For Quick Alerts
ALLOW NOTIFICATIONS  
For Daily Alerts

  ಇಂತಹ ಒಂಬತ್ತು ಆಹಾರಗಳನ್ನು ಹಸಿಯಾಗಿ ಯಾವತ್ತೂ ಸೇವಿಸಬೇಡಿ...

  By Arshad
  |

  ಒಂದು ವೇಳೆ ನಿಮಗೆ ತಾಜಾ, ಆರೋಗ್ಯಕರ ಹಾಗೂ ಹಸಿಯಾಗಿ ಸೇವಿಸುವ ಹಣ್ಣು ತರಕಾರಿಗಳನ್ನು ನಿತ್ಯವೂ ಸಾಲಾಡ್ ರೂಪದಲ್ಲಿ ಸೇವಿಸುವ ಅಭ್ಯಾಸವಿದ್ದರೆ ಇದರಲ್ಲಿ ಇನ್ನೂ ಕೆಲವಾರು ತರಕಾರಿಗಳನ್ನು ಸೇರಿಸಿಕೊಳ್ಳಲು ಇಚ್ಛಿಸಿಯೇ ಇರುತ್ತೀರಿ. ಅಷ್ಟಕ್ಕೂ ನಮ್ಮ ಪೂರ್ವಜರು ಬೆಂಕಿಯ ಬಳಕೆ ತಿಳಿಯುವುದಕ್ಕಿಂತಲೂ ಮುನ್ನ ಹಸಿ ಮಾಂಸ ಹಾಗೂ ಹಸಿ ತರಕಾರಿ, ಗಡ್ಡೆಗಳನ್ನೇ ತಿನ್ನುತ್ತಿದ್ದರು.

  ಬೆಂಕಿಯ ಬಳಕೆ ಪ್ರಾರಂಭವಾದ ಬಳಿಕ ಹೆಚ್ಚಿನ ಆಹಾರಗಳನ್ನು ಬೇಯಿಸಿ ತಿನ್ನಲಾಗುತ್ತಿತ್ತು. ಆದರೆ ಇಂದಿಗೂ ನಾವು ಕೆಲವು ತರಕಾರಿಗಳನ್ನು ನಿತ್ಯವೂ, ಹಸಿಯಾಗಿಯೇ ತಿನ್ನಲು ಇಚ್ಛಿಸುತ್ತೇವೆ. ಆದರೆ ಇವುಗಳಲ್ಲಿ ಎಲ್ಲವೂ ಹಸಿಯಾಗಿ ತಿನ್ನುವುದು ಆರೋಗ್ಯಕರವಲ್ಲ. ಇವುಗಳನ್ನು ಬೇಯಿಸದೇ, ಹುರಿಯದೇ, ಬಾಡಿಸದೇ ತಿನ್ನುವುದು ಆರೋಗ್ಯಕ್ಕೆ ಮಾರಕವಾಗಬಹುದು.

  ಉದಾಹರಣೆಗೆ ನಾವು ಹಣ್ಣು, ಸೌತೆ ಮೊದಲಾದ ತರಕಾರಿ, ಕೆಲವು ಬೀಜಗಳು, ಹಾಲು ಮೊದಲಾದವುಗಳನ್ನು ಹಸಿಯಾಗಿಯೇ ತಿನ್ನುತ್ತೇವೆ. ಇವುಗಳು ಆರೋಗ್ಯ ಕೆಡಿಸುವುದಿಲ್ಲ. ಆದರೆ ಹಸಿಯಾಗಿ ತಿನ್ನಬಹುದಾದ ಕೆಲವು ಆಹಾರಗಳು ಮಾತ್ರ ಬೇಯಿಸದೇ ತಿಂದರೆ ಆರೋಗ್ಯ ಕೆಡಿಸಬಲ್ಲವು. ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿನಂತೆ ಉತ್ತಮ ಜೀವನಕ್ಕೆ ಮೊದಲು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ಒಂದು ವೇಳೆ ಕೆಳಗೆ ವಿವರಿಸಿದ ಒಂಭತ್ತು ಆಹಾರಗಳನ್ನು ನೀವು ಹಸಿಯಾಗಿ ಸೇವಿಸುತ್ತಿದ್ದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ! ಆರೋಗ್ಯದ ಭಾಗ್ಯ ಪಡೆಯಬೇಕಾದರೆ ನಿಸರ್ಗ ನೀಡಿರುವ ಶರೀರಕ್ಕೆ ಸೂಕ್ತವಾಗುವ ಆಹಾರಗಳನ್ನೇ ಸೂಕ್ತ ರೀತಿಯಲ್ಲಿ ಬೇಯಿಸಿ, ಹುರಿದು ಅಥವಾ ಬಾಡಿಸಿಯೇ ತಿನ್ನಬೇಕು. ಬನ್ನಿ, ಹಸಿಯಾಗಿ ಸೇವಿಸಬಾರದ ಆಹಾರಗಳ ಬಗ್ಗೆ ಅರಿಯೋಣ:

