ್ಮ ವಯಸ್ಸಾದ ಸಂಬಂಧಿಗಳಿಂದ ನೀವು ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಕು. ನಿಮ್ಮ ನಾಯಿಯನ್ನು ಸಹ ನೀವು ಮುಟ್ಟುವಂತಿಲ್ಲ. ಮತ್ತು ಖಂಡಿತವಾಗಿಯೂ ನಿಮ್ಮ ಸಾಕುಪ್ರಾಣಿಯನ್ನು ನಿಮ್ಮ ಕೋಣೆಯೊಳಗೆ ಇರಿಸಿಕೊಳ್ಳಲು ಸಾಧ್ಯವಿಲ್ಲ.
    • ನಿಮ್ಮ ಸ್ವಂತ ಕೋಣೆ ಇಲ್ಲದಿದ್ದರೆ, ಈ ಅವಧಿಯ ವಿಶೇಷ ಬಳಕೆಗಾಗಿ ಒಂದನ್ನು ಗೊತ್ತುಪಡಿಸಬೇಕು. ನಿಮ್ಮದೇ ಕೋಣೆ ಇದ್ದು ಪ್ರತ್ಯೇಕ ಸ್ನಾನಗೃಹವಿಲ್ಲದಿದ್ದರೆ ನೀವು ಬೇರೆಯದೇ ಆದ ಪ್ರತ್ಯೇಕ ಸ್ನಾನಗೃಹವನ್ನು ಬಳಸಬೇಕು.
    • ಯಾವುದೇ ಸಂದರ್ಶಕರು ಮತ್ತು ಸಿಬ್ಬಂದಿಗಳ ಒಡನಾಟಕ್ಕೆ ಸಂಪೂರ್ಣ ನಿಷೇಧ ಇರಬೇಕು. ಅತ್ಯಗತ್ಯ ಎನಿಸಿದರೆ ಗರಿಷ್ಟ ಅಂತರದಲ್ಲಿ ಮಾತ್ರವೇ ಭೇಟಿಯಾಗಿ ಬಸ್, ಟ್ಯಾಕ್ಸಿ, ಆಟೋ ಅಥವಾ ಸಬ್‍ವೇ ಮೊದಲಾದ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಹೋಗದಿರಿ.
    • ತೀರಾ ಅನಿವಾರ್ಯ ಎನಿಸದ ಹೊರತು ಹೊರಗೆ ಹೋಗದಿರಿ. ಅದೂ ಈ ಅನಿವಾರ್ಯತೆ ವೈದ್ಯರನ್ನು ಕಾಣಲೇಬೇಕಾದ ತುರ್ತು ಸ್ಥಿತಿ ಇದ್ದರೆ ಮಾತ್ರ! ನೀವಾಗಿ ವೈದ್ಯರನ್ನು ಕಾಣಲು ಹೋಗುವ ಮುನ್ನ ನಿಮ್ಮ ವೈದ್ಯರೊಂದಿಗೆ ಪರಾಮರ್ಶಿಸಿ ವೈದ್ಯರು ತಕ್ಷಣವೇ ಆಸ್ಪತ್ರೆಗೆ ಬರುವಂತೆ ತಿಳಿಸಿದಾಗ ಮಾತ್ರವೇ ಹೋಗಬೇಕೇ ವಿನಃ ನೀವಾಗಿ ಮೊದಲು ಹೋಗಬಾರದು. ಹೀಗೆ ಹೋಗಬೇಕಾದ ಅನಿವಾರ್ಯತೆ ಇದ್ದಾಗ ಮಾಸ್ಕ್ ಧರಿಸಿ, ನಿಮ್ಮೊಂದಿಗೆ ಹೋಗಲಿರುವ ಪ್ರತಿಯೊಬ್ಬರೂ ಮಾಸ್ಕ್ ಮತ್ತು ಕೈಗವಸುಗಳನ್ನು ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಿ.
