For Quick Alerts
ALLOW NOTIFICATIONS  
For Daily Alerts

  ಧೂಮಪಾನವನ್ನು ನೈಸರ್ಗಿಕ ವಿಧಾನದಲ್ಲಿ ತ್ಯಜಿಸಲು ಏಳು ಸಲಹೆಗಳು

  |

  ಧೂಮಪಾನ ಆರೋಗ್ಯಕ್ಕೆ ಮಾರಕ. ಈ ವಿಷಯವನ್ನು ಇತರರಿಗಿಂತಲೂ ಧೂಮಪಾನಿಗಳೇ ಚೆನ್ನಾಗಿ ಅರಿತಿರುತ್ತಾರೆ. ಇದರ ದುಷ್ಪರಿಣಾಮಗಳ ಬಗ್ಗೆ ವಿವರಿಸ ಹೊರಟರೆ ವೈದ್ಯರಿಗೂ ಗೊತ್ತಿರದ ಮಾಹಿತಿಗಳು ಇವರಲ್ಲಿರುತ್ತವೆ! ಆದರೂ ಇವರು ಧೂಮಪಾನದ ಚಟವನ್ನು ಬಿಡದೇ ಧೂಮಪಾನ ಕೆಟ್ಟದು ಎನ್ನುವವರ ಸಂಗವನ್ನೇ ಬಿಡುತ್ತಾರೆ.

  ಧೂಮಪಾನ ನಿಷೇಧ ಎಂದಿರುವ ಫಲಕದ ಮೇಲೆ ಹೊಗೆಯುಗುಳುತ್ತಾರೆ. ಏಕೆಂದರೆ ಇದೊಂದು ವ್ಯಸನವಾಗಿದ್ದು ಧೂಮಪಾನದಿಂದ ತನಗೇನೂ ಆಗದು ಎಂಬ ಭಂಡಧೈರ್ಯದಲ್ಲಿರುತ್ತಾರೆ. ಆದರೆ ಯಾವಾಗ ದೇಹದ ರೋಗ ನಿರೋಧಕ ಶಕ್ತಿಯ ಗೋಡೆ ಕುಸಿಯಿತೋ ಆಗ ಧೂಮಪಾನದ ಪರಿಣಾಮಗಳೆಲ್ಲಾ ಒಮ್ಮೆಲೇ ಇವರ ಮೇಲೆ ಬೀಳುತ್ತದೆ ಹಾಗೂ ಸಾವು ಸಹಾ ಎದುರಾಗಬಹುದು.

  ಆದರೆ ಇವರ ನಡುವೆ ಕೇವಲ ರುಚಿ ನೋಡಲೆಂದು ಪ್ರಾರಂಭಿಸಿ ವ್ಯಸನ ಹತ್ತಿಸಿಕೊಂಡು ನಿಜವಾಗಿಯೂ ಈ ಚಟದಿಂದ ಹೊರಬರಲು ಪ್ರಾಮಾಣಿಕವಾಗಿ ಯತ್ನಿಸುವ ಜನರಿದ್ದಾರೆ. ಇವರಲ್ಲಿ ಕೆಲವರು ಮಾತ್ರವೇ ತಮ್ಮ ಮನೋಬಲದಿಂದ ಯಶಸ್ವಿಯಾಗಿ ಈ ಚಟದಿಂದ ಹೊರಬರಬಲ್ಲರು. ಉಳಿದವರಿಗೆ ಮನಸ್ಸಿನ ದೃಢತೆಯನ್ನು ಎಷ್ಟು ಬಲಪಡಿಸಿದರೂ, ಎದುರಿನಿಂದ ತಾನಾಗಿ ಆಹ್ವಾನ ಬರುವಾಗ ಮಾತ್ರ ಈ ಗೋಡೆಯಲ್ಲಿ ಬಿರುಕು ಬಿಡುವ ಸಾಧ್ಯತೆ ಇರುತ್ತದೆ.