  ಆಲೂಗಡ್ಡೆ

  ಆಲೂಗಡ್ಡೆ

  ಸೌತೆ, ಟೊಮಾಟೋ ಮೊದಲಾದ ತರಕಾರಿಗಳನ್ನು ನಾವು ಹಸಿಯಾಗಿಯೇ ಸೇವಿಸಲು ಇಷ್ಟಪಡುತ್ತೇವೆ. ಆದರೆ ಆಲುಗಡ್ಡೆಯನ್ನು ಹಸಿಯಾಗಿ ತಿನ್ನಬಾರದು. ಆಲುಗಡ್ಡೆಯನ್ನು ಇತರ ಯಾವುದೇ ತರಕಾರಿಗಿಂತಲೂ ಹೆಚ್ಚಿನ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಆದರೆ ಹಸಿಯಾಗಿ ಸೇವಿಸಿದರೆ ಇದು ಹೊಟ್ಟೆಯಲ್ಲಿ ವಾಯು ಉತ್ಪತ್ತಿಯಾಗುತ್ತದೆ. ಅಲ್ಲದೇ ಜೀರ್ಣಕ್ರಿಯೆಯಲ್ಲಿ ತೊಂದರೆ, ತಲೆನೋವು, ವಾಕರಿಕೆ ಮೊದಲಾದವು ಎದುರಾಗುತ್ತವೆ. ಇದಕ್ಕೆಲ್ಲಾ ಕಾರಣವೆಂದರೆ ಆಲೂಗಡ್ಡೆಯಲ್ಲಿರುವ ಸೋಲನೈನ್ ಎಂಬ ಪೋಷಕಾಂಶ. ಹಸಿಯಾಗಿದ್ದಾಗ ಇದು ಆಮ್ಲೀಯವಾಗಿದ್ದು ಜೀರ್ಣರಸಗಳನ್ನೇ ಕೆಡಿಸುತ್ತದೆ. ಆದರೆ ಆಲುಗಡ್ಡೆಯನ್ನು ಬೇಯಿಸಿದಾಗ, ಹುರಿದಾಗ ಅಥವಾ ಬಾಡಿಸಿದಾಗ ಈ ಪೋಷಕಾಂಶದ ಆಮ್ಲೀಯತೆ ನಷ್ಟವಾಗಿ ಹೊಟ್ಟೆ ಕೆಡಿಸಲು ಅಸಮರ್ಥವಾಗುತ್ತದೆ. ಆದ್ದರಿಂದ ಆಲೂಗಡ್ಡೆಯನ್ನು ಹಸಿಯಾಗಿ ಎಂದೂ ಸೇವಿಸಬಾರದು.