    • ಸಾಮಾನ್ಯವಾಗಿ ಮಾಸ್ಕ್ ನ ಹೆಚ್ಚಿನ ಸಂಗ್ರಹ ನಿಮ್ಮಲ್ಲಿ ಇರುವುದಿಲ್ಲ. ಆದ್ದರಿಂದ ವೈದ್ಯರಲ್ಲಿ ಹೋಗುವ ಮುನ್ನ ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಗೆ ಸಾಕಷ್ಟು ಮಾಸ್ಕ್ ಮತ್ತು ಕೈಗವಸುಗಳನ್ನು ತರುವಂತೆ ಕೇಳಿಕೊಳ್ಳಿ. ಈಗ ಪರಿಸ್ಥಿತಿ ಸುಧಾರಿಸಿದ್ದು ಎಲ್ಲೆಡೆ ಇವು ಸುಲಭ ಬೆಲೆಗೆ ದೊರಕುತ್ತಿವೆ.
    • ಸ್ವಚ್ಛತೆ (​Hygiene)

      ಸ್ವಚ್ಛತೆ (​Hygiene)

      • ಒಂದು ವೇಳೆ ನಿಮಗೆ ಕೆಮ್ಮು ಅಥವಾ ಸೀನು ಎದುರಾದರೆ, ನೀವು ನಿಮ್ಮ ಮುಖ ಮತ್ತು ಮೂಗನ್ನು ಕಡ್ಡಾಯವಾಗಿ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳಬೇಕು ಮತ್ತು ಈ ಕಾಗದವನ್ನು ತಕ್ಷಣವೇ ವಿಸರ್ಜಿಸಬೇಕು. ಹಾಗಾಗಿ ನಿಮ್ಮ ಜೇಬಿನಲ್ಲಿ ಟಿಶ್ಯೂವಿನ ಒಂದು ಚಿಕ್ಕ ಪೊಟ್ಟಣ, ತೆರೆದ ಸ್ಥಿತಿಯಲ್ಲಿ, ಮುಂದಿನ ಟಿಶ್ಯೂವನ್ನು ತಕ್ಷಣವೇ ತೆರೆಯಲು ಸಾಧ್ಯವಾಗುವಂತಹ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಪ್ರಾಥಮಿಕ ಅಗತ್ಯವಾಗಿದೆ. ಆ ಕ್ಷಣದಲ್ಲಿ ಟಿಶ್ಯೂ ಅಥವಾ ಯಾವುದೇ ಬಟ್ಟೆ ಸಿಗದೇ ಇದ್ದರೆ ತಕ್ಷಣ ನಿಮ್ಮ ಕೈಯನ್ನು ಮಡಚಿ ಮೊಣಕೈ ಭಾಗ ಮೂಗಿಗೆ ಅಡ್ಡ ಬರುವಂತೆ ಇರಿಸಿ ಸೀನಬೇಕು. ಆದಷ್ಟೂ ಮರುಕ್ಷಣವೇ ಶೌಚಾಲಯಕ್ಕೆ ಹೋಗಿ ಕೈ ಮುಖ ಮೊಣಕೈಗಳನ್ನು ಸೋಪು ಬಳಸಿ ಸ್ವಚ್ಛಗೊಳಿಸಬೇಕು. ಹೀಗೆ ಸ್ವಚ್ಛಗೊಳಿಸುವಾಗ ಕನಿಷ್ಟ ಇಪ್ಪತ್ತು ಸೆಕೆಂಡುಗಳಾದರೂ ಎಲ್ಲಾ ಭಾಗಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು.