  ವಾಸ್ತವದಲ್ಲಿ ಧೂಮಪಾನದ ಸಹಿತ ಯಾವುದೇ ವ್ಯಸನವನ್ನು ಕಡ್ಡಿ ಮುರಿದಂತೆ ತ್ಯಜಿಸಲು ಸಾಧ್ಯವಿಲ್ಲ, ತ್ಯಜಿಸಲೂಬಾರದು! ಈ ಬಗ್ಗೆ ತಜ್ಞರು ಹೇಳುವ ಸಲಹೆಯ ಪ್ರಕಾರ ನಿತ್ಯದ ಪ್ರಮಾಣವನ್ನು ನಿಧಾನವಾಗಿ ಕಡಿಮೆಗೊಳಿಸುತ್ತಾ ಕಡೆಗೊಂದು ದಿನ ನಿಲ್ಲಿಸಬೇಕು. ಆ ಪ್ರಕಾರ ಧೂಮಪಾನ ತ್ಯಜಿಸಿ ಆರೋಗ್ಯಕರ ಜೀವನ ನಡೆಸುತ್ತಿರುವ ಜನರ ಸಂಖ್ಯೆಯೂ ಇಂದು ಬಹಳಷ್ಟಿದೆ. ಇದಕ್ಕೆ ಬೇಕಾದುದೆಂದರೆ ಧೂಮಪಾನ ಬಿಡಲೇಬೇಕೆಂದ ದೃಢ ನಿರ್ಧಾರ ಹಾಗೂ ಎದುರಿನಿಂದ ಬರುವ ಆಹ್ವಾನಗಳಿಗೆ ದೃಢಮನಸ್ಸಿನಿಂದ 'ಬೇಡ'ಎಂದು ಹೇಳಬೇಕಾದ ಗಟ್ಟಿತನ ಅಷ್ಟೇ. ಉಳಿದಂತೆ ನಿಧಾನವಾಗಿ ಕಡಿಮೆಗೊಳಿಸುವ ಪ್ರಯತ್ನಗಳು ಖಂಡಿತಾ ಫಲ ನೀಡುತ್ತವೆ. ಬನ್ನಿ, ಈ ನಿಟ್ಟಿನಲ್ಲಿ ನಿಮಗೆ ನೆರವಾಗುವ ಏಳು ಅಮೂಲ್ಯ ಸಲಹೆಗಳನ್ನು ನೋಡೋಣ...

  ಧೂಮಪಾನಕ್ಕೆ ಪ್ರಚೋದಿಸುವ ಸಂಗತಿಗಳನ್ನು ಪಟ್ಟಿಮಾಡಿ

  ಧೂಮಪಾನಕ್ಕೆ ಪ್ರಚೋದಿಸುವ ಸಂಗತಿಗಳನ್ನು ಪಟ್ಟಿಮಾಡಿ

  ಧೂಮಪಾನ ಬಿಡುವ ಮೊದಲು ಧೂಮಪಾನ ಮಾಡಲು ನಿಮಗೆ ಯಾವಾಗಲೆಲ್ಲಾ ಪ್ರಚೋದನೆ ಸಿಗುತ್ತದೆ ಎಂಬುದನ್ನು ಪಟ್ಟಿಮಾಡಿ. ಯಾವ ವಿಷಯ ಅಥವಾ ಸಂದರ್ಭದಲ್ಲಿ ನಿಮಗೆ ಧೂಮಪಾನ ಮಾಡಬೇಕೆನಿಸುತ್ತದೆ ಎಂಬುದನ್ನು, ಚಿಕ್ಕದಾದರೂ, ಕ್ಷುಲ್ಲುಕವೆನಿಸಿದರೂ ಸರಿ, ಬರೆದು ಪಟ್ಟಿಮಾಡಿ. ಉದಾಹರಣೆಗೆ ಮದ್ಯಾಹ್ನದ ಊಟವಾದ ತಕ್ಷಣ, ಸಂಜೆ ಟೀ, ಟೀವಿಯಲ್ಲಿ ಸುದ್ದಿ ನೋಡುವಾಗ ಇತ್ಯಾದಿ. ಈ ವಿವರಗಳನ್ನು ಅಭ್ಯಸಿಸಿ ನಿಮ್ಮ ಧೂಮಪಾನದ ಚಟಕ್ಕೆ ಈ ಸಂದರ್ಭಗಳು ಎಷ್ಟು ಮಟ್ಟಿಗೆ ಕಾರಣವಗಿವೆ ಎಂಬುದನ್ನು ಗಮನಿಸಿ. ಈಗ ಈ ಸಂದರ್ಭಗಳಿಂದ ತಪ್ಪಿಸಿಕೊಳ್ಳಲು, ಆ ಸಮಯದಲ್ಲಿ ಮನಸ್ಸನ್ನು ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಯತ್ನಿಸಿ. ಯಾವಾಗ ಈ ಪ್ರಚೋದನೆಗಳೇ ಇರುವುದಿಲ್ಲವೋ, ಆಗ ಧೂಮಪಾನ ಮಾಡಲು ಕಾರಣವೂ ಉಳಿಯುವುದಿಲ್ಲ!