  ಬೀನ್ಸ್ (ರಾಜ್ಮಾ)

  ಬೀನ್ಸ್ (ರಾಜ್ಮಾ)

  ಕಂದು ಬಣ್ಣದ ಬೀನ್ಸ್ ಕಾಳುಗಳು (ರಾಜ್ಮಾ) ಪ್ರೋಟೀನುಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ದವಾಗಿದೆ. ಇವುಗಳನ್ನು ಸೇವಿಸುವ ಮೂಲಕ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾದರೂ ಇದನ್ನು ಸೂಕ್ತರೀತಿಯಲ್ಲಿ ಸೇವಿಸಿದಾಗ ಮಾತ್ರ. ಸೂಕ್ತ ರೀತಿ ಎಂದರೆ ಪೂರ್ಣವಾಗಿ ಬೇಯಿಸಿದಾಗ ಮಾತ್ರ. ಹಸಿಯಾಗಿ ಅಥವಾ ಅರ್ಧ ಬೇಯಿಸಿದ ಬೀನ್ಸ್ ಸೇವನೆಯಿಂದ ವಾಕರಿಕೆ, ವಾಂತಿ, ಅಜೀರ್ಣತೆ, ಅತಿಸಾರ ಮೊದಲಾದವು ಎದುರಾಗಬಹುದು. ಇದಕ್ಕೆಲ್ಲಾ ಹಸಿ ಕಾಳುಗಳಲ್ಲಿರುವ ಕಿಣ್ವಗಳೇ ಕಾರಣ. ಇವುಗಳ ಪ್ರಭಾವ ಇಲ್ಲವಾಗಿಸಬೇಕಾದರೆ ಮೊದಲು ಈ ಕಾಳುಗಳನ್ನು ಸಾಕಷ್ಟು ಹೊತ್ತು, ಸಾಧ್ಯವಾದರೆ ಇಡಿಯ ರಾತ್ರಿ ನೆನೆ ಹಾಕಬೇಕು. ಬಳಿಕವೇ ಇವುಗಳನ್ನು ಬೇಯಿಸಿ ಸೇವಿಸಿದಾಗ ಇದು ಸುರಕ್ಷಿತವಾಗಿರುತ್ತದೆ.

  ಜೇನು

  ಜೇನು

  ಎಂದೂ ಹಾಳಾಗದ ಆಹಾರ ಎಂದು ಧರ್ಮಗ್ರಂಥಗಳಲ್ಲೇ ಉಲ್ಲೇಖಿಸಲ್ಪಟ್ಟ ಜೇನು ಒಂದು ಅದ್ಭುತ ಆಹಾರವಾಗಿದೆ. ಇಂದು ಮಾರುಕಟ್ಟೆಯಲ್ಲಿ ಅತ್ಯಂತ ಶುಚಿಯಾದ ಹಾಗೂ ಪ್ಯಾಶ್ಚರೀಕರಿಸಿದ ಜೇನು ಲಭ್ಯವಿದ್ದು ಇದರ ಗುಣಗಳನ್ನು ಹಾಗೇ ಸೇವಿಸುವ ಮೂಲಕ ಪಡೆಯಬಹುದು. ಆದರೆ ಒಂದು ವೇಳೆ ಕಾಡಿನಿಂದ ಸಂಗ್ರಹಿಸಿದ ಅಥವಾ ಸಾವಯವ ವಿಧಾನದಿಂದ ಸಂಗ್ರಹಿಸಿದ ಜೇನಾದರೆ ಈ ಬಗ್ಗೆ ಕೊಂಚ ಎಚ್ಚರ ವಹಿಸಬೇಕು. ಏಕೆಂದರೆ ಇದರಲ್ಲಿ ಗ್ರಯನೋಟಾಕ್ಸಿನ್ (grayanotoxin) ಎಂಬ ಕಿಣ್ವವಿರಬಹುದು. ಇದು ಹಸಿಯಾಗಿಯೇ ಸೇವಿಸಿದರೆ ವಿಷವಾಗಿರುತ್ತದೆ. ಇದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ, ತಲೆ ತಿರುಗುವಿಕೆ ಮೊದಲಾದವು ಎದುರಾಗಬಹುದು.