      • ನೀರು ಮತ್ತು ಸೋಪು ಆ ಕ್ಷಣದಲ್ಲಿ ಲಭ್ಯವಿಲ್ಲದೇ ಇದ್ದರೆ ತಕ್ಷಣ ಹ್ಯಾಂಡ್ ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸಿಕೊಳ್ಳಬೇಕು. ನೆನಪಿರಲಿ, ಸ್ಯಾನಿಟೈಸರ್ ಎಂದಿಗೂ ಸೋಪು ಮತ್ತು ನೀರಿನಿಂದ ಸ್ವಚ್ಛಗೊಳಿಸುವಿಕೆಗೆ ಪರಿಪೂರ್ಣ ಪರ್ಯಾಯವಲ್ಲ! ನೀರು ಮತ್ತು ಸೋಪು ಅಲಭ್ಯವಿರುವ ಸಂದರ್ಭಗಳಲ್ಲಿ ಸೋಂಕು ಹರಡುವಿಕೆಯ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆಯೇ ವಿನಃ ಸೋಂಪಿನಂತೆ ವೈರಸ್ಸುಗಳನ್ನು ಪರಿಪೂರ್ಣವಾಗಿ ಕೈಗಳಿಂದ ನಿವಾರಿಸುವುದಿಲ್ಲ. ಹಾಗಾಗಿ ಸ್ಯಾನಿಟೈಸರ್ ಬಳಸಿದರೂ ಮುಂದಿನ ಕ್ಷಣದಲ್ಲಿ ನೀರು ಮತ್ತು ಸೋಪು ಲಭ್ಯವಾದ ತಕ್ಷಣ ಮತ್ತೊಮ್ಮೆ ತೊಳೆದುಕೊಳ್ಳಬೇಕು.
      • ಕೆಮ್ಮು ಮತ್ತು ಸೀನುವಿಕೆ ಇಲ್ಲದಿದ್ದರೂ ಸರಿ, ನೀವು ಆಗಾಗ ನೀರು ಮತ್ತು ಸೋಪು ಬಳಸಿ ಕೈಗಳನ್ನು ತೊಳೆದುಕೊಳ್ಳುತ್ತಲೇ ಇರಬೇಕು. ಕಣ್ಣು, ಮೂಗು ಮತ್ತು ಬಾಯಿಗಳನ್ನು ಸ್ಪರ್ಶಿಸುವುದನ್ನು ಆದಷ್ಟೂ ತಪ್ಪಿಸಿ. ಮುಟ್ಟಿಕೊಳ್ಳಬೇಕಾದ ಸಂದರ್ಭವಿದ್ದರೆ ಇದಕ್ಕೂ ಮುನ್ನ ಕೈಗಳನ್ನು ತೊಳೆದುಕೊಳ್ಳಿ. (ಉದಾಹರಣೆಗೆ ಕಣ್ಣಿಗೆ ಡ್ರಾಪ್ಸ್ ಹಾಕುವುದು)
      • ಸೋಂಕುನಿವಾರಕ ಕ್ರಮ (​Disinfect)

        ಸೋಂಕುನಿವಾರಕ ಕ್ರಮ (​Disinfect)

        • ನಿಮ್ಮ ನಿತ್ಯ ಬಳಕೆಯ ತಟ್ಟೆ, ನೀರು ಕುಡಿಯುವ ಲೋಟ, ಕಪ್, ಚಮಚ, ಟವೆಲ್, ನೀವು ಮಲಗುವ ಹಾಸಿಗೆಯ ಹೊದಿಕೆ ಮೊದಲಾದ ಯಾವುದೇ ವಸ್ತುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳದಿರಿ. ಪ್ರತಿ ಬಾರಿ ಬಳಸಿದ ಬಳಿಕವೂ ಇವುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.
        • ನಿಮ್ಮ ಮನೆಯ ಎಲ್ಲಾ ಸದಸ್ಯರು ಸಾಮಾನ್ಯವಾಗಿ ಮುಟ್ಟುವ ಮೇಜು, ಕುರ್ಚಿಗಳು, ನಲ್ಲಿಗಳ ತಿರುಪಣೆ, ಬಾಗಿಲ ಹಿಡಿಕೆ, ಡೋರ್ ಬೆಲ್, ಫೋನು, ಟ್ಯಾಬ್ಲೆಟ್, ಕೀಬೋರ್ಡ್ ಮೊದಲಾದ ಯಾವುದೇ ವಸ್ತುಗಳ ಮೇಲ್ಮೈಗಳನ್ನು (ಇವನ್ನು "high-touch surfaces" ಎಂದು ಪರಿಗಣಿಸಲಾಗುತ್ತದೆ) ಸ್ಪರ್ಶಿಸಿದ ಬಳಿಕ ಸ್ವಚ್ಛಗೊಳಿಸಿ ಹಾಗೂ ಉಪಯೋಗಿಸುವ ಮೊದಲೂ ಸ್ವಚ್ಛಗೊಳಿಸಿಯೇ ಸ್ಪರ್ಶಿಸಿ. ಸಾಧ್ಯವಾದಷ್ಟೂ ಈ ಮೇಲ್ಮೈಗಳನ್ನು ಸ್ಪರ್ಶಿಸುವ ಸಂದರ್ಭದಲ್ಲಿ ಕೈಗವಸು ಬಳಸಿ.