  ನಿಮ್ಮ ಕುಟುಂಬ ಹಾಗೂ ಸ್ನೇಹಿತರ ನೆರವು ಪಡೆಯಿರಿ

  ನಿಮ್ಮ ಕುಟುಂಬ ಹಾಗೂ ಸ್ನೇಹಿತರ ನೆರವು ಪಡೆಯಿರಿ

  ನೀವು ಧೂಮಪಾನ ಬಿಡುವವರಿದ್ದೀರಿ ಎಂಬುದನ್ನು ನಿಮ್ಮ ಆತ್ಮೀಯವರ್ಗದಲ್ಲಿ ಧೈರ್ಯವಾಗಿ ಪ್ರಕಟಿಸಿ. ಕೆಲವರು ನಗಬಹುದು ಅಥವಾ ಆಗಲಾರದು ಎಂದು ಕಾಲೆಳೆಯಬಹುದು. ಇವರೆಲ್ಲರಿಗೂ ನೀವು ಎಂತಹ ದೃಢಮನಸ್ಸು ಹೊಂದಿದ್ದೀರಿ ಎಂದು ತಿಳಿಸಲಾದರೂ ನಿಮ್ಮ ಮನಸ್ಸನ್ನು ಗಟ್ಟಿ ಮಾಡುವುದು ಅವಶ್ಯ. ವಾಸ್ತವದಲ್ಲಿ ನಿಮ್ಮ ನಿರ್ಧಾರ ಗಟ್ಟಿಯಾಗಿದ್ದು ನೀವು ಆ ಪ್ರಕಾರವೇ ನಡೆದುಕೊಳ್ಳುತ್ತಾ ಹೋದರೆ ನಿಮ್ಮನ್ನು ಕಾಲೆಳೆದವರೇ ನಿಮ್ಮನ್ನು ಹುರಿದುಂಬಿಸಲಾರಂಭಿಸುತ್ತಾರೆ. ಅಲ್ಲದೇ ನಿಮ್ಮ ನಿರ್ಧಾರಕ್ಕೆ ಪೂರಕವಾಗುವ ಹಲವು ಸಲಹೆಗಳೂ ನಿಮಗೆ ಒದಗಿಬರುತ್ತವೆ.