  ಹಾಲು

  ಹಾಲು

  ಜೇನಿನಂತೆಯೇ ಹಾಲು ಸಹಾ ಪ್ಯಾಶ್ಚರೀಕರಿಸಿ ಸಿದ್ಧ ರೂಪದ ಸೇವನೆಗೆ ಸುರಕ್ಷಿತವಾಗಿದ್ದು ಪ್ಯಾಕೆಟ್ಟುಗಳಲ್ಲಿ ಲಭ್ಯವಿದೆ. ಕೆಲವರು ಇಂದಿಗೂ ಹಸುವಿನಿಂದ ಕರೆದು ನೇರವಾಗಿ ತಲುಪುವ ಹಸಿ ಹಾಲನ್ನೇ ಇಂದಿಗೂ ಬಯಸುತ್ತಾರೆ. ಕೆಲವರು ಇದನ್ನು ಹಸಿಯಾಗಿಯೇ ಸೇವಿಸಲೂ ಬಯಸುತ್ತಾರೆ. ಆದರೆ ಒಮ್ಮೆಯೂ ಬಿಸಿ ಮಾಡದ ಬಿಸಿ ಹಾಲಿನಲ್ಲಿ ಅತಿ ಸೂಕ್ಷ್ಮ ಕೀಟಾಣುಗಳಿದ್ದು ಇದರಲ್ಲಿ ಮಾರಕ ಈ ಕೊಲೈ, ಸಾಲ್ಮೋನೆಲ್ಲಾ ಮೊದಲಾದ ಬ್ಯಾಕ್ಟೀರಿಯಾಗಳೂ ಇರಬಹುದು. ಹಸುವಿನ ಕರುವಿನ ಹೊಟ್ಟೆಯಲ್ಲಿ ಮಾತ್ರವೇ ಈ ಬ್ಯಾಕ್ಟೀರಿಯಾಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದೆ. ಆದರೆ ಮನುಷ್ಯರ ಹೊಟ್ಟೆಯಲ್ಲಿಲ್ಲ. ಆದ್ದರಿಂದ ಹಸಿ ಹಾಲನ್ನು ಸೇವಿಸುವುದರಿಂದ ಈ ಬ್ಯಾಕ್ಟೀರಿಯಾಗಳೆಂಬ ಮಾರಿಗಳನ್ನು ನಾವೇ ಸ್ವತಃ ನಮ್ಮ ಶರೀರ ಪ್ರವೇಶಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ.

  ಬ್ರೋಕೋಲಿ

  ಬ್ರೋಕೋಲಿ

  ನೋಡಲು ಹಸಿರು ಹೋಕೋಸಿನಂತಿರುವ ಬ್ರೋಕೋಲಿಯನ್ನೂ ಕೆಲವರು ಹಸಿಯಾಗಿ ಸಾಲಾಡ್ ರೂಪದಲ್ಲಿ ಸೇವಿಸಲು ಬಯಸುತ್ತಾರೆ. ಹಲವಾರು ಪೋಷಕಾಂಶ ಹಾಗೂ ವಿವಿಧ ಖನಿಜಗಳನ್ನು ಹೊಂದಿರುವ ಅದ್ಭುತ ತರಕಾರಿಯಾಗಿದ್ದರೂ ಹಸಿಯಾಗಿದ್ದಾಗ ಇದರಲ್ಲಿ ಕೆಲವು ಜೀರ್ಣೀಸಿಕೊಳ್ಳಲು ಬಹಳ ಕಷ್ಟವಾಗಿರುವ ಸಕ್ಕರೆಗಳೂ ಇವೆ. ಬೇಯಿಸದೇ ಸೇವಿಸಿದಾಗ ಹೊಟ್ಟೆ ಸೇರುವ ಈ ಸಕ್ಕರೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಅಜೀರ್ಣತೆ ಎದುರಾಗಬಹುದು. ಆದ್ದರಿಂದ ಈ ಅದ್ಭುತ ತರಕಾರಿಯನ್ನು ಬೇಯಿಸಿಯೇ ಸೇವಿಸಿ.