        • ದೇಹದ ಸ್ರಾವಗಳು ಬೀಳುವ (ಉದಾಹರಣೆಗೆ ರಕ್ತ, ಜೊಲ್ಲು, ಕಫ, ಮಲ) ಯಾವುದೇ ಸ್ಥಳಗಳನ್ನು ಆದಷ್ಟೂ ಬೇಗನೇ ಸ್ವಚ್ಛಗೊಳಿಸಿ ನೆಲವನ್ನು ಸೋಂಕುನಿವಾರಕ ದ್ರಾವಣದಿಂದ ಒರೆಸಿ. ಕೆಲವರಿಗೆ ಮನೆಯಿಂದ ಅಂಗಳಕ್ಕೆ ಉಗಿಯುವ ಅಭ್ಯಾಸವಿರುತ್ತದೆ. ಈ ಅಭ್ಯಾಸವನ್ನು ತಕ್ಷಣದಿಂದ ನಿಲ್ಲಿಸಬೇಕು ಹಾಗೂ ಅರಿವಿಲ್ಲದೇ ಉಗಿದಿದ್ದರ್ರೆ ಆದಷ್ಟೂ ಬೇಗನೇ ಸ್ವಚ್ಛಗೊಳಿಸಬೇಕು.
        • ಪರಿಶೀಲನೆ (​Monitoring)

          ಪರಿಶೀಲನೆ (​Monitoring)

          • ನಿಮ್ಮ ಆರೋಗ್ಯವನ್ನು ಸತತವಾಗಿ ಪರಿಶೀಲಿಸುತ್ತಾ ಮಾಹಿತಿಗಳನ್ನು ದಾಖಲಿಸಿ. ಒಂದು ವೇಳೆ ಈ ಲಕ್ಷಣಗಳು ಉಲ್ಬಣಗೊಳ್ಳುತ್ತಿವೆ ಎನಿಸಿದರೆ ತಕ್ಷಣ ವೈದ್ಯರಿಗೆ ಕರೆ ಮಾಡಿ. ಪ್ರತಿದಿನವೂ ನಿಮ್ಮ ದೇಹದ ತಾಪಮಾನವನ್ನು ದಾಖಲಿಸಿಕೊಳ್ಳುವ ಮೂಲಕ ವೈದ್ಯರಿಗೆ ಅಮೂಲ್ಯವಾದ ಮಾಹಿತಿ ಲಭಿಸುತ್ತದೆ.
          • ನಿಮ್ಮ ಎಲ್ಲಾ ಸಹವರ್ತಿಗಳಿಗೆ ನಿಮ್ಮ ಆರೋಗ್ಯವನ್ನು ಕೊರೋನಾ ಸೋಂಕಿಗಾಗಿ ಪರಿಶೀಲಿಸಲಾಗುತ್ತಿದೆ ಎಂಬುದನ್ನು ತಿಳಿಸಿ
          • ಮನೆಯ ಸದಸ್ಯರು

            ಮನೆಯ ಸದಸ್ಯರು

            • ನೀವು ವಾಸಿಸುವ ಮನೆಯ ಸದಸ್ಯರು ಅಥವಾ ಒಂದೇ ಕೋಣೆಯನ್ನು ಹಲವರು ಹಂಚಿಕೊಳ್ಳುತ್ತಿದ್ದರೆ ಎಲ್ಲರ ಆರೋಗ್ಯದ ಮಾಹಿತಿಗಳನ್ನು ದಾಖಲಿಸುವುದು ಅಗತ್ಯ. ಇವರಲ್ಲಿ ಯಾರದ್ದೇ ಆದರೂ ಆರೋಗ್ಯದ ಲಕ್ಷಣಗಳಲ್ಲಿ ಏರುಪೇರು ಕಾಣಿಸಿಕೊಂಡರೆ ಆರೋಗ್ಯ ಸಂಸ್ಥೆಗೆ ಕರೆ ಮಾಡಬೇಕು.