   ಒಂದು ಗುಂಪಿನ ಚಟುವಟಿಕೆಯಲ್ಲಿ ಭಾಗಿಯಾಗಿ

  ಒಂದು ಗುಂಪಿನ ಚಟುವಟಿಕೆಯಲ್ಲಿ ಭಾಗಿಯಾಗಿ

  ಧೂಮಪಾನಿಗಳಲ್ಲದ ಗುಂಪಿನಲ್ಲಿ ಭಾಗಿಯಾಗಿ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಎಂದಿಗೂ ಒಂದು ಉತ್ತಮ ಉಪಾಯವಾಗಿದೆ. ಗುಂಪಿನ ಸದಸ್ಯರೊಂದಿಗೆ ಮುಕ್ತ ಮನಸ್ಸಿನಿಂದ ಧೂಮಪಾನ ಬಿಡುತ್ತಿರುವ ನಿರ್ಧಾರದ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಹಾಗೂ ಇದನ್ನು ಸಾಧಿಸಲು ನೀವೇನು ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಪ್ರಕಟಿಸಿ. ಅಂತೆಯೇ ನಡೆದುಕೊಳ್ಳುವುದೂ ಅಷ್ಟೇ ಮುಖ್ಯ. ಆಗ ಈಗಾಗಲೇ ಧೂಮಪಾನದಿಂದ ಹೊರಬಂದಿರುವವರೂ ತಮ್ಮ ಅನುಭವಗಳನ್ನು ತಿಳಿಸುವ ಮೂಲಕ ನಿಮ್ಮ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿ ಮುಂದುವರೆಯಲು ಖಂಡಿತಾ ನೆರವಾಗುತ್ತಾರೆ.

  ನಿಮ್ಮನ್ನು ನೀವೇ ವ್ಯಸ್ತರಾಗಿಸಿಕೊಳ್ಳಿ

  ನಿಮ್ಮನ್ನು ನೀವೇ ವ್ಯಸ್ತರಾಗಿಸಿಕೊಳ್ಳಿ

  ನಿಮ್ಮನ್ನು ಯಾವುದಾದರೊಂದು ಕಾರ್ಯದಲ್ಲಿ ಮಗ್ನರಾಗಿಸಿಕೊಳ್ಳುವ ಮೂಲಕ ನಿಮ್ಮ ಮನಸ್ಸು ಬೇರೆಡೆಗೆ ಹೊರಳದಂತೆ ಮಾಡುವುದು ಇನ್ನೊಂದು ಉಪಾಯವಾಗಿದೆ. ಅದರಲ್ಲೂ ಯಾವಾಗ ಧೂಮಪಾನ ಮಾಡಬೇಕೆಂದು ಮನಸ್ಸು ತುಡಿಯುತ್ತದೆಯೋ ಆಗ ಈ ಕಾರ್ಯದಲ್ಲಿ ಹೆಚ್ಚು ಮಗ್ನರಾಗಿ. ಸಾಮಾನ್ಯವಾಗಿ ಸಿಗರೇಟಿನ ಧೂಮದಲ್ಲಿರುವ ನಿಕೋಟಿನ್ ಎಂಬ ಕರ್ರಗಿನ ಟಾರಿನಂತಹ ದ್ರವ ರಕ್ತದಲ್ಲಿ ಬೆರೆತಾಗ ಒಂದು ಬಗೆಯ ಧನ್ಯ ಭಾವನೆಯನ್ನು ಹುಟ್ಟಿಸುತ್ತದೆ. ಈ ಅನುಭವವೇ ಧೂಮಪಾನಿಗಳು ಹೆಚ್ಚು ಹೆಚ್ಚಾಗಿ ಮುಂದುವರೆಯಲು ಮೂಲ ಕಾರಣವಾಗಿದೆ. ಕೆಲಸದಲ್ಲಿ ಮಗ್ನರಾಗಿ ಆ ಕೆಲಸ ಪೂರ್ಣಗೊಂಡಾಗ ಪಡೆಯುವ ಧನ್ಯತೆಯ ಭಾವನೆ ಸಿಗರೇಟಿನ ಧೂಮದ ಭಾವನೆಗಿಂತಲೂ ಪ್ರಬಲವಾಗಿದ್ದು ಧೂಮಪಾನಕ್ಕೆ ಪ್ರಚೋದನೆ ನೀಡದೇ ಹೋಗುತ್ತದೆ. ಈ ಮೂಲಕ ಧೂಮಪಾನದ ಪ್ರಚೋದನೆಯನ್ನು ಖಂಡಿತಾ ತಡೆಹಿಡಿಯಬಹುದು. ಒಂದು ಬಾರಿ ಇದು ಸಾಧ್ಯವಾದರೆ, ಪ್ರತಿ ಬಾರಿಯೂ ಸಾಧ್ಯವಾಗುತ್ತದೆ. ಪರಿ ಬಾರಿ ಸಾಧ್ಯವಾದರೆ? ಮತ್ತಿನ್ನೇನು? ನೀವು ಧೂಮಪಾನದಿಂದ ಹೊರಬಂದಂತೆಯೇ ಸರಿ.