  ಆಲಿವ್ ಗಳು

  ಆಲಿವ್ ಗಳು

  ಇವುಗಳು ಕಪ್ಪು ಅಥವಾ ಗಾಢ ಹಸಿರು ಬಣ್ಣದಲ್ಲಿ ಲಭ್ಯವಿದ್ದು ಇದರ ಕೊಂಚ ಹುಳಿಯಾದ ರುಚಿ ಹಲವರ ಮೆಚ್ಚಿನ ಆಹಾರವಾಗಿಸಿದೆ. ಸಾಮಾನ್ಯವಾಗಿ ಅಂಗಡಿಯಲ್ಲಿ ಡಬ್ಬಿಗಳಲ್ಲಿ ಸಿಗುವ ಆಲಿವ್ ಗಳನ್ನು ಸಂಸ್ಕರಿಸಿ, ಉಪ್ಪು ಹಾಕಿ ಹೆಚ್ಚು ಕಾಲ ಕಡದೇ ಇರುವಂತೆ ಮಾಡಲಾಗಿರುತ್ತದೆ. ಇವು ಹಾಗೇ ತಿನ್ನಲು ಸುರಕ್ಷಿತವಾಗಿವೆ. ಆದರೆ ಹಸಿಯಾದ ಆಲಿವ್ ಗಳನ್ನು ಮರದಿಂದ ಕಿತ್ತು ನೇರವಾಗಿ ತಿನ್ನುವುದಾದರೆ ಇವು ಆರೋಗ್ಯ ಕೆಡಿಸಬಹುದು. ಇದರಲ್ಲಿರುವ ಓಲಿಯುರೋಪಿನ್ (oleuropein) ಎಂಬ ಪೋಷಕಾಂಶ ಹಸಿಯಾಗಿದ್ದಾಗ ಆಲಿವ್ ಗಳನ್ನು ವಿಷಾಹಾರವಾಗಿಸುತ್ತದೆ.

  ಅಣಬೆ

  ಅಣಬೆ

  ಹಿಂದೆ ಮಳೆಗಾಲದ ಪ್ರಾರಂಭದಲ್ಲಿ ಮಾತ್ರವೇ ಸಿಗುತ್ತಿದ್ದ ಅಣಬೆಗಳು ಇಂದು ಸಿದ್ದ ರೂಪದಲ್ಲಿ ವರ್ಷಪೂರ್ತಿ ಸಿಗುತ್ತಿವೆ ಹಾಗೂ ಹಲವರ ಮೆಚ್ಚಿನ ಆಹಾರವಾಗಿದೆ. ಮಾಂಸಾಹಾರದ ಮಸಾಲೆಗಳನ್ನು ಬಳಸಿ ಅಣಬೆಯನ್ನೂ ಅಷ್ಟೇ ರುಚಿಕರವಾಗಿ ತಯಾರಿಸಬಹುದಾದ ಕಾರಣ ಇಂದು ಅಣಬೆ ಹೆಚ್ಚು ಜನರ ಇಷ್ಟದ ಆಹಾರವಾಗಿದೆ. ವಾಸ್ತವವಾಗಿ ಅಣಬೆಯೂ ಒಂದು ಬಗೆಯ ಶಿಲೀಂಧ್ರವೇ ಆಗಿದ್ದು ಇವುಗಳಲ್ಲಿಯೂ ಅತಿಸೂಕ್ಷ್ಮವಾದ ಜೀವಿಗಳಿರುತ್ತವೆ. ಆದರೆ ಕೆಲವು ಅಣಬೆಗಳು ಮಾತ್ರವೇ ತಿನ್ನಲು ಅರ್ಹವಾಗಿದ್ದು ಇವುಗಳನ್ನು ಸಹಾ ಚೆನ್ನಾಗಿ ಬೇಯಿಸಿಯೇ ಸೇವಿಸಬೇಕು. ಹಸಿಯಾಗಿ ತಿಂದರೆ ಅಜೀರ್ಣತೆ, ವಿಷಾಹಾರ ಮೊದಲಾದ ತೊಂದರೆಗಳು ಎದುರಾಗುತ್ತವೆ.