            • ನಿಮ್ಮ ಮನೆಯ ಇತರ ಸದಸ್ಯರು ಅಥವಾ ನಿಮ್ಮ ಕೋಣೆಯಲ್ಲಿರುವ ಇತರರು ತಮ್ಮ ನಿತ್ಯದ ಕಛೇರಿ ಅಥವಾ ಸ್ಥಳಗಳಿಗೆ ತೆರಳಬಹುದು. ಆದರೆ ಈ ವ್ಯಕ್ತಿಗಳು ಮನೆಗೆ ಹಿಂದಿರುಗಿದ ಬಳಿಕ ಎಲ್ಲಾ ಸ್ವಚ್ಛತಾಕ್ರಮಗಳನ್ನು ಪಾಲಿಸುವುದು ಅಗತ್ಯ. ವಿಶೇಷವಾಗಿ, ಮನೆಯ ದಿನಸಿ ಸಾಮಾನು, ಔಷಧಿಗಳನ್ನು ತರುವವರು ಅಥವಾ ಸೋಂಕಿಗೆ ಒಳಗಾದ ವ್ಯಕ್ತಿಗಳ ಆರೈಕೆ ನೋಡಿಕೊಳ್ಳುವ ವ್ಯಕ್ತಿಗಳು ಈ ಸ್ವಚ್ಛತೆಯನ್ನು ಅತಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಬಾರಿ ಬಾಗಿಲ ಹಿಡಿಕೆಗಳನ್ನು ಸ್ಪರ್ಶಿಸಿದ ಬಳಿಕ ಇವನ್ನು ಸ್ವಚ್ಛಗೊಳಿಸಬೇಕು, ಹೊರಗಿನಿಂದ ಬಂದ ತಕ್ಷಣ ತೊಟ್ಟ ಬಟ್ಟೆಗಳೆಲ್ಲವನ್ನೂ ಒಗೆಯಲು ಹಾಕಬೇಕು. ಕೈಗಳನ್ನು ಆದಷ್ಟೂ ಹೆಚ್ಚು ಹೆಚ್ಚು ಬಾರಿ ತೊಳೆದುಕೊಳ್ಳುವುದು ಅಗತ್ಯ.
            • ಅನಿವಾರ್ಯ ಕಾರಣಗಳಿಂದ ರೋಗಿಯ (ಅಥವಾ ಸ್ವಯಂ-ಪ್ರತ್ಯೇಕಿಸುವಿಕೆಗೆ ಒಳಗಾದ) ವ್ಯಕ್ತಿಯ ಬಳಿ ಸಾಗಬೇಕಾದರೆ ಮನೆಯ ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ರೋಗಿಯ ಯಾವುದೇ ವಸ್ತುಗಳನ್ನು ಅಥವಾ ರೋಗಿಯ ದೇಹದ ವಿಸರ್ಜನೆಗಳನ್ನು ಅಥವಾ ದ್ರವಗಳನ್ನು ಸಂಗ್ರಹಿಸಲು ಕಡ್ಡಾಯವಾಗಿ ಕೈಗವಸು ಧರಿಸಬೇಕು. ಈ ಮಾಸ್ಕ್ ಮತ್ತು ಗವಸುಗಳನ್ನು ಸ್ವಚ್ಛತಾಕಾರ್ಯ ಮುಗಿದ ತಕ್ಷಣವೇ ವಿಸರ್ಜಿಸಬೇಕು, ಯಾವುದೇ ಕಾರಣಕ್ಕೂ ಮರುಬಳಸಬಾರದು.
            • ಮನೆಯ ಹಿರಿಯ ಸದಸ್ಯರು ಮತ್ತು ಗಂಭೀರ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳು ಈ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿ ಹೊಂದಿರುವ ಕಾರಣ ಇವರ ಬಳಿ ಬರುವುದನ್ನು ಆದಷ್ಟೂ ತಡೆಯಬೇಕು.