  ನಿರಾಳರಾಗಿರಿ ಹಾಗೂ ಧ್ಯಾನದಲ್ಲಿ ತೊಡಗಿ

  ನಿರಾಳರಾಗಿರಿ ಹಾಗೂ ಧ್ಯಾನದಲ್ಲಿ ತೊಡಗಿ

  ಧ್ಯಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಧೂಮಪಾನದ ಸಹಿತ ಯಾವುದೇ ವ್ಯಸನದಿಂದ ಸುಲಭವಾಗಿ ಹೊರಬರಬಹುದು. ಅಲ್ಲದೇ ಮನಸ್ಸನ್ನು ನಿರಾಳವಾಗಿರಿಸುವುದು ಹಾಗೂ ಅನಗತ್ಯ ಒತ್ತಡಕ್ಕೆ ಒಳಗಾಗದಿರುವುದೂ ಅಗತ್ಯವಾಗಿದೆ. ಮಾನಸಿಕ ಒತ್ತಡವನ್ನು ನಿವಾರಿಸಲು ಧ್ಯಾನ ಉತ್ತಮ ಆಯ್ಕೆಯಾಗಿದೆ ಹಾಗೂ ಧೂಮಪಾನದ ಪ್ರಚೋದನೆ ಮತ್ತು ಕಡುಬಯಕೆಯನ್ನು ಹತ್ತಿಕ್ಕಲೂ ನೆರವಾಗುತ್ತದೆ. ಈ ಮೂಲಕ ಮನಸ್ಸಿನ ಮೇಲೆ ಹತೋಟಿ ಪಡೆಯಲು ಹಾಗೂ ವ್ಯಸನಕ್ಕೆ ಬೀಳದೇ ಇರಲು ಸಾಧ್ಯವಾಗುತ್ತದೆ.

  ಸತತವಾಗಿ ನೀರು ಕುಡಿಯುತ್ತಿರಿ

  ಸತತವಾಗಿ ನೀರು ಕುಡಿಯುತ್ತಿರಿ

  ನೀರನ್ನು ಸತತವಾಗಿ ಕುಡಿಯುತ್ತಲೇ ಇರುವ ಮೂಲಕ ದೇಹದ ನೀರಿನ ಅಗತ್ಯತೆಯನ್ನು ಪೂರೈಸಬಹುದು. ಧೂಮಪಾನವನ್ನು ತ್ಯಜಿಸಬಯಸುವವರು ಇತರರಿಗಿಂತ ಕೊಂಚ ಹೆಚ್ಚೇ ಕುಡಿಯಬೇಕು. ಅಂದರೆ ಒಂದು ನೀರಿನ ಬಾಟಲಿಯನ್ನು ಎದುರಿಗಿಟ್ಟು ಆಗಾಗ ಚಿಕ್ಕದಾಗಿ ಗುಟುಕರಿಸುತ್ತಿರಬೇಕು. ವಿಶೇಷವಾಗಿ ಧೂಮಪಾನದ ಬಯಕೆ ಬಂದಾಕ್ಷಣ ಕೊಂಚ ಹೆಚ್ಚೇ ನೀರನ್ನು ಗುಟುಕರಿಸಬೇಕು. ಇದರಿಂದ ಧೂಮಪಾನದ ವ್ಯಸನದಿಂದ ಶೀಘ್ರವಾಗಿ ಹೊರಬರಬಹುದು.