  ಹಂದಿಮಾಂಸ

  ಹಂದಿಮಾಂಸ

  ಹಂದಿಮಾಂಸ ಸೇವಿಸುವವರ ಸಂಖ್ಯೆ ಅತಿ ಕಡಿಮೆಯಾಗಿದ್ದರೂ, ಇದನ್ನು ಹಸಿಯಾಗಿ ಎಂದಿಗೂ ಸೇವಿಸಬಾರದು. ಏಕೆಂದರೆ ಇದರಲ್ಲಿ ಲಾಡಿಹುಳ (tapeworm) ಎಂಬ ಪರಾವಲಂಬಿ ಕ್ರಿಮಿ ಆಶ್ರಯ ಪಡೆದಿರುತ್ತದೆ. ಹಸಿಯಾಗಿ ಸಾಲಾಡ್ ಅಥವಾ ಇತರ ತಣ್ಣನೆಯ ಖಾದ್ಯಗಳ ರೂಪದಲ್ಲಿ ಸೇವಿಸಿದಾಗ ಈ ಲಾಡಿಹುಳಗಳು ನೇರವಾಗಿ ಹೊಟ್ಟೆ ಸೇರಿ ಕರುಳಿನಲ್ಲಿ ಆಶ್ರಯ ಪಡೆಯುತ್ತವೆ. ಈ ಹುಳಗಳು ಕರುಳುನ ಒಳಭಾಗವನ್ನು ಕಚ್ಚಿ ಹಿಡಿದಿರುವ ಕಾರಣ ಇವುಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಇವುಗಳ ಸಂಖ್ಯೆ ಹೆಚ್ಚಾದಂತೆ ಭಾರೀ ಅನಾರೋಗ್ಯವನ್ನು ಎದುರಿಸಬೇಕಾಗುತ್ತದೆ ಹಾಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಇದ್ದರೆ ಸಾವಿಗೂ ಕಾರಣವಾಗಬಹುದು.

  ಮೊಟ್ಟೆಗಳು

  ಮೊಟ್ಟೆಗಳು

  ಕೆಲವು ವ್ಯಕ್ತಿಗಳು ತಮ್ಮ ದೇಹದಾರ್ಢ್ಯತೆಯನ್ನು ಪ್ರದರ್ಶಿಸಲು ಹಸಿಮೊಟ್ಟೆಯನ್ನು ಒಡೆದು ನೇರವಾಗಿ ಬಾಯಿಗೆ ಹಾಕಿಕೊಳ್ಳುತ್ತಾರೆ. ಆದರೆ ಇದರಿಂದ ಅಪಾಯವನ್ನು ತಾವೇ ಆಹ್ವಾನಿಸಿಕೊಳ್ಳುತ್ತಾರೆ. ಕೆಲವು ಖಾದ್ಯಗಳ ರುಚಿ ಹೆಚ್ಚಿಸಲೂ ಹಸಿ ಮೊಟ್ಟೆಯನ್ನು ಸೇರಿಸಲಾಗುತ್ತದೆ. ಇದೂ ಅಪಾಯಕಾರಿಯೇ ಸರಿ. ಹಸಿ ಮೊಟ್ಟೆಯಲ್ಲಿಯೂ ಸಾಲ್ಮೋನೆಲ್ಲಾ ಹಾಗೂ ಇತರ ಮಾರಕ ಬ್ಯಾಕ್ಟೀರಿಯಾಗಳಿರುತ್ತವೆ. ಹಸಿಯಾಗಿ ಸೇವಿಸಿದಾಗ ಈ ಬ್ಯಾಕ್ಟೀರಿಯಾಗಳೂ ಹೊಟ್ಟೆ ಸೇರಿದರೆ ಅನಾರೋಗ್ಯ ತಂದೊಡ್ಡಬಹುದು.

  English summary

  Foods You Should Never Eat Raw

  If you are someone who loves relishing on fresh, healthy salads on a regular basis, then you would be used to eating certain foods raw, right? Well, humans, right from the primitive ages, learnt the technique of cooking certain foods like meat, in order to make them tastier and easier to consume. However, even today, there are certain foods that most of us consume raw on a daily basis, without cooking, roasting, baking or boiling them.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more