            • ಉಳಿದ ಆರೋಗ್ಯವಂತ ಸದಸ್ಯರು ತಮ್ಮ ಕೈಗಳನ್ನು ಆಗಾಗ ತೊಳೆದುಕೊಳ್ಳುತ್ತಿದ್ದು ಮೂಗು, ಕಣ್ಣು ಬಾಯಿಗಳನ್ನು ಸ್ಪರ್ಶಿಸದೇ ಇರಲು ಯತ್ನಿಸಬೇಕು. ಈ ವ್ಯಕ್ತಿಗಳು ಸೋಂಕಿಗೆ ಒಳಗಾದ ವ್ಯಕ್ತಿ ಇರುವ ಕೋಣೆಗೆ ಆದಷ್ಟೂ ದೂರವಿರುವ ಕೋಣೆಯಲ್ಲಿ ಪ್ರತ್ಯೇಕವಾಗಿರಬೇಕು. ಸಾಧ್ಯವಿದ್ದರೆ ಸೋಂಕಿತ ವ್ಯಕ್ತಿಗೆ ಪ್ರತ್ಯೇಕ ಸ್ನಾನ ಮತ್ತು ಶೌಚಗೃಹವನ್ನು ಒದಗಿಸಿ ಉಳಿದವರು ಬೇರೆಯೇ ಸ್ನಾನ ಮತ್ತು ಶೌಚಗೃಹಗಳನ್ನು ಬಳಸಬೇಕು.
            • ಇವರು ಸಹಾ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆರೋಗ್ಯದ ಮಾಹಿತಿಗಳನ್ನು ತಪ್ಪದೇ ದಾಖಲಿಸಬೇಕು. ಕೆಮ್ಮು, ಜ್ವರ ಅಥವಾ ಉಸಿರಾಡಲು ಕಷ್ಟವಾಗುವುದು ಮೊದಲಾದ ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು.
            • ಸಾಮಾನ್ಯವಾಗಿ ಉತ್ತರ ದೊರಕದೇ ಇರುವ ಪ್ರಶ್ನೆಗಳು

              ಸಾಮಾನ್ಯವಾಗಿ ಉತ್ತರ ದೊರಕದೇ ಇರುವ ಪ್ರಶ್ನೆಗಳು

              • ಸ್ವಯಂ-ಪ್ರತ್ಯೇಕಿಸುವಿಕೆ ಆಯಾ ವ್ಯಕ್ತಿಯ ವೈಯಕ್ತಿಕ ಜಬಾವ್ದಾರಿಯಾಗಿದೆ. ಈ ಮೂಲಕ ಸೋಂಕು ಹರಡದೇ ಇರಲು ತಮ್ಮಿಂದಾದ ಸಹಕಾರ ಮತ್ತು ನೆರವನ್ನು ನೀಡಿದ ಮನಃತೃಪ್ತಿಯೇ ಇದರಿಂದ ದೊರಕುವ ಸಂಭಾವನೆ! ನೀವು ಇದಕ್ಕಾಗಿ ಕೊಂಡ ವಸ್ತುಗಳನ್ನು ಯಾರಿಂದಲೂ ನಗದೀಕರಿಸಲು ಸಾಧ್ಯವಿಲ್ಲ, ಈ ಖರ್ಚುಗಳನ್ನು ನೀವೇ ಭರಿಸಬೇಕು. ಕುಟುಂಬದ ಜೊತೆ ಇದ್ದರೂ, ಒಂಟಿಯಾಗಿದ್ದರೂ ಈ ಕ್ರಿಯೆ ಕಷ್ಟಕರವಂತೂ ಹೌದು. ಆದರೆ ಇದಕ್ಕಾಗಿ ನಿಮಗೆ ಯಾವುದೇ ಸಂಭಾವನೆಯಾಗಲೀ ಹಣವಾಗಲೀ ಸಿಗದು. ಹಾಗಾಗಿ, ಕೆಲವು ವ್ಯಕ್ತಿಗಳು ಸ್ವಯಂ-ಪ್ರತ್ಯೇಕಿಸುವಿಕೆಗೆ ಒಳಗಾಗಲು ಕೊಂಚ ಹಿಂದೇಟು ಹಾಕಬಹುದು.