  ನಿಮಗೆ ನೀವೇ ಬಹುಮಾನ ಕೊಟ್ಟುಕೊಳ್ಳಿ

  ನಿಮಗೆ ನೀವೇ ಬಹುಮಾನ ಕೊಟ್ಟುಕೊಳ್ಳಿ

  ಮಕ್ಕಳಿಗೆ ಒಳ್ಳೆಯ ಕೆಲಸ ಮಾಡಿದಾಗ ನಾವು ಬಹುಮಾನ ಕೊಟ್ಟು ಪ್ರೋತ್ಸಾಹಿಸುವ ರೀತಿಯಲ್ಲಿಯೇ ಧೂಮಪಾನ ತ್ಯಜಿಸಿದ ದಿನ ತನಗೆ ತಾನೇ ಉಡುಗೊರೆಯೊಂದನ್ನು ಕೊಟ್ಟುಕೊಳ್ಳಿ. ಇದರಿಂದ ನಿಮ್ಮಲ್ಲಿ ಧನಾತ್ಮಕ ಧೋರಣೆ ತಳೆಯುತ್ತದೆ ಹಾಗೂ ಆರೋಗ್ಯಕರವಾಗಿ ಈ ವ್ಯಸನದಿಂದ ಹೊರಬರಲು ನೆರವಾಗುತ್ತದೆ. ತಜ್ಞರು ಸಲಹೆ ಮಾಡಿದ ಪ್ರಕಾರ ನಿತ್ಯವೂ ಸೇದುವ ಸಿಗರೇಟುಗಳ ಸಂಖ್ಯೆಯನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಹೋಗಬೇಕು ಹಾಗೂ ಆ ಪ್ರಕಾರ ಯಾವ ದಿನ ನಿಮ್ಮ ಧೂಮಪಾನದ ಅಂತಿಮ ದಿನ ಬರುತ್ತದೆ ಎಂದು ಲೆಕ್ಕ ಹಾಕಿ ಆ ದಿನವೇ ನಿಮಗೆ ನೀವು ಉಡುಗೊರೆ ಕೊಟ್ಟುಕೊಳ್ಳಿ. ಏಕೆಂದರೆ ಬಹುಮಾನ ಪಡೆಯಲಾದರೂ ನೀವು ಈ ನಿಟ್ಟಿನಲ್ಲಿ ಧನಾತ್ಮಕವಾಗಿ ಯೋಚಿಸುತ್ತೀರಿ. ಸುಮಾರು ಐವತ್ತು ವರ್ಷಗಳ ಕಾಲ ಧೂಮಪಾನದ ಅಭ್ಯಾಸವಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ತಮಗೆ ತಾವೇ ಯಾವ ಉಡುಗೊರೆ ಕೊಟ್ಟುಕೊಂಡರು ಗೊತ್ತೇ? ಹಜ್ ಯಾತ್ರೆಯ ಉಡುಗೊರೆ! ಈ ಮಟ್ಟದ ಧೂಮಪಾನಿಗೇ ಇದು ಸಾಧ್ಯವಾಗಿರಬೇಕಾದರೆ ಉಳಿದ ಯಾರಿಗೂ ಅಸಾಧ್ಯವಲ್ಲ. ನೆನಪಿಡಿ. ಆರೋಗ್ಯ ನಿಮ್ಮ ಕೈಯಲ್ಲಿದೆ. ಇದನ್ನು ಉಳಿಸಿಕೊಳ್ಳುವುದಷ್ಟೇ ನಿಮಗೆ ಸಾಧ್ಯ. ಧೂಮಪಾನದಿಂದ ಹೊರಬರುವ ಮೂಲಕ ನಿಮ್ಮಲ್ಲಿ ನೀವೇ ಬದಲಾವಣೆ ಪಡೆಯಲು ಒಂದು ಸಕಾರಾತ್ಮಕ ನಡೆಯಾಗಿದೆ. ಅಭಿನಂದನೆಗಳು, ಆರೋಗ್ಯವಂತರಾದ ನಿಮ್ಮನ್ನೇ ಪಡೆಯಲು ನೀವು ಮಾನಸಿಕರಾಗಿ ಸನ್ನದ್ದರಾಗಿದುದಕ್ಕೆ!

  English summary

  Here Are 7 Tips To Help You Quit Smoking Naturally

  Quitting this habit is no doubt a very difficult job; but still there are a lot of inspiring stories of people who have been successful in kicking out smoking, opting for a healthy life. Deciding to quit itself is a positive sign that you can do it. Though nothing might change overnight, with persistent efforts and a positive mind, the battle can be definitely won over time.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more