              • ದೂರದ ಸ್ಥಳದಿಂದ ಕೆಲಸವನ್ನು ನಿರ್ವಹಿಸುವುದು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ. ಉದಾಹರಣೆಗೆ ವಾಹನ ಚಾಲಕ! ಈ ವ್ಯಕ್ತಿಗಳು ಸ್ವಯಂ-ಪ್ರತ್ಯೇಕಿಸುವಿಕೆಗೆ ಒಳಗಾಗುವುದು ಎಂದರೆ ಈ ಹದಿನಾಲ್ಕು ದಿನ ಕಡ್ಡಾಯ ರಜೆ ಮತ್ತು ಈ ರಜೆಯ ಮೂಲಕ ಖೋತಾ ಆಗುವ ಅರ್ಧ ತಿಂಗಳ ವೇತನ, ಚಿಂತೆಗೆ ಕಾರಣವಾಗಬಹುದು.
              • ಆರೋಗ್ಯ ವಿಮೆ ಇಲ್ಲದಿರುವ, ಇದ್ದರೂ ಸಾಕಷ್ಟಿಲ್ಲದ ಅಥವಾ ಇದುವರೆಗೆ ಗಂಭೀರವಾದ ಯಾವುದೇ ಕಾಯಿಲೆಯ ಲಕ್ಷಣವಿಲ್ಲದಿರುವ ವ್ಯಕ್ತಿಗಳು ಸ್ವಯಂ-ಪ್ರತ್ಯೇಕಿಸುವಿಕೆಗೆ ಒಲವು ತೋರದೇ ಇರಬಹುದು. ಒಂದು ವೇಳೆ ಇವರಿಗೆ ಸೋಂಕಿನ ಲಕ್ಷಣಗಳು ಕಂಡುಬಂದರೂ ಖರ್ಚುಗಳಿಗೆ ಹೆದರಿ ಇವರು ಆದಷ್ಟೂ ತಮ್ಮ ಲಕ್ಷಣಗಳು ತೋರಗೊಡದಂತೆ ನಟಿಸುತ್ತಾರೆಯೇ ವಿನಃ ವೈದ್ಯರ ಬಳಿ ಬರುವುದಿಲ್ಲ. ಇಂದು ಸಮಾಜ ಎದುರಿಸುತ್ತಿರುವ ಸೋಂಕಿನ ಅಪಾಯ ಈ ವ್ಯಕ್ತಿಗಳಿಂದಲೇ ಗರಿಷ್ಟವಾಗಿದೆ. ಇವರು ವೈದ್ಯರ ಬಳಿ ಬರದೇ ಇರಲು ಕೇವಲ ಖರ್ಚು ಒಂದೇ ಕಾರಣವಲ್ಲ, ಬದಲಿಗೆ, ಕೆಲಸ ಕಳೆದುಕೊಳ್ಳುವ, ಸೋಂಕು ಇರುವುದು ಗೊತ್ತಾದರೆ ಸಮಾಜ ತನ್ನನ್ನು ಹೇಗೆ ನೋಡುತ್ತದೆ ಎಂಬ ಭೀತಿ, ಗಡೀಪಾರು ಅಥವಾ ದೇಶದಿಂದ ಹಿಂದಿರುಗಿ ಸ್ವದೇಶಕ್ಕೆ ಹೋಗುವಂತೆ ಒತ್ತಡ ಹೇರುವ ಕಾರಣಗಳೂ ಇವೆ. ಆದರೆ, ತನ್ನ ಮತ್ತು ಸಮಾಜದ ಆರೋಗ್ಯ ಉತ್ತಮವಾಗಿರಲು ಪ್ರತಿಯೊಬ್ಬರೂ ಆರೋಗ್ಯ ಸಂಸ್ಥೆ ಒದಗಿಸಿರುವ ಕಟ್ಟುಪಾಡುಗಳನ್ನು ಅನುಸರಿಸುವುದು ಅನಿವಾರ್ಯವೇ ಆಗಿದೆ.
English summary

How to Quarantine Yourself and Keep From Spreading COVID-19

Here we are discussing about How to Quarantine Yourself: Here Are few Tips. If you are among the thousands of people now self-quarantined because of possible infection with the coronavirus, these are a few of the new house rules. Read more.
X
Desktop Bottom Promotion